ಚುನಾವಣಾ ಪ್ರಚಾರಕ್ಕೆ ಚಿಣ್ಣರ ಬಳಕೆ

ಭಾನುವಾರ, ಏಪ್ರಿಲ್ 21, 2019
26 °C

ಚುನಾವಣಾ ಪ್ರಚಾರಕ್ಕೆ ಚಿಣ್ಣರ ಬಳಕೆ

Published:
Updated:
Prajavani

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಆರಂಭವಾಗಿರುವುದು ರಾಜಕೀಯ ಪಕ್ಷಗಳ ಪಾಲಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಮಕ್ಕಳಿಗೆ ಹಣ ಕೊಟ್ಟು, ಅವರನ್ನು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಕೆಲವು ಮಕ್ಕಳು ಕಾಸು ಕೂಡಿಸಲು ಸಿಕ್ಕ ಅವಕಾಶ ಎಂದು ಭಾವಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೆ, ಇನ್ನು ಕೆಲವರು ರಜೆಯ ಮಜಾವನ್ನು ಈ ರೀತಿ ಕಳೆಯುವುದರಲ್ಲಿ ಖುಷಿಪಡುತ್ತಿದ್ದಾರೆ.

ಗೋರಿಪಾಳ್ಯದ ಸರ್ಕಾರಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿಯೊಬ್ಬ, ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾನೆ. ‘ನನಗೆ ಹಣದ ಬಗ್ಗೆ ಗೊತ್ತಿಲ್ಲ. ನಾನು ಇಲ್ಲಿ ಬಂದು ಕರಪತ್ರ ಹಂಚಿದರೆ ಹೊಸ ಬಟ್ಟೆ ಸಿಗುತ್ತದೆ. ನನ್ನ ತಂದೆಯೇ ಇಲ್ಲಿ ತಂದು ಬಿಟ್ಟಿದ್ದಾರೆ’ ಎಂದು ಆತ ಹೇಳಿದ.

‘ಪ್ರಚಾರದಲ್ಲಿ ಪಾಲ್ಗೊಂಡರೆ ಪಕ್ಷದ ವತಿಯಿಂದ ₹ 500 ಹಾಗೂ ಊಟ ಕೊಡುತ್ತಾರೆ’ ಎಂದು ಇನ್ನೊಬ್ಬ ವಿದ್ಯಾರ್ಥಿ ತಿಳಿಸಿದ.

ಬೇಸರದಲ್ಲಿ ಬಾಲಕರು: ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಪರ ಚುನಾವಣಾ ಪ್ರಚಾರ ನಡೆಸಲು ಬೊಮ್ಮನಹಳ್ಳಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬೈಕ್‌ ರ‍್ಯಾಲಿಯಲ್ಲಿ ಭಾಗವಹಿಸಲು ಅವಕಾಶ ನೀಡದಿರುವುದು ಇಬ್ಬರು ಬಾಲಕರಿಗೆ ಬೇಸರ ಮೂಡಿಸಿತು.

‘ನಮಗೆ ಸ್ವಂತ ಬೈಕ್‌ ಇಲ್ಲ. ಹಾಗಾಗಿ ರ‍್ಯಾಲಿಯಲ್ಲಿ ಭಾಗವಹಿಸಲು ಆಗಲಿಲ್ಲ. ಅವಕಾಶ ಸಿಗುತ್ತಿದ್ದರೆ ಸ್ವಲ್ಪ ಹಣವೂ ಸಿಗುತ್ತಿತ್ತು’ ಎಂದು ದೊರೆಸಾನಿಪಾಳ್ಯದ ಬಾಲಕ ಹೇಳಿದ.

ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಪರವಾಗಿ ಮೈಸೂರು ಬ್ಯಾಂಕ್‌ ಬಳಿ ಮತಯಾಚನೆಯಲ್ಲಿ ತೊಡಗಿದ್ದ ಬಾಲಕನೊಬ್ಬ, ‘ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದರಿಂದ ಕೇವಲ 2ರಿಂದ 3 ಗಂಟೆಗಳಲ್ಲಿ ₹ 300ರವರೆಗೆ ಸಂಪಾದಿಸಬಹುದು. ಜೊತೆಗೆ ಊಟವೂ ಸಿಗುತ್ತದೆ’ ಎಂದು ತಿಳಿಸಿದ.

‘ನಾವು ಮಕ್ಕಳೆಂಬ ಕಾರಣಕ್ಕೆ ದೊಡ್ಡವರಿಗೆ ಕೊಡುವ ಅರ್ಧದಷ್ಟು ಮೊತ್ತವನ್ನು ನಮಗೆ ನೀಡುತ್ತಾರೆ. ಬಟ್ಟೆ, ಊಟ ಹಾಗೂ ₹ 500 ಕೊಡುವುದಾಗಿ ಆಸೆ ಹುಟ್ಟಿಸಿ ನಮ್ಮನ್ನು ಪ್ರಚಾರಕ್ಕೆ ಕರೆಯುತ್ತಾರೆ. ನಮಗೆ ಇಂತಹದ್ದೇ ಪಕ್ಷದ ಪರ ಪ್ರಚಾರಕ್ಕೆ ಹೋಗಬೇಕೆಂದೇನೂ ಇಲ್ಲ. ಯಾರಾದರೂ ಆಗುತ್ತದೆ’ ಎಂದು ಆತ ಹೇಳಿದ.

ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿರುವುದರ ವಿರುದ್ಧ ಚುನಾವಣಾ ಆಯೋಗದ ಸಂಚಾರ ದಳದ ಅಧಿಕಾರಿಗಳು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.

‘ಗಂಭೀರ ಅಪರಾಧ’

ಮಕ್ಕಳ ಹಕ್ಕುಗಳ ಟ್ರಸ್ಟ್‌ನ ನಿರ್ದೇಶಕ ನರಸಿಂಹ ಜಿ.ರಾವ್‌ ಅವರ ಪ್ರಕಾರ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಗಂಭೀರ ಅಪರಾಧ.

‘ಪಕ್ಷದ ಕಾರ್ಯಕರ್ತರು ಮಕ್ಕಳನ್ನು ಪ್ರಚಾರಕ್ಕೆ ಕರೆದೊಯ್ಯುತ್ತಾರೆ. ಅವರಿಗೆ ರಾಜಕೀಯದ ಗಂಧ ಗಾಳಿ ತಿಳಿದಿರುವುದಿಲ್ಲ. ಆದರೆ, ಪ್ರಚಾರಕ್ಕೆ ಅವರು ಕಳೆ ತುಂಬುತ್ತಾರೆ. ಈ ಕಾರಣಕ್ಕಾಗಿಯೇ ಮಕ್ಕಳ ಮೈಮೇಲೆ ಚಿತ್ತಾರ ಬರೆಯುತ್ತಾರೆ. ಚಿತ್ರ ವಿಚಿತ್ರ ಬಟ್ಟೆ ತೊಡಿಸುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಈ ವಿಚಾರದಲ್ಲಿ ಮಕ್ಕಳ ಪೋಷಕರ ತಪ್ಪೂ ಇದೆ. ಬಡವರ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವ ಬದಲು ಅವರ ಮೂಲಭೂತ ಅಗತ್ಯಗಳನ್ನು ಪೂರೈಸಬಹುದು. ಮಕ್ಕಳ ಅಭಿವೃದ್ಧಿ ಸಂಸ್ಥೆಗಳಿಗೆ ಸೇರಿಬಹುದು’ ಎಂದು ರಾವ್ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !