ಸಂಗೀತ ಕಲಿಕೆ ಕಲೆ, ಸಾಹಿತ್ಯ, ವಿಜ್ಞಾನ, ಲೆಕ್ಕಾಚಾರ!

7

ಸಂಗೀತ ಕಲಿಕೆ ಕಲೆ, ಸಾಹಿತ್ಯ, ವಿಜ್ಞಾನ, ಲೆಕ್ಕಾಚಾರ!

Published:
Updated:

ಅಮ್ಮ ಆಕಾಶದೆಡೆಗೆ ಕೈತೋರಿ ಮಗುವಿಗೆ ಅನ್ನ ಉಣಿಸುತ್ತಿಲ್ಲ, ಚಂದಮಾಮ ಚಕ್ಕುಲಿಮಾಮ ಹಾಡು ಹೇಳುತ್ತಿಲ್ಲ, ಗುಬ್ಬಿಯ ಕತೆ ಹೇಳಿ ನಗಿಸುತ್ತಿಲ್ಲ, ಗುಮ್ಮನನ್ನು ತೋರಿ ಬೆದರಿಸುತ್ತಿಲ್ಲ, ಲಾಲಿ ಹಾಡಿ ಮಲಗಿಸುತ್ತಿಲ್ಲ. ಅಮ್ಮ ಈಗ ಎಲ್ಲದಕ್ಕೂ ಯೂ–ಟ್ಯೂಬ್‌ ತೋರಿಸುತ್ತಾಳೆ, ಮೊಬೈಲ್‌ ಆ್ಯಪ್‌ ತೆರೆಯುತ್ತಾಳೆ. ಮುಂಜಾನೆ ಎದ್ದರೆ ಗಣಪತಿಯನ್ನೂ ಗೂಗಲ್‌ ಮಾಡಿ ತೋರಿಸುತ್ತಾಳೆ. ಅಪ್ಪನೂ ಅಷ್ಟೇ, ಮುದ್ದು ಮಾಡುವ ಹೊತ್ತಲ್ಲಿ ಮೊಬೈಲ್‌ ಜೊತೆಯಲ್ಲೇ ಕಾಲ ಕಳೆಯುತ್ತಾರೆ.

ಇದು ಗ್ಯಾಜೆಟ್‌ ಯುಗ. ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌ ಮುಂತಾದ ಗ್ಯಾಜೆಟ್‌ ಮಂಡಲದೊಳಗೆ ನಾವು ಸುತ್ತುತ್ತಿದ್ದೇವೆ. ಮಗುವಿನ ಕೈಗೆ ಮೊಬೈಲ್‌ ಸಿಗದಂತೆ ನೋಡಿಕೊಳ್ಳುವುದು ಬಲುದೊಡ್ಡ ಸಾಹಸವೇ ಸರಿ. ಗ್ಯಾಜೆಟ್‌ಗಳೇ ಆಟಿಕೆಗಳಾಗಿದ್ದು ಅವು ಮಕ್ಕಳ ಮನಸ್ಸು ಅರಳಿಸುತ್ತಿಲ್ಲ, ಕೆರಳಿಸುತ್ತಿವೆ. ಗೋಲಿಯಾಟಕ್ಕೂ, ಗೊಂಬೆಯಾಟಕ್ಕೂ ಮೊಬೈಲ್‌ ಆ್ಯಪ್‌ಗಳಿವೆ. ಕಾರ್ಟೂನ್‌ ಕಾಣಲು, ಛೋಟಾ ಭೀಮ್‌ ನೋಡಲು ಟಿವಿ ಹಾಕುವ ಅವಶ್ಯಕತೆಯೇ ಇಲ್ಲ. ಎಲ್ಲವೂ ಬೆರಳ ತುದಿಯಲ್ಲೇ ಇವೆ.

ಈ ಯುಗದಲ್ಲಿ ಮಕ್ಕಳನ್ನು ಗ್ಯಾಜೆಟ್‌ಗಳಿಂದ ದೂರವಿಡಲು ಒಂದು ಮಾರ್ಗೋಪಾಯವಿದೆ. ಅದು ಸಂಗೀತ. ಸಣ್ಣ ವಯಸ್ಸಿನಲ್ಲೇ ಮಕ್ಕಳನ್ನು ಸಂಗೀತ ಕಲಿಕೆಗೆ ಸೇರಿಸಿದರೆ ಅವರ ಮನಸ್ಸುಗಳನ್ನು ಗ್ಯಾಜೆಟ್‌ ದುಷ್ಪರಿಣಾಮಗಳಿಂದ ಮುಕ್ತಗೊಳಿಸಬಹುದು. ಸಂಗೀತ ವಿದ್ವಾಂಸರೂ ಇದನ್ನು ಒಪ್ಪುತ್ತಾರೆ. ಗಾಯನ ಅಥವಾ ವಾದ್ಯ ಸಂಗೀತ ಯಾವುದಾದರೂ ಸರಿ. ಸಂಗೀತ ಕಲಿತು ದೊಡ್ಡ ಕಲಾವಿದರೇ ಆಗಬೇಕು ಅಂತೇನಿಲ್ಲ. ಆದರೆ ಸಂಗೀತ ಕ್ಷೇತ್ರದಲ್ಲಿರುವ ಶಿಸ್ತು, ಸಂಯಮ, ತಾಳ್ಮೆ ಮಕ್ಕಳಿಗೆ ಉತ್ತಮ ದಾರಿ ತೋರಬಲ್ಲದು. ಸಂಗೀತದಲ್ಲಿರುವ ಭಾವ, ಭಕ್ತಿ, ಸಾಧನೆ, ಅಭ್ಯಾಸ ಮಕ್ಕಳ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲವು.

ಭಕ್ತಿಯ ಮೇಲೆ ರೂಪಿತವಾದ ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾವವೇ ಪ್ರಧಾನವಾದ ಹಿಂದೂಸ್ತಾನಿ ಸಂಗೀತ ಪ್ರಾಕಾರಗಳು ಮಕ್ಕಳ ಮನಸ್ಸುಗಳಲ್ಲಿ ಉತ್ಸಾಹ ತುಂಬಬಲ್ಲವು. ಗುರು ಹೇಳಿಕೊಟ್ಟ ಸಂಗತಿಗಳನ್ನು ಅವರಿಗೆ ಒಪ್ಪಿಸಬೇಕೆನ್ನುವ ಹಟ ಮಕ್ಕಳಲ್ಲಿ ಬೆಳೆಯುತ್ತದೆ. ಸಾಮಾನ್ಯವಾಗಿ ಸಂಗೀತ ಕಲಿಯುವ ಮಕ್ಕಳು ಓದು, ಆಟೋಟದಲ್ಲೂ ಮುಂದಿರುತ್ತಾರೆ. ಗೀತೆ, ಕೀರ್ತನೆಗಳನ್ನು ನೆನಪಿಟ್ಟುಕೊಳ್ಳುವ ಮಕ್ಕಳು ಗಣಿತದ ಸೂತ್ರಗಳನ್ನೂ ನೆನಪಿಟ್ಟುಕೊಳ್ಳುತ್ತಾರೆ.

‘ಸಂಗೀತ ಕಲಿಕೆಗೂ ಆ್ಯಪ್‌ಗಳಿವೆ. ಹಾರ್ಮೋನಿಯಂ, ತಬಲಾ, ವಯೋಲಿನ್‌ಗೂ ಆ್ಯಪ್‌ಗಳಿವೆ. ಆದರೆ ಆ್ಯಪ್‌ ಮೂಲಕ ಸಂಗೀತ ಕಲಿತು ಹಾಡುವವರು, ನುಡಿಸುವವರು ಯಾರೂ ಇಲ್ಲ. ಇಂದಿಗೂ ಸಂಗೀತ ಗುರುಮುಖೇನ ಕಲಿಯುವ ವಿದ್ಯೆಯಾಗಿಯೇ ಉಳಿದಿದೆ. ನನ್ನ ಬಳಿಗೆ ಬರುವ ಹಲವು ಶಿಷ್ಯರ ಬಳಿ ಮೊಬೈಲ್‌ ಫೋನ್‌ಗಳಿವೆ, ಅವುಗಳನ್ನು ಧ್ವನಿ ರೆಕಾರ್ಡಿಂಗ್‌ ಮಾಡಲು ಮಾತ್ರ ಬಳಸುತ್ತಾರೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ಆದರೆ ಅವರು ಯಾವುದರಲ್ಲೂ ಹಿಂದುಳಿದಿಲ್ಲ. ಶಾಲೆಯಲ್ಲಿ ನೂರಕ್ಕೆ ನೂರು ಅಂಕಪಡೆಯುತ್ತಾರೆ’ ಎಂದು ವಯೋಲಿನ್‌ ಕಲಾವಿದ ವಿದ್ವಾನ್‌ ಚೇತನ್‌ ಕುಮಾರ್‌ ಹೇಳಿದರು.

ಸಾಹಿತ್ಯ, ವಿಜ್ಞಾನ, ಗಣಿತ:
ಸಂಗೀತ ಎಂದರೆ ಬರೀ ಹಾಡಲ್ಲ, ನುಡಿಸುವುದು ಮಾತ್ರವಲ್ಲ, ಅದೊಂದು ಲೆಕ್ಕಾಚಾರ. ಕೂಡಿ, ಕಳೆದು, ಬಾಗಿಸಿಯೇ ಹಾಡಬೇಕು. ಪ್ರತಿ ತಾಳಕ್ಕೂ ಲೆಕ್ಕ ಹಾಕಬೇಕು. ಪ್ರತಿ ರಾಗಕ್ಕೂ ತನ್ನದೇ ಆದ ಜಾತಿ, ಗತಿಯುಂಟು. ಒಂದು ಅಕ್ಷರ ಹೆಚ್ಚು ಹಾಡಿದರೂ ತಾಳ ಕೆಡುತ್ತದೆ. ಹೀಗಾಗಿ ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಸಂಗೀತದ ರುಚಿ ತೋರಿಸಿದರೆ ಅವರಿಗೆ ಎಲ್ಲಾ ವಿಷಯಗಳ ಮೇಲೆ ಕುತೂಹಲ ಮೂಡುತ್ತದೆ. ಗೀತೆ, ಕೀರ್ತನೆ ಎಂದರೆ ಸಾಹಿತ್ಯವೂ ಹೌದು. ಪ್ರತಿ ಕೀರ್ತನೆ ಹಾಡುವಾಗ ಅದನ್ನು ರಚಿಸಿದ ವಾಗ್ಗೇಯಕಾರರ ಪರಿಚಯವೂ ಆಗುತ್ತದೆ. ಪ್ರತಿ ರಾಗಕ್ಕೂ ಒಂದಂದೊ ವೈಜ್ಞಾನಿಕ ನೋಟವಿರುತ್ತದೆ. ಹೀಗಾಗಿ ಅದು ವಿಜ್ಞಾನವೂ ಹೌದು.

‘ಸಂಗೀತದಲ್ಲಿ ಎಲ್ಲವೂ ಇದೆ. ಸಂಗೀತ ಕಲಿಯುವ ಮಗುವಿನ ದೃಷ್ಟಿಕೋನ ಬೇರೆಯದ್ದೇ ಆಗಿರುತ್ತದೆ. ನಾಲ್ಕು ಜನರ ಎದುರು ಹಾಡಿದರೆ ಮಗುವಿನ ಮನಸ್ಸಿನಲ್ಲಿ ವಿಶ್ವಾಸ ಮೂಡುತ್ತದೆ. ಮಕ್ಕಳಲ್ಲಿ ನಾಯಕತ್ವ ಗುಣ ಮೂಡಿಸಲು ಸಂಗೀತ ಉತ್ತಮ ಔಷಧ. ಇನ್ನು ವಾದ್ಯ ಕಲಿಕೆಗೆ ಸೇರಿಸಿದರೆ ಮಗುವಿಗೆ ಮಾನಸಿಕ ಹಾಗೂ ದೈಹಿಕವಾಗಿ ಶಕ್ತಿ ಬರುತ್ತದೆ. ತಾಳವಾದ್ಯ, ತಂತಿವಾದ್ಯ ನುಡಿಸುತ್ತಿದ್ದರೆ ಮಕ್ಕಳು ದೈಹಿಕವಾಗಿ ಹೆಚ್ಚು ಸದೃಢರಾಗುತ್ತಾರೆ’ ಎಂದು ಸೀತಾರ್‌ ಕಲಾವಿದ ಪಂ.ಅರಣ್ಯಕುಮಾರ್‌ ಹೇಳಿದರು.

ಗುರುವಿನ ಮಾರ್ಗದರ್ಶನ
ಸಂಗೀತ ಕ್ಷೇತ್ರದಲ್ಲಿರುವ ಗುರು–ಶಿಷ್ಯ ಸಂಬಂಧ ಬೇರೆ ಯಾವುದೇ ಕ್ಷೇತ್ರದಲ್ಲೂ ಇಲ್ಲ. ಗುರು ಭಕ್ತಿ ದೈವ ಭಕ್ತಿಗಿಂತಲೂ ದೊಡ್ಡದು. ಸಂಗೀತ ಗುರು ತನ್ನ ಶಿಷ್ಯನನ್ನು ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಗುರುವಿನ ಮಾತು ಎಂದರೆ ವೇದವಾಕ್ಯವೇ ಆಗಿರುತ್ತವೆ. ಗುರು ಸಂಗೀತವನ್ನಷ್ಟೇ ಹೇಳಿಕೊಡುವುದಿಲ್ಲ, ಬದುಕಿನ ದಾರಿಯನ್ನೂ ಹೇಳಿಕೊಡುತ್ತಾರೆ. ಹೀಗಾಗಿ ಗುರುವಿನ ಮಾರ್ಗದರ್ಶನ ಮಕ್ಕಳಿಗೆ ಸಿಕ್ಕರೆ ಅವರ ಬದುಕಿನ ಮಾರ್ಗವೇ ಬದಲಾಗುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !