ಕಾಶ್ಮೀರ ಅಭಿವೃದ್ಧಿಪಡಿಸುವ ಆಸಕ್ತಿ ಚೀನಾಕ್ಕಿದೆ: ಗ್ಲೋಬಲ್‌ ಟೈಮ್ಸ್‌

ಬುಧವಾರ, ಮಾರ್ಚ್ 27, 2019
26 °C

ಕಾಶ್ಮೀರ ಅಭಿವೃದ್ಧಿಪಡಿಸುವ ಆಸಕ್ತಿ ಚೀನಾಕ್ಕಿದೆ: ಗ್ಲೋಬಲ್‌ ಟೈಮ್ಸ್‌

Published:
Updated:

ಬೀಜಿಂಗ್: ‘ಅಭಿವೃದ್ಧಿಯಿಂದ ಕುಂಠಿತವಾಗಿರುವ ಕಾಶ್ಮೀರವನ್ನು ಪ್ರಗತಿಯತ್ತ ಕೊಂಡೊಯ್ಯಲು ಚೀನಾ ಆಸಕ್ತಿ ಹೊಂದಿದೆ’ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.

ಪಠಾಣ್‌ಕೋಟ್‌ ವಾಯುನೆಲೆ ಮೇಲೆ ನಡೆದ ದಾಳಿಯ ಸಂಚುಕೋರ ಜೈಷ್ ಎ ಮೊಹಮ್ಮದ್‌ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ ಹೆಸರನ್ನು ವಿಶ್ವಸಂಸ್ಥೆಯ ನಿರ್ಬಂಧ ಪಟ್ಟಿಯಲ್ಲಿ ಸೇರಿಸಲು ಚೀನಾ ತಡೆ ನೀಡಿದೆ. ಹೀಗಾಗಿ ಪಾಕ್‌ ಮೂಲದ ಉಗ್ರ ಸಂಘಟನೆಗೆ ಚೀನಾ ಬೆಂಬಲಿಸುತ್ತಿದೆ ಎನ್ನವ ಬಗ್ಗೆ ಭಾರತ ವ್ಯಕ್ತಪಡಿಸಿರುವ ಕಳವಳವನ್ನು ಪತ್ರಿಕೆ ತಳ್ಳಿಹಾಕಿದೆ. 

ವಿವಾದಿತ ಕಾಶ್ಮೀರ ಹಿಂದುಳಿದ ಪ್ರದೇಶವಾಗಿಯೇ ಇರಬೇಕು ಎನ್ನವ ವಿಧಿಲಿಖಿತವಿಲ್ಲ. ಇದನ್ನು ಅಭಿವೃದ್ಧಿ ಪಡಿಸುವುದು ಚೀನಾದ ಗುರಿಯಾಗಿದೆ. ಅಲ್ಲದೆ, ಭಾರತ ಮತ್ತು ಪಾಕಿಸ್ತಾನದ ಗುರಿಯೂ ಇದೇ ಆಗಿರಬೇಕು. ಈ ವಿಚಾರದಲ್ಲಿ ಭಾರತ–ಪಾಕ್‌ ಒಂದೊಂದು ಹೆಜ್ಜೆ ಮುಂದಿಟ್ಟರೆ, ಎರಡೂ ದೇಶಗಳ ನಡುವಿನ ನಂಬಿಕೆ ವೃದ್ಧಿಗೆ ನಾಂದಿಯಾಗುತ್ತದೆ. ಚೀನಾದೊಂದಿಗೆ ಸೇರಿ ಭಯೋತ್ಪಾದನೆಯನ್ನು ನಾಶಗೊಳಿಸುವಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಬಲಗೊಳ್ಳುತ್ತದೆ’ ಎಂದು ಹೇಳಿದೆ.

‘ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದದಲ್ಲಿ ನಾವು ಯಾರ ಪರವೂ ವಹಿಸುವುದಿಲ್ಲ. ಬದಲಿಗೆ ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಕಡಿಮೆಗೊಳಿಸುವ ಹಾಗೂ ಭಯೋತ್ಪಾದನ ವಿರೋಧಿ ಪರಿಸ್ಥಿತಿಯನ್ನು ಹೆಚ್ಚಿಸುವ ಉದ್ದೇಶ ನಮ್ಮದಾಗಿದೆ. ಈಗಿರುವ ಬಿಗುವಿನ ವಾತಾವರಣವನ್ನು ತಿಳಿಗೊಳಿಸುವಲ್ಲಿ ಚೀನಾ ಮಧ್ಯವರ್ತಿಯಾಗಿ ಕೆಲಸ ಮಾಡಲಿದೆ’ ಎಂದಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ವಿಷಮ ಪರಿಸ್ಥಿತಿಯನ್ನು ಸೃಷ್ಟಿಸಿದ ಅತ್ಯಂತ ಕೆಟ್ಟ ದಾಳಿ ಪುಲ್ವಾಮಾದಲ್ಲಿ ನಡೆದಿದೆ. ಇದರ ಹೊಣೆ ಹೊತ್ತಿರುವ ಇಸ್ಲಾಮಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಜೈಷೆ–ಎ–ಮೊಹಮ್ಮದ್ ಉಗ್ರ ಸಂಘಟನೆ ಸೇರಿ ವಿವಿಧ ಉಗ್ರ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಬೇಕಾದ ಒತ್ತಡ ಇಸ್ಲಾಮಾಬಾದ್‌ಗೆ ಸೃಷ್ಟಿಯಾಗಿದೆ. ಈ ಉದ್ವಿಗ್ನತೆಯ ಬಗ್ಗೆ ಚರ್ಚಿಸುವುದಕ್ಕಾಗಿಯೇ ಚೀನಾ ಕಳೆದ ವಾರ ತನ್ನ ಸಹಾಯಕ ವಿದೇಶಾಂಗ ಸಚಿವ ಕಾಂಗ್ ಕ್ಸುವಾನ್ಯು ಪಾಕಿಸ್ತಾನಕ್ಕೆ ಕಳುಹಿಸಿತ್ತು ಎಂದು ಬರೆದುಕೊಂಡಿದೆ. 

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಅವರನ್ನು ಭೇಟಿ ಮಾಡಿದ್ದ ಕಾಂಗ್, ಇಸ್ಲಾಮಾಬಾದ್‌ನಲ್ಲಿ ಶಾಂತಿ ಮತ್ತು ಸುಸ್ಥಿರತೆ ನೆಲಸಲು ಚೀನಾ ನೆರವು ನೀಡುತ್ತದೆ ಎಂದು ಭರವಸೆ ನೀಡಿದ್ದರು. ಹೀಗಾಗಿ ಭಯೋತ್ಪಾದನೆಯನ್ನು ರಕ್ಷಿಸುತ್ತಿದೆ ಎಂದು ಚೀನಾದ ಮೇಲೆ ಆಪಾದನೆ ಮಾಡುವುದು ಬೇಜವಾಬ್ದಾರಿತನದ ಹೇಳಿಕೆ ಎಂದಿದೆ.

‘ಆದಾಗ್ಯೂ, ಭಾರತ ಕೆಲವು ತಜ್ಞರು ಚೀನಾದ ಈ ಪ್ರಯತ್ನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಭಯೋತ್ಪಾದನೆಗೆ ಚೀನಾ ತನ್ನ ಬೆಂಬಲವನ್ನು ಮುಂದುವರಿಸಿದೆ ಎಂದು ಆರೋಪಸಿದ್ದಾರೆ. ಅಲ್ಲದೆ, ಭಾರತದ ಸಾಕಷ್ಟು ವಿಶ್ಲೇಷಕರು ಚೀನಾದ 'ಒಂದು ವಲಯ, ಒಂದು ರಸ್ತೆ (ಬಿಆರ್‌ಐ) ಯೋಜನೆ ಭೂರಾಜಕೀಯ ಬೆದರಿಕೆ ಎಂದಿದ್ದಾರೆ’ ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

  • 6

    Happy
  • 2

    Amused
  • 0

    Sad
  • 2

    Frustrated
  • 2

    Angry

Comments:

0 comments

Write the first review for this !