ಚಿಂಗಾರಿ ಆಂದೋಲನ

7
ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಿ

ಚಿಂಗಾರಿ ಆಂದೋಲನ

Published:
Updated:
Deccan Herald

ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳ ಅನುಕೂಲಕ್ಕಾಗಿ ಅನೇಕ ವೃತ್ತಿ ಮಾರ್ಗದರ್ಶನ ಕಾರ್ಯಾಗಾರಗಳನ್ನು ನಡೆಸುವುದನ್ನು ಕೇಳಿರುತ್ತೀರಿ. ಆದರೆ, ನಗರದ ಎಂಬಿಎ ವಿದ್ಯಾರ್ಥಿ ಅಭಿಷೇಕ್‌ ಅಯ್ಯಪ್ಪನ್‌, ವಿದ್ಯಾರ್ಥಿಗಳಿಗಾಗಿ ಸ್ವಯಂಪ್ರಜ್ಞೆ ಮತ್ತು ಗುರಿ ನಿರ್ಧಾರದ ಕುರಿತು ಕಾರ್ಯಾಗಾರ ನಡೆಸಲು ‘ಚಿಂಗಾರಿ ಆಂದೋಲನ’ ಎನ್ನುವ ಆಂದೋಲನವನ್ನೇ ಹುಟ್ಟುಹಾಕಿದ್ದಾರೆ.

16ರಿಂದ 22ವರ್ಷದ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಈ ಆಂದೋಲನವನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳು ಮೊದಲು ತಾವು ಯಾರು? ಗುರಿ ಏನು? ತಮ್ಮ ಸಾಮರ್ಥ್ಯವೇನು?  ಏನು ಮಾಡಬೇಕು? ಎಂಬ ಬಗ್ಗೆ ತಿಳಿಯುವುದು ಈ ಆಂದೋಲನದ ಉದ್ದೇಶ.

ಸಾಮಾಜಿಕ ಚಟುವಟಿಕೆಗಳಲ್ಲಿ 4 ವರ್ಷಗಳಿಂದ ತೊಡಗಿಸಿಕೊಂಡಿದ್ದ ಅಭಿಷೇಕ್‌ ಅಯ್ಯಪ್ಪನ್‌ ಮೂಲತಃ ರಂಗಭೂಮಿ ಕಲಾವಿದ. ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಬೇಕೆಂದು ರಾಜ್ಯದಾದ್ಯಂತ ಬೀದಿ ನಾಟಕಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಯುವಜನರನ್ನು ಮಾತನಾಡಿಸಿದಾಗ ‘ಏನೋ ಒಂದು ಕೆಲಸ ಮಾಡಬೇಕು ಮಾಡುತ್ತಿದ್ದೀನಿ’, ‘ಜೀವನವೇ ಸಾಕಪ್ಪ ಈ ಕೆಲಸ ಬೇಡ, ಏನೂ ಬೇಡ’ ಎಂಬ ಜಿಗುಪ್ಸೆಯ ಮಾತುಗಳನ್ನು ಕೇಳಿದ ಅಯ್ಯಪ್ಪ ಇಂತಹವರಿಗೆ ತಾವು ಏನು ಎಂಬುದು ಮೊದಲು ತಿಳಿಸಿಕೊಡಬೇಕು ಎಂದು ಅಂದೇ ನಿರ್ಧಾರ ಕೈಗೊಂಡರಂತೆ. 

ಅಭಿಷೇಕ್‌ ಅಯ್ಯಪ್ಪನ್‌ ಬೇರೆಯವರಿಗೆ ಮಾರ್ಗದರ್ಶನ ನೀಡಬೇಕೆಂದು ನ್ಯೂರೋ ಲಿಂಗ್ವಿಸ್ಟಿಕ್‌ ಪ್ರೋಗ್ರಾಮಿಂಗ್‌, ಜೀವನಕೌಶಲ ತರಬೇತಿ ಪಡೆದು ಮನೋವೈಜ್ಞಾನಿಕ ಸಾಧನಗಳನ್ನು ಬಳಸಿಕೊಂಡು ಮಾರ್ಗದರ್ಶನ ನೀಡುತ್ತಿದ್ದಾರೆ.

ಇವರು ನಡೆಸುವ ಕಾರ್ಯಾಗಾರ ಒಂದು ದಿನದ ಅವಧಿಯದ್ದಾಗಿದ್ದು, ಅನುದಾನಿತ ಶಾಲಾ–ಕಾಲೇಜು, ಮೂಲಸೌಕರ್ಯ ವಂಚಿತ ಶಾಲೆಗಳು, ಸರ್ಕಾರಿ ಶಾಲೆಗಳು, ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಕಾರ್ಯಾಗಾರ ನಡೆಸುತ್ತಾರೆ. ಇದುವರೆಗೆ ನಗರದ 10 ಶಾಲೆಗಳಲ್ಲಿ ಕಾರ್ಯಾಗಾರ ಯಶಸ್ವಿಯಾಗಿ ನಡೆಸಿದ್ದಾರೆ.

ಕಾರ್ಯಾಗಾರದಲ್ಲಿ ನೀಡುವ ತರಬೇತಿಯು ವಿವಿಧ ಚಟುವಟಿಕೆಗಳಿಂದ ಕೂಡಿದ್ದು, ಆಟ, ಪಾಠ, ಮಾತು, ಗುರಿ ನಿರ್ಧಾರದ ವಿಷಯವನ್ನೊಳಗೊಂಡಿರುತ್ತವೆ.  ಕೇಳುವಿಕೆ, ವೀಕ್ಷಣೆ ಮತ್ತು ಪ್ರಾಯೋಗಿಕ ಹೀಗೆ 3 ಅಂಶಗಳ ವಿಧಾನವನ್ನು ಕಾರ್ಯಾಗಾರದಲ್ಲಿ ಅಳವಡಿಸಿಕೊಳ್ಳಲಾಗಿದೆ.

‘ಚಿಂಗಾರಿ ಆಂದೋಲನ’ವು ವಾಟ್ಸ್‌ಆಪ್‌ ಮತ್ತು ಫೇಸ್‌ಬುಕ್‌ ಮತ್ತು ಶಾಲಾ, ಕಾಲೇಜುಗಳಲ್ಲಿ ನಡೆದ ಕಾರ್ಯಾಗಾರಗಳ ಮೂಲಕ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ. ಮಾಹಿತಿಗಾಗಿ: 9916816091. chingari.movement@gmail.com

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !