ಹೂವಿನ ಊರು ಚಿನ್ನಿಪುರದ ಮೋಳೆಯಲ್ಲಿ ಪರಿಮಳ ಇಲ್ಲ, ದುರ್ನಾತವೇ ಎಲ್ಲ

7
ಮೂಲಸೌಕರ್ಯದ ಕೊರತೆ, ಜನರದ್ದು ಸಂಕಷ್ಟದ ಬದುಕು

ಹೂವಿನ ಊರು ಚಿನ್ನಿಪುರದ ಮೋಳೆಯಲ್ಲಿ ಪರಿಮಳ ಇಲ್ಲ, ದುರ್ನಾತವೇ ಎಲ್ಲ

Published:
Updated:
Deccan Herald

ಚಾಮರಾಜನಗರ: ಇದು ಹೂವುಗಳಿಗೆ ಹೆಸರಾದ ಊರು. ಇಲ್ಲಿಗೆ ಕಾಲಿಟ್ಟ ತಕ್ಷಣ ಹೂವುಗಳ ಘಮ ಮೂಗಿಗೆ ಬಡಿಯಬೇಕು ಎಂದು ಜನರು ಬಯಸುತ್ತಾರೆ. ಅದೇ ನಿರೀಕ್ಷೆಯಲ್ಲಿ ಅಲ್ಲಿಗೆ ಕಾಲಿಟ್ಟರೆ ಮೂಗಿಗೆ ತಾಕುವುದು ಬಯಲು ಶೌಚ ಮತ್ತು ಚರಂಡಿ ನೀರಿನ ನೀರಿನ ದುರ್ನಾತ!

ಇದು ‘ಹೂವಿನ ಊರು’ ಎಂದು ಕರೆಯುವ ಚಿನ್ನಿಪುರದ ಮೋಳೆಯ ಅವಸ್ಥೆ. ಡಾಂಬಾರು ಕಾಣದ ರಸ್ತೆ, ಆ ರಸ್ತೆಯ ಬದುಗಳಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳು. ದೊಡ್ಡ ಚರಂಡಿಯಲ್ಲಿ ನಿಂತಿರುವ ಕೊಳಚೆ ನೀರು... ಇದು ಈ ಊರಿನ ಸಂಕ್ಷಿಪ್ತ ಚಿತ್ರಣ

ಗ್ರಾಮ‌ಕ್ಕೆ ಪ್ರವೇಶಿಸಿದರೆ ನಮಗೆ ಸ್ವಾಗತ ಕೋರುವುದು ಬಯಲು ಶೌಚಾಲಯ. ಅನೈರ್ಮಲ್ಯವೇ ಎಲ್ಲೆಡೆ ತಾಂಡವವಾಡುತ್ತಿದೆ. ಶೌಚಾಲಯದ ವ್ಯವಸ್ಥೆ ಇಲ್ಲದೇ ಜನರು ಪಡಿಪಾಟಲು ಪಡುತ್ತಿದ್ದಾರೆ. ‘ನಮ್ಮ ಕಷ್ಟ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕಾಣುವುದೇ ಇಲ್ಲ’ ಎಂಬುದು ಇಲ್ಲಿನ ನಿವಾಸಿಗಳ ಅಳಲು.

ಚಿನ್ನಿಪುರದ ಮೋಳೆ ಚಾಮರಾಜನಗರ ನಗರಸಭೆ ವ್ಯಾಪ್ತಿಯ 24ನೇ ವಾರ್ಡ್‌ಗೆ ಸೇರಿದೆ. ಚಿನ್ನಿಪುರದ ಮೋಳೆ ಹಾಗೂ ಜಾಲಹಳ್ಳಿ ಹುಂಡಿ ಸೇರಿ ಒಟ್ಟು 600 ಕುಟುಂಬಗಳಿವೆ. ಒಟ್ಟು 1,500ರಿಂದ 1,600 ಮತದಾರರು ಇದ್ದಾರೆ.

ಉಪ್ಪಾರ ಸಮುದಾಯದವರೇ ಹೆಚ್ಚಾಗಿರುವ ಇಲ್ಲಿನ ಶೇ 80ರಷ್ಟು ಮಂದಿ ಹೂವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಉಳಿದ ‌ಶೇ 20ರಷ್ಟು ಮಂದಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. 

ಮೂಲಸೌಕರ್ಯಗಳ ಕೊರತೆ: ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ. ಶೌಚಾಲಯ ಇಲ್ಲದೇ ಇರುವುದರಿಂದ ಇಲ್ಲಿನ ಜನರು ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ.  ಚರಂಡಿಯೂ ಸಮರ್ಪಕವಾಗಿಲ್ಲ. ದೊಡ್ಡ ಚರಂಡಿ ಇದ್ದರೂ ಅದರಲ್ಲಿ ಗಿಡಗಂಟಿಗಳು ಬೆಳೆದು, ಕೊಳಚೆ ನೀರು ನಿಂತು ಸೊಳ್ಳೆಗಳ ಆವಾಸಸ್ಥಾನವಾಗಿ ಬದಲಾಗಿದೆ. ಚರಂಡಿಯನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವ ಕೆಲಸ ತುರ್ತಾಗಿ ಆಗಬೇಕಿದೆ.

ಶುದ್ಧನೀರಿನ ಘಟಕ ಬೇಕು: ಕಾವೇರಿ ನೀರು ಇನ್ನೂ ಗ್ರಾಮವನ್ನು ತಲುಪಿಲ್ಲ. ಆದರೆ, ಕೊಳವೆ ಬಾವಿ ನೀರಿನ ವ್ಯವಸ್ಥೆ ಇದೆ. ಮೂರು ತೊಂಬೆಗಳ ಪೈಕಿ ಎರಡು ಸರಿಯಾಗಿವೆ. ಓವರ್‌ ಹೆಡ್‌ ಟ್ಯಾಂಕ್‌ ವ್ಯವಸ್ಥೆಯೂ ಇಲ್ಲ.

‘ಇಲ್ಲಿ ಶುದ್ಧ ನೀರಿನ ಘಟಕ ಇಲ್ಲದಿರುವುದರಿಂದ ಬೋರ್‌ವೆಲ್‌ ನೀರನ್ನೇ ಕುಡಿಯುಬೇಕಾದ ಸ್ಥಿತಿ ಇದೆ. ಹೊಸ ಘಟಕವನ್ನು ಸ್ಥಾಪಿಸಲು ನಗರಸಭೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ನಿವಾಸಿಗಳು.

ಗ್ರಾಮಸ್ಥರಲ್ಲಿ ಬಹುತೇಕರು ಬಡವರಾಗಿದ್ದು, ಆಶ್ರಯ ಯೋಜನೆಯ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂಬ ಬೇಡಿಕೆಯನ್ನೂ ಮುಂದಿಡುತ್ತಾರೆ ಇಲ್ಲಿನ ಜನರು.

ಪ್ರೌಢಶಾಲೆ ಸ್ಥಾಪಿಸಲು ಒತ್ತಾಯ
ಸದ್ಯ, ಗ್ರಾಮದಲ್ಲಿ 1ರಿಂದ 8ನೇ ತರಗತಿವರೆಗೆ ಹಿರಿಯ ಪ್ರಾಥಮಿಕ ಶಾಲೆಯಿದೆ. ಪ್ರೌಢ ಶಿಕ್ಷಣಕ್ಕೆ ಮಕ್ಕಳು ಬೇರೆ ಕಡೆಗೆ ಹೋಗಬೇಕಾದ ಅನಿವಾರ್ಯ ಇದೆ. ಹಾಗಾಗಿ, ಈಗ ಅಲ್ಲಿ ಲಭ್ಯವಿರುವ ಶಿಕ್ಷಣವನ್ನು ಎಸ್‌ಎಸ್‌ಎಲ್‌ಸಿವರೆಗೆ ಮುಂದುವರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

‘ಚುನಾವಣೆಯ ನಂತರ ಕಾಮಗಾರಿ’
ಚಿನ್ನಿಪುರದ ಮೋಳೆ ಹಾಗೂ ಜಾಲಹಳ್ಳಿ ಹುಂಡಿಯಲ್ಲಿ ಶೌಚಾಲಯ ನಿರ್ಮಾಣ, ಚರಂಡಿ, ವಿದ್ಯುತ್‌ ವ್ಯವಸ್ಥೆ ಕಲ್ಪಿಸಲು ನಗರೋತ್ಥಾನ ಯೋಜನೆಯ ಅಡಿಯಲ್ಲಿ ₹2 ಕೋಟಿ ಮೀಸಲಿಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ನಗರಸಭೆಯ ಎಲ್ಲ 31 ವಾರ್ಡ್‌ಗಳ ಅಭಿವೃದ್ಧಿಗೆ ₹18.55 ಕೋಟಿ ಅನುದಾನವಿದೆ. 13 ವಾರ್ಡ್‌ಗಳಲ್ಲಿ ಕೆಲಸ ಆರಂಭವಾಗಿದೆ. ಉಳಿದ ಕಡೆಗಳಲ್ಲಿ ನಗರಸಭೆ ಚುನಾವಣೆಯ ನಂತರ ಕಾಮಗಾರಿ ಆರಂಭವಾಗಲಿದೆ’ ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !