ಮಿನಿಕಂಬಾಲಪಲ್ಲಿಗೆ ಸೌಕರ್ಯ ಕಲ್ಪಿಸಲು ಆಗ್ರಹ

ಗುರುವಾರ , ಜೂಲೈ 18, 2019
29 °C

ಮಿನಿಕಂಬಾಲಪಲ್ಲಿಗೆ ಸೌಕರ್ಯ ಕಲ್ಪಿಸಲು ಆಗ್ರಹ

Published:
Updated:
Prajavani

ಚಿಂತಾಮಣಿ: ತಾಲ್ಲೂಕಿನ ಕಂಬಾಲಪಲ್ಲಿ ಗ್ರಾಮದಲ್ಲಿ 7 ಜನ ದಲಿತರ ಸಜೀವ ದಹನವಾಗಿ 19 ವರ್ಷಗಳು ಕಳೆದರೂ ಅಲ್ಲಿನ ನಿರಾಶ್ರಿತರು ವಾಸವಾಗಿರುವ ನಗರದ ಹೊರವಲಯದ ಮಿನಿಕಂಬಾಲಪಲ್ಲಿ ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ನಿರಾಶ್ರಿತರು ಆರೋಪಿಸಿದ್ದಾರೆ.

ವಿಧಾಸಭೆಯ ಉಪಸಭಾಪತಿ ಎಂ.ಕೃಷ್ಣರೆಡ್ಡಿ ಈ ಬಗ್ಗೆ ಸೋಮವಾರ ಅಧಿಕಾರಿಗಳ ಸಭೆ ಕರೆದು ವಿವರಗಳನ್ನು ಪಡೆದುಕೊಂಡರು.

ಜೂನ್ 19 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಕೋಲಾರ ಮತ್ತು ಚಿಕ್ಕಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಮಿನಿಕಂಬಾಲಪಲ್ಲಿಯ ಮೂಲ ಸೌಲಭ್ಯಗಳ ಕುರಿತು ಚರ್ಚೆ ಮಾಡಲಾಗುವುದು ಎಂದು ಕೃಷ್ಣಾರೆಡ್ಡಿ ತಿಳಿಸಿದರು.

ಕಂಬಾಲಪಲ್ಲಿ ಗ್ರಾಮದಲ್ಲಿ 2001ರ ಮಾರ್ಚ್‌ 11ರಂದು ನಡೆದ ಗಲಾಟೆಯಲ್ಲಿ 7 ಮಂದಿ ದಲಿತರ ಸಜೀವ ದಹನ ನಡೆದಿತ್ತು. ಇಡೀ ದೇಶದ ಗಮನಸೆಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಅಂದಿನ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಲವಾರು ಕೇಂದ್ರದ ನಾಯಕರು ಭೇಟಿ ನೀಡಿದ್ದರು. ನಿರಾಶ್ರಿತ ಕುಟುಂಬಗಳಿಗೆ ಸಾಂತ್ವನ ಹೇಳಿ ನಗರದ ಹೊರವಲಯದಲ್ಲಿ ಸರ್ಕಾರ ಜಮೀನು ಖರೀದಿಸಿ, ಮನೆಗಳನ್ನು ನಿರ್ಮಾಣ ಮಾಡಿ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು.

ಮಿನಿಕಂಬಾಲಪಲ್ಲಿ ಎಂದು ಹೆಸರು ಪಡೆದ ಗ್ರಾಮದಲ್ಲಿ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿದರೂ ಇಂದಿಗೂ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಿಲ್ಲ ಎಂದು ದೂರಲಾಗಿದೆ. ವಿದ್ಯುತ್ ಮೀಟರ್‌ನ ನೋಂದಣಿ ಯೋಜನಾ ವ್ಯವಸ್ಥಾಪಕರ ಹೆಸರಿನಲ್ಲಿ ಇರುವುದರಿಂದ ವಿದ್ಯುತ್ ಬಿಲ್ ಕಟ್ಟಲು ತೊಂದರೆಯಾಗಿದೆ. ಬೆಸ್ಕಾಂನಿಂದ ಪದೇ ಪದೇ ವಿದ್ಯುತ್ ಕಡಿತಗೊಳಿಸುತ್ತಾರೆ. ನಿರಾಶ್ರಿತರಿಗೆ ನೀಡಿರುವ ಜಮೀನು ಸರ್ವೇ ಮಾಡಿಸಬೇಕು. ರಸ್ತೆ, ಸ್ಮಶಾನ, ಕುಡಿಯುವ ನೀರು ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಎಸ್.ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಶ್ರೀನಿವಾಸನ್, ಸಮಾಜ ಕಲ್ಯಾಣ ಇಲಾಖೆಯ ಸಿದ್ದು ನಾರಾಯಣಸ್ವಾಮಿ  ಹಾಗೂ ನಿರಾಶ್ರಿತರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !