‘ಬೈಟು ಕಾಫಿ’ ಜತೆಸಿಂಪಲ್ ಮಾತು

7
ಉದ್ಯಮಿ ಮಾತು

‘ಬೈಟು ಕಾಫಿ’ ಜತೆಸಿಂಪಲ್ ಮಾತು

Published:
Updated:
Prajavani

ಹೋಟೆಲ್‌ ಉದ್ಯಮದತ್ತ ಒಲವು ಮೂಡಿದ್ದು ಹೇಗೆ?

ಹೋಟೆಲ್ ಉದ್ಯಮಕ್ಕೆ ಬರಲು ‘ದರ್ಶಿನಿ ಬ್ರಹ್ಮ’ ಎಂದೇ ಖ್ಯಾತರಾದ ಪ್ರಭಾಕರ್ ಕಾರಣ. ಅವರು ನನ್ನ ಗುರುಗಳು. ಅವರಿಂದ ಪ್ರಭಾವಿತನಾಗಿ ಹಾಗೂ ಅವರ ಮಾರ್ಗದರ್ಶನದಲ್ಲಿ ಈ ಉದ್ಯಮಕ್ಕೆ ಕಾಲಿಟ್ಟೆ. ಇಲ್ಲಿ ತಕ್ಕಮಟ್ಟಿಗೆ ನೆಲೆಕಾಣಲು ಅವರೇ ಕಾರಣ. ಉದ್ಯಮದ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದ ನನಗೆ ಅದರ ಆಳ ಅಗಲದ ಬಗ್ಗೆ ತಿಳಿಸಿ, ಮಾರ್ಗದರ್ಶನ ನೀಡಿ ನನ್ನ ಬೆಳೆಸಿದರು.

ಬೈಟು ಕಾಫಿ ಪರಿಕಲ್ಪನೆ ಹುಟ್ಟಿದ್ದು ಹೇಗೆ?

ಈ ಉದ್ಯಮ ನನಗೆ ಹೊಸದು. ಶುದ್ಧತೆ, ಸ್ವಚ್ಛತೆ ಹಾಗೂ ಪ್ರಮಾಣಿಕ ಬೆಲೆಯಿಂದ ಗ್ರಾಹಕರನ್ನು ಸೆಳೆಯುವ ಸಲುವಾಗಿ ₹ 5ಕ್ಕೆ ಟೀ– ಕಾಫಿ ಕಾನ್ಸೆಪ್ಟ್ ಪರಿಚಯಿಸಿದೆ. ಅದು ಕ್ಲಿಕ್ ಆಯಿತು. ಹೋಟೆಲ್‌ಗೂ ಖ್ಯಾತಿ ತಂದು ಕೊಟ್ಟಿತು. ಟೀ–ಕಾಫಿ ಜೊತೆಗೆ ಸಿಂಪಲ್ ಖಾದ್ಯಗಳನ್ನಷ್ಟೇ ಹೋಟೆಲ್‌ನಲ್ಲಿ ಪರಿಚಯಿಸಿದೆ. ಇಡ್ಲಿ, ವಡೆ, ಕೇಸರಿಬಾತ್, ಖಾರಬಾತ್, ಮಸಾಲೆ ದೋಸೆ, ಜಾಮೂನು ಅಷ್ಟೇ ಪರಿಚಯಿಸಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಉದ್ಯಮದಲ್ಲಿ ಎದುರಾಗುವ ಸಾಮಾನ್ಯ ಸವಾಲುಗಳೇನು?

ಹೋಟೆಲ್ ಉದ್ಯಮ ನಡೆಸುವುದು ಕಷ್ಟ ಅಂತಾರೆ. ಅದು ನಿಜ. ಆದರೆ, ಉದ್ಯಮದಲ್ಲಿ ನೆಲೆಯೂರಬೇಕು ಎನ್ನುವವರಿಗೆ ತಾಳ್ಮೆ ಹಾಗೂ ಶ್ರದ್ಧೆ ಇರಬೇಕು. ತಾಳ್ಮೆ ಹಾಗೂ ಶ್ರದ್ಧೆಯಿಂದ ಇರುವುದೇ ಈ ಉದ್ಯಮದಲ್ಲಿನ ಸವಾಲು. ಹೋಟೆಲ್‌ನ ಎಲ್ಲ ಕಾರ್ಯಗಳ ಬಗ್ಗೆಯೂ ಪ್ರತಿಕ್ಷಣ ನಿಗಾ ಇಟ್ಟಿರಬೇಕು. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಒಳ್ಳೆ ರುಚಿ ನೀಡಿದರೆ ಹೋಟೆಲ್‌ಗೆ ಜನರು ಬರುತ್ತಾರೆ. ಒಮ್ಮೆ ರುಚಿಯಾಗಿ ಮತ್ತೊಮ್ಮೆ ಹಾಗೆಯೇ ಆಹಾರವನ್ನು ಗ್ರಾಹಕರಿಗೆ ನೀಡಲಾಗದು. ಎಲ್ಲ ವೇಳೆಯಲ್ಲೂ ಒಂದೇ ರೀತಿಯ ರುಚಿಯ ಗುಣಮಟ್ಟದ ಆಹಾರ ನೀಡುವುದು ಸವಾಲೇ.

ರುಚಿಕರ ಆಹಾರ ನೀಡುವುದು ಸವಾಲಿನ ಕೆಲಸವೇ?

ಹೌದು, ಯಾವಾಗಲೂ ಒಂದೆ ರೀತಿಯ ರುಚಿಯುಳ್ಳ ಆಹಾರ ನೀಡುವಲ್ಲಿ ಹೋಟೆಲ್‌ನ ಕೆಲಸಗಾರರ ಪಾತ್ರ ಪ್ರಮುಖವಾದದ್ದು. ಆದರೆ, ಕೆಲಸಗಾರರು ಪದೇ ಪದೇ ಕೈ ಕೊಡುತ್ತಲೇ ಇರುತ್ತಾರೆ. ಅದು ಈ ಉದ್ಯಮದ ದುರಂತ. ಒಬ್ಬ ನುರಿತ ಕೆಲಸಗಾರ ಕೆಲಸ ಬಿಟ್ಟರೆ ಆತನ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಬಹುದು. ಆದರೆ, ಬಿಟ್ಟು ಹೋದ ಕೆಲಸಗಾರ ಮಾಡುತ್ತಿದ್ದ ಅಡುಗೆ ಕಲೆ ಹೊಸ ಕೆಲಸಗಾರರಿಗೆ ಗೊತ್ತಿರುವುದಿಲ್ಲ. ಅವರಿಗೆ ಹೊಸದಾಗಿ ತರಬೇತಿ ನೀಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ನಡುವೆ ಹೋಟೆಲ್‌ಗೆ ಬರುವ ಗ್ರಾಹಕರ ಕಥೆಯೇನು?. ಹೀಗಾಗಿ, ಕೆಲಸಗಾರರನ್ನು ನಿಭಾಯಿಸಿ ರುಚಿಕರ ಆಹಾರ ನೀಡುವುದು ಸವಾಲಿನ ಕೆಲಸವೇ ಸರಿ. ಪರ್ಯಾಯವಾಗಿ ನಮ್ಮದೇ ರೆಸಿಪಿ ಹೊಂದಿದ್ದೇವೆ. ಅದರ ಬಗ್ಗೆ ಎಲ್ಲ ಕೆಲಸಗಾರರಿಗೆ ಕೆಲಸಕ್ಕೆ ಸೇರಿದಾಗಲೇ ತರಬೇತಿ ನೀಡುತ್ತೇವೆ.

ಹೋಮ್ ಡೆಲಿವರಿ ಪದ್ಧತಿ ಬೇಕೆ?

ವ್ಯಾಪಾರದ ದೃಷ್ಟಿಯಿಂದ ನೋಡುವುದಾದರೆ, ಹೋಮ್ ಡೆಲಿವರಿ ಪದ್ಧತಿ ಅನಿವಾರ್ಯ. ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ಫುಡ್ ಡೆಲಿವರಿ ಆ್ಯಪ್‌ಗಳು ಬಂದ ಬಳಿಕವೂ ಹೋಟೆಲ್‌ಗಳಿಗೆ ಬರುವ ಗ್ರಾಹಕರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಅವುಗಳಿಂದ ಹೆಚ್ಚುವರಿ ವ್ಯಾಪಾರವಾಗುತ್ತಿದೆ. ಇನ್ನು ಆಹಾರದ ತಾಜಾತನದ ವಿಚಾರಕ್ಕೆ ಬಂದರೆ, ಹೋಮ್ ಡೆಲಿವರಿ ಬೇಡ.

ಕಾರ್ಪೊರೇಟ್ ಅಂಗಳಕ್ಕೆ ಬೈಟು ಕಾಫಿ ತೆಗೆದುಕೊಂಡು ಹೋಗುತ್ತಿದ್ದೀರಲ್ಲಾ?

ಬಸವನಗುಡಿ, ಚಾಮರಾಜಪೇಟೆ, ವಿ.ವಿ.ಪುರ, ಮಲ್ಲೇಶ್ವರ, ವಿಜಯನಗರ ಹಾಗೂ ನಾಗರಬಾವಿಯಲ್ಲಿ ಬೈಟು ಕಾಫಿ ಶಾಖೆಗಳಿವೆ. ಗ್ರಾಹಕರ ಬೇಡಿಕೆ ಹಾಗೂ ವ್ಯಾಪಾರ ದೃಷ್ಟಿಯಿಂದ ಅಗತ್ಯವಿರುವೆಡೆ ಶಾಖೆ ತೆರೆಯುವುದು ಅನಿವಾರ್ಯ. ಹೀಗಾಗಿ, ಈಚೆಗೆ ಇನ್ಫೋಸಿಸ್ ಕಚೇರಿಯ ಅಂಗಳದಲ್ಲೂ ಶಾಖೆ ತೆರೆಯಲಾಗಿದೆ. ನಗರದ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಬೈಟು ಕಾಫಿ ಶುರು ಮಾಡುವ ಆಲೋಚನೆ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !