ಅಮ್ಮನಿಗೊಂದು ಸುದ್ದಿ ಮುಟ್ಟಿಸಿ...

7
ಚಿತ್ತಪಟ

ಅಮ್ಮನಿಗೊಂದು ಸುದ್ದಿ ಮುಟ್ಟಿಸಿ...

Published:
Updated:
Deccan Herald

ಕಗ್ಗತ್ತಲೆಯ ನಡುವೆ ಹಣತೆ ಉರಿಯುತ್ತಿದೆ. ಹಣತೆಯೊಳಗಿನ ಎಣ್ಣೆ ಖಾಲಿಯಾಗಿದೆ. ದೀಪದ ಬೆಳಕು ಮೆಲ್ಲಗೆ ಕಂತುತ್ತಿದೆ. ಗಾಳಿಯೂ ಜೋರು ಜೋರು ಬೀಸುತ್ತಿದೆ. ಮೆಲ್ಲಗೆ ಸುಳಿದು ದೀಪದ ಕುಡಿಯ ಜತೆ ಚಿನ್ನಾಟವಾಡುವ ತಂಗಾಳಿ ಅಲ್ಲ ಅದು; ಬೆಳಕನ್ನು ಆರಿಸಲೆಂದೇ ಬಂದಂತಿರುವ ಬಿರುಸು ಗಾಳಿ.

ಹಣತೆಯ ಒಡಲೊಳಗೆ ಎಣ್ಣೆ ಎರೆದು, ಹತ್ತಿಯನ್ನು ಹೊಸೆದು ಹೊಸೆದು ಬತ್ತಿ ಕಟ್ಟಿ ಎಲ್ಲಿಂದಲೋ ಬೆಂಕಿ ತಂದು ದೀಪ ಬೆಳಗಿ, ಕತ್ತಲನ್ನು ಸೋಲಿಸಿದೆ ಎಂದು ಸಂಭ್ರಮಿಸಿದ್ದ ಜೀವ ಈ ಎಲ್ಲವನ್ನೂ ನೋಡುತ್ತ ಕೂತಿದೆ...

ಕೊಂಚ ಹೊಯ್ದಾಡಿ ‘ಭಗ್‌’ ಎಂದು ಒಮ್ಮೆಲೆ ನಂದಿಹೋಯಿತು ಬೆಳಕಿನ ಕುಡಿ. ಅದನ್ನೇ ಕಾಯುತ್ತಿದ್ದಂತೆಯೇ ಕಗ್ಗತ್ತಲು ಮುಗಿಬಿದ್ದು ಎಲ್ಲವನ್ನೂ ಅವುಚಿಕೊಂಡಿತು. ಕೊನೆಯ ಉಸಿರೋ ಎಂಬಂತೆ ಬತ್ತಿ ಕೆಂಪಗಾಗಿ ನಿಗಿನಿಗಿ ಹೊಳೆಯುತ್ತಿದೆ. ಅದರಿಂದ ಎದ್ದ ಬಿಳೀ ಹೊಗೆ ಮೊದಲು ಚೂಪಾಗಿ ನಂತರ ಹರವಾಗಿ, ಬೆಳಕು ಸತ್ತ ಸುದ್ದಿಯನ್ನು ಯಾರಿಗೋ ಸುದ್ದಿ ಮುಟ್ಟಿಸಲೆಂಬಂತೆ ದಿಕ್ಕೆಟ್ಟು ಡೊಂಕು ಡೊಂಕಾಗಿ ಹರಡಿ ಗಾಳಿಯೊಟ್ಟಿಗೆ, ಕತ್ತಲೊಟ್ಟಿಗೆ ಸೇರಿ ಸರಿದುಹೋಗುತ್ತಿದೆ.

ಹೇಗೆ ಸತ್ತಿತು ಬೆಳಕು? ಯಾರು ಕೊಂದರು ಅದನ್ನು? ಬೀಸಿದ ಗಾಳಿಯೆ? ತೀರಿದ ಎಣ್ಣೆಯೇ? ಒಣಗಿದ ಬತ್ತಿಯೇ? ಸುತ್ತಲಿನ ಕತ್ತಲೆಗೆ ಅಂಜಿ ಮಾಡಿಕೊಂಡಿತೆ ಆತ್ಮಹತ್ಯೆ? ಉರಿವಷ್ಟೂ ಹೊತ್ತೂ ಕತ್ತಲೆಯನ್ನು ಸೋಲಿಸಿದೆ ಎಂದು ಅನಿಸಿದ್ದು ಬರಿಯ ಭ್ರಮೆಯೆ? ಯಾಕೆ ಕತ್ತಲೆಯ ನಡುವೆ ನಾವು ಕಟ್ಟಿದ ಬೆಳಕಿನ ಮನೆಗಳೆಲ್ಲ ಕ್ಷಣ ಬೆಳಗಿ ಕುಸಿದು ಹೋಗುತ್ತವೆ?

–ದೀಪ ಹಚ್ಚಿದ್ದ ಆ ಜೀವಕ್ಕಿದು ಬೆಳಕಿನ ಸಾವು. ತುಸು ಹೊತ್ತು ನಕ್ಕು ಬಾಡಿ ಉದುರಿಹೋಗಿ ನೋವು ಕೊಡುವ ಕನಸಿನ ಹೂವು. ಆದರೆ ಹಗಲಿನ ಪಾಲಿಗೆ ಅದೊಂದು ಮಾಹಿತಿ ಅಷ್ಟೆ. ದೀಪವೊಂದು ಆರಿದ ‘ಇನ್‌ಫಾರ್ಮೇಶನ್’! ಮನಸೊಳಗೆ ಕಚ್ಚಿ, ಮೈಯೆಲ್ಲ ಆವರಿಸಿ ಹಿಂಡುವ ‘ಸುದ್ದಿ’ಗೂ, ಬರಿದೇ ದಾಖಲಾಗುವ ‘ಇನ್‌ಫಾರ್ಮೆಶನ್‌’ಗೂ ನಡುವೆ ಇರುವ ವ್ಯತ್ಯಾಸ ಆಳವಾದದ್ದು. ಕಪ್ಪೂ ಅಲ್ಲದ, ಬಿಳಿಯೂ ಅಲ್ಲದ ಬೂದು ಬಣ್ಣದ್ದು. ಈ ಬೂದುಬಣ್ಣವನ್ನು ಅದರ ಹಲವು ಟೆಕ್ಸ್ಚರ್‌ಗಳ ಸಮೇತ ಹಿಡಿದಿಡುವ ಪ್ರಯತ್ನ ಮಲಯಾಳಂನ ‘ಅಮ್ಮ ಅರಿಯಾನ್‌’ ಸಿನಿಮಾ.

‘ಅಮ್ಮ ಅರಿಯಾನ್’ ಚಿತ್ರವೂ ಒಂದು ಸಾವು ಮತ್ತದರ ಸುದ್ದಿಯನ್ನು ಮುಟ್ಟಿಸುವ ಎಳೆಯನ್ನೇ ಹೊಂದಿದೆ. ಈ ಚಿತ್ರದ ಕಥೆಯನ್ನು ತುಂಬ ಸುಲಭವಾಗಿ ಕೆಲವೇ ಸಾಲಿನಲ್ಲಿ ಹೇಳಿಬಿಡಬಹುದು:

ಪುರುಷನ್ ಎನ್ನುವವನು ಕೇರಳದ ತನ್ನೂರಿನಿಂದ ದೆಹಲಿಗೆ ಹೊರಟಿದ್ದಾನೆ. ಆದರೆ ಅವನಿಗೆ ದಾರಿ ಮಧ್ಯ ಒಂದು ಶವ ಕಾಣಿಸುತ್ತದೆ. ಆ ಶವವನ್ನು ತಾನು ಎಲ್ಲಿಯೋ ನೋಡಿದ್ದೇನೆ ಎಂದೆನಿಸತೊಡಗುತ್ತದೆ. ಅವನು ಯಾರು ಎಂದು ಪತ್ತೆ ಮಾಡಿ ಸತ್ತ ಸುದ್ದಿಯನ್ನು ಅವನ ಅಮ್ಮನಿಗೆ ಮುಟ್ಟಿಸಬೇಕು ಎಂದು ನಿರ್ಧರಿಸುತ್ತಾನೆ. ಹಾಗೆಯೇ ಅವನ ಸ್ನೇಹಿತರನ್ನೆಲ್ಲ ಸಂಪರ್ಕಿಸಿ ಅವನ ಬಗ್ಗೆ ತಿಳಿದುಕೊಂಡು ಹಲವು ಜನರು ಸೇರಿಕೊಂಡು ವಯನಾಡ್‌ನಿಂದ ಕೊಚ್ಚಿಯವರೆಗೆ ಹೋಗಿ ಅವನ ಅಮ್ಮನಿಗೆ ಸುದ್ದಿ ಮುಟ್ಟಿಸುತ್ತಾರೆ.

ಇದು ಚಿತ್ರದ ಕಥೆ. ಆದರೆ ಒಂದು ಒಳ್ಳೆಯ ಸಿನಿಮಾದ ಕಥೆಯನ್ನು ಹೇಳಿದರೆ ಏನನ್ನೂ ಹೇಳಿದ ಹಾಗಾಗುವುದಿಲ್ಲ. ‘ದೀಪ ಆರಿತು’ ಎಂಬ ಮಾಹಿತಿಯನ್ನು ಹೇಳಿದರೆ ಬೆಳಕಿನ ಸಾವಿನ ಗಾಢ ಅನುಭವವನ್ನು ದಾಟಿಸಿದಂತಾಗುತ್ತದೆಯೇ? ಅಲ್ಲದೆ, ಈ ಚಿತ್ರದ ನಿರ್ದೇಶಕ ಜಾನ್‌ ಅಬ್ರಹಾಂ ಅವರ ಉದ್ದೇಶವೂ ಕಥೆಯನ್ನು ಹೇಳಿ ಕುತೂಹಲ ತಣಿಸುವುದು ಅಲ್ಲವೇ ಅಲ್ಲ. ಆ ಕುತೂಹಲಕ್ಕೆ ಅವಕಾಶವೇ ಇಲ್ಲದ ಹಾಗೆ, ಪ್ರೇಕ್ಷಕನ ಜತೆಗೆ ಸಾಧ್ಯವಾದಷ್ಟೂ ‘ಅಂತರ’ ಇಟ್ಟುಕೊಂಡೇ ಇಡೀ ಸಿನಿಮಾ ಕಥನವನ್ನು ಕಟ್ಟಿದ್ದಾರೆ ಅವರು. ಹಾಗಾಗಿ ಇದು ಕುತೂಹಲ ತಣಿಸುವ ಕಥೆ ಅಲ್ಲ; ಕುತೂಹಲವನ್ನು ಮೀರಿ ಸಂವಾದ ನಡೆಸುವ, ನಮ್ಮನ್ನು ಬೆಳೆಸುವ ಕಥನ. ಈ ಕಥನವನ್ನು ದಾಟಿಸಲು ಸಾಧ್ಯವಾದರೆ ಅದೇ ಈ ಚಿತ್ರದ ಸರಿಯಾದ ವಿಶ್ಲೇಷಣೆಯೂ ಆಗಬಹುದು.
ಪುರುಷನ್ ಎನ್ನುವ ತರುಣ ತನ್ನ ಹಳ್ಳಿಯಿಂದ ದೆಹಲಿಗೆ ಹೊರಟಿದ್ದಾನೆ. ‘ತನ್ನನ್ನು ತಾನು ಹುಡುಕಿಕೊಳ್ಳಬೇಕು’ ಎನ್ನುವುದು ಅವನ ಈ ಪ್ರಯಾಣದ ಮೂಲ ಉದ್ದೇಶ. ಜತೆಗೆ ಗೆಳತಿಯ ಕರೆಯ ಸೆಳೆತವೂ ಇದೆ. ಹೊರಟ ಮಗನನ್ನು ಅಮ್ಮ ತಡೆಯುತ್ತಿಲ್ಲ (ತಡೆದರೆ ನಿಲ್ಲಲಾರ ಎಂಬುದೂ ಗೊತ್ತಿರುವಂತಿದೆ). ಅವಳದೊಂದೇ ಮಾತು: ಮಗಾ, ಎಲ್ಲಿಗಾದ್ರೂ ಹೋಗು. ಆದ್ರೆ ಎಲ್ಲಿದೀಯಾ ಅಂತ ನಂಗೆ ಪತ್ರ ಬರೆದು ಸುದ್ದಿ ಮುಟ್ಟಿಸ್ತಿರು. ಈಗ ಕಾಲ ಅಷ್ಟು ಸರಿ ಇಲ್ಲ.

ಆದರೆ ಮಗನಿಗೆ ಪತ್ರ ಬರೆಯುವುದು ಇಷ್ಟವಿಲ್ಲ. ‘ನಿಂಗೊತ್ತಲ್ಲ, ನಾನು ಪತ್ರಗಿತ್ರ ಎಲ್ಲ ಬರಿಯೂದಿಲ್ಲ’ ಎನ್ನುತ್ತಾನೆ. ಆದರೂ ತಾಯಿಯ ಒತ್ತಾಯಕ್ಕೆ ಹೂಂಗುಟ್ಟಿ ನಡೆಯುತ್ತಾನೆ. ಹೊರಟ ಮಗನನ್ನು ನಿರ್ಲಿಪ್ತವಾಗಿ ನೋಡುತ್ತ ಕಂಬಕ್ಕೊರಗಿ ನಿಲ್ಲುತ್ತಾಳೆ ತಾಯಿ.

ತಾಯಿ ಮತ್ತು ಪ್ರಯಾಣ ಎನ್ನುವುದು ಚಿತ್ರದುದ್ದಕ್ಕೂ ಮತ್ತೆ ಮತ್ತೆ ಕಾಣಿಸುತ್ತವೆ. ಪುರುಷನ್ ಅಥವಾ ಅವನಂಥವರ ನಡಿಗೆಯನ್ನು ಹೊಲಿಯುವ ದಾರದಂತೆ ದಾರಿಗಳೂ ಸೂಜಿಯಂತೆ ತಾಯಂದಿರೂ ಕಾಣಿಸುತ್ತಾರೆ.
ಒಬ್ಬ ತರುಣ ಸತ್ತಿದ್ದಾನೆ. ಬೆಟ್ಟದ ತುದಿಯ ಒಂಟಿ ಮರದ ಮೊಂಡು ಕೊಂಬೆಗೆ ನೇಣುಹಾಕಿಕೊಂಡು ಸತ್ತಿದ್ದಾನೆ. ಅರ್ಧ ಕಡಿದ ಕೊಂಬೆಯ ಬದಿಗೆ ಚಿಗುರಿದ ಸಣ್ಣ ಚಿಗುರುಗಳ ಜತೆಗೆ ಜೀವ ತೆಗೆದುಕೊಂಡ ಹಗ್ಗವೂ ಗಾಳಿಗೆ ಹೊರಳಾಡುತ್ತಿದೆ. ಅದನ್ನು ನೋಡುತ್ತ ಕೂತ ಪುರುಷನ್‌ನ ಮನಸ್ಸೊಳಗೆ ದುಗುಡ, ಕೋಳುಕಂಬದ ಸಂದಿಯಲ್ಲಿ ಬಳಚುವ ಹಾವಿನ ಬಾಲದಂತೆ ಹೊರಳಾಡುತ್ತಿದೆ. ದೆಹಲಿಗೆ ಹೊರಟವನನ್ನು ತಡೆದು ನಿಲ್ಲಿಸುತ್ತದೆ. ‘ಕ್ಷಣ ಹೊತ್ತು ಕುಂತು ಹೋಗು’ ಎನ್ನುವ ಗೆಳತಿಯ ಮಾತನ್ನೂ ಪೂರ್ತಿಗೊಳಿಸಲಾಗದ ತಳಮಳದಲ್ಲಿ ಎದ್ದು ಹೊರಡುತ್ತಾನೆ. ‘ಸತ್ತವನನ್ನು ಎಲ್ಲಿಯೋ ನೋಡಿದ್ದೇನೆ. ಅವನು ಯಾರು ಎಂದು ತಿಳಿದು ಅವನ ಅಮ್ಮನಿಗೆ ಸಾವಿನ ಸುದ್ದಿ ಮುಟ್ಟಿಸಬೇಕು’. ಇದೇ ಅವನ ಅಸ್ತಿತ್ವವನ್ನು ಹುಡುಕಿಕೊಳ್ಳುವ ದಾರಿಯಾಗಿಯೂ ಕಾಣುತ್ತದೆ.

ಹೀಗೆ ಮರದ ಕೊಂಬೆಯ ಮೇಲೆ ಹೊರಳುತ್ತಿರುವ ಹರಿದ ಹಗ್ಗ ಪುರುಷನ್‌ನನ್ನು ಹೇಗೆ ಸುತ್ತಿಕೊಂಡಿತು ಎಂಬುದನ್ನು ನಿರ್ದೇಶಕರು ಬಾವಿಯ ಕಂಬದ ಮೇಲೆ ಸುತ್ತಿಟ್ಟಿರುವ ಹಗ್ಗವನ್ನು ಕಾಣಿಸುವ ಮೂಲಕ ಸೂಚಿಸುತ್ತಾರೆ. ಆಡಹೊರಟರೆ ಹಗುರವಾಗುವ, ಮನದ ಕಣ್ತೆರೆದು ನೋಡಿದರಷ್ಟೇ ಕಾಣುವ ಇಂಥ ಹಲವು ಪ್ರತಿಮೆಗಳು ಚಿತ್ರದುದ್ದಕ್ಕೂ ಬರುತ್ತ ಹೋಗುತ್ತವೆ. ಕಥನವನ್ನು ಇನ್ನಷ್ಟು ದಟ್ಟವಾಗಿಸುತ್ತವೆ. ಹುಟ್ಟು– ಸಾವು, ಕೊನೆ–ಮೊದಲುಗಳನ್ನು ಮತ್ತೆ ಮತ್ತೆ ಮುಖಾಮುಖಿಯಾಗಿಸಿ ಅವುಗಳ ಅರ್ಥವನ್ನೂ, ಅವು ಮನುಷ್ಯನನ್ನು, ಅವನು ಕಟ್ಟಿದ ಸಮಾಜವನ್ನು ನಿಯಂತ್ರಿಸುವ ಬಗೆಯನ್ನು ಬಹುಸೂಕ್ಷ್ಮವಾಗಿ ಪರೀಕ್ಷಿಸುತ್ತಲೇ ಸಿನಿಮಾ ಬೆಳೆಯುತ್ತದೆ. ಇದಕ್ಕೆ ಇನ್ನೊಂದು ಉದಾಹರಣೆ ಪುರುಷನ್, ಅಪರಿಚಿತ ಶವವನ್ನು ಹುಡುಕಿಕೊಂಡು ಆಸ್ಪತ್ರೆಗೆ ಹೋಗುವ ದೃಶ್ಯ. ಶವವನ್ನು ಹುಡುಕಿಕೊಂಡು ಆಸ್ಪತ್ರೆ ಹೊಕ್ಕರೆ ಮಂದಬೆಳಕಿನಲ್ಲಿ ಮಗು ಅಳುವ ಸದ್ದು ಅವನನ್ನು ಹಿಂಬಾಲಿಸುತ್ತದೆ. ಶವಾಗಾರವನ್ನು ತೆಗೆದರೂ ಮೃತದೇಹದ ಕೆಳಗೆ ಹಸಿಗೂಸುಗಳ ಕಳೆಬರ.

‘ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ;
ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ’
(ಗೋಪಾಲಕೃಷ್ಣ ಅಡಿಗರ ‘ಭೂಮಿಗೀತ’ ಕವಿತೆಯಿಂದ)

***
‘ಇವನು ತಬಲಾ ಕಲಾವಿದ ಹರಿಯಲ್ಲವೇ?’ ಸ್ನೇಹಿತನೊಬ್ಬ ಮೃತದೇಹವನ್ನು ಗುರ್ತಿಸುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಹುಡುಕಾಟ. ಅವನ ಸ್ನೇಹಿತರನ್ನೆಲ್ಲ ಎಡತಾಕುವುದು. ಅವರು ಬಂದು ಶವವನ್ನು ನೋಡುವುದು... ‘ಇವನು ಡ್ರಮ್‌ ಬಾರಿಸುತ್ತಿದ್ದ ಟೋನಿ ಅಲ್ಲವೇ?’, ‘ನಮ್ಮ ಹರಿಯಲ್ಲವೇ?’ ‘ನಮ್ಮ ಹರಿ ಆತ್ಮಹತ್ಯೆ ಮಾಡಿಕೊಂಡನೇ?...’

ಎಲ್ಲರೂ ತಾವು ಕಂಡ ಹರಿಯನ್ನು ನೆನಪಿಸಿಕೊಳ್ಳುತ್ತಲೇ ಹೋಗುತ್ತಾರೆ. ಒಬ್ಬ ಮನುಷ್ಯನಿಗೆ ಎಷ್ಟು ಅವತಾರಗಳು?... ತಬಲಾ ಕಲಾವಿದನಾಗಿ, ಮೃದಂಗ ಬಾರಿಸುವವನಾಗಿ, ಡ್ರಮ್‌ ಬಾರಿಸುವವನಾಗಿ, ಪೊಲೀಸರ ಕ್ರೌರ್ಯಕ್ಕೆ ನಡುಗುತ್ತ ಮೂಲೆಯಲ್ಲಿ ಕೂತ ಪುಕ್ಕಲನಾಗಿ, ಪೊಲೀಸ್‌ ಸ್ಟೇಷನ್ ಮೇಲೆ ದಾಳಿ ಮಾಡಿ ಶಸ್ತ್ರಾಸ್ತ್ರ ಕದಿಯುವ ದಾಳಿಕೋರನಾಗಿ, ಜೂಜುಕೋರ, ಮಾದಕವ್ಯಸನಿಯಾಗಿ, ಸಂಗೀತದ ಆರಾಧಕನಾಗಿ, ಚಳವಳಿಕಾರನಾಗಿ... ತೀರಿಕೊಂಡ ಹರಿಯೆಂಬುವವನು ಒಬ್ಬನೇ? ಇಬ್ಬರೇ? ನೂರಾರೇ?... ಅವನು ಮನುಷ್ಯನೇ? ಎಲ್ಲರ ಮನಸೊಳಗೆ ಉರಿದು ಆರಿಹೋದ ದೀಪವೆ? ನಮ್ಮದೇ ಎದೆಯ ನಡುವಲ್ಲಿ ಮುಳುಗಿಹೋದ ದ್ವೀಪವೇ?

ಹರಿ ಎಂಬುವವ ತೀರಿಕೊಂಡ ಸ್ಥಳ ವಯನಾಡ್‌ನಿಂದ ಅವನ ಮನೆ ಇರುವ ಕೊಚ್ಚಿಯವರೆಗಿನ ಪ್ರಯಾಣವನ್ನೇ ಚಿತ್ರದ ಕ್ಯಾನ್ವಾಸ್‌ ಆಗಿಸಿಕೊಂಡಿದ್ದಾರೆ ನಿರ್ದೇಶಕ ಜಾನ್‌ ಅಬ್ರಹಾಂ. ದಾರಿಯುದ್ದಕ್ಕೂ ಅವನ ಸ್ನೇಹಿತರ, ಒಡನಾಡಿಗಳ ಮನೆಗೆ ಹೋಗಿ ಸಾವಿನ ಸುದ್ದಿ ಹೇಳಿ ಅವರನ್ನೂ ಜತೆ ಕರೆದುಕೊಂಡು ಹೊರಡುತ್ತ ಹೊರಡುತ್ತ ಅದೊಂದು ಆಂದೋಲನದ ರೂಪ ಪಡೆಯುತ್ತದೆ. ಎಲ್ಲರೂ ತಾವು ಕಂಡ ಹರಿಯ ಕುರಿತು ಹೇಳುತ್ತ ಹೋಗುತ್ತಾರೆ. ಸತ್ತ ವ್ಯಕ್ತಿಯಾಗಿದ್ದ ಹರಿ ಒಂದು ಪ್ರತೀಕವಾಗಿ, ಹಲವು ಚಳವಳಿಗಳ ಯಶಸ್ಸಿನ–ವೈಫಲ್ಯಗಳ ಪ್ರತಿನಿಧಿಯಾಗಿ ಬೆಳೆಯುತ್ತ ಹೋಗುತ್ತಾನೆ.

ಹೀಗೆ ಒಂದೊಂದು ಮನೆಗೆ ಹೋದಾಗಲೂ ಒಬ್ಬಳು ‘ಅಮ್ಮ’ ನಮಗೆ ಕಾಣಿಸುತ್ತಿರುತ್ತಾಳೆ. ಎಲ್ಲಾದರೂ ಇರು ನೀನು ಕ್ಷೇಮದಿಂದಿರುವ ಸುದ್ದಿ ಮುಟ್ಟಿಸು ಎಂದು ಬೇಡುವ ಅಮ್ಮ, ಸಾವಿನ ಸುದ್ದಿ ತಂದ ಸ್ನೇಹಿತರಿಗೆಲ್ಲ ಊಟ ಬಡಿಸುವ ಅಮ್ಮ, ‘ಅಯ್ಯೋ ಇಷ್ಟು ಚಿಕ್ಕ ವಯಸ್ಸಿನವರೆಲ್ಲ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಮರುಗುವ ಅಮ್ಮ, ಆಕಳಿಗೆ ಕಲಗಚ್ಚು ಕೊಡುತ್ತ ನೇವರಿಸುವ ಅಮ್ಮ, ಮಗನಿಗೆ ಸಂಚಿಯಿಂದ ದುಡ್ಡು ತೆಗೆದುಕೊಡುವ ಅಮ್ಮ, ಮಗನನ್ನು ಪೊಲೀಸರು ಹಿಂಸಿಸಿದ್ದನ್ನು ನೋಡಿ ಹುಚ್ಚು ಹಿಡಿದು ನಡುಗುತ್ತಿರುವ ಅಮ್ಮ, ಮಗನ ಸಾವಿನ ಸುದ್ದಿಯನ್ನೂ ನುಂಗಿಕೊಂಡು, ಮಗನಂಥ ಹಲವರ ಬೆನ್ನಿಗಿಟ್ಟುಕೊಂಡು ನಡೆಯುವ ಅಮ್ಮ... ಹರಿಗೆ ಎಷ್ಟು ಅವತಾರಗಳೋ ಅಮ್ಮಂದಿರ ಮಮತೆಗೂ ಅಷ್ಟೇ ಮುಖಗಳು. ಆದರೆ ಈ ಯಾವ ಅಮ್ಮಂದಿರೂ ಅತಿಯಾಗಿ ಭಾವುಕರಾಗುವುದಿಲ್ಲ. ಗೋಳಾಡುವುದಿಲ್ಲ. ಕಣ್ಣೀರ ಧಾರೆ ಹರಿಸುವುದಿಲ್ಲ. ಪುರುಷನ್‌ನನ್ನು ಕಳಿಸಲು ಅವನ ಗೆಳತಿಗೆ ಇರುವಷ್ಟು ವೇದನೆ ತಾಯಿಗಿಲ್ಲ; ಅಥವಾ ಅದನ್ನು ತೋರಿಸಿಕೊಳ್ಳುವುದಿಲ್ಲ.

ಹರಿಯ ಗೆಳೆಯರನ್ನು ಹುಡುಕಿ ಹೋಗುವಾಗ ಆಯಾ ಪ್ರದೇಶದ ಸಾಂಸ್ಕೃತಿಕ ಇತಿಹಾಸವನ್ನು, ಚಳವಳಿಗಳನ್ನು, ಕಾರ್ಮಿಕರ ಹೋರಾಟಗಳನ್ನು, ವ್ಯವಸ್ಥೆಯ ಕ್ರೌರ್ಯಗಳನ್ನೂ, ಅದನ್ನು ಮೀರಲು ಹವಣಿಸಿ ದಮನಗೊಂಡ ಜನಪರ ಚಳವಳಿಗಳನ್ನು, ಅವುಗಳು ನಿಧಾನಕ್ಕೆ ದುರ್ಬಲವಾಗಿ ಆತ್ಮಹತ್ಯೆಯ ದಾರಿ ಹಿಡಿದಿರುವುದನ್ನೂ ಸಿನಿಮಾ ಕಾಣಿಸುತ್ತ ಹೋಗುತ್ತದೆ. ಈ ಇಡೀ ಪ್ರಯಾಣ ಪುರುಷನ್ ತನ್ನ ತಾಯಿಗೆ ಬರೆದ ಪತ್ರದ ರೀತಿಯಲ್ಲಿ ನಿರೂಪಿತಗೊಂಡಿದೆ.

ಎಲ್ಲಿಯೂ ಪ್ರೇಕ್ಷಕರನ್ನು ಕಥೆಯ ಜತೆ ಭಾವುಕವಾಗಿ ಮೈಮರೆಯದ ಹಾಗೆ, ಕಣ್ಣುತುಂಬಿ ಎದುರಿನ ಸತ್ಯ ಮಸುಕಾಗದ ಹಾಗೆ ಸಂಯಮದಿಂದ ಕಥನವನ್ನು ಕಟ್ಟುತ್ತ ಹೋಗುತ್ತಾರೆ ನಿರ್ದೇಶಕರು. ಹರಿಯ ಆತ್ಮಹತ್ಯೆಯ ಸುದ್ದಿಯನ್ನು ಒಬ್ಬ ಒಡನಾಡಿಗೆ ತಲುಪಿಸಿದಾಗ ಅವನ ತೊಡೆಯ ಮೇಲಿದ್ದ ಮಗು ಕೇಳುತ್ತದೆ ‘ಅಜ್ಜಾ, ಆತ್ಮಹತ್ಯೆ ಅಂದ್ರೇನು?’, ‘ಕುತ್ತಿಗೆಗೆ ಹಗ್ಗ ಕಟ್ಟಿಕೊಂಡು ನೇಣುಬೀಳುವುದು.’ ‘ಯಾಕೆ ಜನರು ಆತ್ಮಹತ್ಯೆ ಮಾಡಿಕೊಳ್ತಾರೆ?’ – ಮಗುವಿನ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇಲ್ಲ. ಇಂಥ ಭಾವತೀವ್ರ ಸನ್ನಿವೇಶವನ್ನೂ ಯಾವ ಸಿನಿಮೀಯ ಉದ್ವೇಗಕ್ಕೂ ಎಡೆ ಇರದ ಹಾಗೆ ಅತ್ಯಂತ ಸಹಜವಾಗಿಯೇ ತೋರಿಸುತ್ತಾರೆ.

ಒಬ್ಬರಿಂದ ಇನ್ನೊಬ್ಬರಿಗೆ ದಾಟಿ, ಒಂದೂರಿಂದ ಇನ್ನೊಂದೂರಿಗೆ ದಾಟಿ ಹರಿಯ ಸಾವಿನ ಸುದ್ದಿಯನ್ನು ಹೊತ್ತುಬಂದವರು ಅವನ ಊರು ಕೊಚ್ಚಿಗೆ ಬರುವಷ್ಟರಲ್ಲಿ ಹಲಜನರ ಗುಂಪಾಗಿರುತ್ತದೆ. ‘ಮಗ ತೀರಿಕೊಂಡಿದ್ದನ್ನು ಅಮ್ಮನಿಗೆ ಹೇಗೆ ಹೇಳುವುದು?’ ಅದನ್ನು ಅವಳು ಹೇಗೆ ಸ್ವೀಕರಿಸುತ್ತಾಳೆ?’ ಎಂಬೆಲ್ಲ ಗೊಂದಲ ಅವರಿಗಿದೆ. ಈ ಗೊಂದಲದಲ್ಲಿಯೇ ಅವರು ಅಮ್ಮನ ಬರುವಿಗಾಗಿ ಕಾಯುತ್ತ ಆತ್ಮಾವಲೋಕನದಲ್ಲಿ ತೊಡಗುತ್ತಾರೆ. ಪುರುಷನ್ ತನ್ನಮ್ಮನಿಗೆ ಬರೆಯುತ್ತ ‘ಚರ್ಚೆಗಳು ನಮ್ಮಲ್ಲಿ ಆಶಾವಾದವನ್ನು ಹುಟ್ಟಿಸುತ್ತವೆ. ವೈದ್ಯಕೀಯ ಕ್ಷೇತ್ರ ಖಾಸಗಿಯವರ ಪಾಲಾಗಬಾರದು ಎಂದು ವಿದ್ಯಾರ್ಥಿಗಳು ಹೋರಾಡುತ್ತಾರೆ, ಕಾಲು ಕಳೆದುಕೊಂಡ ಕಾರ್ಮಿಕನ ಪರವಾಗಿ ಉಳಿದ ಕಾರ್ಮಿಕರು ಹೋರಾಡಿ ಗೆಲ್ಲುತ್ತಾರೆ. ಆದರೆ ಹೀಗೆ ನಡೆದ ಹಲವು ಹೋರಾಟಗಳು ನಮಗೆ ಯಾವ ಪಾಠವನ್ನು ಕಲಿಸಿವೆ? ನಮ್ಮ ಗೆಲುವುಗಳು ಯಾಕೆ ಇಷ್ಟು ಅಲ್ಪಾಯುಷಿಯಾಗಿರುತ್ತವೆ?’ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾನೆ. ಇದು ಇಡೀ ಚಿತ್ರ ನಮ್ಮಲ್ಲಿ ಹುಟ್ಟಿಸುವ ಪ್ರಶ್ನೆಯೂ ಹೌದು.

ಮಗನ ಸಾವಿನ ಸುದ್ದಿಯನ್ನು ಅಮ್ಮನಿಗೆ ತಲುಪಿಸಲು ಅವರೆಲ್ಲ ಕಾದಿದ್ದಾರೆ. ಅಮ್ಮ ಬರುತ್ತಾರೆ. ‘ನಿಮ್ಮ ಮಗ ತೀರಿಹೋಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂಬ ಸುದ್ದಿಗೆ ಅಮ್ಮ ‘ಆತ್ಮಹತ್ಯೆ ಅಲ್ಲವೇ?’ ಎಂದು ಕೇಳುತ್ತಾಳೆ; ಮೊದಲೇ ನಿರೀಕ್ಷಿಸಿದ್ದವಳಂತೆ. ನಂತರ ತಲೆತಗ್ಗಿಸಿ ‘ಅವನ ಉದ್ದೇಶ, ಅವನ ಆಶೋತ್ತರಗಳನ್ನು ತಾಯಿಯಾಗಿ ನಾನು ಅರ್ಥ ಮಾಡಿಕೊಳ್ಳಲಿಲ್ಲ’ ಎಂದು ಸುಮ್ಮನಾಗುತ್ತಾಳೆ. ಅಷ್ಟರಲ್ಲಿಯೇ ಪೊಲೀಸರು ಅಲ್ಲಿಗೆ ಬಂದು ‘ನಿಮ್ಮ ಮಗ ಆತ್ಯಹತ್ಯೆ ಮಾಡಿಕೊಂಡಿದ್ದಾನೆ ಎಂದು ನಮಗೆ ಮಾಹಿತಿ ಬಂದಿದೆ. ಅದನ್ನು ತಿಳಿಸಿಹೋಗಲು ಬಂದಿದ್ದೇವೆ’ ಎನ್ನುತ್ತಾರೆ.

ವ್ಯವಸ್ಥೆಗೆ, ಹರಿಯ ಸಾವು ಮನೆಯವರಿಗೆ ತಲುಪಿಸಬೇಕಾದ ಒಂದು ಮಾಹಿತಿ. ಆದರೆ ಪುರುಷನ್ ಮತ್ತು ಅವನ ಜತೆಗಾರರಿಗೆ ಅದು ಮಾಹಿತಿ ಅಲ್ಲ; ಸುದ್ದಿ. ಮಾಹಿತಿಗೂ ಸುದ್ದಿಗೂ ಪರಿಭಾವಿಸುವ ಕ್ರಮದಲ್ಲಿಯೇ ಇರುವ ವ್ಯತ್ಯಾಸವನ್ನು ತೆರೆದಿಡುವ ಮೂಲಕವೇ ನಿರ್ದೇಶಕರು ಜನಾಂದೋಲನಕ್ಕೂ ಪ್ರಭುತ್ವಕ್ಕೂ ಇರುವ ವ್ಯತ್ಯಾಸವನ್ನು ಕಾಣಿಸುತ್ತಾರೆ.

ಪ್ರಭುತ್ವ ಮತ್ತು ಆಂದೋಲನ ಎರಡೂ ಹುಟ್ಟುವುದು, ಬೆಳೆಯುವುದು ಜನರಿಂದಲೇ ತಾನೆ? ಅವರೆಡರೂ ತಮ್ಮ ಉದ್ದೇಶ ಜನರ ಒಳಿತು ಎಂದೇ ಪ್ರತಿಪಾದಿಸುತ್ತವೆ. ಆದರೂ ಅವೆರಡರ ನಡುವೆ ಎಂಥ ಅಂತರ! ಒಂದನ್ನು ಇನ್ನೊಂದು ಯಾಕೆ ಹತ್ತಿಕ್ಕಲು, ಅಧೀನದಲ್ಲಿಟ್ಟುಕೊಳ್ಳಲು, ಸರ್ವನಾಶ ಮಾಡಲು, ಆ ಮೂಲಕವೇ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತವೆ?

ಇಂಥ ಹಲವು ಪ್ರಶ್ನೆಗಳ ಜತೆಗೇ ಚಿತ್ರವನ್ನು ಮುಗಿಸುತ್ತಾರೆ ನಿರ್ದೇಶಕರು. ತನಗೆ ಮಗನ ಸಾವಿನ ಮಾಹಿತಿಯನ್ನು ಕೊಟ್ಟ ಪೊಲೀಸರಿಗೆ ‘ನೀವು ನಿಮ್ಮ ಕರ್ತವ್ಯ ಮಾಡಿದ್ದೀರಿ. ನೀವಿನ್ನು ಹೊರಡಿ’ ಎಂದು ಅವರ ಸಹಾಯಹಸ್ತವನ್ನು ತಿರಸ್ಕರಿಸಿ ಹರಿಯ ಸ್ನೇಹಿತರೊಟ್ಟಿಗೆ ಅಮ್ಮ ನಡೆಯುವುದೇ ಒಂದು ಗಟ್ಟಿ ರೂಪಕವಾಗಿದೆ. ಹಾಗೆಯೇ ನಿಂತು ಒಮ್ಮೆ ಹಿಂತಿರುಗಿ ನೋಡಿ ಕಣ್ಣೊರೆಸಿಕೊಳ್ಳುತ್ತಾಳೆ. ಈ ದೃಶ್ಯದಲ್ಲಿಯೂ ನಿರ್ದೇಶಕರು ಪ್ರೇಕ್ಷಕನನ್ನು ಆ ಕಣ್ಣೀರಿನಲ್ಲಿ ತಾದ್ಯಾತ್ಮ ಸಾಧಿಸಲು ಬಿಡುವುದಿಲ್ಲ. ನೀವು ನೋಡುತ್ತಿರುವುದು ಸಿನಿಮಾ ಎಂದು ಎಚ್ಚರಿಸಿಯೇ ಸಿನಿಮಾ ಮುಗಿಸುತ್ತಾರೆ. ಹಾಗೆ ಎಚ್ಚರಿಸಲು ಬಳಸಿಕೊಂಡ ತಂತ್ರವೂ ಇಡೀ ಕಥನಜಾಲವನ್ನು ಇನ್ನಷ್ಟು ಸಂಕೀರ್ಣವಾಗಿಸಿದೆ. ಹರಿಯ ಅಮ್ಮ ಜನರ ಜತೆ ನಡೆದುಕೊಂಡು ಹೋಗುತ್ತ ನಿಂತು ಕಣ್ಣೊರೆಸಿಕೊಳ್ಳುವ ದೃಶ್ಯವನ್ನು ಮತ್ತೆ ಪುನರಾವರ್ತಿಸುತ್ತಾರೆ. ಈಗ ಅದು ಪರದೆಯ ಮೇಲೆ ಎಂಬಂತೆ ಕಾಣುತ್ತದೆ. ಅದನ್ನು ಪುರುಷನ್‌ನ ಅಮ್ಮ ಮತ್ತು ಗೆಳತಿ ಕೂತು ನೋಡುತ್ತಿದ್ದಾರೆ. ನಂತರ ಸಿನಿಮಾ ಮುಗಿಯಿತು ಎಂಬಂತೆ ಎದ್ದು ನಡೆಯುತ್ತಾರೆ. ಆ ಕಥೆಗೆ ಅವರು ಪ್ರೇಕ್ಷಕರು. ಆದರೆ ನಮ್ಮ ಪಾಲಿಗೆ ಅವರೂ ತೆರೆಯ ಮೇಲಿನ ಸಿನಿಮಾದ ಕಲಾವಿದರು.

ಹಾಗಾದರೆ ಇಲ್ಲಿ ಸಿನಿಮಾ ಎನ್ನುವುದು ಪುರುಷನ್‌ನ ಅಮ್ಮ ನೋಡುತ್ತಿರುವುದಾ? ನಾವು ನೋಡುತ್ತಿರುವುದಾ? ಇಡೀ ಕಥನಕ್ಕೆ ಇರುವ ಎರಡು ಪದರಗಳನ್ನೂ ಬಿಡಿಸಿಟ್ಟು ಸಿನಿಮಾ ಮುಗಿಯುತ್ತದೆ. ಆ ಪದರಗಳ ನಡುವಿನ ಖಾಲಿ ಜಾಗದಲ್ಲಿ ಇಂದಿನ ನಮ್ಮ ಸುತ್ತಲಿನ ಹಲವು ಸಂಗತಿಗಳನ್ನು ತುಂಬಿಕೊಂಡು ಕಥನ ಮನಸ್ಸಿನೊಳಗೆ ಹೊಸದಾಗಿ ಬೆಳೆಯಲು ಶುರುವಾಗುತ್ತದೆ.
_

ಮಯೂರ: ಸಂಪುಟ 51; ಸಂಚಿಕೆ– 08; ಆಗಸ್ಟ್‌ 2018
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !