‘ಭವಿಷ್ಯದ ಕುರಿತು ಚಿಂತಿಸುವವ ಮುತ್ಸದ್ದಿ’

ಬುಧವಾರ, ಜೂಲೈ 24, 2019
22 °C
ಕ್ರೈಸ್ಟ್ ವಿಶ್ವವಿದ್ಯಾಲಯ: ಸುವರ್ಣ ಮಹೋತ್ಸವ ಸಮಾರೋಪ

‘ಭವಿಷ್ಯದ ಕುರಿತು ಚಿಂತಿಸುವವ ಮುತ್ಸದ್ದಿ’

Published:
Updated:
Prajavani

ಬೆಂಗಳೂರು: ‘ಪ್ರಸಕ್ತ ವಿದ್ಯಮಾನಗಳಿಗೆ ಸ್ಪಂದಿಸುವವನು ರಾಜಕಾರಣಿ, ಭವಿಷ್ಯದ ಬಗ್ಗೆ ಚಿಂತಿಸುವವನು ಮುತ್ಸದ್ದಿ’ ಎಂದು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ವ್ಯಾಖ್ಯಾನಿಸಿದ್ದಾರೆ.

ಗುರುವಾರ ಇಲ್ಲಿ ಕ್ರೈಸ್ಟ್‌ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಮಾರೋಪದಲ್ಲಿ ಹಿರಿಯ ವೈದ್ಯ ಡಾ.ದೇವಿಪ್ರಸಾದ್‌ ಶೆಟ್ಟಿ ತಮ್ಮನ್ನು ಮುತ್ಸದ್ಧಿ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಭಾರತದ ಭವ್ಯ ಭವಿಷ್ಯದ ಬಗ್ಗೆ ನಾನು ಅಪಾರ ನಿರೀಕ್ಷೆ ಇಟ್ಟು
ಕೊಂಡಿದ್ದೇನೆ’ ಎಂದರು.

‘ಶಿಕ್ಷಣ ಸಂಸ್ಥೆಯೊಂದರ ಶಕ್ತಿಯೇ ಸಂಶೋಧನೆ. ಪ್ರಾಚೀನ ತಕ್ಷಶಿಲಾದಿಂದ ನಳಂದಾವರೆಗೆ ಈ ಪರಂಪರೆ ಮುಂದುವರಿದುಕೊಂಡು ಬಂದಿದೆ. ವಿದ್ಯಾರ್ಥಿಗಳ ಚಿಂತನೆಯನ್ನು ವಿಸ್ತರಿಸುವ ಮೂಲಕ ದೇಶದ ಭವಿಷ್ಯವನ್ನು ಭದ್ರಪಡಿಸುವ ಕೆಲಸವಾಗಬೇಕು’ ಎಂದು ಅವರು ಪ್ರತಿಪಾದಿಸಿದರು.

‘ವಸುದೈವ ಕುಟುಂಬಕಂ ಎಂಬ ನಮ್ಮ ಮಹಾನ್‌ ಪರಿಕಲ್ಪನೆ ಜಗತ್ತಿನಲ್ಲೇ ಶ್ರೇಷ್ಠ ಮನೋಭಾವದ ಸಂಕೇತ. ಎಲ್ಲರೂ ನಮ್ಮವರು, ನಮಗೆ ವೈರಿಗಳೇ ಇಲ್ಲ ಎಂಬ ವಿಶಾಲ ಮನೋಭಾವವೇ ಮಾನವೀಯತೆಯ ಪ್ರತೀಕ. ಜಗತ್ತಿನಲ್ಲಿ ಮಾನವೀಯತೆಗಿಂತ ದೊಡ್ಡ ಆಸ್ತಿ ಇನ್ನೊಂದಿಲ್ಲ’ ಎಂದರು.

‘ವಿವಿಧತೆಯಲ್ಲಿ ಏಕತೆಗೆ ದೊಡ್ಡ ನಿದರ್ಶನ ಭಾರತ. ಇಲ್ಲಿನ ವಿವಿಧ ಭಾಷೆ, ಧರ್ಮ, ಸಂಸ್ಕೃತಿಗಳು ಭಾರತ ಎಂಬ ಒಂದು ದೇಶದ ಅಡಿಯಲ್ಲಿ ಮಿಳಿತವಾಗಿ ಇರುವುದು ನಿಜಕ್ಕೂ ಅಚ್ಚರಿಯ ಪ್ರಸಂಗ. ಜಗತ್ತಿನ ಬೇರೆ ಯಾವ ಭಾಗದಲ್ಲೂ ನಾವು ಇಂತಹ ವಿದ್ಯಮಾನ ನೋಡಲು ಸಾಧ್ಯವಿಲ್ಲ. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂಬ ಮಹಾತ್ಮ ಗಾಂಧಿ ಅವರ ಪರಮೋಚ್ಛ ಸಂದೇಶದಂತೆ ನಾವೇ ಬದಲಾವಣೆಯ ಹರಿಕಾರರಾಗಬೇಕು’ ಎಂದರು.

ಕ್ರೈಸ್ಟ್‌ ಕಾಲೇಜು ಸ್ಥಾಪಕರು ಕಂಡ ಕನಸು ಇದೀಗ ನನಸಾಗಿದೆ ಎಂದ ಅವರು, ಜಗತ್ತಿನ ನಾನಾ ಭಾಗದಿಂದ ವಿದ್ಯಾರ್ಥಿಗಳನ್ನು ಸೆಳೆದಿರುವ ಸಂಸ್ಥೆಯ ಪ್ರಗತಿಯನ್ನು ಕೊಂಡಾಡಿದರು.

ನಾರಾಯಣ ಹೃದಯಾಲಯದ ಸಂಸ್ಥಾಪಕ ಡಾ.ದೇವಿಪ್ರಸಾದ್‌ ಶೆಟ್ಟಿ, ಸಚಿವ ಕೆ.ಜೆ.ಜಾರ್ಜ್‌, ಶಾಸಕ ರಾಮಲಿಂಗಾ ರೆಡ್ಡಿ, ಮಂಡ್ಯ ಧರ್ಮಪ್ರಾಂತ್ಯದ ಬಿಷಪ್‌ ಹಾಗೂ ಕಾಲೇಜಿನಲ್ಲಿ ಈ ಮೊದಲು ಪ್ರಾಚಾರ್ಯರಾಗಿದ್ದ ಮಾರ್‌ ಆ್ಯಂಟನಿ ಕರಿಯಿಲ್‌, ಕುಲಾಧಿಪತಿ ಡಾ.ಜಾರ್ಜ್‌ ಎಡಾಯಡಿಯಿಲ್‌, ಕುಲಪತಿ ಡಾ.ವಿ.ಎಂ.ಅಬ್ರಹಾಂ ಇದ್ದರು.

ಪ್ರಣವ್ ಯಾಕೆ ಮುತ್ಸದ್ದಿ?
ಡಾ.ದೇವಿಪ್ರಸಾದ್‌ ಶೆಟ್ಟಿ ಅವರು ಪ್ರಣವ್ ಮುಖರ್ಜಿ ಯಾಕಾಗಿ ಮುತ್ಸದ್ದಿ ಎಂಬುದಕ್ಕೆ ಸ್ವಾರಸ್ಯಕರ ನಿದರ್ಶನ ನೀಡಿದರು. ‘2011ರಲ್ಲಿ ಪ್ರಣವ್‌ ಹಣಕಾಸು ಸಚಿವರಾಗಿದ್ದರು. ಬಜೆಟ್‌ನಲ್ಲಿ ಅವರು ಆರೋಗ್ಯ ಸೇವೆಗೆ ಶೇ 5ರಷ್ಟು ಸೇವಾ ತೆರಿಗೆ ವಿಧಿಸಿದ್ದರು. ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದು ಬದಲಾಗುವುದಿಲ್ಲ ಎಂದು ಗೊತ್ತಿದ್ದರೂ, ನಾನು ಅವರಿಗೆ ಒಂದು ಮೇಲ್‌ ಮಾಡಿದೆ. ಕೆಲವೇ ದಿನಗಳಲ್ಲಿ ಭೇಟಿಯಾಗುವಂತೆ ಅವರಿಂದ ಕರೆ ಬಂತು. ತೆರಿಗೆ ವಿಧಿಸಿದ್ದರಿಂದ ಏನು ಸಮಸ್ಯೆ ಎಂದು ಕೇಳಿದರು.

ದೇಶದಲ್ಲಿ ಅದೆಷ್ಟೋ ಬಡವರು ದುಬಾರಿ ಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ತಿಯನ್ನೂ ಅಡವಿಡುವ ಪರಿಸ್ಥಿತಿ ಇದೆ. ಹೃದಯ ಶಸ್ತ್ರಚಿಕಿತ್ಸೆಗೆ ಮನೆ ಮಾರಾಟ ಮಾಡಿ ₹ 1 ಲಕ್ಷ ತಂದುಕೊಟ್ಟ ನಿದರ್ಶನ ಇದೆ. ಇದೀಗ ಅವರು ₹ 5 ಸಾವಿರವನ್ನು ಹೆಚ್ಚುವರಿಯಾಗಿ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ವಿವರಿಸಿದೆ. ಕೆಲವೇ ದಿನಗಳಲ್ಲಿ ಸೇವಾ ತೆರಿಗೆಯನ್ನು ಅವರು ರದ್ದುಪಡಿಸಿದ್ದರು. ರಾಜಕಾರಣಿಯಾಗಿದ್ದರೆ ಅವರು ನನ್ನ ಮನವಿಯನ್ನು ಗಣನೆಗೇ ತೆಗೆದುಕೊಳ್ಳುತ್ತಿರಲಿಲ್ಲ, ಮುತ್ಸದ್ದಿ ಆಗಿದ್ದಕ್ಕೇ ನನ್ನ ಮನವಿಗೆ ಸ್ಪಂದಿಸಿದರು’ ಎಂದು ವಿವರಿಸಿದಾಗ ಕರತಾಡನದ ಪ್ರಶಂಸೆ ವ್ಯಕ್ತವಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !