‘ದನಿ ನಂದೇ, ಏನೀಗ?’

7

‘ದನಿ ನಂದೇ, ಏನೀಗ?’

Published:
Updated:
Prajavani

ಹಳೆಯ ಸಹೋದ್ಯೋಗಿ ರಂಗನ ಮನೆ ಒಳಗೆ ಕಾಲಿಡುತ್ತಿದ್ದಂತೆ ಎಲ್ಲೋ ಏನೋ ಎಡವಟ್ಟಾಗಿದೆ ಎನ್ನಿಸಿತು. ‘ಹೌದೇ, ಆ ಆಡಿಯೊ ದನಿ ನಂದೇ, ಏನೀಗ’ ಎಂದು ಹತಾಶ ಮುಖಭಾವದಲ್ಲಿ ಕಿರುಚುತ್ತಿದ್ದ ರಂಗ ನನ್ನ ನೋಡಿದವನೆ ‘ಬನ್ನಿ ಮೇಡಂ’ ಎನ್ನುತ್ತಲೇ ಮುಂದುವರಿಸಿದ. ‘ಆಡಿಯೊ ನಂದೇ, ಆದ್ರೆ ಅದು ಫುಲ್ ಅಲ್ಲ.  ಅವ್ಳು ಎಷ್ಟು ಬೇಕೋ ಅಷ್ಟೆ ನಿಂಗೆ ಕೇಳಿಸಿದಾಳೆ’. ಬಿದ್ದರೂ ಮೀಸೆ ಮಣ್ಣಾಗದಂತೆ ವಾದ ಹೂಡುವುದರಲ್ಲಿ ರಂಗ ಜಗಜಟ್ಟಿಯೇ ಸರಿ.

‘ಏನು... ಇದು ಫುಲ್ ಅಲ್ಲವಾ... ಓ... ಹಂಗಾರೆ ಇನ್ನೂ ಏನೇನು ಹೇಳಿದೀಯ ನೀನು? ಎಷ್ಟ್ ದಿನದಿಂದ ಈ ಆಟ ನಡೆಸಿದ್ದೆ’– ಅವನ ಹೆಂಡತಿ, ಇಲ್ಲಿ ಕೂತ್ಗಳಿ ಎಂದು ನನಗೆ ಕೈಸನ್ನೆ ಮಾಡುತ್ತ ರಂಗನತ್ತ ತಿರುಗಿ ಇನ್ನೂ ಜೋರಾಗಿ ಕೂರಂಬು ಎಸೆದಳು. ಈ ರಂಗ ಯಾರೊಂದಿಗೋ ಪ್ರೇಮ ಸಲ್ಲಾಪ ನಡೆಸಿರಬೇಕು, ಅದರ ಆಡಿಯೊ ಹೆಂಡತಿ ಕೈಗೆ ಸಿಕ್ಕಿರಬೇಕು ಎನ್ನುವುದೇ ನನಗೆ ಬಂದ ಮೊದಲ ಯೋಚನೆ. ವಾದ ಮಾಡಿ ಗಂಟಲೊಣಗಿದ್ದ ಆಕೆ ನೀರು ತರಲೆಂದು ಒಳಗೆ ಹೋದಳು.

‘ಅಲ್ಲಾರಿ... ಆಡಿಯೊ ಗೀಡಿಯೊ ಮಾಡಕ್ಕೆ ಆಗದಂತೆ ಸಲ್ಲಾಪ ನಡೆಸಬಾರದಿತ್ತಾ? ಇದೇನು ಒಳ್ಳೆ ಈ ವಯಸ್ಸಲ್ಲಿ ಹಿಂಗೆ ಸಿಕ್ಕಿಹಾಕ್ಕೊಂಡ್ರಲ್ಲ. ಸದ್ಯ ವಿಡಿಯೊಗಿಡಿಯೊ ಸಿಕ್ಕಿಲ್ಲ ತಾನೆ’ ರಂಗನತ್ತ ತಿರುಗಿ ಪಿಸುಗುಟ್ಟಿದೆ. ‘ಅಯ್ಯೋ ಮೇಡಂ... ಆ ಸಲ್ಲಾಪ ಅಲ್ಲ’ ಎಂದವನೇ ನಗತೊಡಗಿದ.

ಆಗಿದ್ದಿಷ್ಟು: ಒಂದು ವರ್ಷ ಮನೆಯ ಆಡಳಿತ ಅವನ ಹೆಂಡತಿಯದು, ಇನ್ನೊಂದು ವರ್ಷ ರಂಗನದು. ಅದರಂತೆ ಈ ವರ್ಷ ರಂಗ ಆಡಳಿತ ಮಾಡಬೇಕಿತ್ತು. ಆದರೆ ಮಗಳನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡ ಹೆಂಡತಿ ‘ನಂಗೆ ಒಂದೂವರೆ ವೋಟು ಇದೆ. ಈ ವರ್ಷವೂ ನನ್ನದೇ ಆಡಳಿತ’ ಎಂದು ರಂಗನಿಗೆ ಕುರ್ಚಿಯನ್ನು ತಪ್ಪಿಸಿಬಿಟ್ಟಿದ್ದಳು.

ಹತಾಶ ರಂಗ ಮಗಳನ್ನು ತನ್ನತ್ತ ಸೆಳೆಯಲು ಆಮಿಷ ಒಡ್ಡಿದ್ದ. ಕಿಲಾಡಿ ಮಗಳು ಅಪ್ಪನ ಮಾತನ್ನು ರೆಕಾರ್ಡ್ ಮಾಡಿಕೊಂಡಿದ್ದಳು!

Tags: 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !