ಜಯ ಜಯ ಭಾರತಿ!

7

ಜಯ ಜಯ ಭಾರತಿ!

Published:
Updated:
Prajavani

‘ಜಯ ಭಾರತಿ, ಜಯ ಭಾರತಿ’ ಎಂದು ಗುನುಗುತ್ತಾ ಚಿಕ್ಕೇಶಿ ಒಳಬಂದ.

ಪತ್ನಿ ಚಿನ್ನಮ್ಮ ‘ಏನು ರಾಯರು ಇಷ್ಟೊಂದು ಖುಷೀಲಿದೀರಿ? ಅದು ಜಯ ಭಾರತಿ ಅಲ್ಲಾರಿ, ‘ಜೈ ಭಾರತ ಜನನಿಯ ತನುಜಾತೆ...’ ಅಂತ. ಕುವೆಂಪು ಬರೆದ ನಾಡಗೀತೆ ಸಾಲು. ಅದ್ಸರಿ ಡ್ರೈವಾಷ್‍ಗೆ ಕೊಟ್ಟಿದ್ದ ನನ್ನ ಸೀರೆಗಳನ್ನ ತರೋಕೆ ಕಳಿಸಿದ್ರೆ ಭಾರತಿ ಜಪ ಮಾಡ್ತಾ ಬರಿಗೈಲಿ ಬರ್ತಿದ್ದೀರಲ್ಲಾ, ಯಾರ್‍ರೀ ಆ ಭಾರತಿ?’

‘ಅಯ್ಯೋ ಅದು ಬೇರೆ ಯಾರೂ ಅಲ್ವೇ, ಭಾರತಿ ಶೆಟ್ಟಿ. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ’.

‘ಹೌದು, ಅವ್ರಿಗೇಕೆ ಜಯಕಾರ?’

‘ನೀನು ಟೀ ಮಾಡೋಕೆ ಪುರುಸೊತ್ತು ಇಲ್ಲ ಅಂದ್ಯಲ್ಲ, ದಾರಿ ದರ್ಶಿನೀಲಿ ಟೀ ಕುಡೀತಾ, ಪೇಪರ್ ನೋಡ್ದೆ. ಅದ್ರಲ್ಲಿ ಭಾರತಿ ಶೆಟ್ಟಿ, ‘ಮಹಿಳೆ ಪುರುಷರಿಗೆ ಎಲ್ಲ ಕ್ಷೇತ್ರಗಳಲ್ಲೂ ಸಮಾನಳಲ್ಲ. ಅವಳಿಗೆ ಸಮಾನತೆ ಬೇಕಿಲ್ಲ...’ ಎಂದು ಹೇಳಿರೋ ವರದಿ ಇತ್ತು. ಅದ್ಯಾಕೋ ನಂಗೆ ಸರಿ ತೋರಲಿಲ್ಲ. ನಿಂಗೆ ತಿಳಿಸೋಣಾಂತ ಬಂದೆ’.

‘ಹಾಗಿದ್ರೆ ಭಾರತಿಗೆ ಜಯಕಾರ ಯಾಕ್ರೀ ಹಾಕಿದ್ರಿ? ನಿಮ್ಮ ಗಂಡಸು ಕಂತ್ರಿ ಬುದ್ಧಿ ಎಲ್ಲಿ ಬಿಡ್ತೀರಿ? ಮಹಿಳೆಯಾಗಿ ಅವರು ಹಾಗೆ ಹೇಳಿರೋದು ಸ್ತ್ರೀ ಕುಲಕ್ಕೇ ಅವಮಾನ. ಇದನ್ನ ಖಂಡಿಸಿ ನಾಳೆ ನಮ್ಮ ಸ್ತ್ರೀ ಸಂಘಟನೆಗಳ ವತಿಯಿಂದ ಜಾಥಾ ಮಾಡ್ತೀವಿ. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರನ್ನೂ ಕೊಡ್ತೀವಿ’.

‘ಕಾಂಗ್ರೆಸ್‍ನಲ್ಲಿ ಎಷ್ಟೊಂದು ಗಂಡಸ್ರು ಇದ್ರೂ ಯಾಕ್ರೀ ಪ್ರಿಯಾಂಕಾ ಕೈಕಾಲು ಹಿಡಿದು, ಹದಿನೈದು ಕಿ.ಮೀ ಜೈಕಾರ ಹಾಕ್ತಾ ಅವರ ಮೆರವಣಿಗೆ ಮಾಡಿದ್ರು? ಮಂಡ್ಯದಲ್ಲಿ ಗಂಡುಗಳಿಲ್ವೋ? ಸುಮಲತಾ ಮೇಡಂಗೇ ಯಾಕೆ ಹಾಗೆ ದುಂಬಾಲು ಬಿದ್ದಿದ್ದಾರೆ? ಹಂಗಾದ್ರೆ ನಾನು ಹೊರಗೆ ಯಾಕೆ ಕೆಲ್ಸಕ್ಕೆ ಹೋಗ್ಬೇಕು, ರಾಜೀನಾಮೆ ಕೊಡಲೇ?’

‘ಅಯ್ಯೋ ಮಾರಾಯ್ತಿ, ದಮ್ಮಯ್ಯ ಅಂತೀನಿ. ಹಾಗೆ ಮಾತ್ರ ಮಾಡ್ಬೇಡ. ಈಗ್ಲೇ ನೀನು ಹೇಳಿದ ಕೆಲ್ಸಕ್ಕೆ ಹೊರಟೆ’ ಎಂದು ಚಿಕ್ಕೇಶಿ ಕಾಲೆಳೆಯುತ್ತಾ ಲಾಂಡ್ರಿಯತ್ತ ಹೊರಟ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !