ಶನಿವಾರ, ಸೆಪ್ಟೆಂಬರ್ 19, 2020
27 °C

ಮೀ ಟೂಅಂದ್ರೆ ಏನು?

ಬಿ.ಎನ್. ಮಲ್ಲೇಶ್ Updated:

ಅಕ್ಷರ ಗಾತ್ರ : | |

Deccan Herald

ಅಂಬರೀಷ್ ಆತ್ಮ ಭೂಲೋಕ ಬಿಟ್ಟು ಪರಲೋಕ ತಲುಪುತ್ತಿದ್ದಂತೆ ದೇವದೂತರು ಬಂದು ಪಟಕ್ಕನೆ ಹಿಡಿದುಕೊಂಡರು. ‘ಏಯ್ ಎತ್ರಯ್ಯ ಕೈಯಿ, ಯಾರಯ್ಯ ನೀವೆಲ್ಲ? ನನ್ಯಾಕೆ ಹಿಡ್ಕೊಂಡಿದೀರಿ?’ ಎಂದು ಅಂಬಿ ಸಿಟ್ಟಿಗೆದ್ದರು.

‘ನಾವು ದೇವದೂತರು, ನಿಮ್ಮನ್ನು ಸ್ವರ್ಗಕ್ಕೆ ಕರೆ ತರಲು ಅಪ್ಪಣೆಯಾಗಿದೆ’.

‘ಯ್ಯೋ... ಯಾವ ಸೀಮೆ ಸ್ವರ್ಗನಯ್ಯ ನಿಮ್ದು? ನಾನು ಈ ಜಗತ್ತಿನಾಗಿರೋ ಎಲ್ಲ ಸ್ವರ್ಗನೂ ನೋಡಾಯ್ತು. ಈಗ ಸ್ವರ್ಗ ಗಿರ್ಗ ನೀವೇ ಇಟ್ಕಳಿ, ನಮ್ ಪಾಡಿಗೆ ನಮ್ಮನ್ನ ಬುಟ್‍ಬುಡಿ ಅಷ್ಟೆ’.

‘ಅದು ಹಂಗಲ್ಲ ಇವರೇ... ರಾಜಣ್ಣೋರು, ವಿಷ್ಣುವರ್ಧನ್ನು ನಿಮ್ಮನ್ನ ಕರ್ಕಂಡ್ ಬರೋಕೆ ಹೇಳಿದ್ರು’.

‘ಥತ್ ಬಡ್ಡೆತ್ತವ, ಅದ್ನ ಮೊದ್ಲೇ ಹೇಳೋಕೇನಾಗಿತ್ತಯ್ಯ ದಾಡಿ? ನಡೀರಿ ಮತ್ತೆ ಅಲ್ಲಿಗೆ ಹೋಗೋಣ’.

ಅಂಬರೀಷ್‍ರನ್ನ ಕಂಡ ತಕ್ಷಣ ರಾಜಣ್ಣ, ವಿಷ್ಣು ಬಾಚಿ ತಬ್ಬಿಕೊಂಡರು. ರಾಜಣ್ಣೋರು ಅಂಬರೀಷ್ ಮೈದಡವುತ್ತ ‘ಯಾಕಪ್ಪ ಅಂಬರೀಷು ಇಷ್ಟು ಬೇಗ ಬಂದುಬಿಟ್ಟೆ? ನೀನೂ ಇಲ್ಲ ಅಂದ್ರೆ ಅಲ್ಲಿ ಚಿತ್ರರಂಗದ ಸಮಸ್ಯೆಗಳನ್ನ ಯಾರು ಬಗೆಹರಿಸ್ತಾರೆ?’

ಅಂಬರೀಷ್‍ಗೆ ನಗು ಬಂತು. ‘ಅಣ್ಣಾ, ಈಗ ಚಿತ್ರರಂಗದ ಸಮಸ್ಯೆಗಳು ಅಂದ್ರೆ ಏನ್ ಗೊತ್ತಾ? ಥೇಟರ್ ಸಿಗ್ಲಿಲ್ಲ, ಪ್ರಚಾರಕ್ಕೆ ಬರ್ಲಿಲ್ಲ, ಚೆಕ್ ಬೌನ್ಸು, ಮೀಟೂ... ಬರೀ ಇವೇ. ಯಾರ ಮಾತು ಯಾರೂ ಕೇಳಲ್ಲ ಅಲ್ಲಿ...’

ರಾಜಣ್ಣ ತಲೆ ಕೆರೆದುಕೊಂಡು ಕೇಳಿದರು ‘ಅಂಬರೀಷು, ಈ ಮೀಟೂ ಅಂದ್ರೆ ಏನು?’

‘ಅಣ್ಣ, ಅದನ್ನ ಒಂದ್ ಲೈನಲ್ಲಿ ಹೇಳೋಕಾಗಲ್ಲ. ಫ್ರೆಶ್ ಆಗಿ ಬಂದು ಹೇಳ್ತೀನಿ ಇರಿ... ಏಯ್ ವಿಷ್ಣು, ನಾಟಿಕೋಳಿ ಸಾರು ರೆಡಿ ಮಾಡ್ಸಿದೀಯೇನೋ...’ ಎನ್ನುತ್ತ ಒಳ ನಡೆದರು ಅಂಬರೀಷ್...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು