ಭಾನುವಾರ, ಡಿಸೆಂಬರ್ 15, 2019
17 °C

ಕುದುರೆ ವ್ಯಾಪಾರ!

ಬಿ.ಎನ್. ಮಲ್ಲೇಶ್ Updated:

ಅಕ್ಷರ ಗಾತ್ರ : | |

Deccan Herald

‘ಹಲೋ... ಯಡ್ಯೂರಪ್ಪಾಜಿ? ಸಲಾಂ ಸಾಬ್, ನಾನು ಜಟಕಾ ಗಾಡಿ ಇಮಾಂ ಮಾತಾಡ್ತಿರೋದು, ನಿಮ್ಮ ಅಭಿಮಾನಿ...’

‘ಗೊತ್ತಾಯ್ತು, ಏನ್ ಸಮಾಚಾರ?’

‘ಏನಿಲ್ಲ ಸಾಬ್, ನೀವು ಕುದುರೆದು ಯಾಪಾರ ಮಾಡ್ತೀರ ಅಂತ ಪೇಪರ್‍ನಾಗೆ ಬಂದಿತ್ತು. ಅದ್ಕೆ ಪೋನ್ ಮಾಡ್ದೆ...’

‘ಇಲ್ಲಪ್ಪ, ನಾನು ಯಾವ ಕುದುರೆ ವ್ಯಾಪಾರನೂ ಮಾಡಲ್ಲ. ಪೇಪರ್‍ನಲ್ಲಿ ಬಂದಿರೋದೆಲ್ಲ ಸುಳ್ಳು...’

‘ಓ ಕೈಸೆ ಸಾಬ್, ಪೇಪರ್‍ನೋರು ಯಾಕೆ ಸುಳ್ಳು ಬರೀತಾರೆ? ನಮ್ದು ಜಟಕಾ ಗಾಡಿದು ಎರಡು ಕುದುರೆ ಐತೆ. ನಿಮಗೆ ಮಾರಾಣ ಅಂತ. ಈಗ ಜಟಕಾ ಗಾಡಿ ಯಾರೂ ಹತ್ತಲ್ಲ ಸಾಬ್, ಗಿರಾಕಿ ಇಲ್ಲ. ದೊಡ್ ಮನಸ್ ಮಾಡಿ ಯಾಪಾರ ಮಾಡ್ಕಂಬುಡಿ’.

‘ಏಯ್, ನಿಂದೊಳ್ಳೆ ಕತೆ ಆಯ್ತಲ್ಲ. ನಿನ್ ಕುದುರೆ ತಗಂಡು ನಾನೇನ್ ಮಾಡ್ಲಿ? ಕುದುರೆ ಅಂದ್ರೆ ನಿನ್ ಕುದುರೆ ಅಲ್ಲ...’

‘ಅಲ್ಲ ಸಾಬ್, ನಮ್ ಕುದುರೆಗೆ ರೆಸಾರ್ಟ್ ಬೇಕಿಲ್ಲ. ಲಾಯದಲ್ಲಿ ಕಟ್ಟಿ ಹಾಕಿದ್ರೂ ಲಾಯಲ್ಲಾಗಿ ಅಂದ್ರೆ ನೀಯತ್ತಾಗಿ ಇರ್ತದೆ. ಎಷ್ಟು ಹುಲ್ಲು ಹಾಕ್ತಿರೋ ಅಷ್ಟು ಲದ್ದಿ ಕರೆಕ್ಟಾಗಿ ಹಾಕ್ತದೆ. ನೀವು ಎಷ್ಟಾದ್ರು ಕೊಡಿ ಪರವಾಗಿಲ್ಲ...’

‘ಥತ್ತೇರಿ, ನಮಗೆ ನಿಮ್ಮತ್ರ ಇರೋ ಕುದುರೆಗಳು ಬೇಕಾಗಿಲ್ಲ ಕಣ್ರಿ. ನಿಮಗೆ ಅರ್ಥ ಆಗಲ್ಲ’.

‘ಹೋಗ್ಲಿ ಬಿಡಿ ಸಾಬ್, ಮಾಫ್ ಕರೋ. ಈಗ ಇನ್ನೊಂದು ಮಾತು. ನೀವು ಆಪರೇಶನ್ ಮಾಡ್ತೀರಂತೆ? ಡಾಕ್ಟ್ರು ಯಾವಾಗ ಆದ್ರಿ?’

‘ಥೋ..., ತಲೆ ತಿನ್‍ಬೇಡ ಕಣಯ್ಯ, ಇಡು ಫೋನು...’

‘ಅಲ್ಲ ಸಾಬ್, ನೀವೇ ಆಪರೇಶನ್ ಮಾಡಿ, ನೀವೇ ದುಡ್ಡು ಕೊಡ್ತೀರಂತೆ? ಇದೂ ಪೇಪರ್‍ನಾಗೆ ಬಂದಿತ್ತು. ನಂಗೆ ಎರಡು ವರ್ಷದಿಂದ ಮಂಡಿ ನೋವು. ನಿಮ್ಗೆ ಪುಣ್ಯ ಬರ್ತದೆ, ಆಪರೇಶನ್ ಮಾಡ್ತೀರಾ?’

‘ಕರ್ಮ ಕರ್ಮ, ನೀ ಎಲ್ಲಿ ಗಂಟು ಬಿದ್ದೆ ಮಾರಾಯ, ಇಡಯ್ಯ ಫೋನು...’

ಪ್ರತಿಕ್ರಿಯಿಸಿ (+)