ಉಪವಾಸವೇ ಸಂಸ್ಕೃತಿ!

7

ಉಪವಾಸವೇ ಸಂಸ್ಕೃತಿ!

Published:
Updated:
Prajavani

ಬೆಳಿಗ್ಗೆ ಸ್ನಾನ, ಸಂಧ್ಯಾವಂದನೆ ಮುಗಿಸುವಾಗಲೇ ಬಿಸಿಬಿಸಿ ತಿಂಡಿ, ಕಷಾಯದ ಪರಿಮಳವನ್ನು ಒಳಗೆಳೆದುಕೊಳ್ಳುತ್ತಿದ್ದ ಸಂಸ್ಕೃತ ಪಾಠಶಾಲೆಯ ಮಕ್ಕಳಿಗೆ ಅವತ್ತು ಯಾವ ವಾಸನೆಯೂ ಬಡಿಯಲಿಲ್ಲ. ಎಂಥದಿದು ಎಂದು ಸಿಡಿಮಿಡಿಗೊಳ್ಳತೊಡಗಿದ ದೊಡ್ಡ ಮಾಣಿಗಳಿಗೆ ಸಣ್ಣಗುರುಗಳು ‘ವಿಶೇಷ ವ್ರತ, ತಿಂಡಿಗಿಂದು ರಜೆ’ ಎಂದು ಬಾಯಿ ಮುಚ್ಚಿಸಿದರು. ಮಧ್ಯಾಹ್ನದವರೆಗೆ ಮಣಮಣ ಮಂತ್ರ ಹೇಳುತ್ತ ಕಳೆದರಾಯಿತೆಂದು ಮಾಣಿಗಳು ಸುಮ್ಮನಾದರು.

ಗಂಟೆ ಒಂದಾಯಿತು... ಎರಡಾಯಿತು... ಊಹೂಂ... ಅಡುಗೆ ಮನೆಯಿಂದ ನಳಪಾಕದ ಘಮವೇ ಮೂಗಿಗೆ ಬಡಿಯದೇ ದೊಡ್ಡ ಮಾಣಿಗಳು ಚಿಂತಾಕ್ರಾಂತರಾದರು. ಪಾಪದ ಸಣ್ಣಮಾಣಿಗಳು ಹಸಿವೆಯಿಂದ ಮಣಮಣಿಸಲೂ ದನಿಯಿಲ್ಲದೇ ಕೂತವು. ಸಾಲದ್ದಕ್ಕೆ ಹೊರಹೋಗದಂತೆ ಕೋಣೆ ಬಾಗಿಲು ಮುಚ್ಚಿದ ಗುರುಗಳು ಮಾತ್ರ ಅದಾವ ಮಾಯದಲ್ಲೋ ಹೊರಹೋಗಿದ್ದಾರೆ. ಒಂದಿಬ್ಬರು ಧೈರ್ಯ ಮಾಡಿ ಕಿಟಕಿಯಿಂದ ಗುರುಗಳನ್ನು ಕರೆದು, ‘ಉಟಕ್ಕಾತಾ’ ಕೇಳಿದರು.

‘ಎಂಥದ್ರಾ... ಒಂದು ಹೊತ್ತು ಉಪವಾಸ ಇರಕ್ಕೆ ಆಗದಿಲ್ಯ ನಿಂಗಕ್ಕೆ... ಮೂರೂ ಹೊತ್ತು ಬಿಸಿಯೂಟ ಮಾಡ್ತಿದ್ರೆ ಹಸಿವು ಅರ್ಥ ಆಗದು ಯಾವಾಗ... ಹವ್ಯಕ ಸಮ್ಮೇಳನದಲ್ಲಿ ಮನ್ನೆ ದೊಡ್ಡಭಟ್ರು ಹೇಳಿದ್ದು ಕೇಳಲ್ಯ... ಹಸಿವು ನಮ್ಮ ಸಂಸ್ಕೃತಿ, ಗೊತ್ತಾತ’ ಹೂಂಕರಿಸಿದ ಗುರುಗಳು ಮರುಕ್ಷಣ ಅಲ್ಲಿದ್ದರೆ ಕೇಳಿ. ಒಬ್ಬ ಚಾಲಾಕು ಮಾಣಿ ಕಣ್ಣುಕತ್ತಲೆ ಬಂದು ಕೂತಿದ್ದ ಸಣ್ಣಮಾಣಿಗಳ ಫೋಟೊದೊಡನೆ ತನ್ನಪ್ಪನಿಗೆ ವಾಟ್ಸಾಪು ಮೆಸೇಜು ಕುಟ್ಟಿದ. ಅವನಪ್ಪ ಫೋಟೊ ನೋಡಿ ಗಾಬರಿಯಾಗಿ ದೊಡ್ಡಭಟ್ರಿಗೆ ಫೋನಾಯಿಸಿದರು. ಅದೇತಾನೆ ಊಟಮುಗಿಸಿ, ಡರ್‍ರನೆ ತೇಗಿ, ಕವಳ ಮೆಲ್ಲುತ್ತಿದ್ದ ದೊಡ್ಡಭಟ್ರಿಗೆ ನಖಸಿಖಾಂತ ಸಿಟ್ಟು ಬಂತು.

‘ಉಪವಾಸ ಇರಕು ಅಂತ ಹೇಳಿದ್ದು ಆ ಸರ್ಕಾರದ ಮಕ್ಕಳಿಗೆ ಮಾರಾಯ... ನಮ್ಮನೆ ಮಾಣಿಗಳಿಗಲ್ಲ. ಸರ್ಕಾರದ ಬಿಸಿಯೂಟನ ಬಿಟ್ಟಿ ತಿಂತವಲ ಆ ಮಕ್ಕಳು ಉಪವಾಸ ಇದ್ದರೆ ಅವಕ್ಕೆ ಹಸಿವು ಎಂತ ಹೇಳಿ ಗೊತ್ತಾಗ್ತು ಅಂತ. ನಿಂಗೆ ಪೇಪರ್‍ರು ಸಮಾ ಓದಕ್ಕಾದ್ರೂ ಬತ್ತಾ ಇಲ್ಯಾ’ ದೊಡ್ಡಭಟ್ರು ಸಣ್ಣಭಟ್ರಿಗೆ ಜೋರು ಮಾಡಿದ್ರು. ಸಣ್ಣಭಟ್ರು ಮುಂಡುಪಂಚೆಯಿಂದ ಬೆವರು ಒರೆಸಿಕೊಳ್ಳುತ್ತ, ‘ಅಲ್ಲಾ, ನಿಂಗ ಹೇಳ ಸರ್ಕಾರದ ಮಕ್ಕಳು ಬೆಳಗ್ಗೆ ಗಂಜಿಯೂ ಇಲ್ದೆ ಹಸಗಂಡು ಸ್ಕೂಲಿಗೆ ಬತ್ತ, ಇನ್ನು ಹೊಸದಾಗಿ ಉಪವಾಸ ಇರದು ಎಂತ’ ಎನ್ನುವಷ್ಟರಲ್ಲಿ ಫೋನು ಕಟ್ ಆಯಿತು!

Tags: 

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !