ನಂಗೂ ಬೇಡ!

7

ನಂಗೂ ಬೇಡ!

Published:
Updated:
Prajavani

ಹೊಸ ವರ್ಷದ ಮೊದಲ ದಿನ ವಿಧಾನಸೌಧದಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ ಮುಖಾಮುಖಿಯಾದರು. ಯಡಿಯೂರಪ್ಪ ಅವರು ಕುಮಾರಸ್ವಾಮಿಯ ಕೈ ಕುಲುಕುತ್ತ ‘ಹೊಸ ವರ್ಷದ ಶುಭಾಶಯಗಳು ಕುಮಾರಸ್ವಾಮಿಯವರೇ... ನಿಮ್ಮ ಸರ್ಕಾರ
ಸುಭದ್ರವಾಗಿರಲಿ. ಐದು ವರ್ಷ ನೀವೇ ಮುಖ್ಯಮಂತ್ರಿಯಾಗಿರಲಿ ಎಂದು ಹಾರೈಸುತ್ತೇನೆ’ ಎಂದರು.

ಅದಕ್ಕೆ ಕುಮಾರಸ್ವಾಮಿ, ‘ಧನ್ಯವಾದಗಳು ಯಡಿಯೂರಪ್ಪ ಅವರೇ, ಹೊಸ ವರ್ಷದಲ್ಲಿ ನೀವು ಕಂಡ ಕನಸುಗಳೆಲ್ಲ ನನಸಾಗಲಿ. ನೀವು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಹಾರೈಸುತ್ತೇನೆ’ ಎಂದರು. ಇಬ್ಬರ ಮಾತುಗಳನ್ನು ಕೇಳಿ ಅಲ್ಲೇ ಇದ್ದ ನ್ಯೂಸ್ ಚಾನೆಲ್ ವರದಿಗಾರರೆಲ್ಲ ಕಕ್ಕಾಬಿಕ್ಕಿಯಾದರು.

ಅಷ್ಟರಲ್ಲಿ, ರಮೇಶ್ ಜಾರಕಿಹೊಳಿಯವರು ಅಲ್ಲಿ ಪ್ರತ್ಯಕ್ಷರಾಗಿ ‘ನಾನು ಎಲ್ಲೂ ಹೋಗಿರಲಿಲ್ಲ ಮುಖ್ಯಮಂತ್ರಿಗಳೇ, ಬಿಸಿನೆಸ್ ಸಲುವಾಗಿ ಡೆಲ್ಲಿಗೆ ಹೋಗಿದ್ದೆ. ನನ್ನ ಬೆಂಬಲ ನಿಮಗಿದೆ’ ಎಂದರು.

ಇನ್ನೊಂದೆಡೆ ಐದಾರು ಹಿರಿಯ ಕಾಂಗ್ರೆಸ್ ಸಚಿವರು ಬಂದು ‘ಹೊಸ ವರ್ಷದ ಶುಭಾಶಯಗಳು ಕುಮಾರಸ್ವಾಮಿ ಅವರೇ, ನಮ್ಮ ರಾಜೀನಾಮೆ ತಗೊಳ್ಳಿ. ನಾವು ಪಕ್ಷದ ಕೆಲಸ ಮಾಡ್ತೇವೆ. ಯುವಕರನ್ನು ಮಂತ್ರಿ ಮಾಡಿ’ ಎಂದರು.

ಕುಮಾರಸ್ವಾಮಿ ಏನ್ ಕಮ್ಮಿ? ‘ನನಗೆ ಮುಖ್ಯಮಂತ್ರಿ ಪದವಿ ಸಾಕು, ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ’ ಎಂದರು.

ಸಿದ್ದರಾಮಯ್ಯನವರು ‘ಛೆ ಛೆ ನನಗೆ ಬೇಡ, ಖರ್ಗೆಯವರು ಮುಖ್ಯಮಂತ್ರಿ ಆಗಲಿ, ಅವರು ಸೀನಿಯರ್‍ರು’ ಎಂದರು.

ಖರ್ಗೆಯವರು ‘ನನಗೆ ಬೇಡಪ್ಪ, ನಾನು ಕೇಂದ್ರದಲ್ಲಿದ್ದೀನಿ. ಬೇರೆ ಯಾರಿಗಾದ್ರು ಕೊಡಿ’ ಎಂದು ತಲೆ ಕೊಡವಿದರು.

ಹೀಗೆ ಮುಖ್ಯಮಂತ್ರಿ ಪದವಿ ನನಗೆ ಬೇಡ, ನನಗೆ ಬೇಡ, ಬೇಡ ಬೇಡ ಬೇಡ.... ಎನ್ನುತ್ತಿದ್ದಂತೆ ಮನೆಯಲ್ಲಿ ಮಲಗಿದ್ದ ತೆಪರೇಸಿಗೆ ಮೈ ತಣ್ಣಗಾದಂತಾಗಿ ದಿಢೀರನೆ ಎಚ್ಚರವಾಯಿತು. ಹೆಂಡತಿ ತಲೆ ಮೇಲೆ ನೀರು ಸುರಿದಿದ್ದಳು. ‘ಎದ್ದೇಳ್ರಿ ಮೇಲೆ, ಹೊಸ ವರ್ಷ ಅಂತ ಕಂಟಮಟ ಕುಡ್ಕೊಂಡ್ ಬಂದು ಬಿದ್ದಿದೀರಲ್ಲ, ಈಗ ಗಂಟೆ ಎಷ್ಟು ಗೊತ್ತಾ?’ ಎಂದು ಅಬ್ಬರಿಸಿದಳು.

ತೆಪರೇಸಿ ಮುಖದ ಮೇಲಿನ ನೀರು ಒರೆಸಿಕೊಳ್ಳುತ್ತ ‘ನಾನು ಇಲ್ಲೀತಂಕ ಕಂಡದ್ದು ಕನಸಾ?’ ಎನ್ನುತ್ತ ಆಕಳಿಸುತ್ತ ಮೇಲಕ್ಕೆದ್ದ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !