ಬೆಕ್ಕಣ್ಣನ ಅಹವಾಲು

7

ಬೆಕ್ಕಣ್ಣನ ಅಹವಾಲು

Published:
Updated:
Prajavani

ನಮ್ಮನೆ ಬೆಕ್ಕಣ್ಣ ಬಲು ‘ಘನಗಂಭೀರ’ವಾಗಿ ನಾಲ್ಕಾರು ದಿನದ (ಕನ್ನಡ!) ಪೇಪರು ಓದಿ, ಆಕಳಿಸಿ ಕೊನೆಗೆ ಅದರ ಮೇಲೇ ಪವಡಿಸಿತು. ಎದ್ದಿದ್ದೇ ಏನೋ ಬರೆಯಲು ಶುರುವಿಟ್ಟಿತು. ‘ಏನ್ ಬರಿತಿದೀಯಮ್ಮ’ ಪ್ರೀತಿಯಿಂದ ಕೇಳಿದೆ. ಮ್ಯಾಂವ್$$$ ಎಂದು ಜೋರು ಮಾಡಿ ತಲೆತಗ್ಗಿಸಿ ಮುಂದುವರೆಸಿತು. ಅರ್ಧ ಗಂಟೆ ನಂತರ ಮುಗಿಸಿ, ಆಕಳಿಸಿ ಹಾಲು ಕುಡಿದು ಹೊರಟಿತು.‘ಎಲ್ಲಿಗ್ಹೋಗ್ತೀಯ ಚುಮ್ಮಣ್ಣ... ಮಕ್ಕೋ... ಚಳಿ’ ಲಲ್ಲೆಗೆರೆದೆ.

‘ಕುಮಾರಣ್ಣನ್ನ ನೋಡಕ್ಕೆ ಹೊಂಟಿದ್ದೆ... ಥತ್... ನೀ ಅಡ್ಡಬಾಯಿ ಹಾಕಿ, ಅಡ್ಡ ಬಂದ್ಯಾ’ ಎಂದು ಬಾಗಿಲಲ್ಲೇ ಸಿಟ್ಟಾಗಿ ನಿಂತಿತು. ಬೆಕ್ಕಿಗೆ ಹೊರಹೊರಟಾಗ ಮನುಷ್ಯರನ್ನು ಕಂಡರೆ ಅಪಶಕುನವಂತೆ! ಮೆಲ್ಲನೆ ಅದರ ಕೈಯಲ್ಲಿದ್ದ ಹಾಳೆಗಳನ್ನು ಇಸಿದುಕೊಂಡೆ. ಬೆಕ್ಕಣ್ಣ ಅಚ್ಚಕನ್ನಡದಲ್ಲಿ ಕುಮಾರಣ್ಣಂಗೆ ಕೊಡಕ್ಕೆ ಅಹವಾಲು ಬರೆದುಕೊಂಡಿದೆ!

1. ರಾಜಭವನದಲ್ಲಿ ಸೇರಿರುವ ಬೆಕ್ಕುಗಳನ್ನ ಹಿಡಿಯೋ ಚೆಲ್ಲಾಟ ಬಿಟ್ಟು, ರಾಜಭವನ ಮಾತ್ರವಲ್ಲ, ವಿಧಾನಸೌಧ ಮತ್ತು ಸರ್ಕಾರಿ ಕಚೇರಿಗಳಲ್ಲಿರುವ ಹೆಗ್ಗಣಗಳನ್ನು ಹಿಡಿಯಲು ಮದ್ಲು ಆದೇಶ ಕೊಡಣ್ಣೋ. ನಾವೂ ಸಹಾಯ ಮಾಡ್ತೀವಿ ಬೇಕಾದ್ರೆ.

2. ಖಾಸಗಿ ಶಾಲೆಗಳಲ್ಲೂ ಏಳನೇ ಕ್ಲಾಸ್‌ವರೆಗೆ ಕನ್ನಡ ಮಾಧ್ಯಮ ಮಾಡಿಬಿಡಣ್ಣ... ಆಮೇಲೆ ಹೈಕ್ಳು ಇಂಗ್ಲಿಷೋ ಗಿಂಗ್ಲೀಷೋ ಕಲ್ಕಂತಾವೆ... ನೋಡು... ನಾ ಏಳು ತಿಂಗಳು ಬರೀ ಕನ್ನಡ ಅರ್ಥ ಮಾಡ್ಕಂತಿದ್ದೆ, ಈಗ ಪಕ್ಕದಾಗಿರೋ ತೆಲುಗು, ಕೊಂಕಣಿ ಆಂಟಿಗಳಿಗೆ ಅವ್ರ ಭಾಷೇಲಿ ಮ್ಯಾಂವ್‍ಗುಟ್ಟಿ ಹಾಲು ಗಿಟ್ಟಿಸ್ಕೋತೀನಿ! ಸುಮ್ಕೆ ಒಂದ್ನೇ ಕ್ಲಾಸಿಂದ್ಲೇ ಸರ್ಕಾರಿ ಶಾಲೇಲಿ ಇಂಗ್ಲಿಷು ಮಾಧ್ಯಮ ಮಾಡಿ ಯಾಕೆ ಕಲ್ಲು ಹೊಡೆಸ್ಕೋತೀಯಣ್ಣೋ.

3. ಮುಂದಿನ ವರ್ಷದಿಂದ ನಿಮ್ಮ ಸಾಹಿತ್ಯಸಮ್ಮೇಳನದಲ್ಲಿ ‘ಪೂರ್ಣಕ್ಷೀರಕುಂಭ’ ಮೆರವಣಿಗೆ ಮಾಡಿಸಣ್ಣ... ಹೆಂಗಸ್ರು ಪಕ್ಕದಾಗೆ ಕುಂಭದಿಂದ ತುಳುಕಾಡಿದ ಹಾಲು ನೆಕ್ಕೋತ ನಾವೂಕ್ಯಾಟ್ ವಾಕ್ ಬರ್ತೀವಿ. ‘ಸುಮಂಗಲಿಯರೇ ಯಾಕೆ’ ಅಂತ ಮಂದಿ ಬೈಯೋದು ತಪ್ಪುತ್ತೆ... ‘ಮಾರ್ಜಾಲ ಮಹಿಳೆಯರಿಂದ ಪೂರ್ಣಕ್ಷೀರಕುಂಭ ಮೆರವಣಿಗೆ’ ಅಂತ ಕಾರ್ಡ್ ಮಾಡಿಸ್ರಿ.

ಈ ಮೂರು ಓದುವಷ್ಟರಲ್ಲಿ ಬೆಕ್ಕಣ್ಣ ಹಾಳೆಗಳನ್ನು ಕಸಿದುಕೊಂಡಿತು. ‘ಅಲ್ಲಲೇ... ದಿಲ್ಲೀವಳಗ ಇದ್ದೋರಿಗೆ ಏನೂ ಕೇಳಂಗಿಲ್ಲೇನು’ ಕೇಳಿದೆ.

‘ಮನ್ ಕಿ ಮ್ಯಾಂವ್ ಹೇಳಕ್ಕೆ ಅಂತ್ಲೇ ಹಿಂದಿಕಲಿತಿದ್ದೀನಿ... ಮುಂದಿನ ತಿಂಗಳು ಮೋದಿಮಾಮಂಗೂ ಕಳಿಸ್ತೀನಿ’ ಎಂದಿದ್ದೇ ಹಾಳೆಗಳೊಂದಿಗೆವಿಧಾನಸೌಧದತ್ತ ಜಿಗಿಯಿತು!

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !