ಮಂಗಳವಾರ, ಮೇ 24, 2022
29 °C

ಬಿರುದಾವಳಿ!

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ರಾತ್ರಿಯ ಸರ್ಕೀಟು ಮುಗಿಸಿದ ಬೆಕ್ಕಣ್ಣ ಬೆಳಿಗ್ಗೆ ಹಿರಿಹಿರಿ ಹಿಗ್ಗುತ್ತ ಒಳಬಂದಿತು. ‘ಪೇಪರ್ ಓದೀ ಇಲ್ಲೋ...  ಮೋದಿ ಮಾಮಗ ಅವಾರ್ಡ್ ಬಂದದ’ ತನಗೇ ಬಂದಷ್ಟು ಹೆಮ್ಮೆಯಿಂದ ಬೀಗುತ್ತ ಹೇಳಿತು. 

ಅರೆ... ನೊಬೆಲ್‌ ಶಾಂತಿ ಅವಾರ್ಡ್ ಏನಾದ್ರೂ ಅಕಾಲದಲ್ಲಿ  ಕೊಟ್ಟುಬಿಟ್ಟರಾ  ಹೇಗೆ  ಎಂದು  ನಾನು  ಗಾಬರಿಯಾಗುವಷ್ಟರಲ್ಲಿ ಹೇಳಿತು... ‘ಮೋದಿ ಮಾಮಗ ಟೈಮ್ ಮ್ಯಾಗಜಿನ್ ‘ಡಿವೈಡರ್ ಇನ್ ಚೀಫ್’ ಅಂದ್ರ ‘ಪ್ರಧಾನ ವಿಭಜಕ’ ಅಂತ ಪ್ರಶಸ್ತಿ  ಕೊಟ್ಟದಂತ. ನೋಡ್ಮತ್ತ... ನಮ್ಮ ಪ್ರಧಾನಿ ಎಂಥೆಂಥಾ ವಿಷ್ಯಕ್ಕೆಲ್ಲ ಪ್ರಧಾನ ಆಗ್ಯಾರಂತ...’ ಇನ್ನಷ್ಟು ಹೆಮ್ಮೆಯಿಂದ ಉಲಿಯಿತು.

‘ಮಂಗ್ಯಾನಂಥವನೆ... ಅದ್ ಪ್ರಶಸ್ತಿ ಅಲ್ಲಲೇ... ಕೋಮು ಆಧಾರದ ಮ್ಯಾಗ ಸಮಾಜ ಒಡೀತಾರಂತ  ಅದರರ್ಥ...ಎಷ್ಟರ ಪ್ಯಾಲಿ ಅದೀಯಲೇ’ ನಗುತ್ತಲೇ ಬೈದೆ. 

ನನ್ನ ಮಾತು ನಂಬದ ಬೆಕ್ಕಣ್ಣ ಲ್ಯಾಪ್‌ಟಾಪ್ ತೆರೆದು ಏನೇನೋ ನೋಡಿತು, ಓದಿತು.

‘ಹಂಗಾರೆ ಪ್ರಖ್ಯಾತಿ ಅಲ್ಲ, ಕುಖ್ಯಾತಿ ಅನ್ನು...’ ಎಂದು ಬೇಜಾರಿನಲ್ಲಿ ಹೇಳಿ ಬರೆಯತೊಡಗಿತು.

‘ಏನ್ ಬರೀತೀಯಲೇ... ಟೈಮ್ ಪತ್ರಿಕೆ ಮ್ಯಾಗೆ ಮಾನನಷ್ಟ ಮೊಕದ್ದಮೆ ಹಾಕ್ಕೀಯೇನು’.

‘ನಾನಲ್ಲ... ತಮ್ಮ ಮಾನ ಹರಾಜು ಆತಂತ ರಸ್ತೆ ವಿಭಜಕಗಳು ಮೊಕದ್ದಮೆ ಹಾಕ್ತಾವ. ಇನ್ನೂ ಯಾರ್‍ಯಾರಿಗೆ  ಹೀಂಗ ಪ್ರಶಸ್ತಿ ಕೊಡಬೌದು ಅಂತ ಟೈಮ್ ಪತ್ರಿಕೆಯ ವರಿಗೆ ಇ–ಮೇಲ್ ಹಾಕ್ಕೀನಿ’ ಎಂದಿತು. ಮೆತ್ತಗೆ ಇಣುಕಿದೆ. ಕಂಗ್ಲಿಷಿನಲ್ಲಿ ಲಿಸ್ಟ್ ಮಾಡಿತ್ತು.

ಕುಮಾರಣ್ಣ– ಚೀಫ್ ಇನ್ ಟೆಂಪಲ್
ರನ್ನಿಂಗ್‍ ಎಡೂರಣ್ಣ– ಪ್ರಧಾನ ಕುದುರೆ 
ವ್ಯಾಪಾರಿ, ರಾವಣ್ಣ– ಪ್ರಧಾನ ನಿಂಬೆ ಪಾಳೇಗಾರ      

ದೇವಣ್ಣ– ಪ್ರಧಾನ ಚಾಣಕ್ಯ ಇನ್ ಕರ್ನಾಟಕ ಡಿಕೇಶಣ್ಣ– ಚೀಫ್ ಫೆವಿಕಾಲ್ ಇನ್ ಕ್ರೈಸಿಸ್‍

‘ಶಾ’ಣ್ಯಾ– ರೈಟ್‍  ಹ್ಯಾಂಡ್ ಟು ಪ್ರಧಾನ ವಿಭಜಕ, ‘ಲಿಸ್ಟಿನಾಗ ಪಪ್ಪು, ಮಾಯಕ್ಕ, ದೀದಿ ಅವ್ರೆಲ್ಲ ಎದಕ್ಕೆ ಇಲ್ಲಲೇ?’ ಕೇಳಿದೆ. ‘ಇದ್ ಫಸ್ಟ್‌ ಲಿಸ್ಟ್. ಅವ್ರೆಲ್ಲ ಸೆಕೆಂಡ್ ಲಿಸ್ಟಿನಾಗ ಬರ್ತಾರ. ಅವ್ರಿಗೆಲ್ಲ ಬಿರುದು ಯೋಚನಿ ಮಾಡಬಕು’ ಎಂದು ಬಲು ಘನಗಂಭೀರವಾಗಿ ಹೇಳಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.