ಶನಿವಾರ, ಜುಲೈ 24, 2021
27 °C

ಜಸ್ಟ್ ಪಾಸಾದ್ರೇನಂತೆ...?

ಪ್ರೊ. ಎಸ್.ಬಿ.ರಂಗನಾಥ್ Updated:

ಅಕ್ಷರ ಗಾತ್ರ : | |

Prajavani

ಎಸ್‌ಎಸ್ಎಲ್‌ಸಿಯಲ್ಲಿ ಜಸ್ಟ್ ಪಾಸ್ ಆಗಿದ್ದ ಮಗ, ಅಪ್ಪ ಒಳಗೆ ಬರುತ್ತಿದ್ದಂತೆ ರೂಮು ಸೇರಿಕೊಂಡ. ಅವನಿಗೆ ಪಿಯುಸಿ ಸೀಟಿಗಾಗಿ ಎರಡು ವಾರದಿಂದ ಬಿಸಿಲಲ್ಲಿ ಅಲೆಯುತ್ತಿದ್ದ ಅಪ್ಪ, ಹೆಂಡತಿ ಮೇಲೆ ರೇಗಿದ- ‘ನೋಡೇ ನಿನ್ನ ಕುಮಾರ ಕಂಠೀರವನ ಪ್ರತಾಪ! ಯಾವ ಕಾಲೇಜಲ್ಲೂ ಈ ಪರ್ಸೆಂಟೇಜಿಗೆ ಸೀಟು ಸಿಗ್ತಿಲ್ಲ. ಕೇಳಿದಷ್ಟು ಡೊನೇಷನ್ ಕೋಡ್ತೀನೀಂದ್ರೂ ಒಪ್ತಿಲ್ಲ. ನೀನು ಅವನ್ನ ಮುದ್ದಿಸಿ ಹಾಳು ಮಾಡಿದೆ’.

ಅಮ್ಮ ಹೇಳಿದಳು- ‘ನಾನು ನಿಮ್ಗೆ ಎಷ್ಟು ತಲೆ ಚಚ್ಕೊಂಡ್ರೂ ಮಗನ ಕಡೆ ಸ್ವಲ್ಪನೂ ಗಮನ ಕೊಡ್ಲಿಲ್ಲ. ಸದಾ ಆಫೀಸು- ಟೂರೂಂತ ತಿರುಗುತ್ತಿದ್ರಿ. ಊರಲ್ಲಿದ್ದಾಗ್ಲೂ ಮೀಟಿಂಗು, ಕ್ಲಬ್ಬು ಅಂತ ಸರಿರಾತ್ರಿಗೇ ಮನೆ ಸೇರ್ತಿದ್ದದ್ದು’.

‘ಇವನ್ಗೆ ಸ್ವಲ್ಪನಾದ್ರೂ ಜವಾಬ್ದಾರಿ ಬೇಡ್ವೇನೇ? ಯಾವಾಗ್ಲೂ ಮನೆ ಒಳಗೆ ಮೊಬೈಲು, ಟೀವಿ. ಹೊರಗೆ ಕ್ರಿಕೆಟ್ಟು, ಪಿಕ್‍ನಿಕ್ಕು. ನಮ್ಮ ಗುಂಡಣ್ಣನ ಮಗಳು, ಸ್ಕೂಲ್‍ಗೇ ಫಸ್ಟ್. ಅವಳ್ನ ಕರೆದು ಸೀಟು ಕೊಟ್ರು’.

‘ಮನೆ ಕೆಲಸದವಳ ಮಗ ಡಿಸ್ಟಿಂಕ್ಷನ್ ಅಂತೆ... ಎಲ್ಲದಕ್ಕೂ ನಾವು ಪಡಕೊಂಡು ಬಂದಿರ್ಬೇಕು’– ಅಮ್ಮ ಸೀರೆ ಸೆರಗು ಕಣ್ಣ ಬಳಿ ತಂದುಕೊಂಡರು.

‘ಅದ್ಕೆ ನೀನ್ಯಾಕೇ ಅಳ್ತೀಯಾ? ಅವನ್ನ ನಾಕು ದಿನ ಉಪವಾಸ ಕೆಡವು. ಸರಿಯಾಗಿ ನಾಲ್ಕು ಬಾರಿಸಿದ್ರೆ ಗೊತ್ತಾಗುತ್ತೆ. ಏನ್ಮಾಡ್ತಿದೀಯೋ ರೂಮಲ್ಲಿ ಕತ್ತೆ ಭಡವಾ, ಬಾರೋ ಹೊರಗೆ’.

ಒಳಗಿನಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಮಗ ಹೊರಗೆ ಬಂದು ದಿನಪತ್ರಿಕೆಯನ್ನು ಅಪ್ಪನ ಮುಂದೆ ಹಿಡಿದ- ಕೇರಳದ ಹಳ್ಳಿಯೊಂದರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ‘ಎ’ ಗ್ರೇಡ್ ಪಡೆಯದ ಮಗನನ್ನು ಹೊಡೆದ ತಂದೆಯನ್ನು ಜೈಲಿಗೆ ಕಳಿಸಿದ ಸುದ್ದಿ ಇತ್ತು.

ನೋಡಿದ ಅಪ್ಪ ಸುಧಾರಿಸಿಕೊಂಡು ಹೇಳಿದ– ‘ಬೇಜಾರು ಮಾಡ್ಕೊಬೇಡಯ್ಯಾ, ಲಾಸ್ಟ್ ಲಿಸ್ಟ್‌ನಲ್ಲಾದ್ರೂ ಸೀಟು ಸಿಗುತ್ತೆ. ಮುಂದೆ ಇಂಪ್ರೂವ್ ಮಾಡ್ಕೊ. ಅಂಥಾ ವಿಶ್ವವಿಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್‌ನನ್ನೇ ದಡ್ಡ ಅಂತ ಶಾಲೆಯಿಂದ ಹೊರ ಹಾಕಿರಲಿಲ್ವೇ?’

ತಾಯಿ, ಮಗ ಮುಗುಳ್ನಕ್ಕರು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.