ಮಂಗಳವಾರ, ಅಕ್ಟೋಬರ್ 20, 2020
22 °C

ಕೈಯರಳಿ ಹೂವಾಗಿ

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ತಾವು ನಿರ್ಮಿಸಿದ್ದ ಸಿನಿಮಾ ತೋಪೆದ್ದುಹೋದ ಬೇಜಾರಲ್ಲಿ ಕೂತಿದ್ದರು ನಿರ್ಮಾಪಕಿ ಸೋನಮ್ಮ. ‘ಯಾಕ್ ಮೇಡಂ, ಇಷ್ಟ್ ಬೇಜಾರಲ್ಲಿದೀರಿ. ಸೋಲು ಗೆಲುವು ಕಾಮನ್ ಬಿಡಿ’ ಸಮಾಧಾನದ ಮಾತುಗಳನ್ನಾಡಿದ ಮತ್ತೊಬ್ಬ ನಿರ್ಮಾಪಕ ವಿಜಿ.

‘ನಮ್ ‘ಖಾಲಿ ಕೈ’ ಫಿಲ್ಮ್ ಜೊತೆನೇ ರಿಲೀಸ್ ಆದ ‘ಕಮಲ 303 ಅರ್ಥಾತ್ ಕೈಯರಳಿ ಹೂವಾಗಿ’ ಎಷ್ಟ್ ಜೋರಾಗಿ ಓಡ್ತಿದೆ. ನಮಗೂ ಅವರಿಗೂ ಏನ್ ಡಿಫರೆನ್ಸು?’ ಕೇಳಿದ್ರು ನಿರ್ಮಾಪಕಿ.

‘ಕಥೆ ಮೇಡಂ, ಕಥೆ. ಆ ಸಿನಿಮಾದಲ್ಲಿ ಎಂಥೆಂಥ ರೋಚಕ ಸೀನ್‌ಗಳಿವೆ‌. ಕಾಮಿಡಿ ಏನ್ ಕೇಳ್ತೀರಾ, ಅಧ್ಯಾತ್ಮ ಏನ್ ಕೇಳ್ತೀರಾ. ಫಾರಿನ್‌ನಲ್ಲಿ ಎಷ್ಟೊಂದ್ ಸೀನ್ ಶೂಟ್ ಮಾಡಿದಾರೆ ಗೊತ್ತಾ? ಕ್ಲೈಮ್ಯಾಕ್ಸ್ ಸೂಪರ್. ಏರ್ ಸ್ಟ್ರೈಕ್ ಸೀನ್ ಅಂತೂ ಜನರನ್ನ ತುದಿಗಾಲ ಮೇಲೆ ನಿಲ್ಸುತ್ತೆ ಗೊತ್ತಾ ಮೇಡಂ’ ಒಂದೇ ಸಮನೆ ಹೊಗಳತೊಡಗಿದ ವಿಜಿ.

‘ಸಾಕ್ ನಿಲ್ಲಿಸ್ರೀ... ನಮ್ ಸಿನಿಮಾದಲ್ಲಿಯೂ ಫ್ಯಾಮಿಲಿ ಸೆಂಟಿಮೆಂಟ್ ಇದೆಯಲ್ವ?’ ಸಿಟ್ಟಲ್ಲೇ ಕೇಳಿದ್ರು ಮೇಡಂ.

‘ಮಗನ್ನ ಹೀರೊ ಮಾಡಿದಾಕ್ಷಣ ಅದು ಫ್ಯಾಮಿಲಿ ಸೆಂಟಿಮೆಂಟ್ ಆಗಿಬಿಡುತ್ತಾ ಮೇಡಂ. ಕಥೆ, ಬುದ್ಧೀನ ಕುಗ್ಗಿಸಿದ್ರೂ ಪರವಾಗಿಲ್ಲ, ಮನಸ್ಸನ್ನ ಕೆರಳಿಸುವಂತಿರಬೇಕು’ ಸಿನಿಮಾ ಥಿಯರಿ ಬಿಚ್ಚಿಟ್ಟ ವಿಜಿ.

‘ಹೈ ಬಜೆಟ್‌ನ ‘ಹೊರೆ ಇಳಿಸಿದ ಜನತೆ’ ಕೂಡ ಸೋತು ಸುಣ್ಣವಾಗಿದೆಯಲ್ರೀ’.

‘ಕಮರ್ಷಿಯಲ್ ಸಿನಿಮಾನೇ ಓಡಲ್ಲ. ಆರ್ಟ್ ಮೂವಿ ಓಡ್ತಾವ. ಕಣ್ಣೀರಿಗೆ ಜನ ಕರಗೋ ಕಾಲ ಹೋಯ್ತು ಮೇಡಂ’ ವೇದಾಂತಿಯಾದ ವಿಜಿ.

‘ಈಗ ನಾನೇನ್ಮಾಡ್ಲಿ’ ಹತಾಶೆಯಿಂದ ಕೇಳಿದ್ರು ಸೋನಮ್ಮ.

‘ಕೈಯರಳಿ ಹೂವಾಗಿ’ ಸಿನಿಮಾದ ವಿತರಣೆ ಹಕ್ಕು ತಗೊಂಡ್ ಬಿಡಿ ಮೇಡಂ. ಪ್ರಮೋಷನ್ ಹೆಂಗ್ ಮಾಡಬೇಕು ಅಂತ ಅವರೇ ಹೇಳಿಕೊಡ್ತಾರೆ’!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು