ಬುಧವಾರ, ಆಗಸ್ಟ್ 21, 2019
28 °C

ದೋಸೆ ಆರ್ಡರು ರದ್ದು!

Published:
Updated:
Prajavani

ಡಿಜಿಟಲ್ ಇಂಡಿಯಾದ ಪ್ರಜೆಗಳಲ್ಲಿ ಒಬ್ಬರಾದ ಶುಕ್ಲ ಮಹೋದಯರು ಸಂಜೆ ಮಗಳೊಡನೆ ವಾಕಿಂಗ್ ಮುಗಿಸಿ ಹೊರಟರು. ವಾಕಿಂಗ್‍ನಲ್ಲಿ ಕರಗಿಸಿದ ಕ್ಯಾಲರಿಯನ್ನು ತಕ್ಷಣವೇ ಪಡೆಯದಿದ್ದರೆ ಹೇಗೆ...? ಮಗಳು ‘ಏನಾದರೂ ತಿನ್ನೋಣ’ ಎಂದಳು. ಜೊಮ್ಯಾಟೊ, ಸ್ವಿಗ್ಗಿ ಉಸಾಬರಿಯೇ ಬೇಡ, ‘ಯಾರ್‍ಯಾರೋ’ ಡೆಲಿವರಿ ಮಾಡ್ತಾರೆಂದು ಉಡುಪಿ ಬ್ರಾಹ್ಮಣರ ಹೋಟೆಲಿಗೆ ಹೋದರು. ದೋಸೆಗೆ ಆರ್ಡರು ಮಾಡಿದವರಿಗೆ ಯಾಕೋ ಅನುಮಾನ. ಕೈತೊಳೆಯುವ ನೆಪದಲ್ಲಿ ಒಳಹೋಗಿ ಅಡುಗೆ ಮನೆಗೆ ಇಣುಕಿದರು. ದೋಸೆ ಹೊಯ್ಯುತ್ತಿದ್ದವನ ಹಣೆಯೊಳು ಪುಟ್ಟದಾಗಿ ಮಿನುಗುವ ಕುಂಕುಮವ ನೋಡಿ ನೆಮ್ಮದಿಗೊಂಡರು. ಆದರೂ ಅನುಮಾನ. ಶುಕ್ಲರು ಮ್ಯಾನೇಜರನೊಂದಿಗೆ ಮಾತಿಗಿಳಿದರು.

‘ಅಕ್ಕಿ ಎಲ್ಲಿಂದ ತರಿಸ್ತೀರ ಸಾರ್?’

‘ಮುದ್ದಣ್ಣ ಹೋಲ್‍ಸೇಲ್‍ ಏಜೆನ್ಸಿಯಿಂದ’.

‘ಅವ್ರು ಎಲ್ಲಿಂದ ತರಿಸ್ತಾರೆ?’

‘ಗಂಗಾವತಿ ಕಡೆಯಿಂದ ಯಾರೋ ರೆಡ್ಡಿ ಅಂತೆ’.

 ‘ರೆಡ್ಡಿ ಎಲ್ಲಿಂದ ತರಿಸ್ತಾರಂತೆ?’

‘ಅದ್ಯಾವುದೋ ಪುರ ಮಿಲ್‍ ಅಂದ್ರು’.

‘ಯಾವ ಕಡೆ ರೈತರು ಬೆಳೆದ ಭತ್ತ ಆ ಮಿಲ್ಲಿಗೆ ಬರುತ್ತಂತೆ?’

‘ಗಂಗಾವತಿ ಹತ್ರ ಮಹಮ್ಮದಾಪುರ, ಮುಸಲಾಪುರ ಹಳ್ಳಿಯವರು ಇದೇ ಮಿಲ್ಲಿಗೆ ಕೊಡುವುದಂತೆ... ವಳ್ಳೆ ಭತ್ತ ಬೆಳೀತಾರಂತೆ’ ಇದೊಳ್ಳೆ ವಿಚಿತ್ರ ಗಿರಾಕಿಯೆಂದು ಮನದಲ್ಲಿ ಬೈದುಕೊಳ್ಳುತ್ತಲೇ ಮ್ಯಾನೇಜರ್ ವಿವರಿಸಿದ.

ಅಂದರೆ ಅಲ್ಲಿಯ ಭತ್ತ ಬೆಳೆಯುವ ರೈತರಲ್ಲಿ ‘ಅವರೂ’ ಇದ್ದರೆ? ಶುಕ್ಲ ಅವರ ಮುಖ ಕಸಿವಿಸಿಗೆ ಒಳಗಾದದ್ದನ್ನು ಗಮನಿಸಿದ ಮಗಳು ಎದ್ದು ಬಂದು ಕಿವಿಯಲ್ಲಿ ಪಿಸುಗುಟ್ಟಿದಳು ‘ಅಪ್ಪಾ... ಮೂಗು ಮುಚ್ಚಿಕೊ. ಅಲ್ನೋಡು, ಆ ಟೇಬಲ್‌ನಲ್ಲಿ ಕೂತಿರೋ ಫ್ಯಾಮಿಲಿ. ಅವ್ರು ಉಸಿರಾಡಿ ಬಿಟ್ಟಿದ್ದೆಲ್ಲ ಈ ಕಡಿಗೆ ಬರ್ತಿದೆ. ಶ್ರಾವಣ ಮಾಸ, ಅವ್ರು ಮೂಗಿಂದ ಬಿಟ್ಟಿದ್ದನ್ನು ನೀ ಹೆಂಗೆ ಉಸಿರಾಡ್ತೀಯ?’ ಮಗಳು ನಕ್ಕಳು.

ಇವರುಗಳಿಗೆ ಶ್ರಾವಣ ಒಂದು ತಿಂಗಳು ಉಸಿರಾಟ ನಿಲ್ಲಿಸಕ್ಕೆ ಆಗಲ್ಲವಾ ಅಥವಾ ಉಸಿರು ಒಳಗೆ ತಕ್ಕಂಡರೂ ಪರವಾಗಿಲ್ಲ, ಹೊರಗೆ ಮಾತ್ರ ಬಿಡಬೇಡಿ ಅಂತ ವಿಶ್ವಗುರು ಹತ್ರ ಹೇಳಿಸ್ಬೇಕು ಎಂದುಕೊಳ್ಳುತ್ತ ಶುಕ್ಲರು ದೋಸೆ ಆರ್ಡರು ರದ್ದುಪಡಿಸಿ ಹೊರನಡೆದರು!

Post Comments (+)