ತ್ರಿಶಂಕು ಸ್ವರ್ಗದಲ್ಲಿ ದೇವಮೂರ್ತಿಗಳು!

7

ತ್ರಿಶಂಕು ಸ್ವರ್ಗದಲ್ಲಿ ದೇವಮೂರ್ತಿಗಳು!

Published:
Updated:
Deccan Herald

ನಡುರಾತ್ರಿ ಎರಡು ಗಂಟೆಗೆ ಸ್ವರ್ಗದ ಬಾಗಿಲನ್ನು ದಬದಬನೆ ಬಡಿಯುವ ಸದ್ದಿಗೆ ಎಚ್ಚರಗೊಂಡ ಇಂದ್ರ, ಎದ್ದು ಬಂದ. ಇತ್ತಲಿನ ಪರಿವೆಯಿಲ್ಲದೇ ದ್ವಾರದಲ್ಲಿ ಮಲಗಿದ್ದ ಐರಾವತನಿಗೆ ‘ಮಂಗ್ಯಾನಂಥವನೇ, ನೈಟ್ ಡ್ಯೂಟಿ ಮಾಡು ಅಂದ್ರ ನಿದ್ದಿ ಮಾಡೂದೇನಲೇ’ ಎಂದು ಬೈಯುತ್ತ, ತಾನೇ ದ್ವಾರವನ್ನು ತುಸುವೇ ಸರಿಸಿ ಹೊರಬಂದ. ಯೋಜನ ದೂರದವರೆಗೂ ಗುಂಪುಗೂಡಿದ್ದ ಮುಕ್ಕೋಟಿ ದೇವಮೂರ್ತಿಗಳನ್ನು ನೋಡಿ ಗಾಬರಿಯಾದ. ಎಲ್ಲ ದೇವಮೂರ್ತಿಗಳು ಒಂದೇ ಸಲಕ್ಕೆ ಮಾತಾಡತೊಡಗಿದ್ದರಿಂದ ಯಾರು ಏನು ಹೇಳ್ತಿದ್ದಾರೆ ಅರುವಾಗದ ಇಂದ್ರ, ‘ನಿಮ್ಮ ನಿಮ್ಮ ದೇವಸ್ಥಾನದೊಳಗೆ ಬೆಚ್ಚಗೆ ಮಲಗೂದ ಬಿಟ್ಟು ಎದಕ್ಕ ಎಲ್ಲಾರೂ ಇಲ್ಲಿ ಬಂದೀರಿ... ಒಬ್ಬರಾದ ಮ್ಯಾಗ ಒಬ್ಬರು ಮಾತಾಡ್ರಪಾ... ’ ಅಂತ ಪಿಸಪಿಸನೆ ಹೇಳಿದ.

‘ನಮಗ ಸಾಕಾಗೇದ... ಮದ್ಲು ರಾಜ (ಕಾರಣಿ) ಭಕ್ತರಿಂದ ನಮ್ಮ ಕಾಪಾಡಪ್ಪೋ... ಎಷ್ಟ್ ಪಕ್ಷ... ಎಷ್ಟ ಮಂದಿ ರಾಜಕಾರಣಿ ಗೋಳು... ಒಂದ್ ಪಕ್ಷದಿಂದ ಒಬ್ಬಾಂವ ಬಂದು ವಿರೋಧ ಪಕ್ಷ, ವಿರೋಧಿಗಳನ್ ನೆಲಕ್ಕೆ ಕೆಡವು ಅಂತ ಕೇಳ್ಕೋತಾನ, ಅಂವಾ ಇನ್ನಾ ಮೆಟ್ಟಿಲು ಇಳಿದಿರಂಗಿಲ್ಲ, ಇತ್ತಕಡಿಂದ ಇನ್ನೊಂದು ಪಕ್ಷದಾಂವ ಬರ್ತಾನ, ಅಂವನೂ ಅದನ್ನೇ ಕೇಳ್ತಾನ..., ನಾವ್ ಸುಮ್ಮಿರೂಣು ಅಂದ್ರ ಆ ಪೂಜಾರಿ ಸುಮ್ಮಕಿರಂಗಿಲ್ಲ. ಬಲಕ್ಕ ಹೂ ಬೀಳಸಲಿಕ್ಕಂದ್ರ ನೋಡ್ ಮತ್ತ ಅಂತ ಕಣ್ಣ ಕಿಸಿದು ಹೆದ್ರಸ್ತಾನ. ಟೆಂಪಲ್ ರನ್ ಅಂತ... ಮೃದು ಹಿಂದುತ್ವ ಅಂತ... ಕಶಾಯಧಾರಣೆ ಅಂತ... ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ಕೊಡ್ರಿ ಅಂತ, ಕೊಟ್ರ ನಾವ್ ರಕ್ತ ಚೆಲ್ಲತೀವ್ ಅಂತ... ಮತ್ತ ಆ ನೂರಾರು ಮಠಗೋಳ ಕಥಿ ಅಂತೂ ಕೇಳಾಬ್ಯಾಡ... ನಮಗ ಖರೇ ರಗಡ್ ಆಗೇದ’. ಎಲ್ಲ ದೇವಮೂರ್ತಿಗಳು ಗೋಳಾಡತೊಡಗಿದವು.

‘ಯಾರೂ ಎದ್ ಬರ್‍ಬ್ಯಾಡ್ರಿ’ ಅಂತ ಉಳಿದ ದೇವರುಗಳಿಗೆ ಮೆಸೇಜ್ ಕುಟ್ಟಿದ ಇಂದ್ರ ‘ಜರಾ ಇಲ್ಲೇ ನಿಂದ್ರಪ್ಪೋ, ಉಳದೋರನ್ನ ಕರಕಂಡ್ ಬರ್ತೀನಿ’ ಎಂದು ಒಳಬಂದವನೇ ದ್ವಾರದ ಚಿಲಕ ಜಡಿದು ಬೆವರು ಒರೆಸಿಕೊಂಡ. ಹೊರಬಾಗಿಲಲ್ಲೇ ಕಾದು ಕಾದು ಸುಸ್ತಾದ ದೇವಮೂರ್ತಿಗಳು ಕೆಳಗೆ ನೋಡಿದರೆ ಅದಾಗಲೇ ದೇವಸ್ಥಾನದ ಮೈಕುಸೆಟ್ಟುಗಳು ‘ಎದ್ದೇಳು’ ಸುಪ್ರಭಾತ ಬಡಕೊಳ್ಳುತ್ತಿದ್ದವು. ಪೂಜಾರಿಗಳು ಕಣ್ಣುಜ್ಜಿಕೊಳ್ಳುತ್ತ ಬಾಗಿಲು ತೆರೆದು ಒಳಹೊಕ್ಕಿದ್ದರು. ಇತ್ತ ಸ್ವರ್ಗದ ಬಾಗಿಲೂ ಮುಚ್ಚಿ, ಅತ್ತ ದೇವಸ್ಥಾನದೊಳಗೂ ಹೋಗಲಿಕ್ಕಾದೇ ಎಲ್ಲ ದೇವಮೂರ್ತಿಗಳು ತ್ರಿಶಂಕು ಸ್ವರ್ಗಸ್ಥವಾದವು!

ಬರಹ ಇಷ್ಟವಾಯಿತೆ?

 • 2

  Happy
 • 7

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !