ಸಿನಿಮಾ: ನಿಮ್ಮದೇ ಕಥೆ, ನೀವೇ ಪಾತ್ರ!

7

ಸಿನಿಮಾ: ನಿಮ್ಮದೇ ಕಥೆ, ನೀವೇ ಪಾತ್ರ!

Published:
Updated:
Deccan Herald

1983 ರ ಬೇಸಿಗೆ ರಜೆ ಭಾರತದ ಮಕ್ಕಳ ಪಾಲಿಗೆ ವಿಶೇಷ ರಜೆಯಾಗಿತ್ತು. ಛೋಟಾ-ಚೇತನ್ ಎಂಬ ಮೊಟ್ಟ ಮೊದಲ ಭಾರತೀಯ 3–ಡಿ ಸಿನಿಮಾವನ್ನು ಲಕ್ಷಾಂತರ ಮಕ್ಕಳು ದೇಶದಾದ್ಯಂತ ಭಾಷೆಯ ಮಿತಿಗಳನ್ನು ಮೀರಿ ಕಣ್ಣುತುಂಬಿಕೊಂಡರು. ಇದರ ನಂತರ ಇತ್ತೀಚಿನ ಜೇಮ್ಸ್-ಕೆಮರೂನ್‌ರ ‘ಅವತಾರ್’, ‘ದಿ ಮ್ಯಾಟ್ರಿಕ್ಸ್’ ಮತ್ತು ತೆಲುಗಿನ ಸಿನಿಮಾ ‘ಬಾಹುಬಲಿ’ ತಮ್ಮ ಸ್ಪೆಷಲ್-ಎಫೆಕ್ಟ್‌ಗಳ ಮೂಲಕ ಮನೆಮಾತಾಗಿದ್ದು ಈಗ ಇತಿಹಾಸ.

ಇಂದು ನಾವು ಮನರಂಜನೆಯನ್ನು ಸಿನಿಮಾ, ಸಂಗೀತ-ರಸಸಂಜೆ ಮತ್ತು ಕ್ರೀಡಾ ಪ್ರದರ್ಶನಗಳ ಮೂಲಕ ಪ್ರಮುಖವಾಗಿ ಪಡೆಯುತ್ತಿದ್ದೇವೆ. ಇವುಗಳ ವೀಕ್ಷಣೆಯ ಅನುಭವವನ್ನು ಇನ್ನಷ್ಟು ಪ್ರೇಕ್ಷಕಸ್ನೇಹಿ ಮಾಡುವ ಪ್ರಯತ್ನದಲ್ಲಿ ಅವುಗಳ ಆಯೋಜಕರು ತಂತ್ರಜ್ಞಾನವನ್ನು ವಿನೂತನವಾಗಿ ಬಳಸಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರೇಕ್ಷಕ ವರ್ಗವನ್ನು ಸೆಳೆಯುವ ಸವಾಲು ಸ್ವೀಕರಿಸಿ, ಗೆಲ್ಲುವ ಪ್ರಯತ್ನದಲ್ಲಿ ಸಹ ಅವರಿದ್ದಾರೆ.

ನವೀನ ತಂತ್ರಜ್ಞಾನ ಬಳಸಿ ಸಿನಿಮಾಗಳನ್ನು ಪ್ರೇಕ್ಷಕನ ಮನದಾಳಕ್ಕೆ ಕರೆದ್ಯೂಯುವ ಭಗೀರಥ ಪ್ರಯತ್ನ ಸಿನಿಮಾ ನಿರ್ಮಾಪಕರು ಮತ್ತು ತಂತ್ರಜ್ಞರಿಂದ ನಡೆಯುತ್ತಲೇ ಇದೆ. ಅವರ ನಡೆಸಿರುವ ಹೊಸತನದ ಹುಡುಕುವಿಕೆಗೆ ತಂತ್ರಜ್ಞಾನದ ಸಾಥ್ ಮತ್ತಷ್ಟು ಇಂಬು ನೀಡುತ್ತಿರುವುದು, ಭರಪೂರ ಆಯ್ಕೆಗಳನ್ನು ಬೆರಳತುದಿಯಲ್ಲಿ ಹೊಂದಿರುವ ಪ್ರೇಕ್ಷಕ ವರ್ಗವನ್ನು ಒಲಿಸಿಕೊಳ್ಳುವ ಪ್ರಯತ್ನಕ್ಕೆ ಸಹಕಾರಿಯಾಗಿರುವುದು ಸತ್ಯ.

‘ಭರಪೂರ ಆಯ್ಕೆಗಳು’ ಎಂಬ ಪದಗಳನ್ನು ಉಲ್ಲೇಖಿಸಿದಾಗ, ಒಮ್ಮೆ ಹರಟೆಗೆ ಸಿಕ್ಕ ಸ್ನೇಹಿತರು ಹಂಚಿಕೊಂಡ ಘಟನೆ ನೆನಪಾಗುತ್ತದೆ. ಸಿನಿಮಾ ಮಂದಿರಕ್ಕೆ ಅವರು ನಾಲ್ಕು ವರ್ಷದ ತಮ್ಮ ಮಗುವಿನೊಂದಿಗೆ ಹೋಗಿದ್ದರಂತೆ. ಸಿನಿಮಾ ಶುರುವಾಗಿ ಅರ್ಧ ತಾಸು ಆಗುವಷ್ಟರಲ್ಲಿ ಆ ಮಗು ‘ಅಪ್ಪ, ರಿಮೋಟ್ ಕಂಟ್ರೋಲ್ ಕೊಡು’ ಎಂದು ದುಂಬಾಲು ಬಿದ್ದಿತಂತೆ! ಇದು ಪುಟ್ಟ ಮಗುವಿನ ಕಥೆ.

ಇಂದಿನ ಹಿರಿಯರು, ಯುವಕರು ಸಿನಿಮಾ ಮಂದಿರದ ಕತ್ತಲ ನಡುವೆಯೂ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂಗಳಿಂದ ವಿಮುಖರಾಗಲು ಸಾಧ್ಯವಿಲ್ಲದೆ, 24X7 ಕನೆಕ್ಟೆಡ್ ಪ್ರಪಂಚದಲ್ಲಿ ಮುಳುಗಿರುವುದು ಸ್ಮಾರ್ಟ್‌ಫೋನ್‌ ಆಣೆಗೂ ದಿಟವೇ ತಾನೇ?!

ಸಾಮಾಜಿಕ ಜಾಲತಾಣಗಳಲ್ಲಿ ದಿನದ ಇಪ‍್ಪತ್ತನಾಲ್ಕು ಗಂಟೆಗಳೂ ವಿರಮಿಸುವ ಪ್ರೇಕ್ಷಕ ಪ್ರಭುವನ್ನು ಸಿನಿಮಾ ಮಂದಿರದ ಕತ್ತಲ ಕೋಣೆಯಲ್ಲಿ ಎರಡೂವರೆ ತಾಸು ಹಿಡಿದಿಟ್ಟುಕೊಳ್ಳುವುದು ಸಿನಿಮಾ ತಂತ್ರಜ್ಞರ ಪಾಲಿಗೆ ಸವಾಲಿನ ವಿಷಯವೇ ಸರಿ. ‘ಸಿನಿಮಾದೊಳು ಒಂದಾಗು ಮಂಕುತಿಮ್ಮ’ ಎಂಬ ಧ್ಯೇಯದೊಂದಿಗೆ ಅಖಾಡಕ್ಕೆ ಇಳಿದಿರುವ ಅನೇಕ ಸಿನಿಮಾ ತಂಡಗಳು ಮಿಥ್ಯಾವಾಸ್ತವ (virtual reality) ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದು ಹಳೆಯ ವಿಚಾರ. ಮಿಥ್ಯಾವಾಸ್ತವದ ಕನ್ನಡಕಗಳು ನಗರ ಪ್ರದೇಶದ ಮಕ್ಕಳ ಕೋಣೆಗಳನ್ನು ನಿಧಾನವಾಗಿ ಆಕ್ರಮಿಸುತ್ತಿವೆ. ಮೊದಲು ಕಂಪ್ಯೂಟರ್ ಗೇಮ್‌ಗಳಿಗಾಗಿ ಬಳಸಲಾಗುತ್ತಿದ್ದ ಈ ಉಪಕರಣವನ್ನು ಇಂದು ಮಿಥ್ಯಾವಾಸ್ತವ ಸಿನಿಮಾ ವೀಕ್ಷಿಸಲು ಬಳಸಲಾಗುತ್ತಿದೆ. ಮಿಥ್ಯಾವಾಸ್ತವ ತಂತ್ರಜ್ಞಾನ ಪ್ರೇಕ್ಷಕರನ್ನು ಮನರಂಜನಾ ದುನಿಯಾದೊಳಗೆ ವಿಹರಿಸಲು ಸಹಕಾರ ನೀಡಿದ್ದು ನಿಜ. ಆದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬಯಸಿರುವ ಕೆಲವು ಸಿನಿಮಾ ತಂತ್ರಜ್ಞರು, ಸಿನಿಮಾ ನಿರ್ದೇಶಕ ಮತ್ತು ಕಥೆಗಾರನ ಸ್ಥಾನವನ್ನು ಪ್ರೇಕ್ಷಕ ಪ್ರಭುವಿನ ತೆಕ್ಕೆಗೆ ವರ್ಗಾಯಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ!

ಇಂತಹ ಚೊಚ್ಚಲ ಪ್ರಯತ್ನದಲ್ಲಿಯೇ, ‘ಲೇಟ್‌ ಶಿಫ್ಟ್‌’ (Late Shift) ಎಂಬ ಚಿತ್ರ ತಂಡ ಗೆದ್ದಿರುವುದೂ ಹೌದು. 2016 ಮತ್ತು 2017ರಲ್ಲಿ ಆಯ್ದ ಸಿನಿಮಾ ಮಂದಿರಗಳಲ್ಲಿ ಮತ್ತು ಸಿನಿಮೋತ್ಸವಗಳಲ್ಲಿ ‘ಲೇಟ್‌ ಶಿಫ್ಟ್‌’ ಪ್ರದರ್ಶನಗೊಂಡಿದೆ. ಇದು ಪಾಲ್ಗೊಳ್ಳುವಿಕೆ-ಸಿನಿಮಾ (interactive cinema) ಯುಗದ ಮುನ್ನುಡಿ ಎಂದೇ ಪರಿಭಾವಿಸಲಾಗಿದೆ.

ಏನಿದು ‘ಲೇಟ್‌ ಶಿಫ್ಟ್‌’?

ಇದು ಸಾಹಸ ಕಥನ ಇರುವ ಸಿನಿಮಾ. ಈ ಸಿನಿಮಾದಲ್ಲಿ ಕಥೆ ಮುಂದುವರಿದಂತೆ ಸುಮಾರು 180 ತಿರುವುಗಳು (ಟರ್ನಿಂಗ್-ಪಾಯಿಂಟ್ಸ್) ಬರುತ್ತವೆ. ಸಿನಿಮಾ ಮಂದಿರದಲ್ಲಿ ಕುಳಿತ ಪ್ರೇಕ್ಷಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಆ್ಯಪ್ ಬಳಸಿ ಸಿನಿಮಾದ ಕಥೆ ಯಾವ ದಿಕ್ಕಿಗೆ ಹೋಗಬೇಕು ಎಂದು ತಕ್ಷಣ ವೋಟ್ ಮಾಡಬೇಕು. ಹೆಚ್ಚು ವೋಟ್ ಪಡೆದ ತಿರುವಿನತ್ತ ಕಥೆ ಸಾಗುತ್ತದೆ. ಕಂಪ್ಯೂಟರ್ ಗೇಮ್‌ನಲ್ಲಿರುವಂತೆ ಇಲ್ಲೂ ಪ್ರೇಕ್ಷಕನ ಮನದಿಚ್ಛೆಯಂತೆ ಕಥೆ ಹೊರಳುವುದರಿಂದ ಪ್ರೇಕ್ಷಕ ಸಿನಿಮಾದಲ್ಲಿ ಹೆಚ್ಚೆಚ್ಚು ತಲ್ಲೀನನಾಗುತ್ತಾನೆ. ಈ ಸಿನಿಮಾದಲ್ಲಿ ಸುಮಾರು ಎಂಟು ಬಗೆಯ ಕ್ಲೈಮ್ಯಾಕ್ಸ್‌ಗಳು ಇದ್ದು, ಪ್ರೇಕ್ಷಕ ಒಂದೊಂದು ಬಾರಿ ಸಿನಿಮಾಗೆ ಹೋದಾಗಲೂ ಒಂದೊಂದು ಕ್ಲೈಮ್ಯಾಕ್ಸ್‌ ಕಾಣುವ ಅವಕಾಶ ಇರುತ್ತದೆ. ಯಾವ ಪ್ರೇಕ್ಷಕರೂ ವೋಟಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೆ ನಿರ್ದೇಶಕ ಟೋಬಿಯಸ್ ವೆಬರ್ ಅವರ ಮೂಲ ಕಥೆ ಆಧರಿಸಿ ಚಿತ್ರ ಸಾಗುತ್ತದೆ.

ಲೇಟ್‌ ಶಿಫ್ಟ್‌ ಸಿನಿಮಾ ನಿರ್ಮಾಪಕ ಚ್ಯಾಡಿ ಎಲ್. ಮಾಟರ್‌ ಪ್ರಕಾರ ಇದು ಕಂಪ್ಯೂಟರ್ ಗೇಮಿಂಗ್ ಮತ್ತು ಸಿನಿಮಾ ಮಾಧ್ಯಮಗಳ ಸಂಗಮ. ಹಾಗಂತ ಇದು ಭವಿಷ್ಯದ ಸಿನಿಮಾಗಳಿಗೆ ದಿಕ್ಸೂಚಿ ಎಂಬ ಜಂಭವನ್ನು ಅವರು ಪ್ರದರ್ಶಿಸುವುದಿಲ್ಲ. ಮುಖ್ಯವಾಹಿನಿಯ ಸಿನಿಮಾಗಳ ಜೊತೆ ಇದನ್ನು ಒಂದು ಪ್ರಯೋಗ, ಪ್ರಯತ್ನ ಎಂಬುದಾಗಿ ಮಾತ್ರ ನೋಡಬೇಕು ಎಂದು ಸ್ಪಷ್ಟಪಡಿಸುತ್ತಾರೆ.

ಈ ಸಿನಿಮಾದ ಕಥಾನಾಯಕ ಒಬ್ಬ ಬುದ್ಧಿವಂತ ಹುಡುಗ. ಆತ ಲಂಡನ್‌ನ ಒಂದು ಬಂಗಲೆಯ ದರೋಡೆಯಲ್ಲಿ ಅನಿರೀಕ್ಷಿತವಾಗಿ ಪಾಲ್ಗೊಳ್ಳುತ್ತಾನೆ. ಮುಂದೆ ಆತ ಈ ಕೃತ್ಯ ಎಸಗಿದ ಅಪರಾಧಿ ಎಂದು ತೋರಿಸುತ್ತ ಮಾಡುತ್ತ ಕಥೆ ಬೆಳೆಯುತ್ತದಾದರೂ, ಅವನನ್ನು ಅಮಾಯಕ ಎಂದು ಸಾಬೀತು ಮಾಡುವ ಶಕ್ತಿ ಪ್ರೇಕ್ಷಕನ ವೋಟುಗಳಿಗೆ ಇರುತ್ತದೆ. ಅನೇಕ ತಿರುವುಗಳನ್ನು ‍ಪಡೆಯುತ್ತ ಸಾಗುವ ಈ ರೋಮಾಂಚಕ ಕಥೆಯ ಓಟದ ರೂವಾರಿ ಪ್ರೇಕ್ಷಕ ಪ್ರಭು. ಪ್ರೇಕ್ಷಕನ ನಾಡಿಮಿಡಿತಕ್ಕೆ ಸ್ಪಂದಿಸುವ ಚಿತ್ರ ಮಾಡಲು ತಲೆಕೆಡಿಸಿಕೊಳ್ಳಬೇಕಿರುವ ನಿರ್ದೇಶಕರಿಗೆ ಈ ಪಾಲ್ಗೊಳ್ಳುವಿಕೆ ಸಿನಿಮಾ ಹೊಸ ಆಯಾಮ ತೋರುವುದರಲ್ಲಿ ಎರಡು ಮಾತಿಲ್ಲ. lateshift-movie.comನಲ್ಲಿ ಈ ಸಿನಿಮಾದ ಕುರಿತ ಇನ್ನಷ್ಟು ವಿಚಾರಗಳು ದೊರೆಯುತ್ತವೆ. 

ಮೇಲಿನದು ವಿನೂತನ ಸಿನಿಮಾ ತಯಾರಿಕೆಯ ಪ್ರಯತ್ನವಾದರೆ, ಕ್ರೀಡಾಂಗಣಗಳಲ್ಲಿ ಜರುಗುವ ರಸಸಂಜೆ, ಕ್ರೀಡೋತ್ಸವಗಳನ್ನು ಮನೆ-ಮನೆಗೆ ಲೈವ್ ಆಗಿ ತರುವ ತಂತ್ರಜ್ಞರ ಪ್ರಯತ್ನವೊಂದು ಈ ರೀತಿ ಇದೆ:

ಸಾಮಾಜಿಕ ವಿ.ಆರ್ (ಮಿಥ್ಯಾವಾಸ್ತವ):

ಕ್ರೀಡೆ, ಸಂಗೀತ ಸಂಜೆಗಳನ್ನು ಬೃಹತ್ ಸಭಾಂಗಣಗಳಲ್ಲಿ, ಕ್ರೀಡಾಂಗಣಗಳಲ್ಲಿ ಆಯೋಜಿಸುವುದು ಸಹಜ. ಆದರೆ ಕೆಲವು ಬಾರಿ ಎಲ್ಲರೂ ಆ ಕ್ರೀಡಾಂಗಣದಲ್ಲೇ ಕುಳಿತು ಕಾರ‍್ಯಕ್ರಮ ಆಸ್ವಾದಿಸಲು ಸಾಧ್ಯವಾಗುವುದಿಲ್ಲ. ಆದರೆ ಕ್ರೀಡಾಂಗಣದಲ್ಲಿ ಕುಳಿತು ಲೈವ್ ಕಾರ್ಯಕ್ರಮ ನೋಡುವ ಮಜಾ ಟಿ.ವಿ ಪರದೆ ಮೇಲೆ ನೋಡಿದಾಗ ಸಿಗುವುದಿಲ್ಲ. ಮನೆಯಲ್ಲಿಯೇ ಕುಳಿತು ಕ್ರೀಡಾಂಗಣದ ಲೈವ್ ಕಾರ‍್ಯಕ್ರಮವನ್ನೋ, ಪಂದ್ಯವನ್ನೋ ಆಸ್ವಾದಿಸುವುದಕ್ಕಾಗಿ (venues oculus) ಎಂಬ ಸೋಷಿಯಲ್ ವಿ.ಆರ್ (ಮಿಥ್ಯಾವಾಸ್ತವ) ಸಂಸ್ಥೆಯನ್ನು ಫೇಸ್‌ಬುಕ್ ಹುಟ್ಟುಹಾಕಿದೆ.

ಈ ವರ್ಷದ ಮೇ 30ರಂದು ಅಮೆರಿಕದ ಡೆನ್‌ವರ್ ನಗರದಲ್ಲಿ ರಸಸಂಜೆ ಕಾರ‍್ಯಕ್ರಮ ನಡೆಯಿತು. ಅಲ್ಲಿ ಒಂಬತ್ತು ಸಾವಿರ ಮಂದಿ ಸೇರಿದ್ದರು. ವಿ.ಆರ್. ಹೆಡ್‌ಸೆಟ್ ಧರಿಸಿ ಮನೆಯ ಬೆಡ್‌ರೂಂನಿಂದಲೇ ಈ ಕಾರ‍್ಯಕ್ರಮ ವೀಕ್ಷಿಸಲು ಬಯಸಿದ ಸಾವಿರಾರು ಮಂದಿಗೆ, ವೆನ್ಯುಸ್-ಆಕ್ಲೋಸ್ ಸೋಷಿಯಲ್ ವಿ.ಆರ್. ಮೂಲಕ ‘ಕ್ರೀಡಾಂಗಣದಲ್ಲಿ ಕುಳಿತು ಸಂಗೀತ ಸವಿದ ಅನುಭವ’ ನೀಡಿದ್ದು ಈಗ ಇತಿಹಾಸ. ಸಾಮಾಜಿಕ ಜಾಲತಾಣಗಳು ಬಳಕೆದಾರರ ಅನುಕೂಲ, ಅವಶ್ಯಕತೆ, ಅಭಿರುಚಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿವೆ ಎಂಬುದರ ಸುಳಿವು ಕೂಡ ಹೌದು ಇದು.

ಭಾರತದಲ್ಲಿ ಸಹ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಕ್ರೀಡಾಂಗಣಕ್ಕೆ ಹೋಗದೆಯೂ ನೂರಾರು ಜನ ಪ್ರೇಕ್ಷಕರ (ಅವತಾರ್) ಜೊತೆ ಕುಳಿತು ವೀಕ್ಷಣೆ ಮಾಡಿದ ಮಜಾ ಮನೆಯಿಂದಲೇ ಸಿಗುವ ಕನಸು ಬಹುಬೇಗ ಸಾಕಾರಗೊಳ್ಳಲಿದೆ. ಇಂತಹ ಮಿಥ್ಯಾವಾಸ್ತವದಲ್ಲಿ ಮಿಂದೇಳುವ ಅನುಭವ ನೀಡಲು ಸಾಮಾಜಿಕ ವಿ.ಆರ್.ಗಳು ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿವೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಿವೆ ಎಂದು ಭಾವಿಸೋಣ. ನೀವು, ನಿಮ್ಮ ಫೇಸ್‌ಬುಕ್ ಸ್ನೇಹಿತರೊಡಗೂಡಿ ಕ್ರೀಡಾಂಗಣಕ್ಕೆ ಹೋಗದೇ, ಟ್ರಾಫಿಕ್ ಜಂಜಾಟದ, ನೂಕುನುಗ್ಗಲಿನ ಕಿರಿಕಿರಿಯೂ ಇಲ್ಲದೆ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸುವ ಅನುಭವವನ್ನು ಮನೆಯ ಸೋಫಾದ ಮೇಲೆ ಕುಳಿತು ಪಡೆಯುವ ದಿನ ಸನಿಹದಲ್ಲೇ ಇದೆ. ನಿಮ್ಮಂತೆಯೇ ಮಿಥ್ಯಾವಾಸ್ತವ ಲೋಕದ ಮೂಲಕ ಪಂದ್ಯ ವೀಕ್ಷಿಸುತ್ತಿರುವ ಅಪರಿಚಿತರನ್ನು, ನಿಜ ಜೀವನದಲ್ಲಿ ಪರಿಚಯ ಮಾಡಿಕೊಂಡಂತೆ, ಪರಿಚಯಿಸಿಕೊಳ್ಳುವ ಅವಕಾಶವೂ ಇದೆ! ಪ್ರತ್ಯೇಕ ಆಸನದಲ್ಲಿ, ಏಕಾಂಗಿಯಾಗಿ ಪಂದ್ಯ ವೀಕ್ಷಿಸುವ ಅನುಭವಕ್ಕೆ ನಿಮ್ಮ ಮನಸ್ಸು ತವಕಿಸಿದರೆ, ಈ ಸಾಮಾಜಿಕ ವಿ.ಆರ್. ಮೂಲಕ ಪ್ರತ್ಯೇಕ ಬಾಕ್ಸ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸಿದ ಅನುಭವವನ್ನು ಸಹ ಪಡೆಯಬಹುದು.

ನಿಜ ಕ್ರೀಡಾಂಗಣದಲ್ಲಿ, ಪುಂಡರ ಪುಂಡಾಟ ನಿಯಂತ್ರಣಕ್ಕೆ ಪೋಲಿಸ್ ಕಣ್ಗಾವಲು ಇದ್ದಂತೆ, ಮಿಥ್ಯಾವಾಸ್ತವ ಲೋಕದಲ್ಲಿ ಸಹ ಫೇಸ್‌ಬುಕ್ ಮಾಡರೇಟರ್‌ಗಳು ಪುಂಡರ ಅನುಚಿತ ವರ್ತನೆಗಳಿಗೆ ಕಡಿವಾಣ ಹಾಕುತ್ತಾರೆ. ವೆನ್ಯುಸ್–ಆಕ್ಲೋಸ್ ಎಂಬ ಫೇಸ್‌ಬುಕ್‌ನ ಜೋಡಿ ಮುಂದಿನ ದಿನಗಳಲ್ಲಿ ನಮ್ಮನ್ನು ಮನರಂಜನೆಯ ಅವಿಭಾಜ್ಯ ಅಂಗವಾಗಿ ಪರಿಗಣಿಸಿ, ಅದರಲ್ಲೇ ಮಿಂದೇಳುವ ಅನುಭವ ನೀಡುವದರ ಬಗ್ಗೆ ಯಾವ ಸಂಶಯವೂ ಬೇಡ.

ಬಳಕೆದಾರನೇ ಸರದಾರ ಎಂಬ ತತ್ವವನ್ನು ಪಾಲಿಸಲು ಮನರಂಜನೆ ಮಾಧ್ಯಮಗಳು ತವಕದಿಂದಿರುವ ಫಲವಾಗಿ, ಮುಂದಿನ ದಿನಗಳಲ್ಲಿ ನಮ್ಮ ಮನಸ್ಸಿನ ಇಚ್ಛೆಗೆ ತಕ್ಕಂತಹ ಕಾರ‍್ಯಕ್ರಮಗಳು ಬಿತ್ತರವಾಗುವುದಲ್ಲದೆ, ನಾವೇ ಸಿನಿಮಾ ಕಥೆಗಾರರೋ ಅಥವಾ ಅದರಲ್ಲಿನ ಒಂದು ಪಾತ್ರವೋ ಅಥವಾ ಮುಖ್ಯ-ಪಾತ್ರಧಾರಿಯೋ ಆಗುವ ಸಿನಿಮಾಗಳು ನಮ್ಮ ಸಾಮಾಜಿಕ ಜಾಲತಾಣಗಳ ಕೊಂಡಿಗಳ ಮೂಲಕ ಮೂಡಿಬಂದರೂ ಆಶ್ಚರ್ಯವಿಲ್ಲ.

ಈ ರೀತಿ ಬಳಕೆದಾರನ ಅಭಿರುಚಿ, ಅವಶ್ಯಕತೆ, ಅನುಕೂಲಗಳನ್ನು ಪೂರೈಸುವುದರ (user preference) ಉಗಮ, ರೆಕಮೆಂಡೇಷನ್ ವ್ಯವಸ್ಥೆ ಎಂಬ ತಂತ್ರಾಂಶದ ಮೂಲಕ ಮೊದಲು ಪ್ರಾರಂಭವಾಯಿತು. ಈ ರೆಕಮೆಂಡೇಷನ್ ವಿಧಾನದಲ್ಲಿ ನವನವೀನವಾದುದು ಏನೂ ಇಲ್ಲ. ನಮ್ಮ ಪುಟ್ಟ ಪಟ್ಟಣದಲ್ಲಿನ ವ್ಯಾಪಾರಿಗಳು ಅನಾದಿ ಕಾಲದಿಂದಲೂ ಬಳಸುತ್ತಾ ಬಂದಿದ್ದ ವಿಧಾನಗಳೇ ಇಲ್ಲೂ ಬಳಕೆಯಾಗಿರುವುದು. ಉದಾಹರಣೆಗೆ, ಹಿಂದಿನ ಕಾಲದಲ್ಲಿ ನೀವು ಪದೇ ಪದೇ ಭೇಟಿ ನೀಡುತ್ತಿದ್ದ ಸೀರೆ ಅಂಗಡಿಯವರೋ, ದಿನನಿತ್ಯ ಭೇಟಿ ಕೊಡುತ್ತಿದ್ದ ಹೋಟೆಲ್ ಅಥವಾ ಬಾರ್‌ನ ಮಾಣಿಯೋ, ನಿಮ್ಮ ಆಯ್ಕೆಯ ವಿಧಾನ ಅಭ್ಯಸಿಸಿ, ನಿಮಗೆ ಬೇಕಾದ ಸೀರೆಯನ್ನೋ, ತಿಂಡಿಯನ್ನೋ, ನಿಮ್ಮ ಬ್ರ್ಯಾಂಡಿನ ಡ್ರಿಂಕ್ಸನ್ನೋ ಕೊಡುತ್ತಿದ್ದರಲ್ಲವೇ? ಆದರೆ ಇಂದು ಅಮೆಜಾನ್ ಎಂಬ ದೈತ್ಯ ಆನ್‌ಲೈನ್ ಮಳಿಗೆಯಲ್ಲಿ ಎರಡು ದಶಲಕ್ಷ ಪುಸ್ತಕಗಳ ಸರಕಿರುವಾಗ, ನೆಟ್‌ಫ್ಲಿಕ್ಸ್ ಮತ್ತು ಐ-ಟ್ಯೂನ್ಸ್‌ನಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಸಿನಿಮಾಗಳು ಮತ್ತು ಹಾಡುಗಳು ಇರುವಾಗ, ಯಾವ ಗ್ರಾಹಕನಿಗೆ ಯಾವ ಪುಸ್ತಕವನ್ನು, ಚಲನಚಿತ್ರವನ್ನು, ಹಾಡನ್ನು ಬಳಸುವಂತೆ ಸಲಹೆ ಮಾಡಬೇಕು ಎಂಬುದು ಕಷ್ಟಸಾಧ್ಯ.

ಲಕ್ಷಾಂತರ ಗ್ರಾಹಕರ ಅಭಿರುಚಿಯನ್ನು, ಮಾರಾಟ ಕ್ಷೇತ್ರದಲ್ಲಿರುವ ಬೆರಳೆಣಿಕೆಯಷ್ಟು ಮಂದಿ ಗುರುತಿಸಿ ಇಟ್ಟುಕೊಳ್ಳುವುದು ಅಸಾಧ್ಯವಾದ ಕಾರಣ ನಾವು ಮಾಡುವ ಪ್ರತಿ ಆನ್‌ಲೈನ್ ಖರೀದಿಯ ವಿವರವನ್ನು ವಿಶ್ಲೇಷಿಸುವ ತಂತ್ರಾಂಶ ಬಳಕೆಗೆ ಬಂತು. ಇದನ್ನು ಬಳಸಿ ಯಾವ ಗ್ರಾಹಕನಿಗೆ ಯಾವ ವಸ್ತುವಿನಲ್ಲಿ, ವಿನ್ಯಾಸದಲ್ಲಿ, ಬಣ್ಣದಲ್ಲಿ ಆಸಕ್ತಿ ಇದೆ ಎಂಬ ನಿರ್ಧಾರಕ್ಕೆ ಬರಲು ಬಳಸುವ ತಂತ್ರಾಂಶವೇ ರೆಕಮೆಂಡೇಷನ್ ವಿಧಾನ.

ಇಂದು ಈ ರೆಕಮೆಂಡೇಷನ್ ವಿಧಾನ, ವ್ಯಾಪಾರಿ ಸಂಸ್ಥೆಗಳ ಲಾಭಗಳಿಕೆಗಾಗಿ ಮಾತ್ರವೇ ಬಳಕೆಯಾಗದೆ, ರಾಜಕಾರಣದಲ್ಲಿ ಯಾವ ಪ್ರದೇಶದಲ್ಲಿ ತಮ್ಮ ಪಕ್ಷ ಸಬಲವಾಗಿದೆ ಎಲ್ಲಿ ದುರ್ಬಲವಾಗಿದೆ, ಸಶಕ್ತವಾಗಲು ಯಾವ ವಿಧಾನ ಅನುಸರಿಸಬೇಕು ಮುಂತಾದ ವಿಚಾರಗಳ ಬಗ್ಗೆ ಸಹ ಬೆಳಕು ಚೆಲ್ಲಬಹುದು. ಅದೇ ರೀತಿ, ಸಮಾಜಘಾತುಕ ಶಕ್ತಿಗಳ ಜಾಡು ಹಿಡಿಯಲೂ ಸಹ ರೆಕಮೆಂಡೇಷನ್ ವಿಧಾನ ಪೋಲಿಸ್ ವ್ಯವಸ್ಥೆಗೆ ಸಹಾಯಕವಾಗುತ್ತಿದೆ.

ಸೃಷ್ಟಿಯಲ್ಲಿ ಪ್ರತಿ ಜೀವಿಯೂ ಇನ್ನೊಂದಕ್ಕಿಂತ ಭಿನ್ನ. ಈ ಸಾರ್ವಕಾಲಿಕ ಸತ್ಯವನ್ನು ಒಪ್ಪಿಕೊಂಡೂ, ಪ್ರತಿ ವ್ಯಕ್ತಿಯ ಅವಶ್ಯಕತೆಯನ್ನು, ಅಭಿರುಚಿಯನ್ನು ತಿಳಿದುಕೊಳ್ಳುವ ಮತ್ತು ಸ್ಪಂದಿಸುವ ತಾಂತ್ರಿಕ ಪ್ರಯತ್ನಕ್ಕೆ, ಅವುಗಳ ಹಿಂದೆ ಇರುವ ತಂತ್ರಜ್ಞರ ನೈಪುಣ್ಯಕ್ಕೆ ಒಂದು ಸಲಾಂ ಬೇಡವೇ?

ಬರಹ ಇಷ್ಟವಾಯಿತೆ?

 • 27

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !