ಭಾನುವಾರ, ಡಿಸೆಂಬರ್ 15, 2019
24 °C
ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದ ಕಲಬುರ್ಗಿಯ ಚಲನಚಿತ್ರ ನಿರ್ಮಾಪಕಿ, ಉದ್ಯಮಿ ಶೃತಿ ಕುಲಕರ್ಣಿ

‘ಸಿನಿಮಾದಲ್ಲಿನ ಸವಾಲನ್ನು ಸ್ತ್ರೀ ಮೆಟ್ಟಿ ನಿಲ್ಲಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ‘ಸಿನಿಮಾ ಕ್ಷೇತ್ರ ಕೇವಲ ಬಣ್ಣದ ಲೋಕವಲ್ಲ. ಅದು ಮಹಿಳೆಯರ ಪಾಲಿಗೆ ಅನೇಕ ಸವಾಲು ಒಡ್ಡುತ್ತದೆ. ಇವನ್ನು ಎದುರಿಸುವ ಸಾಮರ್ಥ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು’ ಎಂದು ಕಲಬುರ್ಗಿಯ ಚಲನಚಿತ್ರ ನಿರ್ಮಾಪಕಿ, ಉದ್ಯಮಿ ಶೃತಿ ಕುಲಕರ್ಣಿ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಇಲ್ಲಿನ ಮಹಿಳಾ ವಿ.ವಿ.ಯ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಮಂಗಳವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ವಿಭಾಗ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಸಮಾಜಕಾರ್ಯ ಅಧ್ಯಯನ ವಿಭಾಗ ಮತ್ತು ಬೆಂಗಳೂರಿನ ಅವಳ ಹೆಜ್ಜೆ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಿರುಚಿತ್ರ ಪ್ರದರ್ಶನ ಹಾಗೂ ಸಂವಾದ ಉದ್ಘಾಟಿಸಿದ ಅವರು ಮಾತನಾಡಿದರು.

‘ಒಂದು ಸಿನಿಮಾ ನಿರ್ಮಿಸುವುದು ಸುಲಭದ ಮಾತಲ್ಲ. ಅದರ ಹಿಂದೆ ಕಠಿಣ ಪರಿಶ್ರಮ ಹಾಗೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಿನಿಮಾ ಕ್ಷೇತ್ರ ಎಂದರೆ ಬರೀ ನಟ-ನಟಿಯರಾಗುವುದಲ್ಲ. ತೆರೆಯ ಮೇಲಿನ ಕೆಲಸಕ್ಕಿಂತ, ತೆರೆಯ ಹಿಂದಿನ ಪರಿಶ್ರಮ ಬಹಳ ಮುಖ್ಯವಾಗಿರುತ್ತದೆ. ಅಷ್ಟೇ ಅಲ್ಲದೇ ತಂತ್ರಜ್ಞರ ಸೃಜನಶೀಲತೆ ಕಾರಣ’ ಎಂದರು.

ಮಹಿಳಾ ವಿ.ವಿ.ಯ ಕುಲಪತಿ ಪ್ರೊ.ಸಬಿಹಾ ಮಾತನಾಡಿ, ‘ಸಿನಿಮಾಗಳು, ಕಿರುಚಿತ್ರಗಳನ್ನು ಕೇವಲ ಮನರಂಜನೆ ದೃಷ್ಟಿಕೋನದಿಂದ ನೋಡದೆ, ಮಹಿಳಾಪರ ದೃಷ್ಟಿಕೋನವನ್ನಿಟ್ಟುಕೊಂಡು ವಿಶ್ಲೇಷಣೆ ಮಾಡಬೇಕು. ಅಂದಾಗ ಪಾತ್ರಗಳ ಪರಿಚಯ ಮತ್ತು ಉದ್ದೇಶ ಅರ್ಥವಾಗುತ್ತದೆ’ ಎಂದರು.

ಸುಗಂಧಿ ಗದಾಧರ ನಿರ್ದೇಶನದ ದರೋಜಿ, ಐಶಾನಿ ಶೆಟ್ಟಿ ನಿರ್ದೇಶಿಸಿದ ಕಾಜಿ, ಮೇದಿನಿ ಕೆಳಮನೆ ನಿರ್ದೇಶಿಸಿದ ದಾಳಿ, ಕ್ಷೇಮಾ ಬಿ.ಕೆ. ನಿರ್ದೇಶಿಸಿದ ಅಪ್ರಾಪ್ತ, ಮಹಿಮಾ ಗೌಡ, ಅನುಶ್ರೀ ಭಾರದ್ವಾಜ, ಹರಿಪ್ರಿಯಾ ಕೆ. ರಾವ್, ಶ್ರದ್ಧಾ ಸುಮನ್ ನಿರ್ಮಿಸಿದ ಬೆಳ್ಳಿ ತಂಬಿಗೆ ಕಿರು ಚಿತ್ರಗಳನ್ನು ಪ್ರದರ್ಶಿಸಲಾಯಿತು.

ಕಿರು ಚಿತ್ರಗಳ ಪ್ರದರ್ಶನದ ನಂತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಅವಳ ಹೆಜ್ಜೆ ಸಂಸ್ಥಾಪಕಿ ಶಾಂತಲಾ ದಾಮ್ಲೆ, ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥೆ ಪ್ರೊ.ಆರ್.ಸುನಂದಮ್ಮ, ಮಹಿಳಾಪರ ಹೋರಾಟಗಾರ್ತಿ ದು.ಸರಸ್ವತಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದ ಸಂಯೋಜಕಿ ಉಷಾ ಸಂಪತ್‌ಕುಮಾರ್‌, ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎ.ಖಾಜಿ, ವಿವಿಧ ನಿಖಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಮಹಿಳಾ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಪವಿತ್ರಾ ಪ್ರಾರ್ಥಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸುವರ್ಣಾ ಕಂಬಿ ನಿರೂಪಿಸಿ, ವಂದಿಸಿದರು.

ಪ್ರತಿಕ್ರಿಯಿಸಿ (+)