ಸಿಐಎಸ್‌ಎಫ್ ಬಲೆಗೆ ಬಿದ್ದ ಸ್ಮಗ್ಲರ್‌ಗಳು

7
ವಿಮಾನದಲ್ಲಿ ಸಹಚರನಿಗೆ ಬ್ಯಾಗ್ ಹಸ್ತಾಂತರಿಸಿ ಪೊಲೀಸರಿಗೆ ದೂರು ಕೊಟ್ಟ

ಸಿಐಎಸ್‌ಎಫ್ ಬಲೆಗೆ ಬಿದ್ದ ಸ್ಮಗ್ಲರ್‌ಗಳು

Published:
Updated:

ಬೆಂಗಳೂರು: ಬ್ಯಾಂಕಾಕ್‌ನಿಂದ ಅಕ್ರಮವಾಗಿ ಚಿನ್ನದ ಗಟ್ಟಿಗಳನ್ನು ಸಾಗಣೆ ಮಾಡುತ್ತಿದ್ದ ಸ್ಮಗ್ಲರ್‌ಗಳು, ವಿಮಾನದಲ್ಲಿ ಬ್ಯಾಗ್ ಕಳವಾದ ಸಂಬಂಧ ಪೊಲೀಸರಿಗೆ ಹಾಗೂ ಸಿಐಎಸ್‌ಎಫ್ ಅಧಿಕಾರಿಗಳಿಗೆ ದೂರು ಕೊಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ಭಾನುವಾರ ಮಧ್ಯಾಹ್ನ ಭುವನೇಶ್ವರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಎಲ್‌) ಬಂದಿಳಿದ ಮೈಸೂರಿನ ಹಂಜಾರಿಮಾಲ್ ಜೈನ್, ಜಿದ್ದಾ ಮೊಹಮದ್ ಹಾಗೂ ಕಾಸಿಫ್ ಖಾನ್ ಎಂಬುವರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದೋಚಿದವನೇ ದೂರು ಕೊಟ್ಟ!

ಹಂಜಾರಿಮಾಲ್ ಹಾಗೂ ಜಿದ್ದಾ ಮೈಸೂರಿನ ಸಿದ್ದಾರ್ಥನಗರದವರು. ಇಬ್ಬರೂ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಚಿನ್ನ ಸಾಗಣೆ ದಂಧೆಯಲ್ಲಿ ತೊಡಗಿದ್ದರು.

ಗೆಳೆಯನಿಗೆ ಗೊತ್ತಾಗದಂತೆ ಚಿನ್ನದ ಗಟ್ಟಿಗಳನ್ನು ದೋಚಲು ಸಂಚು ರೂಪಿಸಿದ ಜಿದ್ದಾ, ಅದಕ್ಕೆ ಆಪ್ತ ಸ್ನೇಹಿತ ಕಾಸಿಫ್‌ನ ನೆರವು ಕೇಳಿದ್ದ. ಹಣದಾಸೆಗೆ ಆತನೂ ನೆರವಾಗುವ ಭರವಸೆ ನೀಡಿದ್ದ.

ಚಿನ್ನದ ಗಟ್ಟಿಗಳನ್ನು ತರಲು ಹಂಜಾರಿಮಾಲ್ ಜತೆ ಶನಿವಾರ ಬ್ಯಾಂಕಾಕ್‌ಗೆ ತೆರಳಿದ್ದ ಜಿದ್ದಾ, ಭುವನೇಶ್ವರದಿಂದ ಬೆಂಗಳೂರಿಗೆ ಕಾಸಿಫ್‌ಗೂ ಟಿಕೆಟ್ ಕಾಯ್ದಿರಿಸಿದ್ದ.

ಬ್ಯಾಂಕಾಕ್‌ನಲ್ಲಿ ಸ್ಮಗ್ಲರ್‌ನಿಂದ ಚಿನ್ನ ಪಡೆದುಕೊಂಡು ಭಾನುವಾರ ಬೆಳಿಗ್ಗೆ ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರಿಬ್ಬರೂ, ನಂತರ ಬೆಂಗಳೂರಿಗೆ ಹೊರಡಲು ಇನ್ನೊಂದು ವಿಮಾನ ಏರಿದ್ದರು. ಅದೇ ವಿಮಾನದಲ್ಲಿ ಕಾಸಿಫ್ ಸಹ ಇದ್ದ.

ಮಧ್ಯಾಹ್ನ 12 ಗಂಟೆಗೆ ಕೆಐಎಎಲ್‌ಗೆ ಬಂದಿಳಿದ ಬಳಿಕ ಜಿದ್ದಾ ಆ ಬ್ಯಾಗನ್ನು ಕಾಸಿಫ್‌ಗೆ ಕೊಟ್ಟಿದ್ದ. ಆ ನಂತರ, ‘ಬ್ಯಾಗ್ ಎಲ್ಲಿ. ನಿಮ್ಮ ಬಳಿಯೇ ಇತ್ತಲ್ವ’ ಎಂದು ಹಂಜಾರಿಮಾಲ್‌ನನ್ನೇ ಪ್ರಶ್ನಿಸಿದ್ದ. ಇದರಿಂದ ಗೊಂದಲಕ್ಕೀಡಾದ ಆತ, ಸುತ್ತಮುತ್ತ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ.

ಕೊನೆಗೆ ಜಿದ್ದಾನೇ ಕೆಐಎಎಲ್ ಠಾಣೆಗೆ ತೆರಳಿ ‘ನಮ್ಮ ಬ್ಯಾಗ್ ಕಳುವಾಗಿದೆ’ ಎಂದು ದೂರು ಕೊಟ್ಟಿದ್ದ.

ಇತ್ತ ಸಿಐಎಸ್‌ಎಫ್‌ ನಿಯಂತ್ರಣ ಕೊಠಡಿ ಕಡೆ ಹೋದ ಹಂಜಾರಿಮಾಲ್, ‘ಬ್ಯಾಗ್ ಕಳುವಾಗಿದೆ. ಅದರಲ್ಲಿ ದುಬಾರಿ ಮೌಲ್ಯದ ಮೊಬೈಲ್‌ಗಳು, ನಗದು ಹಾಗೂ ಮಹತ್ವದ ದಾಖಲೆಗಳಿವೆ. ದಯವಿಟ್ಟು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿ ನೋಡಿ’ ಎಂದು ಅವನು ಮನವಿ ಮಾಡಿದ್ದ.

ಕ್ಯಾಮೆರಾ ಪರಿಶೀಲಿಸಿದಾಗ ಜಿದ್ದಾನೇ ಆ ಬ್ಯಾಗನ್ನು ಬೇರೊಬ್ಬ ವ್ಯಕ್ತಿಗೆ ಹಸ್ತಾಂತರಿಸುವುದು ಗೊತ್ತಾಯಿತು. ಆಗ ಸಿಐಎಸ್‌ಎಫ್‌ ಎಸ್‌ಐ ಸುಧೀರ್ ಕುಮಾರ್ ನೇತೃತ್ವದ ತಂಡ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಇಡೀ ರಹಸ್ಯ ಬಯಲಾಗಿದೆ.
*

₹ 12.6 ಲಕ್ಷ ಮೌಲ್ಯದ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಿದ್ದೇವೆ. ಹಂಜಾರಿಮಾಲ್‌ ಕಳೆದ ಆರು ತಿಂಗಳಲ್ಲಿ 28 ಸಲ ಬ್ಯಾಂಕಾಕ್‌ಗೆ ಹೋಗಿ ಬಂದಿದ್ದಾನೆ.
-ಹೇಮೇಂದ್ರ ಸಿಂಗ್, ಎಐಜಿಪಿ, ಸಿಐಎಸ್‌ಎಫ್

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !