ಬುಧವಾರ, ಅಕ್ಟೋಬರ್ 16, 2019
22 °C

ನಗರದ ಸ್ವಚ್ಛತೆಗಾಗಿ ಪ್ಲಾಗ್‌ ರನ್‌

Published:
Updated:

ಬೆಂಗಳೂರು: ಗಾಂಧಿ ಜಯಂತಿಯ ಅಂಗವಾಗಿ ಬಿಬಿಎಂಪಿಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಇದೇ ಬುಧವಾರ ಸಾಮೂಹಿಕ ಸ್ವಚ್ಛತಾ ಅಭಿಯಾನ ಹಾಗೂ ನಗರದ 50ಕ್ಕೂ ಹೆಚ್ಚು ಕಡೆಗಳಲ್ಲಿ ಪ್ಲಾಗ್‌ ರನ್‌ ಹಮ್ಮಿಕೊಂಡಿದೆ. 

‘ಇಂಡಿಯಾ ಪ್ಲಾಗ್‌ ರನ್‌’ ಹಾಗೂ ‘ಗೋ ನೇಟಿವ್‌’ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ 7 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಓಡುತ್ತಾ ಪ್ಲಾಸ್ಟಿಕ್‌ ಕಸ ಹೆಕ್ಕಲಿದ್ದಾರೆ. 

ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರು ‘ಸಾಮೂಹಿಕ ಸ್ವಚ್ಛತಾ ಅಭಿಯಾನ’ಕ್ಕೆ ಎಚ್‌.ಎಂ.ಟಿ ಮುಖ್ಯರಸ್ತೆಯ ಜಯರಾಮ್ ಕಾಲೋನಿ ಬಳಿ ಬೆಳಿಗ್ಗೆ 7.15ಕ್ಕೆ ಹಾಗೂ ‘ಪ್ಲಾಗ್ ರನ್’ಗೆ ಮತ್ತಿ ಕೆರೆ ವಾರ್ಡ್‌ನ 5ನೇ ಮುಖ್ಯರಸ್ತೆ ಬಳಿಯ ಮೌನಾ ಡ್ರೀಮ್ ಆರ್ಕೆಡ್ ಬಳಿ 7.30ಕ್ಕೆ ಚಾಲನೆ ನೀಡಲಿದ್ದಾರೆ.

ಮೇಯರ್‌ ಎಂ.ಗೌತಮ್‌ ಕುಮಾರ್, ಉಪಮೇಯರ್ ಸಿ.ಆರ್‌.ರಾಮಮೊಹನ ರಾಜು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಕರ್ನಾಟಕ ರಾಜ್ಯಮಟ್ಟದ ಕಸ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಹಾಗೂ ಪಾಲಿಕೆಯ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್‌ ಭಾಗವಹಿಸಲಿದ್ದಾರೆ.

13 ವರ್ಷ ಮೇಲ್ಪಟ್ಟವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. 13 ವರ್ಷಕ್ಕಿಂತ ಕೆಳಗಿನವರು ಕುಟುಂಬದ ಸದಸ್ಯರ ಜೊತೆ ಪಾಲ್ಗೊಳ್ಳಬಹುದು. ನೋಂದಣಿ ಮಾಡಿದ ಸ್ವಯಂಸೇವಕರಿಗೆ ನಿಲುವಂಗಿ, ಕೈಗವಸು ಹಾಗೂ ಚೀಲವನ್ನು ಬಿಬಿಎಂಪಿ ಒದಗಿಸಲಿದೆ. ತುರ್ತು ಚಿಕಿತ್ಸೆಗೂ ವ್ಯವಸ್ಥೆ ಕಲ್ಪಿಸಲಾಗುತ್ತದೆ.

2018ರ ಅ.2ರಂದು ನಗರದಲ್ಲಿ ನಡೆದಿದ್ದ ಪ್ಲಾಗ್‌ ರನ್‌ನಲ್ಲಿ 33.4 ಟನ್‌ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲಾಗಿತ್ತು. ಈ ಕಾರ್ಯಕ್ರಮ ಗಿನ್ನೆಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ನಲ್ಲಿ ದಾಖಲಾಗಿತ್ತು.

 

Post Comments (+)