ಐಸಿಡಿಎಸ್‌ ಖಾಸಗೀಕರಣಕ್ಕೆ ತೀವ್ರ ವಿರೋಧ

7
ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಟನೆ

ಐಸಿಡಿಎಸ್‌ ಖಾಸಗೀಕರಣಕ್ಕೆ ತೀವ್ರ ವಿರೋಧ

Published:
Updated:
ಜಿಲ್ಲಾಡಳಿತ ಭವನದ ಮುಂದೆ ಧರಣಿ ಕುಳಿತ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು

ಚಾಮರಾಜನಗರ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಖಾಸಗೀಕರಣ ಮಾಡುವುದು ಬೇಡ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಘಟಕವು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನಾ ರ‍್ಯಾಲಿ ನಡೆಸಿತು.

ಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಸಂಘದ ಕಾರ್ಯಕರ್ತರು, ಭುವನೇಶ್ವರಿ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದರು. ನಂತರ ಭವನದ ಉದ್ಯಾನದಲ್ಲಿ ಧರಣಿ ಕುಳಿತು ಘೋಷಣೆಗಳನ್ನು ಕೂಗಿದರು. 

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.  ಸರ್ಕಾರವು ಐಸಿಡಿಎಸ್‌ ಅ‌ನ್ನು ಖಾಸಗೀಕರಣಗೊಳಿಸಿದರೆ ಅಂಗನವಾಡಿ ನೌಕರರು ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಸರ್ಕಾರದ ನಿರ್ಧಾರದಿಂದ 45 ವರ್ಷಗಳಿಂದ ಸೇವೆಯಲ್ಲಿ ನಿರತರಾಗಿರುವ ಕಾರ್ಯಕರ್ತೆಯರಿಗೆ ಸಮಸ್ಯೆಯಾಗಲಿದೆ. ಈ ಯೋಜನೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಕಾಯಂ ಕಾರ್ಯಕ್ರಮವಾಗಿ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಅಕಾಲಿಕ ಮರಣ ತಪ್ಪಿಸುವ ಸಲುವಾಗಿ ಗರ್ಭಿಣಿ, ಬಾಣಂತಿಯರ ಸೇವೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಬಳಸಿಕೊಳ್ಳುತ್ತಾರೆ. ಆದರೆ, ಸರ್ಕಾರದ ಭವಿಷ್ಯ ನಿಧಿ ಸೇರಿದಂತೆ ಯಾವ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಗೌರವಧನವನ್ನೂ ಹೆಚ್ಚಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐಸಿಡಿಎಸ್‌ ಯೋಜನೆಯಡಿ ಸರ್ಕಾರದ ಎಲ್ಲ ರೀತಿಯ ಕಾರ್ಯಗಳನ್ನು ನೌಕರರು ನಿರ್ವಹಿಸುತ್ತಾರೆ. ಈ ವೇಳೆ, ಸಣ್ಣಪುಟ್ಟ ತಪ್ಪುಗಳು ನಡೆದಾಗ ಏಕಾಏಕಿ ಅವಮಾನಿಸುವ ಜತೆಗೆ ಕೆಲಸದಿಂದ ತೆಗೆಯುವ ಪ್ರಕ್ರಿಯೆಗಳು ನಡೆಯುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು‌.

ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ತೆರೆಯಬೇಕು. ಪ್ರತಿ ತಿಂಗಳು ಗೌರವಧನ ಪಾವತಿಯಾಗಬೇಕು. ಕೇಂದ್ರ ಸರ್ಕಾರ ಈ ಹಿಂದೆ ನಿಗದಿಪಡಿಸಿದ ಶೇ 45ರಷ್ಟು ಮೀಸಲಾತಿ ಆಧಾರದಡಿ ಲೋಕಸೇವಾ ಆಯೋಗದ ಮೂಲಕ ಮೇಲ್ವಿಚಾರಕಿಯರ ಹುದ್ದೆಗೆ ಭರ್ತಿ ಮಾಡಿಕೊಳ್ಳುವ ರಾಜ್ಯದ ತೀರ್ಮಾನದಲ್ಲಿ ಅಂಗನವಾಡಿ ನೌಕರರಿಗೆ ಅನ್ಯಾಯವಾಗಿದೆ. ಕೆಪಿಎಸ್‌ಸಿ ಆಯ್ಕೆ ಮೂಲಕ ಮೇಲ್ವಿಚಾರಕಿಯರ ಆಯ್ಕೆಯಲ್ಲಿ ಶೇ 45ರಷ್ಟು ಅಂಗನವಾಡಿ ನೌಕರರನ್ನೇ ಭರ್ತಿ ಮಾಡಿಕೊಳ್ಳಬೇಕು. ಮೇಲ್ವಿಚಾರಕಿ ಹುದ್ದೆಗೆ ಅಂಗನವಾಡಿ ನೌಕರರಿಗೆ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಅಂಗನವಾಡಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಸುಜಾತಾ, ಖಚಾಂಚಿ ಆರ್‌.ಜಿ. ರೇವಮ್ಮ, ಪ್ರಧಾನ ಕಾರ್ಯದರ್ಶಿ ಬಿ.ಪುಟ್ಟಬಸಮ್ಮ, ಗುರುಲಿಂಗಮ್ಮ, ರಾಜಮ್ಮ, ಎ.ನಾಗಮಣಿ, ಉಮಾದೇವಿ, ಅನಿತಾ, ಸೌಭಾಗ್ಯಾ, ಗಿರಿಜಾ, ಆರ್.ಶಾಂತಮ್ಮ ಹಾಗೂ ಜಿಲ್ಲೆಯ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಸಂಘದ ಬೇಡಿಕೆಗಳೇನು?

*ಹೊಸ ಅಂಗನವಾಡಿ ಕೇಂದ್ರ ಬಂದಾಗಲೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಆದ್ಯತೆ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಸಂಪೂರ್ಣ ಅಂಗನವಾಡಿ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಅವುಗಳಿಗೆ ಕಡ್ಡಾಯವಾಗಿ ಸಹಾಯಕಿಯರ ನೇಮಕ ಮಾಡಬೇಕು.
*ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವಷ್ಟು ಗೌರವಧನವನ್ನು ಮಿನಿ ಅಂಗನವಾಡಿ ಕಾರ್ಯಕರ್ತರಿಗೂ ನೀಡಬೇಕು.
*ಹೆರಿಗೆ ರಜೆ ಹಾಗೂ ಕಾಯಿಲೆ ಬಂದಾಗ ಪರ್ಯಾಯ ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕು. ವರ್ಗಾವಣೆ, ಮುಂಬಡ್ತಿ ನೀಡಬೇಕು.
 * ಸೇವಾ ಜ್ಯೇಷ್ಠತೆ ಆಧಾರದಡಿ ಕನಿಷ್ಠ ವೇತನ ಜಾರಿ ಮಾಡಬೇಕು.
*45ನೇ ಭಾರತ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ₹18 ಸಾವಿರ ಕನಿಷ್ಠ ವೇತನ ನೀಡಬೇಕು. 
* ಕೇಂದ್ರ ಸರ್ಕಾರದ ಮಾತೃವಂದನಾ ಕಾರ್ಯಕ್ರಮದ ಒಂದು ಕಂತಿಗೆ ₹ 300 ನಿಗದಿಪಡಿಸಬೇಕು.
*ಅಂಗನವಾಡಿ ಸಹಾಯಕಿ ಕಾರ್ಯಕರ್ತೆಯರಿಗೆ ಮುಂಬಡ್ತಿ ಪಡೆಯಲು ಇರುವಂತಹ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಬೇಕು.
*ನಿವೃತ್ತಿ ಸೌಲಭ್ಯ ಪಡೆಯಲು ಪ್ಯಾನ್‌ಕಾರ್ಡ್‌ ವ್ಯವಸ್ಥೆ ಕಲ್ಪಿಸಬೇಕು. 
*ಖಾಲಿ ಇರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು.
*ಕಾರ್ಯಕರ್ತೆಯರಿಗೆ ಸೇವಾ ನಿಯಮಾವಳಿ ರಚಿಸಬೇಕು.
*ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಸ್‌ ನೀಡಬೇಕು.
*ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸೂಚನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !