‘ಸಾಮಾನ್ಯ’ ಸ್ಥಾನ ಅಲ್ಪಸಂಖ್ಯಾತ ಅಭ್ಯರ್ಥಿ ಪಾಲು

7
ನಗರಸಭೆ ಅಧ್ಯಕ್ಷರಾಗಿ ಷಹಾಜಾನ್‌ ಮುನಾವರ್‌ ಖಾನ್‌ ಆಯ್ಕೆ, ಲೋಕಸಭೆ ಚುನಾವಣೆ ಮೇಲೆ ಕಣ್ಣು

‘ಸಾಮಾನ್ಯ’ ಸ್ಥಾನ ಅಲ್ಪಸಂಖ್ಯಾತ ಅಭ್ಯರ್ಥಿ ಪಾಲು

Published:
Updated:
ಮಂಡ್ಯ ನಗರಸಭೆ ನೂತನ ಅಧ್ಯಕ್ಷರಾಗಿ ಸೋಮವಾರ ಆಯ್ಕೆಯಾದ ಷಹಾಜಾನ್‌ ಮುನಾವರ್‌ ಖಾನ್‌ ಅವರಿಗೆ ಕುಟುಂಬ ಸದಸ್ಯರು ಸಹಿಸಿ ತಿನ್ನಿಸಿದರು

ಮಂಡ್ಯ: ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದ ನಗರಸಭೆ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತ ಮಹಿಳೆಯ ಪಾಲಾಯಿತು. 66 ದಿನ ಉಳಿದಿರುವ ನಗರಸಭೆ ಅವಧಿಗೆ ಸೋಮವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 26ನೇ ವಾರ್ಡ್‌ ಸದಸ್ಯೆ ಷಹಾಜಾನ್‌ ಮುನಾವರ್‌ ಖಾನ್‌ ಜಯಗಳಿಸಿದರು.

ಹೊಸಹಳ್ಳಿ ಬೋರೇಗೌಡ ನಿಧನರಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಉಪ ವಿಭಾಗಾಧಿಕಾರಿ ಎಂ.ಆರ್‌.ರಾಜೇಶ್‌ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಒಟ್ಟು ಆರು ಸದಸ್ಯರು 9 ನಾಮಪತ್ರ ಸಲ್ಲಿಸಿದ್ದರು. ಷಹಾಜಹಾನ್‌ 2, ಅನಿಲ್‌ ಕುಮಾರ್‌ 2, ಸುನಿತಾ ರವೀಂದ್ರ 2, ಬೋರೇಗೌಡ 1, ಎಂ.ಜೆ.ಚಿಕ್ಕಣ್ಣ 1, ಮಹೇಶ್‌ 1 ನಾಮಪತ್ರ ಸಲ್ಲಿಸಿದ್ದರು. ಕಡೇ ಕ್ಷಣದಲ್ಲಿ ಎಂ.ಜೆ.ಚಿಕ್ಕಣ್ಣ, ಅನಿಲ್‌ ಕುಮಾರ್‌, ಮಹೇಶ್‌, ಬೋರೇಗೌಡ ನಾಮಪತ್ರ ವಾಪಸ್‌ ಪಡೆದರು.

ಕಣದಲ್ಲಿ ಉಳಿದ ಜೆಡಿಎಸ್‌ ಅಭ್ಯರ್ಥಿ ಸುನೀತಾ ರವೀಂದ್ರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಷಹಾಜಹಾನ್‌ ಅವರ ನಡುವೆ ಚುನಾವಣೆ ನಡೆಯಿತು. ಒಟ್ಟು 33 ಸದಸ್ಯರಲ್ಲಿ 30 ಮತಗಳು ಕಾಂಗ್ರೆಸ್‌ ಅಭ್ಯರ್ಥಿ ಪರ ಚಲಾವಣೆಯಾದವು. ಜೆಡಿಎಸ್‌ ಅಭ್ಯರ್ಥಿ ಸುನೀತಾ ಪರ ಮೂರು ಮತಗಳು ಚಲಾವಣೆಯಾದವು. ಸುನೀತಾ ಸೇರಿ ಸುಮಿತ್ರಾ, ಮುಜಾಹಿದ್‌ ಅವರು ಜೆಡಿಎಸ್‌ ಅಭ್ಯರ್ಥಿ ಪರವಾಗಿ ಮತ ಹಾಕಿದರು. ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು ಅವರಲ್ಲಿ ಹೊಸಹಳ್ಳಿ ಬೋರೇಗೌಡ ನಿಧನರಾಗಿದ್ದಾರೆ. 34ನೇ ವಾರ್ಡ್‌ ಸದಸ್ಯೆ ಪುಟ್ಟತಾಯಮ್ಮ ಅನಾರೋಗ್ಯದಿಂದಾಗಿ ಗೈರು ಹಾಜರಾಗಿದ್ದರು. ಉಳಿದ 33 ಸದಸ್ಯರು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದರು. ಸದ್ಯ ನಗರಸಭೆಯಲ್ಲಿ ಕಾಂಗ್ರೆಸ್‌ನ 14, ಜೆಡಿಎಸ್‌ನ 10, ಪಕ್ಷೇತರ 9 ಹಾಗೂ ಬಿಜೆಪಿಯಿಂದ ಒಬ್ಬ ಸದಸ್ಯ ಇದ್ದಾರೆ.

ಸುನೀತಾ ಪರ ನಿಲ್ಲದ ಸ್ವಪಕ್ಷೀಯರು:
ಸುನೀತಾ ರವೀಂದ್ರ ಅವರು ಜೆಡಿಎಸ್‌ನ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೂ ಸ್ವಪಕ್ಷೀಯರೇ ಅವರಿಗೆ ಮತ ಹಾಕಲಿಲ್ಲ. ಜೆಡಿಎಸ್‌ ವರಿಷ್ಠರು ವಿಪ್‌ ಜಾರಿಗೊಳಿಸದ ಕಾರಣ ಸದಸ್ಯರು ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಹಾಕಿದರು. ಕಳೆದ ಬಾರಿಯೂ ಕಡೇ ಕ್ಷಣದಲ್ಲಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಸುನೀತಾ ಜೆಡಿಎಸ್‌ ಸದಸ್ಯರ ಬೆಂಬಲ ಬಯಸಿದ್ದರು. ಆದರೆ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನ ಎಲ್ಲಾ ಸದಸ್ಯರು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡುವ ನಿರ್ಧಾರ ಕೈಗೊಂಡಿದ್ದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸುನೀತಾ ಕಾಂಗ್ರೆಸ್‌ ಸೇರಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಜೆಡಿಎಸ್‌ ವರಿಷ್ಠರು ಷಹಾಜಹಾನ್‌ಗೆ ಬೆಂಬಲ ನೀಡುವಂತೆ ಸೂಚನೆ ನೀಡಿದ್ದರು ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಅನಿಲ್‌ ಆಸೆಗೆ ತಣ್ಣೀರು:
ನಗರಸಭೆ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ ಸದಸ್ಯ ಅನಿಲ್‌ ಈ ಚುನಾವಣೆಯಲ್ಲೂ ನಿರಾಸೆ ಅನುಭವಿಸಿದರು. ಕಳೆದ ಆರೇಳು ತಿಂಗಳುಗಳಿಂದ ಅಧ್ಯಕ್ಷ ಸ್ಥಾನಕ್ಕೇರಲು ಅವರು ಶತಪ್ರಯತ್ನ ನಡೆಸಿದ್ದರು. ಹೊಸಹಳ್ಳಿ ಬೋರೇಗೌಡರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಲು ಎರಡು ಬಾರಿ ವಿಫಲ ಯತ್ನ ನಡೆಸಿದ್ದರು. ಮೊದಲ ಬಾರಿ ಅವಿಶ್ವಾಸ ಗೊತ್ತುವಳಿ ಬಿದ್ದು ಹೋಗಿತ್ತು. ಎರಡನೇ ಬಾರಿ ಅವಿಶ್ವಾಸ ಗೊತ್ತುವಳಿ ವಿರುದ್ಧ ಹೊಸಹಳ್ಳಿ ಬೋರೇಗೌಡರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ಸ್ಥಾನ ಉಳಿಸಿಕೊಂಡಿದ್ದರು. ಬೋರೇಗೌಡರು ನಿಧನರಾದ ನಂತರ ತೆರವಾದ ಸ್ಥಾನಕ್ಕೂ ಅನಿಲ್‌ ಯತ್ನಿಸಿದ್ದರು. ಆದರೆ ಕಾಂಗ್ರೆಸ್‌ ವರಿಷ್ಠರು ಅನಿಲ್‌ ಆಸೆಗೆ ತಣ್ಣೀರು ಎರಚಿದರು.

‘ನಗರದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ. ನಾನು ಅಧ್ಯಕ್ಷೆಯಾಗಿ ಇರುವಷ್ಟು ದಿನ ನಗರದ ಜನರಿಗೆ ಕುಡಿಯುವ ನೀರು ಸೇರಿ ಮೂಲ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ನೂತನ ಅಧ್ಯಕ್ಷೆ ಷಹಾಜಾನ್‌ ಮುನಾವರ್‌ ಖಾನ್‌ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !