ತಂತ್ರಜ್ಞಾನ ಪ್ರಭಾವದಿಂದ ಸಂಸ್ಕ್ರತಿ ಕಣ್ಮರೆ

7
ವಿಷ್ಣುಪ್ರಿಯ ಶಾಲೆಯಲ್ಲಿ ಅಂತರ್ ಶಾಲಾ ಭಗವದ್ಗೀತಾ ಕಂಠಪಾಠ ಹಾಗೂ ಯಶೋಧ ಮತ್ತು ಕೃಷ್ಣವೇಷ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳು

ತಂತ್ರಜ್ಞಾನ ಪ್ರಭಾವದಿಂದ ಸಂಸ್ಕ್ರತಿ ಕಣ್ಮರೆ

Published:
Updated:
Deccan Herald

ಚಿಕ್ಕಬಳ್ಳಾಪುರ: ತಂತ್ರಜ್ಞಾನಾಧಾರಿತ ಅತ್ಯಾಧುನಿಕತೆಯ ಪ್ರಭಾವದಿಂದಾಗಿ ಮಕ್ಕಳಲ್ಲಿ ಇತಿಹಾಸ, ಜಾನಪದ, ಭಕ್ತಿಯಂತ ವಿಚಾರಗಳು ಮರೆಯಾಗುತ್ತಿವೆ ಎಂದು ಮೂರನೇ ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಭಾನುಮತಿ ಕಳವಳ ವ್ಯಕ್ತ ಪಡಿಸಿದರು.

ತಾಲೂಕಿನ ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್ ವತಿಯಿಂದ ಮಂಗಳವಾರ ಹೊಸಹುಡ್ಯ ವಿಷ್ಣುಪ್ರಿಯ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 21 ನೇ ವರ್ಷದ ಅಂತರಶಾಲಾ ಭಗವದ್ಗೀತಾ ಕಂಠಪಾಠ ಹಾಗೂ ಯಶೋಧ ಮತ್ತು ಕೃಷ್ಣವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.

ಮಕ್ಕಳನ್ನು ಎಳೆಯ ವಯಸ್ಸಿನಿಂದಲೇ ಇತಿಹಾಸ, ಧರ್ಮ, ಸಂಸ್ಕಾರ, ಮೌಲ್ಯಗಳು, ಜಾನಪದ ಮತ್ತಿತರ ಅಮೂಲ್ಯ ವಿಚಾರಗಳ ಕಡೆಗೆ ಸೆಳೆಯಬೇಕು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟು ವೇಗವಾಗಿ ಮುಂದುವರೆಯುತ್ತಿದೆಯೋ ಅಷ್ಟೇ ವೇಗವಾಗಿ ಮಕ್ಕಳು ದಾರಿತಪ್ಪುತ್ತಿದ್ದಾರೆ. ಇದು ನಿಜಕ್ಕೂ ವಿಷಾದ ಸಂಗತಿ ದಾರಿ ತಪ್ಪುವ ಮಕ್ಕಳು ಹೆಚ್ಚಾದಂತೆ ಸಮಾಜವೂ ದಾರಿ ತಪ್ಪುತ್ತದೆ ಎಂಬ ಎಚ್ಚರ ಸಮಾಜಕ್ಕೆ ಇರಬೇಕು. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಿ ಮಕ್ಕಳಲ್ಲಿ ಉನ್ನತ ಮೌಲ್ಯಗಳನ್ನು ಬಿತ್ತುವ ಮೂಲಕ ದಾರಿ ತಪ್ಪದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳು ಇತಿಹಾಸ, ಜಾನಪದ, ಧರ್ಮ, ಸಂಸ್ಕಾರ, ಮೌಲ್ಯಗಳನ್ನು ಮರೆತರೆ ಬದುಕನ್ನೇ ಮರೆತಂತೆ ಎಂಬ ಅರಿವು ತಂದೆ ತಾಯಿಗಳಿಗೆ ಇರಬೇಕು. ತಂದೆ ತಾಯಿಗಳಲ್ಲಿ ಉತ್ತಮ ಸಂಸ್ಕಾರವಿದ್ದರೆ ಮಕ್ಕಳಲ್ಲಿಯೂ ಸಂಸ್ಕಾರ ಬರಲು ಸಾಧ್ಯವಾಗುತ್ತದೆ. ಆಧುನಿಕತೆಯ ವ್ಯಾಮೋಹದಿಂದ ಮಕ್ಕಳನ್ನು ವಾಪಸ್ಸು ತರಲು ಧರ್ಮ ಗ್ರಂಥಗಳು, ಪುರಾಣಗಳ ಕತೆಗಳನ್ನು ಪೂರಕವಾಗಿ ಬಳಸಿಕೊಳ್ಳಬೇಕು. ಜಾನಪದದಲ್ಲಿ ಶ್ರೇಷ್ಠ ಮೌಲ್ಯಾದರ್ಶಗಳಿದ್ದು ಮಕ್ಕಳಿಗೆ ಜಾನಪದದ ಬಗ್ಗೆ ಆಸಕ್ತಿ ಬೆಳೆಸಬೇಕು. ಅಲ್ಲದೆ, ಭಗವದ್ಗೀತೆಯ ಅಧ್ಯಯನ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಗೀತೆಯ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಏನನ್ನಾದರೂ ಗೆಲ್ಲುವ ಆತ್ಮಸ್ಥೈರ್ಯ ಬರುತ್ತದೆ. ಈ ಮಹತ್ವದ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ತಿಳಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಧರ್ಮದ ಬಗ್ಗೆ ಅಸಡ್ಡೆ ಹೆಚ್ಚಾಗುತ್ತಿದೆ. ರಾಮಾಯಣ, ಮಹಾಭಾರತಗಳ ಕಥೆಗಳು ಎಂದಿಗೂ ಅನಗತ್ಯ ಕಥೆಗಳಲ್ಲ. ಭಾರತೀಯ ಪುರಾಣಗಳ ಕುರಿತು ಕೀಳಿರಿಮೆ ಮತ್ತು ನಿರ್ಲಕ್ಷ್ಯ ಸಲ್ಲದು. ಧರ್ಮ ಮತ್ತು ಧರ್ಮಗ್ರಂಥಗಳನ್ನು ಸರಿಯಾಗಿ ಅಧ್ಯಯನ ಮಾಡದೆ ಮತ್ತು ಅರಿತುಕೊಳ್ಳದೆ ಅವುಗಳ ಬಗ್ಗೆ ಹಗುರವಾಗಿ ಮಾತನಾಡಬಾರದು. ಜ್ಞಾನದ ಕೊರತೆ ಇರುವವರು ಮಾತ್ರ ಈ ರೀತಿ ಮಾತನಾಡಲು ಸಾಧ್ಯ ಎಂದರು.

ಭಗವದ್ಗೀತೆ ಕಂಠಪಾಠ ಹಾಗೂ ಯಶೋಧ ಕೃಷ್ಣ ವೇಷ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೂರಕ್ಕೂ ಹೆಚ್ಚು ಶಾಲೆಗಳ ಸುಮಾರು 800 ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನಗಳನ್ನು ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್ ವತಿಯಿಂದ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಆರ್.ಶ್ಯಾಮಲಾ, ಸಮಾಜಸೇವಕರಾದ ಆಂಜನೇಯರೆಡ್ಡಿ, ಆರ್.ವಿ.ದೇವರಾಜು, ರಾಮಕೃಷ್ಣಪ್ಪ, ಶ್ರೀನಿವಾಸಬಾಬು, ಹೊಸಹುಡ್ಯ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಅಂತರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ವಿಷ್ಣುಪ್ರಿಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಚಂದ್ರಶೇಖರ್, ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರಮ್ಮ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !