ರಾಮಸಮುದ್ರದಲ್ಲಿ ಗುಂಪು ಘರ್ಷಣೆ: ಬಿಗಿ ಭದ್ರತೆ

7

ರಾಮಸಮುದ್ರದಲ್ಲಿ ಗುಂಪು ಘರ್ಷಣೆ: ಬಿಗಿ ಭದ್ರತೆ

Published:
Updated:
Prajavani

ಚಾಮರಾಜನಗರ: ಹೊಸ ವರ್ಷದ ಶುಭಾಶಯ ಸಂದೇಶವನ್ನು ರಸ್ತೆಯಲ್ಲಿ ಬರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಗೆ ಸಮೀಪದ ರಾಮಸಮುದ್ರ ಬಡಾವಣೆಯ ಎರಡು ಗುಂಪುಗಳ ನಡುವೆ ಗುರುವಾರ ರಾತ್ರಿ ಘರ್ಷಣೆ ನಡೆದಿದೆ.

ಘರ್ಷಣೆ ಸಂದರ್ಭದಲ್ಲಿ ಬಾಟಲಿ ಎಸೆತ, ಕಲ್ಲು ತೂರಾಟ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು ಆರು ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರು ಜನರೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಘಟನೆ ನಡೆದ ಸ್ಥಳದಲ್ಲಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

ಘಟನೆ ವಿವರ: ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಹೊಸ ವರ್ಷದ ಶುಭ ಸಂದೇಶ ಬರೆಯುವ ವಿಚಾರದಲ್ಲಿ ರಾಮಸಮುದ್ರದ ಆದಿಜಾಂಬವ ಬಡಾವಣೆಯ ಯುವಕರು ಹಾಗೂ ಚಿಕ್ಕಬೀದಿಯ ದಲಿತ ಸಮುದಾಯದ ಯುವಕರ ನಡುವೆ ಸೋಮವಾರ ಮಧ್ಯರಾತ್ರಿ ಜಗಳ ನಡೆದಿತ್ತು. ಆಗ ಅದನ್ನು ಪೊಲೀಸರು ತಿಳಿಗೊಳಿಸಿದ್ದರು.

ಗುರುವಾರ ರಾತ್ರಿ 8.30ರ ಸುಮಾರಿಗೆ ರಾಮಸಮುದ್ರದ ಪೊಲೀಸ್‌ ಠಾಣೆಯ ಬಳಿ ಮತ್ತೆ ಗಲಾಟೆ ನಡೆದಿದೆ. ಅಲ್ಲಿಂದ ಪೊಲೀಸರು ಅವರನ್ನು ಚದುರಿಸಿದ್ದರು. ಆ ಬಳಿಕವೂ ‌ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ವಿಷಯ ಗೊತ್ತಾದ ತಕ್ಷಣ ಪೊಲೀಸರು ಹೆಚ್ಚಿನ ಸಿಬ್ಬಂದಿಯೊಂದಿಗೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

‘ಘಟನೆಯಲ್ಲಿ ಯಾರಿಗೂ ದೊಡ್ಡ ಗಾಯಗಳಾಗಿಲ್ಲ. ಎರಡು ಕಡೆಯಿಂದಲೂ ದೂರು ಬಂದಿದೆ. ಪ್ರಕರಣ ದಾಖಲಿಸಿ ಆರು ಜನರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ಸ್ಥಳದಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಚಾಮರಾಜನಗರ ಪಟ್ಟಣ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎನ್‌.ಸಿ. ನಾಗೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !