ಇಲ್ಲದ ಮೋಡವ ಹಿಂಡುವ ಹಟ

ಬುಧವಾರ, ಜೂನ್ 26, 2019
29 °C

ಇಲ್ಲದ ಮೋಡವ ಹಿಂಡುವ ಹಟ

Published:
Updated:
Prajavani

ಬೇಸಿಗೆಯ ತೀವ್ರತೆಗೆ ನದಿ-ಹೊಳೆ, ಕೆರೆ-ಬಾವಿಗಳೆಲ್ಲ ಒಣಗಿ, ಹೆಚ್ಚುತ್ತಿರುವ ತಾಪಮಾನಕ್ಕೆ ನಾಡು ನಲುಗುತ್ತಿದೆ. ಜಲಚಕ್ರವನ್ನು ಸ್ಥಿರವಾಗಿ ಇರಿಸಬಲ್ಲ, ನಾಡಿನ ಪುಪ್ಪುಸದಂತಿರುವ ಮಲೆನಾಡಿನ ಅಂಗಳದಲ್ಲೇ ನೀರಿಗಾಗಿ ಹಾಹಾಕಾರ ಎದ್ದಿದೆ. ಅನೇಕ ಊರುಕೇರಿಗಳಲ್ಲಿ ಕುಡಿಯುವ ನೀರಿಗೆ ಟ್ಯಾಂಕರ್ ಬೇಕಾಗಿದೆ. ಛಿದ್ರವಾಗಿರುವ ಕಾಡಲ್ಲಿ ನೀರಿಲ್ಲದೆ ವನ್ಯಪ್ರಾಣಿಗಳು ಸಾಯುತ್ತಿವೆ. ಸಹ್ಯಾದ್ರಿ ಹಾಗೂ ಕರಾವಳಿಯುದ್ದಕ್ಕೂ ಅಡಿಕೆ, ತೆಂಗಿನ ತೋಟಗಳು ಒಣಗಿ ನಿಂತಿವೆ. ರೈತರ ಬಹುತೇಕ ಕೊಳವೆಬಾವಿಗಳಲ್ಲಿ ಕನಿಷ್ಠ ಸೌಳುನೀರೂ ಬರುತ್ತಿಲ್ಲ. ಮಳೆಗಾಗಿ ಪ್ರಾರ್ಥಿಸುವುದಲ್ಲದೆ ಈಗ ಜನರು ಇನ್ನೇನು ಮಾಡಿಯಾರು? ಒಮ್ಮೆಲೇ ಮಳೆ ಸುರಿದರೂ ಕಷ್ಟ. ಹಸಿರುಕವಚವೆಲ್ಲ ಮಾಯವಾದಂತೆಲ್ಲ ಮಲೆನಾಡಿನ ಕಣಿವೆಯ ಮೇಲ್ಮಣ್ಣೆಲ್ಲ ಸಡಿಲವಾಗಿ, ಮಳೆ ನೀರನ್ನು ಇಂಗಿಸಿಕೊಳ್ಳುವ ಕನಿಷ್ಠ ಸಾಮರ್ಥ್ಯವೂ ಕರಗುತ್ತಿದೆ. ಕೊಡಗಿನಂಥ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಮಗ್ಗುಲಲ್ಲಿ ಇರಿಸಿಕೊಂಡು ಮಳೆಗಾಗಿ ಕಾಯುವ ಸ್ಥಿತಿ!

ಐದು ವರ್ಷಗಳಿಂದ ಸತತವಾಗಿ ಬರ ಎದುರಿಸುತ್ತಿರುವ ರಾಜ್ಯದಲ್ಲಿ, ಈ ವರ್ಷವೂ ಮುಂಗಾರು ಸಮೃದ್ಧವಾಗುವ ನಿರೀಕ್ಷೆಯಿಲ್ಲ. ಹಾಗೆಂದೇ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಸುಮಾರು ₹ 91 ಕೋಟಿ ವೆಚ್ಚದಲ್ಲಿ, ಖಾಸಗಿ ಉದ್ಯಮವೊಂದರ ಮೂಲಕ ಮೋಡಬಿತ್ತನೆ ಮಾಡಲು ಮುಂದಾಗಿದೆ. 2017ರಲ್ಲಿ ಕೈಗೊಂಡಿದ್ದ ಇಂಥದ್ದೇ ಪ್ರಯತ್ನದಿಂದಾಗಿ, ಪ್ರತಿಶತ ಸುಮಾರು 27ರಷ್ಟು ಹೆಚ್ಚು ಮಳೆಯಾಯಿತೆಂದು ಕೆಲವು ತಂತ್ರಜ್ಞರು ನೀಡಿದ್ದಾರೆ ಎನ್ನಲಾದ ವರದಿಯು ಮತ್ತೊಮ್ಮೆ ಮೋಡಬಿತ್ತನೆಗೆ ಸರ್ಕಾರಕ್ಕೆ ಪ್ರೇರಣೆ ನೀಡಿರುವಂತಿದೆ. ಇದಕ್ಕಾಗಿ ತಲಾ ₹ 10 ಕೋಟಿ  ವೆಚ್ಚದಲ್ಲಿ ಎರಡು ಸಿ-ಬ್ಯಾಂಡ್ ಡೋಪ್ಲರ್ ರಾಡರ್‌ಗಳನ್ನು ಅಳವಡಿಸಲೂ ಸರ್ಕಾರ ಸಜ್ಜಾಗಿದೆ.

ಮಳೆಯಿಲ್ಲದ ಕಾಲಕ್ಕೆ, ತಂತ್ರಜ್ಞಾನದ ಮೊರೆ ಹೊಕ್ಕ ಸರ್ಕಾರದ ಈ ನಿರ್ಧಾರದಲ್ಲಿ ಮೇಲ್ನೋಟಕ್ಕೆ ತಪ್ಪೇನೂ ತೋರುವುದಿಲ್ಲ. ಇಷ್ಟಕ್ಕೂ ಇದು ಎರಡನೇ ಮಹಾಯುದ್ಧದ ಕಾಲದಲ್ಲೇ ಅಮೆರಿಕದಲ್ಲಿ ಅಭಿವೃದ್ಧಿಯಾದ ಸರಳವಾದ ತಂತ್ರ. ಮೋಡದೆತ್ತರಕ್ಕೆ ಹಾರುವ ವಿಮಾನಗಳ ರೆಕ್ಕೆಗಳು ಘನರೂಪದ ಇಂಗಾಲದ ಡೈ ಆಕ್ಸೈಡ್, ಉಪ್ಪು, ಪೊಟ್ಯಾಷಿಯಂ ಕ್ಲೋರೈಡ್, ಸಿಲ್ವರ್ ಅಯೋಡೈಡ್ ಇತ್ಯಾದಿ ರಾಸಾಯನಿಕಗಳ ಪುಡಿಗಳನ್ನು ಎರಚುತ್ತವೆ. ಇವುಗಳ ಅಣುಗಳಿಗೆ, ಚದುರಿದ ಮೋಡಗಳ ತೇವಾಂಶದ ಸಣ್ಣಕಣಗಳೆಲ್ಲ ಅಂಟಿಕೊಂಡು, ದೊಡ್ಡ ಹನಿಗಳಾಗಿ ಮಾರ್ಪಾಟಾಗತೊಡಗುತ್ತವೆ. ಬಾಷ್ಪೀಕರಣದಿಂದಾಗಿ ಆ ಕಣಗಳ ಗುಂಪು ನೀರಿನ ದೊಡ್ಡ ಹನಿಗಳಾಗಿ ಮಾರ್ಪಾಟಾಗಿ, ಮಳೆ ಸುರಿಯುತ್ತದೆ. ತೆಳುವಾದ ಅಥವಾ ಚದುರಿರುವ ಮೋಡಗಳ ಸಾಂದ್ರತೆ ಹೆಚ್ಚಿಸಿ, ಅವನ್ನು ಹಿಂಜಿ ನೀರು ಸುರಿಸುವ ತಂತ್ರವಿದು.

ಕೈಗಾರಿಕೀಕರಣಗೊಂಡ ಹಲವು ದೇಶಗಳಲ್ಲಿ, ಈ ತಂತ್ರವನ್ನು ಸೀಮಿತವಾಗಿ ಬಳಸುವುದಿದೆ. ಇಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯೊಂದಿದೆ. ಹವಾಮಾನವನ್ನೇ ಮಾರ್ಪಡಿಸುವ ಈ ಚಮತ್ಕಾರದಲ್ಲಿ, ಇರುವ ಮೋಡವನ್ನು ತಂಪಾಗಿಸಿ ಕೆಲಮಟ್ಟಿನ ಮಳೆ ಸುರಿಸಬಹುದೇ ಹೊರತು, ಮೋಡವನ್ನೇನೂ ಸೃಷ್ಟಿಸಲು ಸಾಧ್ಯವಿಲ್ಲ. ನೆಲ ಹಾಗೂ ಸಾಗರದ ತಾಪಮಾನದ ಏರಿಳಿತದ ಸಂಕೀರ್ಣ ಪ್ರಕ್ರಿಯೆಯಿಂದ ಉಂಟಾಗುವ ಮಾರುತಗಳು ಹೊತ್ತುತರುವ ಮೋಡಗಳು ಸುರಿಸುವ ನೈಸರ್ಗಿಕ ಮಳೆಗೆ ಪರ್ಯಾಯ ಯಾವುದೂ ಇಲ್ಲ!

ಇಂಥ ತಂತ್ರಜ್ಞಾನವೊಂದು ನಮ್ಮ ದೇಶ ಮತ್ತು ಕಾಲಕ್ಕೆ ಎಷ್ಟು ಸೂಕ್ತ ಎಂಬುದು ಈಗ ಕೇಳಿಕೊಳ್ಳಲೇಬೇಕಾದ ಪ್ರಶ್ನೆ. ಮೊದಲಿನದು ಸುರಕ್ಷತೆಯ ಕುರಿತು. ಇಲ್ಲಿ ಬಳಸುವ ಸಿಲ್ವರ್ ಅಯೋಡೈಡ್ ತರಹದ ರಾಸಾಯನಿಕಗಳಿಂದಾಗಿ ವಾಯು ಹಾಗೂ ನೀರಿನ ಮಾಲಿನ್ಯ ಆಗುವುದಿಲ್ಲವೇ? ಈ ತಂತ್ರವು ಮಳೆ ತರುವ ಮಾರುತಗಳ ನೈಸರ್ಗಿಕ ಚಕ್ರಗಳಿಗೆ ತಡೆಯಾಗುವುದಿಲ್ಲವೇ? ಅಕ್ಕಪಕ್ಕದ ಪ್ರದೇಶಗಳ ಅಥವಾ ರಾಜ್ಯಗಳ ಆಗಸದಲ್ಲಿ ಹರಡಿರುವ ಮೋಡಗಳನ್ನೂ ಇದು ಕಸಿಯುವುದಿಲ್ಲವೇ? ಮುಂಗಾರು ಆರ್ಥಿಕತೆಯನ್ನೇ ಆಧರಿಸಿದ ನಮ್ಮಂಥ ಉಷ್ಣವಲಯದ ದೇಶಗಳಲ್ಲಿ, ಇದು ಉಂಟುಮಾಡಬಹುದಾದ ಆ ಬಗೆಯ ಪರಿಣಾಮಗಳ ಕುರಿತು ಇನ್ನೂ ಆಳ ಮತ್ತು ದೀರ್ಘ ಸಂಶೋಧನೆಗಳು ಆಗಿಲ್ಲ. ಆ ವೈಜ್ಞಾನಿಕ ತಳಹದಿಯಿಲ್ಲದೆ ಮೋಡಬಿತ್ತನೆಯನ್ನು ವ್ಯಾಪಕವಾಗಿ ಬಳಸುವುದು ಅದೆಷ್ಟು ಸುರಕ್ಷಿತ?

ಇನ್ನೊಂದು ಅಂಶವೆಂದರೆ, ಅಪಾರ ವೆಚ್ಚ ಬೇಡುವ ಮೋಡಬಿತ್ತನೆಯು ನಮ್ಮ ನಾಡಿಗೆ ಎಷ್ಟು ಸೂಕ್ತ ಎಂಬುದು. ಅಮೆರಿಕದಂತಹ ದೇಶದಲ್ಲಿ ಕೃಷಿಯನ್ನು ರೈತರು ಕೈಗಾರಿಕೆಯ ಹಾಗೆ ಪರಿಣತರ ಉಸ್ತುವಾರಿಯಲ್ಲಿ ಕೈಗೊಳ್ಳುತ್ತಾರೆ. ಮಣ್ಣುಗುಣ, ನೀರಿನ ಲಭ್ಯತೆ, ಸಾಗುವಳಿ ವಿಧಾನ ಇತ್ಯಾದಿ ಎಲ್ಲ ಅಂಶಗಳನ್ನೂ ವೈಜ್ಞಾನಿಕ ಮಾಹಿತಿಯೊಂದಿಗೆ ನಿರ್ಧರಿಸುವ ನಿಖರವಾದ ಕೃಷಿ ವಿಧಾನವದು (Precision Farming). ನಿರ್ದಿಷ್ಟ ಸಂದರ್ಭ ಮತ್ತು ಪ್ರದೇಶದಲ್ಲಿ ಮೋಡಬಿತ್ತನೆಯು ಅಲ್ಲಿ ಬಳಕೆಯಾಗುವುದಿದೆ. ಕೊಲ್ಲಿ ರಾಷ್ಟ್ರಗಳು ಹಾಗೂ ಚೀನಾದಲ್ಲಿ ಕುಡಿಯುವ ನೀರಿನ ಜಲಾಶಯಗಳನ್ನು ತುಂಬಿಸಲೂ ಇದನ್ನು ಬಳಸುವುದಿದೆ. ಆದರೆ, ಜೀವನೋಪಾಯಕ್ಕಾಗಿ ಬೇಸಾಯವನ್ನೇ ನಂಬಿರುವ ಕೋಟ್ಯಂತರ ಕುಟುಂಬಗಳಿರುವ ನಮ್ಮ ನಾಡಿಗೆ ಇದೆಷ್ಟು ಸೂಕ್ತ? ಹತ್ತಕ್ಕೂ ಮಿಕ್ಕಿ ವಿವಿಧ ಬಗೆಯ ಕೃಷಿ-ಹವಾಮಾನ ಪ್ರದೇಶಗಳಿರುವ ರಾಜ್ಯವಿದು. ಒಂದೊಂದೂ ಪ್ರದೇಶದ ಮಣ್ಣು, ಹವಾಗುಣ, ಬೆಳೆವಿಧಾನ, ಪಾರಂಪರಿಕ ರೈತರ ಕೌಶಲ ಮತ್ತು ನಿರೀಕ್ಷೆ– ಎಲ್ಲವೂ ತೀರಾ ಭಿನ್ನ. ಭಾರಿ ಖರ್ಚಿನ ಮೋಡ ಹಿಂಡುವ ಈ ಸರ್ಕಸ್ಸು ತರುವ ತುಂತುರು ಮಳೆಯು ರೈತರ ಹೊಲವನ್ನು ನಿಜಕ್ಕೂ ಒದ್ದೆಯಾಗಿಸೀತೇ? ಖಾಲಿ ಜಮೀನು, ವಸತಿ ಪ್ರದೇಶಗಳಲ್ಲಿ ಬಿದ್ದ ಮಳೆಯಿಂದ ಉಪಯೋಗವಾದೀತೇ? ಈ ಪ್ರಶ್ನೆಗಳಿಗೆಲ್ಲ ಖಚಿತ ಉತ್ತರ ಇರದಿರುವಾಗ, ಇದನ್ನೊಂದು ವಿಶ್ವಾಸಾರ್ಹ ತಾಂತ್ರಿಕತೆ ಎಂದು ನಂಬುವುದು ಸರಿಯೇ?

ಹಾಗಾದರೆ, ನೀರಿನ ಕೊರತೆಗೆ ಪರಿಹಾರವೇನು? ಟಾಟಾ ಶಕ್ತಿ ಸಂಶೋಧನಾ ಸಂಸ್ಥೆ (ಟೆರಿ) ಸಹಯೋಗ ದಲ್ಲಿ, ಪರಿಸರ ಇಲಾಖೆಯು ರಾಜ್ಯ ಸರ್ಕಾರಕ್ಕೆ 2015ರಲ್ಲೇ ಸಲ್ಲಿಸಿರುವ ‘ಹವಾಮಾನ ಬದಲಾವಣೆ ಕಾರ್ಯನೀತಿ’ ವರದಿಯಲ್ಲಿ ಹಲವಾರು ಖಚಿತ ಸೂತ್ರಗಳಿವೆ. ಕಾಡಿನ ಸಂರಕ್ಷಣೆ, ಜನಸಹಭಾಗಿತ್ವದ ಹಸಿರೀಕರಣ, ಕೆರೆಗಳ ಹೂಳೆತ್ತುವುದು, ನದಿಪಾತ್ರಗಳ ರಕ್ಷಣೆ, ಮಳೆನೀರು ಸಂಗ್ರಹ ಆಧಾರಿತ ಜಲಾನಯನ ಅಭಿವೃದ್ಧಿ, ತುಂತುರು ನೀರಾವರಿ ಮತ್ತು ಕೃಷಿಅರಣ್ಯ ತತ್ವ ಬೇಸಾಯ ಪದ್ಧತಿ– ಇವೆಲ್ಲ ಆ ಬಗೆಯ ಮಾರ್ಗೋಪಾಯಗಳು. ಆದರೆ ಇವೆಲ್ಲವೂ ಸಮಗ್ರವಾಗಿ ಕಾಲಬದ್ಧ ಯೋಜನೆಗಳ ರೂಪದಲ್ಲಿ ಅನುಷ್ಠಾನಗೊಳ್ಳದಿರುವುದೇ ಇಂದಿನ ದುರಂತ. ಕೃಷಿಯ ತಳಹದಿಯಾದ ನೈಸರ್ಗಿಕ ಸಂಪನ್ಮೂಲಗಳ ಅಡಿಗಟ್ಟೇ ಮಾಯವಾಗುತ್ತಿದೆ. ಮಳೆ ಸುರಿಸಬಲ್ಲ ಕಾಡುಗಳು ಇನ್ನಿಲ್ಲದಷ್ಟು ನಾಶವಾಗಿವೆ; ನೀರು ಹಿಡಿದಿಡಬಲ್ಲ ಕೆರೆಗಳು ಹೂಳು ತುಂಬಿ, ನದಿಗಳು ಮರಳು ಗಣಿಗಾರಿಕೆ, ಅತಿಕ್ರಮಣಕ್ಕೆ ಬಲಿಯಾಗಿವೆ. ಸರ್ಕಾರ ಈಗ ಸುರಿಸುವ ಕೃತಕ ಮಳೆ ಯಾವ ಹಿತಕ್ಕಾಗಿ?

ಮೋಡವನ್ನು ತಂಪಾಗಿಸಿ ಮಳೆ ತರುವ ನೈಸರ್ಗಿಕ ಜಲಚಕ್ರ ವ್ಯವಸ್ಥೆಯೇ ನಾಶವಾಗುತ್ತಿರುವುದನ್ನು ತಡೆ ಯುವ ಬದಲು, ಮೋಡಬಿತ್ತನೆಯಂಥ ಕೃತಕ ವಿಧಾನಕ್ಕೆ ಸರ್ಕಾರವು ಶರಣಾಗುತ್ತಿರುವುದೇ ಒಂದು ವಿಡಂಬನೆ. ಬರುವ ದಿನಗಳಲ್ಲಿ ಇದಕ್ಕಾಗಿ ಭಾರಿ ಅನುದಾನವುಳ್ಳ ಪ್ರಾಧಿಕಾರವೋ ಅಥವಾ ಹೊಸ ಇಲಾಖೆಯೋ ಅಸ್ತಿತ್ವಕ್ಕೆ ಬರಲೂಬಹುದು. ಮಳೆ ಸುರಿಸಲು ವಿಮಾನ ಹಾರಿಸುವ ಹೊಸ ಉದ್ಯಮ ವಲಯವೊಂದು ಉದಯವಾಗುತ್ತಿರುವ ಲಕ್ಷಣವಿದು. ಮಳೆ ಬರಲಿ-ಬಿಡಲಿ, ಬಂದ ಮಳೆನೀರಿನ ಉಪಯೋಗ ಹೇಗಾದರೂ ಆಗಲಿ, ಮೋಡಬಿತ್ತನೆಯು ಉದುರಿಸುವ ಅಷ್ಟಿಷ್ಟು ತುಂತುರು ನೀರೇ ಸಹಜ ಮಳೆ ಎಂದು ಒಪ್ಪಿಕೊಳ್ಳಬೇಕಾದ ಕಾಲ ಬರುತ್ತಿದೆಯೇ? ಗ್ರಾಮೀಣಾಭಿವೃದ್ಧಿ ಇಲಾಖೆಯು ಈ ಕುರಿತು ಮರುಚಿಂತನೆ ಮಾಡಬೇಕಾಗಿದೆ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !