ಶನಿವಾರ, ಮಾರ್ಚ್ 6, 2021
28 °C
ಬಿಬಿಎಂಪಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಹೊಸ ‘ಡಿಡಿ ರೋಶಿನಿ’ ಟಿವಿ ಚಾನೆಲ್

‘ಡಿ.ಡಿ. ರೋಶಿನಿ’ಯಿಂದ ಕಲಿಕೆಗೆ ಪೂರಕ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿನ್ನು ಟಿ.ವಿ ಮೂಲಕ ಬಿತ್ತರವಾಗುವ ವಿಶೇಷ ತರಗತಿಗಳನ್ನು ಶಾಲೆಯಲ್ಲಿ ವೀಕ್ಷಿಸಬಹುದು. ಶಿಕ್ಷಕರ ಜೊತೆ ಚರ್ಚಿಸಿ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದು. ಮನೆಯಲ್ಲೂ ಶಿಕ್ಷಣಕ್ಕೆ ಪೂರಕವಾರ ಮಾಹಿತಿಯುಕ್ತ ಕಾರ್ಯಕ್ರಮಗಳನ್ನು ನೋಡಬಹುದು. 

ಪಾಲಿಕೆ ಶಾಲಾ ಕಾಲೇಜುಗಳಲ್ಲಿ ಜಾಗತಿಕ ಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಆರಂಭಿಸಲಾದ ‘ಬಿಬಿಎಂಪಿ ರೋಶಿನಿ’ ಕಾರ್ಯಕ್ರಮದ ಅಂಗವಾಗಿ ಶೈಕ್ಷಣಿಕ ಕಾರ್ಯಕ್ರಮಗಳ ಪ್ರಸಾರಕ್ಕಾಗಿಯೇ ದೂರದರ್ಶನದ ಸಹಯೋಗದಲ್ಲಿ ‘ಡಿಡಿ ರೋಶಿನಿ’ಎಂಬ ಹೊಸ ಡಿಜಿಟಲ್‌ ಚಾನೆಲ್‌ ಆರಂಭಿಸಲಾಗಿದೆ.

‘ನರ್ಸರಿಯಿಂದ ಕಾಲೇಜು ಹಂತದವರಿಗಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಕಾರ್ಯಕ್ರಮಗಳನ್ನು ಡಿ.ಡಿ.ರೋಶಿನಿ ಚಾನೆಲ್‌ ಮೂಲಕ ಪ್ರಸಾರ ಮಾಡಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಈ ಚಾನೆಲ್‌ ಶೈಕ್ಷಣಿಕ ಕಾರ್ಯಕ್ರಮಗಳನ್ನು ಬಿತ್ತರಿಸಲಿದೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಪಠ್ಯಗಳ ಪೂರ್ವಸಿದ್ಧತೆಗೆ ಸಂಬಂಧಿಸಿದ ಕಾರ್ಯಕ್ರಮಗಳು, ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಪಠ್ಯ ಕಾರ್ಯಕ್ರಮಗಳು ಪ್ರಸಾರ ಆಗಲಿವೆ. ಸಂಜೆ 5ರ ನಂತರ ಪಠ್ಯಗಳ ಪುನರಾವರ್ತನೆ ಕುರಿತ  ಕಾರ್ಯಕ್ರಮಗಳು ಪ್ರಸಾರ ಆಗಲಿವೆ’ ಎಂದರು.

‘ಸದ್ಯಕ್ಕೆ ಚಾನೆಲ್‌ ಬಿತ್ತರಿಸುವ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಮಾತ್ರ ವಿದ್ಯಾರ್ಥಿಗಳು ವೀಕ್ಷಿಸಬಹುದು. ಹಂತ ಹಂತವಾಗಿ ಮಕ್ಕಳಿಗೆ ಟ್ಯಾಬ್‌ ಹಾಗೂ ಡಾಂಗಲ್‌ ನೀಡಲಿದ್ದೇವೆ. ಆ ಬಳಿಕ ಅವರು ಮನೆಯಲ್ಲೂ ಶೈಕ್ಷಣಿಕ ಕಾರ್ಯಕ್ರಮ ವೀಕ್ಷಿಸಬಹುದು. ಇದಕ್ಕೆ ಇಂಟರ್ನೆಟ್‌ ಸೌಲಭ್ಯದ ಅಗತ್ಯವೂ ಇಲ್ಲ’ ಎಂದು ಈ ಯೋಜನೆ ಅನುಷ್ಠಾನದ ಉಸ್ತುವಾರಿ ಹೊತ್ತಿರುವ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ತಜ್ಞರಿಂದಲೇ ಕಾರ್ಯಕ್ರಮ: ‘ಇಲ್ಲಿನ ಪಠ್ಯ ಕ್ರಮಕ್ಕೆ ಪೂರಕವಾದ ವಿಯಗಳನ್ನು ಬ್ರಿಟಿಷ್‌ ಕೌನ್ಸಿಲ್‌ ಒದಗಿಸುತ್ತದೆ. ಅದನ್ನು ಆಧರಿಸಿ ವಿಷಯ ತಜ್ಞರು ಕ್ಲಿಷ್ಟಕರ ವಿಷಯಗಳನ್ನು ಸುಲಭವಾಗಿ ವಿವರಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಅದನ್ನು ಡಿಡಿ ರೋಶಿನಿ ಚಾನೆಲ್‌ ಮೂಲಕ ಬಿತ್ತರಿಸಲಾಗುತ್ತದೆ. ವಿದ್ಯಾರ್ಥಿಗಳು ತರಗತಿಯಲ್ಲಿ ಇದನ್ನು ವೀಕ್ಷಿಸಬಹುದು. ಸಂದೇಹಗಳಿದ್ದರೆ ತರಗತಿ  ಅಧ್ಯಾಪಕರನ್ನು ಕೇಳಿ ಬಗೆಹರಿಸಿಕೊಳ್ಳಬಹುದು. ಹೆಚ್ಚುವರಿ ವಿವರಣೆ ಅಗತ್ಯ ಬಿದ್ದರೆ ಸ್ಕೈಪ್‌ ಮೂಲಕ ವಿಷಯ ಪರಿಣಿತರ ಜೊತೆ ವಿಡಿಯೊ ಕಾನ್ಫರೆನ್ಸ್‌ ನಡೆಸಬಹುದು’ ಎಂದು ಅವರು ವಿವರಿಸಿದರು.  

‘ಸದ್ಯಕ್ಕೆ ಒಂದೇ ಚಾನೆಲ್‌ ಆರಂಭಿಸಿದ್ದೇವೆ. ಆರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಬಿತ್ತರಿಸುತ್ತೇವೆ. 2019ರ ಏಪ್ರಿಲ್‌ ಬಳಿಕ 11 ಚಾನೆಲ್‌ಗಳನ್ನು ಆರಂಭಿಸಲಾಗುತ್ತದೆ. ಆ ಬಳಿಕ ಪ್ರತಿ ತರಗತಿಗೂ ಪ್ರತ್ಯೇಕ ಚಾನೆಲ್‌ ಲಭ್ಯವಾಗಲಿದೆ. ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಗ್ರಹಿಕೆಯ ಮಟ್ಟವನ್ನು ಹೆಚ್ಚಿಸಲಿದೆ. ಒಂದು ವೇಳೆ ವಿದ್ಯಾರ್ಥಿಗಳು ತರಗತಿಗೆ ಗೈರು ಹಾಜರಾದರೆ ಸ್ಕೈಪ್‌ನಲ್ಲೂ ಕಾರ್ಯಕ್ರಮ ವೀಕ್ಷಿಸಬಹುದು’ ಎಂದರು.

ಬಿಬಿಎಂಪಿಯು ಮೈಕ್ರೋಸಾಫ್ಟ್‌ ಹಾಗೂ ಟೆಕ್‌ ಅವಂತ್‌, ಬ್ರಿಟಿಷ್‌ ಕೌನ್ಸಿಲ್‌, ಅಮೆರಿಕನ್‌ ಇನ್‌ಸ್ಟಿಟ್ಯೂಟ್‌ ಆಪ್‌ ಇಂಡಿಯಾ ಸ್ಟಡಿಸ್‌ ಮತ್ತು ಅಮೆರಿಕದ ಕಾಗ್ನಿಟಿವ್‌ ಎಕ್ಸ್‌ಚೇಂಜ್‌ ಕ್ಯಾಲಿಫೋರ್ನಿಯಾ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ.

ಪಾಲಿಕೆ ಶಾಲೆಗಳಲ್ಲಿ ಡಿಜಿಟಲ್‌ ಪರದೆ

‘ಬಿಬಿಎಂಪಿ ಶಾಲಾ ಕಾಲೇಜುಗಳ ತರಗತಿಗಳಲ್ಲಿ ಇನ್ನು ಕರಿಹಲಗೆಯ ಜಾಗದಲ್ಲಿ ಡಿಜಿಟಲ್‌ ಪರದೆ ಬರಲಿದೆ. ಇದನ್ನು ಕಂಪ್ಯೂಟರ್‌ನಂತೆಯೂ ಬಳಸಬಹುದು. ಟಚ್‌ ಸ್ಕ್ರೀನ್‌ ಸೌಲಭ್ಯ ಇರುವ ಈ ಪರದೆಯನ್ನು ಲ್ಯಾಪ್‌ಟಾಪ್‌, ಐಪಾಡ್‌ಗಳಂತೆಯೂ ಉಪಯೋಗಿಸಬಹುದು. ಇದಕ್ಕೆ ಡಾಂಗಲ್‌ ಜೋಡಿಸಿ, ವಿಷಯ ತಜ್ಞರು ನಡೆಸಿಕೊಡುವ ವಿಡಿಯೊ ತರಗತಿಗಳನ್ನು ವೀಕ್ಷಿಸಬಹುದು’ ಎಂದು ಮಂಜುನಾಥ ಪ್ರಸಾದ್‌ ವಿವರಿಸಿದರು.   

ಗುಣಮಟ್ಟದ ಶಿಕ್ಷಣ: ಸಿ.ಎಂ ವಾಗ್ದಾನ

‘ಬಡ ವಿದ್ಯಾರ್ಥಿಗಳೆಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಹೊಣೆ ಸರ್ಕಾರದ್ದು. ಬಿಬಿಎಂಪಿ ರೋಶಿನಿ ಕಾರ್ಯಕ್ರಮ ಇದರ ಮೊದಲ ಹೆಜ್ಜೆ. ಹಂತ ಹಂತವಾಗಿ ಇದನ್ನು ರಾಜ್ಯದಾದ್ಯಂತ ವಿಸ್ತರಿಸುತ್ತೇವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

‘ಶಿಕ್ಷಕರಲ್ಲೂ ಶಿಸ್ತು ರೂಪಿಸುವ ಅಗತ್ಯ ಇದೆ. ಅವರ ತಿಳಿವಳಿಕೆ ಹೆಚ್ಚಿಸಲು ಕೌಶಲಾಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದರು. 

**

ಅಂಕಿ ಅಂಶ

40 ಕಿ.ಮೀ - ಬೆಂಗಳೂರಿನ ಆಸುಪಾಸಿನಲ್ಲಿ ಡಿಡಿ ರೋಶಿನಿ ಚಾನೆಲ್‌ ಲಭ್ಯ

14 ಗಂಟೆ - ದಿನವೊಂದಕ್ಕೆ ಕಾರ್ಯಕ್ರಮ ಪ್ರಸಾರವಾಗುವ ಅವಧಿ

2 ಸಾವಿರ - ಒಂದು ಗಂಟೆ ಕಾರ್ಯಕ್ರಮ ಪ್ರಸಾರಕ್ಕೆ ದೂರದರ್ಶನಕ್ಕೆ ಪಾವತಿಸುವ ಮೊತ್ತ

₹ 100 ಕೋಟಿ - ಬಿಬಿಎಂಪಿ ರೋಶಿನಿ ಕಾರ್ಯಕ್ರಮಕ್ಕೆ ಕಾಯ್ದಿರಿಸಿದ ಮೊತ್ತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು