ಸೋಮವಾರ, ಸೆಪ್ಟೆಂಬರ್ 20, 2021
20 °C
ಕಾವೇರಿಪುರ, ಸಗಾಯಪುರ ವಾರ್ಡ್‌ ಸದಸ್ಯರ ಆಯ್ಕೆಗೆ 29ಕ್ಕೆ ಮತದಾನ * 31ಕ್ಕೆ ಫಲಿತಾಂಶ

ಪಾಲಿಕೆ: ಉಪಚುನಾವಣೆಯಲ್ಲೂ ಮೈತ್ರಿ ಮುಂದುವರಿಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಪಮೇಯರ್‌ ಆಗಿದ್ದ ರಮೀಳಾ ಉಮಾಶಂಕರ್‌ (ಕಾವೇರಿಪುರ ವಾರ್ಡ್‌) ಹಾಗೂ ಪಕ್ಷೇತರ ಸದಸ್ಯರಾಗಿದ್ದ ವಿ.ಏಳುಮಲೈ (ಸಗಾಯಪುರ ವಾರ್ಡ್‌) ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಪಾಲಿಕೆ ಸದಸ್ಯ ಸ್ಥಾನಗಳನ್ನು ತುಂಬುವ ಉಪಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಅಧಿಸೂಚನೆ ಪ್ರಕಟಿಸಿದೆ.

ಪಾಲಿಕೆಯ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟವು ಈ ಉಪಚುನಾವಣೆಯಲ್ಲೂ ಮೈತ್ರಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ.

‘ಈ ಉಪಚುನಾವಣೆಯಲ್ಲಿ ಗೆಲ್ಲುವವರು ಒಂದು ವರ್ಷದ ಅವಧಿಗೆ ಮಾತ್ರ ಸದಸ್ಯರಾಗಿರುತ್ತಾರೆ. ಕಾವೇರಿಪುರ ವಾರ್ಡ್‌ನಲ್ಲಿ ಕಳೆದ ಮೂರು ಚುನಾವಣೆಗಳಲ್ಲೂ ಜೆಡಿಎಸ್‌ ಸದಸ್ಯರೇ ಆಯ್ಕೆಯಾಗಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಕಾಂಗ್ರೆಸ್‌ ಮುಖಂಡರನ್ನು ಕೋರುತ್ತೇವೆ. ಸಗಾಯಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಜೆಡಿಎಸ್‌ ನಗರ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್‌ ತಿಳಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ನಗರದ ವ್ಯಾಪ್ತಿಯ ಎಲ್ಲ ಕ್ಷೇತ್ರಗಳಲ್ಲೂ ಎರಡು ಪಕ್ಷಗಳ ಕಾರ್ಯಕರ್ತರು ಪಕ್ಷಭೇದ ಮರೆತು ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ಎಲ್ಲೂ ಸಣ್ಣ ಗೊಂದಲಕ್ಕೂ ಆಸ್ಪದ ನೀಡಿಲ್ಲ. ಪಾಲಿಕೆಯಲ್ಲೂ ಹೇಗೂ ಮೈತ್ರಿಕೂಟದ ಆಡಳಿತವೇ ಇದೆ. ಹಾಗಾಗಿ ನಮ್ಮ ಕೋರಿಕೆಗೆ ಕಾಂಗ್ರಸ್‌ ಮುಖಂಡರೂ ಒಪ್ಪುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

‘ಕಾವೇರಿಪುರ ವಾರ್ಡ್‌ ಹಿಂದುಳಿದ ವರ್ಗದ ಮಹಿಳೆಗೆ ಮೀಸಲು. ಇಲ್ಲಿ ಜೆಡಿಎಸ್‌ನಿಂದ ಯಾರನ್ನು ಕಣಕ್ಕಿಳಿಸಬೇಕು ಎಂದು ಇನ್ನೂ ನಿರ್ಧಾರವಾಗಿಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.

ವಿ.ಏಳುಮಲೈ ಅವರು ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದರು. ಅವರ ಸಹೋದರಿ ಪಳನಿಯಮ್ಮ ಈ ಹಿಂದಿನ ಅವಧಿಗೆ ಪಾಲಿಕೆ ಸದಸ್ಯರಾಗಿದ್ದರು. ಕಳೆದ ಚುನಾವಣೆಯಲ್ಲಿ ಸಗಾಯಪುರ ವಾರ್ಡ್‌ನಿಂದ ಸ್ಪರ್ಧಿಸಲು ಏಳುಮಲೈ ಬಯಸಿದ್ದರು. ಪಕ್ಷವು ಟಿಕೆಟ್‌ ನಿರಾಕರಿಸಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಮೇಯರ್‌ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರು. ಹಾಗಾಗಿ ಇಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಏಳುಮಲೈ ಕುಟುಂಬದವರನ್ನೇ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ.

ಏಳುಮಲೈ ಅವರ ಪತ್ನಿ ಲೀನಾ ಹಾಗೂ ಪಳನಿಯಮ್ಮ ಅವರಿಬ್ಬರೂ ಸಗಾಯಪುರ ವಾರ್ಡ್‌ನಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು. ಇನ್ನೊಂದೆಡೆ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾರಿಮುತ್ತು ಕೂಡ ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿದ್ದಾರೆ. ಈ ಪೈಕಿ ಯಾರಿಗೆ ಟಿಕೆಟ್‌ ನೀಡಬೇಕೆಂದು ಪಕ್ಷವು ತೀರ್ಮಾನಿಸಿಲ್ಲ.

‘ಸಗಾಯಪುರ ವಾರ್ಡ್‌ನಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಕೆಪಿಸಿಸಿ ಪ್ರಮುಖರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಎರಡೂ  ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂದು ಇನ್ನೂ ನಿರ್ಧಾರವಾಗಿಲ್ಲ. ಪಕ್ಷದ ವರಿಷ್ಠರು ಬಗ್ಗೆ ತೀರ್ಮಾನಿಸುತ್ತಾರೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ತಿಳಿಸಿದರು.

ಕಳೆದ ಚುನಾವಣೆಯ ಬಲಾಬಲ
2015ರ ಚುನಾವಣೆಯಲ್ಲಿ ಕಾವೇರಿಪುರ ವಾರ್ಡ್‌ನಲ್ಲಿ 12,037 ಮತಗಳನ್ನು ಪಡೆದಿದ್ದ ರಮೀಳಾ ಅವರು ಕಾಂಗ್ರೆಸ್‌ ಅಭ್ಯರ್ಥಿ ಸುನಂದ ಮಲ್ಲಿಕಾರ್ಜುನ (9,366 ಮತ) ಅವರನ್ನು 2,671 ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಸಿನಿಮಾ ನಟ ಜೈಜಗದೀಶ್‌ ಅವರ ಪತ್ನಿ ವಿಜಯಲಕ್ಷ್ಮೀ (4,679 ಮತ) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಸಗಾಯಪುರ ವಾರ್ಡ್‌ನಲ್ಲಿ 5,345 ಮತ ಪಡೆದಿದ್ದ ಏಳುಮಲೈ ಅವರು ಜೆಡಿಎಸ್‌ನ ಮಾರಿಮುತ್ತು (4,144 ಮತಗಳು) ವಿರುದ್ಧ 1,201 ಮತಗಳ ಅಂತರದಿಂದ ಗೆದ್ದಿದ್ದರು. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಭಾಕರ ರೆಡ್ಡಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು