ಅಂತಃಕರಣದ ಜಯ

7

ಅಂತಃಕರಣದ ಜಯ

ಗುರುರಾಜ ಕರ್ಜಗಿ
Published:
Updated:

ಇದೊಂದು ಯುರೋಪಿನ ಮಕ್ಕಳ ಕಥೆ. ಆದರೆ ಬಲಿತವರಿಗೂ ಬುದ್ಧಿಕಲಿಸಬಲ್ಲ ಸುಂದರ, ಮನಕಲಕುವ ಕಥೆ.ಒಂದು ಅತ್ಯಂತ ಬಡಪರಿವಾರ, ಬಡ ತಾಯಿ, ಅನೇಕ ಮಕ್ಕಳು. ದಿನಕ್ಕೆ ಎರಡು ಬಾರಿ ಊಟ ಕಂಡಿದ್ದೇ ಅಪರೂಪ. ಆ ಮಕ್ಕಳಲ್ಲಿ ಒಬ್ಬಳು ಇಂಗರ್. ಒಂದು ಬಾರಿ ಬೇರೆ ಊರಿನ ಜಮೀನುದಾರರು ಈ ಗ್ರಾಮಕ್ಕೆ ಬಂದು ಚೆಂದದ ಇಂಗರ್‌ಳನ್ನು ನೋಡಿ ಕನಿಕರದಿಂದ ತಮ್ಮ ಊರಿಗೆ ಕರೆದೊಯ್ಯಲು ತಂದೆ-ತಾಯಿಯರನ್ನು ಕೇಳುತ್ತಾರೆ.ತಾಯಿ ಹೇಗೆ ಒಪ್ಪಿಯಾಳು? ಆದರೆ ಇಂಗರ್, `ಅಮ್ಮೋ ನಾನು ಹೋಗುತ್ತೇನೆ. ಇಲ್ಲಿಯೇ ಇದ್ದು ನರಕ ಅನುಭವಿಸುವುದಕ್ಕಿಂತ ಪಟ್ಟಣದ ಸ್ವರ್ಗಕ್ಕೆ ಹೋಗುತ್ತೇನೆ. ಇದೂ ಒಂದು ಜೀವನವೇ? ಹಂದಿಯ ಬದುಕು ನನಗೆ ಸಾಕಾಗಿದೆ~  ಎಂದು ಧಿಕ್ಕರಿಸಿ ಹೊರಟೇ ಹೋಗುತ್ತಾಳೆ, ಅಸಹಾಯಕ ತಾಯಿ ಹಾಗೂ ಸಹೋದರ, ಸಹೋದರಿಯರನ್ನು ಬಿಟ್ಟು.

ಅಲ್ಲಿ ಅವಳಿಗೆ ಅಕ್ಷರಶಃ ಸ್ವರ್ಗವೇ ದೊರೆಯುತ್ತವೆ.ಮನೆಯ ಯಜಮಾನಿತಿ ಅವಳನ್ನು ಸ್ವಂತ ಮಗಳಂತೆಯೇ ನೋಡಿಕೊಳ್ಳುತ್ತಾಳೆ. ಅವಳಿಗಾಗಿಯೇ ಒಂದು ಸುಂದರವಾದ ಕೋಣೆಯನ್ನು ಕೊಡುತ್ತಾರೆ. ರುಚಿಯಾದ ಆಹಾರ, ಆರೈಕೆ, ಸವಲತ್ತುಗಳಿಂದ ಇಂಗರ್‌ಳಿಗೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಮನೆಯ ಯೋಚನೆಯೇ ಆಕೆಗೆ ಬರುವುದಿಲ್ಲ.ಒಂದು ವರ್ಷದ ಮೇಲೆ ಚಳಿಗಾಲ ಬರುತ್ತಿರುವಾಗ ಮನೆಯ ಯಜಮಾನಿ ಇಂಗರ್‌ಳನ್ನು ಕರೆದು, `ಇಂಗರ್, ನೀನು ಮನೆಯಿಂದ ಬಂದು ವರ್ಷವಾಗುತ್ತಲಿದೆ. ಒಮ್ಮೆ ಮನೆಗೆ ಹೋಗಿ ಬಾ. ಅವರೆಲ್ಲ ನಿನ್ನನ್ನು ತುಂಬ ನೆನಸುತ್ತಿರಬೇಕು. ನಿಮ್ಮ ಮನೆಯವರಿಗೆಲ್ಲ ಬೆಚ್ಚನೆಯ ಬಟ್ಟೆಗಳನ್ನು ಈ ಬುಟ್ಟಿಯಲ್ಲಿ ಹಾಕಿದ್ದೇನೆ. ಅವರಿಗೆ ಕೊಟ್ಟು ಬಾ~ ಎಂದು ಹೇಳಿದಳು.ಇಲ್ಲವೆನ್ನಲಾರದೇ ಇಂಗರ್ ಬುಟ್ಟಿ ಹೊತ್ತು ನಡೆದಳು. ತನ್ನ ಊರ ಹತ್ತಿರ ಬಂದಾಗ ಒಂದು ಮರದ ಕೆಳಗಡೆ ತಾಯಿ ಕುಳಿತಿದ್ದು ಕಾಣಿಸಿತು. ಅದೇ ಹರಕುಬಟ್ಟೆ, ಒಣಗಿದ ಶರೀರ, ಪಕ್ಕದಲ್ಲೇ ಕಟ್ಟಿಗೆಯ ಹೊರೆ. ಅವಳ ಸುತ್ತಮುತ್ತ ಓಡಾಡುತ್ತಿದ್ದ ಇಬ್ಬರು ತಂಗಿಯರು. ತಾನು ಹಾಕಿಕೊಂಡ ಬಟ್ಟೆಯನ್ನೊಮ್ಮೆ ನೋಡಿಕೊಂಡಳು.

 

`ಛೇ, ಎಂಥ ದರಿದ್ರದವರು ಇವರೆಲ್ಲ. ಒಳಗೆ ಮತ್ತೇಕೆ ಹೋಗಲಿ~ ಎಂದುಕೊಂಡು ಮರಳಿ ನೇರವಾಗಿ ಪಟ್ಟಣದ ಮನೆಗೇ ಬಂದು ಯಾರಿಗೂ ಹೇಳದೇ ಬೆಚ್ಚನೆಯ ಬಟ್ಟೆಗಳ ಬುಟ್ಟಿಯನ್ನು ಅಟ್ಟದ ಮೇಲೆ ಮುಚ್ಚಿಟ್ಟಳು. ತನ್ನ ಹಳ್ಳಿಯ ಪರಿವಾರಕ್ಕೆ ಈ ಬಟ್ಟೆಗಳು ಚಳಿಗಾಲದಲ್ಲಿ ಎಷ್ಟು ಸಹಾಯಮಾಡುತ್ತಿದ್ದವು ಎಂಬ ಕಲ್ಪನೆ ಅವಳಿಗೆ ಬರಲೇ ಇಲ್ಲ.ಮರುವರ್ಷ ಮತ್ತೆ ಮನೆಯ ಯಜಮಾನಿ,  `ಇಂಗರ್, ಮನೆಗೆ ಹೋಗದೇ ಎಷ್ಟು ತಿಂಗಳುಗಳು ಆದುವಲ್ಲ? ಈ ಬಾರಿ ಬುಟ್ಟಿಯಲ್ಲಿ ರುಚಿರುಚಿಯಾದ ಆಹಾರಗಳನ್ನು ತುಂಬಿದ್ದೇನೆ. ನಿನ್ನ ಪರಿವಾರದವರಿಗೆಲ್ಲ ಕೊಟ್ಟು ಬಾ. ಹಬ್ಬದ ದಿನಗಳಲ್ಲಿ ಅವರಿಗೆ ತುಂಬ ಸಂತೋಷವಾಗುತ್ತದೆ~ ಎಂದಳು. ಇಂಗರ್ ಮನಸ್ಸಿಲ್ಲದೇ ಊರಿಗೆ ಹೊರಟಳು. ಊರು ಇನ್ನೇನು ಹತ್ತಿರ ಬಂತು ಎನ್ನುವಾಗ ರಸ್ತೆಯಲ್ಲಿ ಕೆಸರಿನ ಗುಂಡಿ ಕಂಡಿತು.ಅದನ್ನು ದಾಟಲೇ ಬೇಕು. ಆದರೆ ಕೆಸರಿನಲ್ಲಿ ಕಾಲಿಟ್ಟರೆ ತನ್ನ ಸುಂದರ ಚಪ್ಪಲಿಗಳು ಕೊಳೆಯಾಗುತ್ತವಲ್ಲ ಎಂದು ಚಿಂತಿಸಿ ತಾನು ತಂದಿದ್ದ ತಿಂಡಿಯ ಬುಟ್ಟಿಯನ್ನು ಕೆಸರಿನಲ್ಲಿ ಎಸೆದಳು. ಅದರ ಮೇಲೆ ಒಂದು ಕಾಲಿಟ್ಟು ಆ ಕಡೆಗೆ ಹಾರುವುದು ಅವಳ ಉದ್ದೇಶ.ಬುಟ್ಟಿಯ ಮೇಲೆ ಕಾಲಿಟ್ಟೊಡನೆ ಅದು ಒಳಗೆ ಕುಸಿಯತೊಡಗಿತು. ಅದು ಆಳವಾದ ಕೆಸರಿನ ಹೊಂಡ. ಕ್ಷಣದಲ್ಲಿಯೇ ಅವಳು ಕುತ್ತಿಗೆಯವರೆಗೂ ಸಿಕ್ಕುಬಿದ್ದಿದ್ದಳು. ಹೊಟ್ಟೆ ತೊಳಸಿ ಬರುವಂಥ ಕೊಳಕು ವಾಸನೆ! ಆಗ ಹೊಂಡದಲ್ಲೊಬ್ಬ ರಾಣಿ ಕಾಣಿಸಿದಳು.`ಇಂಗರ್, ನಿನ್ನಂಥ ಕೃತಘ್ನರಿಗೆ ಇದೇ ಸರಿಯಾದ ಸ್ಥಾನ. ನಿನಗಾಗಿ ಜೀವತೆತ್ತು, ಬೆಳೆಸಿದ ತಾಯಿಯನ್ನು ನಿರ್ಲಕ್ಷಿಸಿ ತೊರೆದ ನಿನಗೆ ಇದೇ ಶಿಕ್ಷೆ ಸರಿ. ಇನ್ನೊಂದು ಕ್ಷಣದಲ್ಲಿ ನಿನ್ನ ದೇಹ ಕಲ್ಲಾಗುತ್ತದೆ. ನಿನ್ನನ್ನು ಅತ್ಯಂತ ಪ್ರೀತಿಸಿದವರ ರಕ್ತ ನಿನ್ನ ಮೇಲೆ ಬಿದ್ದರೆ ಮಾತ್ರ ನಿನಗೆ ಮುಕ್ತಿ. ಇಲ್ಲವಾದರೆ ಇದೇ ನಿನ್ನ ಗತಿ~ ಎಂದು ಗಹಗಹಿಸಿ ನಕ್ಕಳು.ಕ್ಷಣದಲ್ಲಿಯೇ ಯಾರೋ ಹೊಂಡದಲ್ಲಿ ಹಾರಿಕೊಂಡಂತಾಯಿತು. ಇಂಗರ್ ತಿರುಗಿ ನೋಡಿದರೆ ತನ್ನ ತಾಯಿ!  `ಅಮ್ಮೋ ನೀನೇಕೆ ಬಂದೆ ಇಂಥ ಕೃತಘ್ನ ಮಗಳಿಗಾಗಿ? ನನ್ನ ದ್ರೋಹಕ್ಕೆ ಇದೇ ಶಾಸ್ತಿ~ ಎಂದಳು ಇಂಗರ್.ತಾಯಿ, `ಮಗೂ ನೀನು ನನ್ನನ್ನು ದ್ವೇಷಿಸಿದರೂ ನಾನು ನಿನ್ನನ್ನು ಸದಾ ಪ್ರೀತಿಸುತ್ತೇನೆ ಕಂದಾ~ ಎಂದು ಹೊಂಡದ ರಾಣಿಯ ಕೈಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ತನ್ನೆದೆಗೆ ಚುಚ್ಚಿಕೊಂಡಳು.

 

ರಕ್ತ ಛಲ್ಲನೇ ಚಿಮ್ಮಿತು, ಇಂಗರ್‌ಳ ದೇಹವನ್ನು ನೆನಸಿತು. ಕಲ್ಲಾಗುತ್ತಿದ್ದ ದೇಹಕ್ಕೆ ಮತ್ತೆ ಜೀವ ಬಂತು. ಬಸವಳಿಯುತ್ತಿದ್ದ ತಾಯಿಯನ್ನು ಅಪ್ಪಿಕೊಂಡು ಇಂಗರ್ ಪಶ್ಚಾತ್ತಾಪದ ಕಣ್ಣೀರ ಮಳೆ ಸುರಿಸಿದಳು.

 

ಆ ನೀರು ತಾಯಿಯ ಎದೆಗಾದ ಗಾಯದ ಮೇಲೆ ಬಿದ್ದೊಡನೆ ಗಾಯಮಾಯ್ದು ರಕ್ತ ನಿಂತಿತು. ಒಬ್ಬರೊಬ್ಬನ್ನೊಬ್ಬರು ಅವ್ಯಾಜ ಅಂತಃಕರಣದಿಂದ ಅಪ್ಪಿಕೊಂಡಿರು. ನಿರ್ಮಲ ಪ್ರೀತಿ, ಅಹಂಕಾರವನ್ನು ಜಯಿಸಿತ್ತು!ದೈಹಿಕ ಭೋಗ, ಸೌಕರ್ಯಗಳು ಕೆಲವೊಮ್ಮೆ ನಿರ್ಮಲ ಪ್ರೀತಿಯನ್ನು ಮರೆಸುತ್ತವೆ. ಪ್ರೀತಿಗಿಂತ ಯಾವುದೂ ದೊಡ್ಡದಲ್ಲ. ಅದರ ಮಹತ್ವವನ್ನು ಅರಿಯದೇ ಬದುಕಿದ ಬಾಳು ಮರುಭೂಮಿಯಲ್ಲಿ ನಡೆಸಿದ ಬರಡುಯಾನ, ವ್ಯರ್ಥ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry