ಅಂತರರಾಷ್ಟ್ರೀಯ ಚಿತ್ರೋತ್ಸವದ ಸಂಭ್ರಮ

7

ಅಂತರರಾಷ್ಟ್ರೀಯ ಚಿತ್ರೋತ್ಸವದ ಸಂಭ್ರಮ

ಎಸ್.ಆರ್. ರಾಮಕೃಷ್ಣ
Published:
Updated:

 


ಬೆಂಗಳೂರಿನ ಐದನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (biffes) ಭರದಿಂದ ನಡೆಯುತ್ತಿದೆ. ಶನಿವಾರ ಗರುಡಾ ಐನಾಕ್ಸ್ ಚಿತ್ರಮಂದಿರದಲ್ಲಿ ಚಿಲಿ ದೇಶದ ಚಿತ್ರವೊಂದನ್ನು ನಾನು ನೋಡಿದೆ. ರಾತ್ರಿ ಒಂಬತ್ತು ಗಂಟೆಯ ಆಟ ಆದ್ದರಿಂದಲೋ ಏನೋ ಚಿತ್ರಮಂದಿರ ಪೂರ್ತಿ ತುಂಬಿರಲಿಲ್ಲ. ಆದರೂ ಸಾಕಷ್ಟು ಮಂದಿ ಚಿತ್ರಾಸಕ್ತರು ಬಂದಿದ್ದರು. ಚಿತ್ರದ ಹೆಸರು ಇವಾನ್ಸ್ ವುಮನ್.  

 

ನಿರ್ದೇಶಕಿ ಫ್ರಾನ್ಸಿಸ್ಕ ಸಿಲ್ವಾ ಕೂಡ ಅಲ್ಲಿಯೇ ಇದ್ದರು. ಇಂಥ ಅನಿರೀಕ್ಷಿತಗಳು ಚಿತ್ರೋತ್ಸವದ ಸಂಭ್ರಮವನ್ನು ಹೆಚ್ಚಿಸುತ್ತವೆ. ಫ್ರಾನ್ಸಿಸ್ಕ ಚಿತ್ರ ರಸಿಕರೊಂದಿಗೆ ಒಂದಷ್ಟು ಹೊತ್ತು ಮಾತಾಡಿದರು. ಇಂಗ್ಲಿಷ್ ತಡವರಿಸುತ್ತಾ ಮಾತಾಡುವ 39 ವರ್ಷದ ಫ್ರಾನ್ಸಿಸ್ಕ ತಾವು ಕಂಡ ಒಂದು ಘಟನೆಯನ್ನು ಆಧರಿಸಿ ತಮ್ಮ ಮೊದಲ ಪೂರ್ಣಪ್ರಮಾಣದ ಚಿತ್ರ ಇವಾನ್ಸ್ ವುಮನ್ ಮಾಡಿದುದಾಗಿ ಹೇಳಿದರು. ಒಬ್ಬ ಅಪಹರಣಕಾರ ಮತ್ತು ಅಪಹರಣಗೊಂಡ ಹುಡುಗಿಯ ನಡುವೆ ಬೆಳೆಯುವ ವಿಚಿತ್ರ ಸಂಬಂಧದ ಕಥೆ ಹೇಳುವ ಚಿತ್ರವನ್ನು ಅವರು ಅತಿ ಕಡಿಮೆ ಖರ್ಚಿನಲ್ಲಿ ಮಾಡಿದ್ದಾರೆ.ಅಪಹರಣದ ಕಥೆಗಳು ಎಲ್ಲ ದೇಶದ ಮಹಾಕಾವ್ಯಗಳಲ್ಲೂ ಇರುತ್ತವೆ ಎಂದು ಹೇಳಿದರು. (ಮಣಿರತ್ನಂ ಇದೇ ವಸ್ತುವನ್ನು ರಾಮಾಯಣದಿಂದ ಹೆಕ್ಕಿ `ರಾವಣ್' ಎಂಬ ಸಿನಿಮಾ ಮಾಡಿದ್ದಾರೆ.)  ದೊಡ್ಡ ಪ್ರಮಾಣದ ಸಾಹಸ ದಶ್ಯಗಳನ್ನು ತೋರಿಸುವ ಬದಲು ಮಾನಸಿಕ ತೊಳಲಾಟವನ್ನು ಸೆರೆ ಹಿಡಿಯುವ ಫ್ರಾನ್ಸಿಸ್ಕರಂಥ ಚಿತ್ರಗಳನ್ನು ಮಾಡಲು ಒಂದಷ್ಟು ಬಂಡವಾಳದ ಜೊತೆ ಹೆಚ್ಚಿನ ಪ್ರಮಾಣದ ಕಲಾವಂತಿಕೆ ಮತ್ತು ಛಲ ಬೇಕು.ಹಾಲಿವುಡ್ ಮತ್ತು ಮುಂಬೈನ ಭರ್ಜರಿ ಬಜೆಟ್ ಸಿನಿಮಾಗಳ ಜೊತೆಜೊತೆಗೆ ಇಂಥ ಚಿತ್ರಗಳೂ ನೋಡುವ ಅವಕಾಶ ಒಂದೋ ಎರಡೋ ಚಿತ್ರಮಂದಿರದಲ್ಲಿ ಸತತವಾಗಿ ಇದ್ದರೆ ಚೆನ್ನಾಗಿರುತ್ತದೆ ಎಂದು ಚಿತ್ರರಸಿಕರು ಯಾವಾಗಲೂ ಮಾತನಾಡಿಕೊಳ್ಳುತ್ತಿರುತ್ತಾರೆ. ಆದರೆ ಒಂದಾದ ಮೇಲೊಂದು ಅಪರೂಪದ ಚಿತ್ರ ನೋಡಲು ಅವಕಾಶ ಸಿಗುವುದು ಚಿತ್ರೋತ್ಸವಗಳು ನಡೆದಾಗ ಮಾತ್ರ. (ಡಿವಿಡಿ ಹಾಕಿಕೊಂಡು ನೋಡಬಹುದು, ಆದರೆ ದೊಡ್ಡ ಪರದೆಯ ಅನುಭವವೇ ಬೇರೆ, ಮತ್ತು ಚಿತ್ರೋತ್ಸವದಲ್ಲಿ ನಿರ್ದೇಶಕರನ್ನು ಕಣ್ಣಾರೆ ನೋಡಬಹುದಲ್ಲ!) ವಿದೇಶಿ ಚಿತ್ರಗಳು ಒಂದೂವರೆ ಗಂಟೆಗಿಂತ ದೀರ್ಘವಾಗಿರುವುದು ವಿರಳ.ಬಿಡುವಿದ್ದರೆ ಒಂದೆರಡು ಚಿತ್ರವನ್ನಾದರೂ ನೋಡಿ ಬನ್ನಿ. ಲಿಡೋ, ಗರುಡ ಐನಾಕ್ಸ್, ಸುಲೋಚನ ಮತ್ತು ಪ್ರಿಯದರ್ಶಿನಿಯಲ್ಲಿ ಡಿಸೆಂಬರ್ 27ರ ವರೆಗೆ ಚಿತ್ರೋತ್ಸವ ನಡೆಯುತ್ತಿದೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿದಿನ ಉಚಿತ ಪ್ರದರ್ಶನಗಳನ್ನು ನೋಡಬಹುದು.ಫೈಯಾಜ್ ಖಾನರ ಅರೋಗ್ಯ : ಹಲವಾರು ಟಿವಿ ಶೀರ್ಷಿಕೆ ಗೀತೆಗಳನ್ನು ಮತ್ತು ಚಿತ್ರಗೀತೆಗಳನ್ನು ಹಾಡಿರುವ ಫೈಯಾಜ್ ಖಾನರು ಕನ್ನಡ ಸಂಗೀತ ಪ್ರೇಮಿಗಳಿಗೆ ಚಿರ ಪರಿಚಿತ. ಅವರ ಕಲೆ ಇದಕ್ಕಿಂತಲೂ ವಿಸ್ತಾರವಾದದ್ದು. ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ಏಕೈಕ ಸಾರಂಗಿ ವಾದಕರಾದ ಫೈಯಾಜ್ ಹಿಂದೂಸ್ತಾನಿ ಹಾಡುಗಾರಿಕೆಗೂ ಪ್ರಸಿದ್ಧ. ಪುರಂದರ ದಾಸರ ಪದಗಳನ್ನು ಅದ್ಭುತವಾಗಿ ಹಾಡುತ್ತಾರೆ.ಈಚೆಗೆ ಕಾರ್ ಅಪಘಾತದಲ್ಲಿ ಕಾಲಿಗೆ ಜೋರಾಗಿ ಪೆಟ್ಟಾಗಿ ಅವರಿಗೆ ನಡೆಯುವುದು ಕಷ್ಟವಾಗಿದೆ. ಇದೇ ಅಪಘಾತದಲ್ಲಿ ತಮ್ಮ ಪತ್ನಿ ಪರ್ವೀನ್ ಬಾನುರನ್ನು ಕಳೆದುಕೊಂಡಿದ್ದಾರೆ. ಸ್ನೇಹಪರ, ಸೌಮ್ಯ ಸ್ವಭಾವದ ಫೈಯಾಜರಿಗೆ ಬೆಂಬಲ ಸೂಚಿಸಲು ಸಂಗೀತಗಾರರೆಲ್ಲ ಸೇರಿ ಶುಕ್ರವಾರ ರಾಜೀವ್ ತಾರಾನಾಥರ ಸರೋದ್ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅನನ್ಯ ಅಕಾಡೆಮಿಯಂಥ ಸಂಸ್ಥೆಗಳು ಅವರ ನೆರವಿಗೆ ನಿಂತಿವೆ. ಡಾ. ಆರ್.ವಿ.ರಾಘವೇಂದ್ರ ಅವರು ಹೇಳುವಂತೆ, `ಈ ಕಲಾವಿದರ ಜೊತೆಗೆ ನಿಲ್ಲುವುದು ಸಮುದಾಯದ ಕರ್ತವ್ಯ. ಸಂಗೀತ ಪ್ರೇಮಿಗಳು, ಫೈಯಾಜರ ಅಭಿಮಾನಿಗಳು ಹೇಗಾದರೂ ನೆರವಾಗಬಹುದೇ ಎಂದು ಕೇಳುತ್ತಿದ್ದಾರೆ. ಅಂಥವರಿಗೆ ಅನನ್ಯ ಸಂಸ್ಥೆಯ ನಂಬರ್ ಇಲ್ಲಿದೆ: 99809 99110      ಅನಂತಮೂರ್ತಿ ಅವರ ಭೇಟಿ  : ಡಾ. ಯು.ಆರ್.ಅನಂತಮೂರ್ತಿ ಅವರನ್ನು 15 ವರ್ಷದ ನಂತರ ಮೊನ್ನೆ ಮಾತನಾಡಿಸಿದೆ. ನಾನು `ಡೆಕ್ಕನ್ ಹೆರಾಲ್ಡ್' ಪತ್ರಿಕೆಯಲ್ಲಿ ಅವರ ಲೇಖನಗಳನ್ನು ಬರೆದು ಪ್ರಕಟಿಸಿದ್ದನ್ನು ನೆನಪಿಸಿಕೊಂಡರು. 80 ತುಂಬಿದ ಅವರ ಲವಲವಿಕೆ ವಿಸ್ಮಯ ಹುಟ್ಟಿಸುವಂತಿದೆ. ಇಂಗ್ಲಿಷ್ ಪತ್ರಿಕೆಗೆ ಅವರನ್ನು ಸಂದರ್ಶನ ಮಾಡಿದೆ.ಅವರ ಆತ್ಮಕಥೆ ಸುರಗಿಯ ಭಾಗಗಳನ್ನು ಓದಿ ಕೆಲವನ್ನು ಅನುವಾದ ಮಾಡಿದೆ. ಅವರ ಹಲವು ಮುಖ ನನ್ನ ಪೀಳಿಗೆಯವರಿಗೆ ಅಷ್ಟು ತಿಳಿದಿಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಅಡಗಿಕೊಂಡಿದ್ದ ಜಾರ್ಜ್ ಫೆರ್ನಾನ್ಡಿಸ್ರನ್ನು ಅನಂತಮೂರ್ತಿಯವರು ಭೇಟಿ ಮಾಡಿದ ಅಧ್ಯಾಯ ಥ್ರಿಲ್ಲಿಂಗ್ ಆಗಿದೆ. ಇಂಥ ಎಷ್ಟೋ ವಿಷಯ ನೆನಪಿಂದ ಮರೆಯಾಗದಂತೆ ಅನಂತಮೂರ್ತಿಯವರು ದಾಖಲಿಸಿದ್ದಾರೆ. ಓದಿ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry