ಗುರುವಾರ , ಮೇ 19, 2022
21 °C

ಅಂದಿನ ನೇತಾರರು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯಹೋರಾಟ ತೀವ್ರಗತಿಯಲ್ಲಿ ನಡೆಯುತ್ತಿತ್ತು. ಎಲ್ಲೆಲ್ಲಿಯೂ ದೇಶಪ್ರೇಮದ ಅಲೆಗಳು ಏಳುತ್ತಿದ್ದವು. ಅಲಹಾಬಾದಿನಲ್ಲಿ ನಗರ ಮಧ್ಯದಲ್ಲಿದ್ದ ಗಡಿಯಾರದ ಗೋಪುರದ ಮೇಲೆ ತ್ರಿವರ್ಣ ಧ್ವಜ  ಹಾರಿಸಲು ಯೋಜನೆ ನಡೆಯುತ್ತಿದೆ ಎಂಬ ಸುದ್ದಿ ಬ್ರಿಟಿಷ್ ಅಧಿಕಾರಿಗಳಿಗೆ ತಿಳಿದಿತ್ತು.



ಅದು ನಡೆಯದಂತೆ ನೋಡಿಕೊಳ್ಳಲು ಪೋಲೀಸರ ಪಡೆಯೇ ಗೋಪುರ ಸುತ್ತುವರೆದು ನಿಂತಿತ್ತು. ಒಬ್ಬರನ್ನೂ ಗೋಪುರದ ಹತ್ತಿರವೂ ಬಿಡಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಒಂದು ಜಟಕಾ ಗಾಡಿಯಲ್ಲಿ ಪುಟ್ಟ ಮುಸ್ಲಿಂ ಮಹಿಳೆಯೊಬ್ಬಳು ಕೆಳಗಿಳಿದಳು. ಆಕೆ ಸಂಪೂರ್ಣವಾಗಿ ಬುರ್ಖಾ ಹಾಕಿಕೊಂಡಿದ್ದಳು. ಆಕೆ ತಲೆತಗ್ಗಿಸಿಕೊಂಡು ಗೋಪುರದ ಪಕ್ಕದ ಸಂದಿಯಲ್ಲಿ ಹೋಗಬೇಕೆಂದು ಕೈಸನ್ನೆ ಮಾಡಿ ಹೇಳಿದಳು. ಪೋಲೀಸರು ಪರವಾನಗಿ ಕೊಟ್ಟರು.



ಮುಂದೆ ಐದು ನಿಮಿಷಗಳಲ್ಲಿ ತ್ರಿವರ್ಣಧ್ವಜ ಗಡಿಯಾರದ ಗೋಪುರದ ಮೇಲೆ ಹಾರತೊಡಗಿತು. ಇಷ್ಟು ಬಲವಾದ ಬಂದೋಬಸ್ತಿನಲ್ಲಿ ಯಾರು ಧ್ವಜ ಹಾರಿಸಿರಬಹುದೆಂದು ಎಲ್ಲರೂ ನೋಡುತ್ತಿರುವಂತೆ ಒಬ್ಬ ಕುಳ್ಳ ವ್ಯಕ್ತಿ ಪೋಲೀಸರ ಬಳಿಗೆ ಬಂದು, ನಾನೇ ಸ್ವಾಮೀ ಧ್ವಜ ಹಾರಿಸಿದ್ದು. ಇಗೊಳ್ಳಿ ಇದೇ ಬುರ್ಖಾ ಹಾಕಿಕೊಂಡು ಹೋಗಿದ್ದೆ ಎಂದು ನಿರ್ಭಯವಾಗಿ ಹೇಳಿ ಸ್ವಯಂ ಬಂಧನಕ್ಕೆ ಒಳಗಾದ. ಆ ತರುಣನ ಹೆಸರು ಲಾಲ್‌ಬಹಾದೂರ್ ಶಾಸ್ತ್ರಿ.



ರಾಜಕೀಯದಲ್ಲಿ ನೈತಿಕತೆಯ ಶಿಖರದಂತಿದ್ದ ಲಾಲ್‌ಬಹಾದೂರ್ ಶಾಸ್ತ್ರಿ     ಅವರು ಇಂದಿನ ರಾಜಕಾರಣದ ವ್ಯಕ್ತಿಗಳಿಗೆ ನಿಲುಕಲಾರದ ಗುರಿಯಾಗಿದ್ದಾರೆ. ಅವರು ನಡೆಸಿದ ಜೀವನ ಶೈಲಿ, ಬದುಕಿನ ಮೌಲ್ಯಗಳು ಇಂದಿನವರಿಗೆ ಅವ್ಯಾವಹಾರಿಕ ಮತ್ತು ಮೂರ್ಖತನದ್ದು ಎನಿಸಬಹುದು. 1948 ರಲ್ಲಿ ಶಾಸ್ತ್ರಿ ಅವರು ಉತ್ತರಪ್ರದೇಶ ಸರಕಾರದ ಕ್ಯಾಬಿನೆಟ್ ಮಂತ್ರಿಗಳಾಗಿದ್ದರು.

 

ಅವರ ಸರ್ಕಾರಿ  ಮನೆಗೆ ಹವಾನಿಯಂತ್ರಣ ಯಂತ್ರವನ್ನು ಅಳವಡಿಸಲು ವ್ಯವಸ್ಥೆಯಾಗುತ್ತಿತ್ತು. ಶಾಸ್ತ್ರಿ ಅವರು ರಾತ್ರಿ ಮನೆಗೆ ಬಂದಾಗ ಆ ಯಂತ್ರವನ್ನು  ನೋಡಿ ಅದು ಯಾಕೆ ಇಲ್ಲಿದೆ. ಇದನ್ನು ಯಾರು ತರಿಸಿದರು ಎಂದು ಕೇಳಿದರು. ಆಗ ಅವರ ಪತ್ನಿ ಲಲಿತಾ ಶಾಸ್ತ್ರಿ ಅವರು,   ಬೇಸಿಗೆ ಬರುತ್ತದಲ್ಲ.



ವಿಪರೀತ ಶೆಖೆ ಇರುವುದರಿಂದ ಇದನ್ನು ಸರ್ಕಾರದವರೇ ಹಾಕಿಸುತ್ತಿದ್ದಾರೆ. ನಾವೇನೂ ಅದು ಬೇಕು ಎಂದು ಕೇಳಿರಲಿಲ್ಲ ಎಂದರು. ಆಗ ಶಾಸ್ತ್ರಿ ಅವರು ಹೇಳಿದ್ದೆೀನು ಗೊತ್ತೇ. `ಛೇ ಛೇ, ಇದು ಬೇಡ. ನಾನು ಮಂತ್ರಿಯಾಗಿರುವುದು, ಅಧಿಕಾರದಲ್ಲಿ ಇರುವುದು ಶಾಶ್ವತವಲ್ಲ. ಅವಧಿ ಮುಗಿದೊಡನೆ ಮತ್ತೆ ನಮ್ಮ ಅಲಹಾಬಾದಿನ ಸಣ್ಣ ಮನೆಗೇ ಹೋಗಬೇಕಲ್ಲ.

 

ಹೀಗೆ ಹವಾನಿಯಂತ್ರಿತ ಮನೆಯಲ್ಲಿದ್ದು ಅದನ್ನೇ ಅಭ್ಯಾಸಮಾಡಿಕೊಂಡರೆ ನಮ್ಮ ಮನೆಗೆ ಹೋದ ಮೇಲೂ ಅದು ಬೇಕು ಎನ್ನಿಸುತ್ತದೆ. ಅದಕ್ಕೆ ದುಡ್ಡನ್ನೆಲ್ಲಿ ತರುವುದು.  ಅದಕ್ಕೆ ಈ ಕೆಟ್ಟ ಚಟವೇ ಬೇಡ~ ಎಂದರು. ಹೀಗೆ ಹೇಳುವುದು ಮಾತ್ರವಲ್ಲ. ತಕ್ಷಣವೇ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿ ಹವಾನಿಯಂತ್ರಣ ಯಂತ್ರವನ್ನು ವಾಪಸ್ ಕಳುಹಿಸಿಬಿಟ್ಟರು!



1954ರಲ್ಲಿ ಕೇಂದ್ರದ ರೇಲ್ವೆ ಮಂತ್ರಿಗಳಾಗಿದ್ದರು ಶಾಸ್ತ್ರಿಗಳು. ಪಕ್ಷದ ಕೆಲಸಗಳಿಗಾಗಿ ಹಳ್ಳಿಗಳಿಗೆ ಹೋಗುತ್ತಿದ್ದರು. ಒಂದು ಬಾರಿ ಮಡಿ ಮಾಡಿದ ಶರ್ಟುಗಳನ್ನು ಸೂಟಕೇಸಿನಲ್ಲಿ ಹಾಕುತ್ತಿದ್ದ ಕಾರ್ಯದರ್ಶಿ ಗಮನಿಸಿದ. ನಾಲ್ಕೂ ಶರ್ಟುಗಳ ಕಾಲರುಗಳು ಹರಿದುಹೋಗಿವೆ! ಅದರಲ್ಲಿ ಒಂದು ಶರ್ಟು ಮಧ್ಯದಲ್ಲೇ ಹರಿದಿದೆ.



ಶಾಸ್ತ್ರಿಗಳಿಗೆ ಇವುಗಳ ಬಗ್ಗೆ ಗಮನವೇ ಇಲ್ಲ.  ಆತನಿಗೆ ಸರಿಕಾಣಲಿಲ್ಲ. ತನ್ನ ಮಂತ್ರಿಗಳು ಹರಕುಶರ್ಟು ಹಾಕಿಕೊಂಡರೆ ಜನ ಏನೆನ್ನುತ್ತಾರೆ ಎಂದು  ಕಾರ್ಯದರ್ಶಿ ಆಲೋಚನೆ ಮಾಡಿ ದರ್ಜಿಯನ್ನು ಕರೆಸಿದ. ಮಧ್ಯದಲ್ಲಿ ಹರಿದುಹೋದ ಶರ್ಟಿನ ಗಟ್ಟಿಯಾದ ಭಾಗದ ಬಟ್ಟೆ ತೆಗೆಯಿಸಿ ಅದರಿಂದಲೇ ಉಳಿದ ಮೂರು ಶರ್ಟುಗಳ ಕಾಲರುಗಳನ್ನು ಮಾಡಿಸಿ ಹೊಲಿಸಿದ.



ಶಾಸ್ತ್ರಿಗಳು ಮೆಚ್ಚಿ ಹೊಗಳಿದರು, ಸರಿ ಬಿಡು, ಮತ್ತೆ ಒಂದು ವರ್ಷ ಶರ್ಟು ಹೊಲಿಸುವ ತಾಪತ್ರಯ ಇಲ್ಲ ಎಂದರು. ಹೀಗಿದ್ದರು ನಮ್ಮ ನೇತಾರರು ಅಂದು. ದಿನಗಳು ಬದಲಾಗಿವೆ. ಆಗಿನ ಹಾಗೆ ಇರುವುದು ಸಾಧ್ಯವಿಲ್ಲ. ಆದರೂ ಈ ಮಟ್ಟದ ಸ್ವಾರ್ಥ, ಭ್ರಷ್ಟತೆ, ಮೋಸ ಅವಶ್ಯವೇ ಎಂದೆನಿಸುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.