ಶುಕ್ರವಾರ, ನವೆಂಬರ್ 22, 2019
26 °C

ಅಂಬಾನಿ ಸಹೋದರರ ರಾಜಿ ವಿಚಾರ

ಕೆ. ಜಿ. ಕೃಪಾಲ್
Published:
Updated:

ಕಳೆದ ವಾರ ಅಂಬಾನಿ ಸಹೋದರರ ರಾಜಿ ವಿಚಾರದಿಂದ ರಿಲಯನ್ಸ್ ಕಮ್ಯುನಿಕೇಷನ್ಸ್ ರೂ55ರ ಸಮೀಪದಿಂದ ಜಿಗಿದು ರೂ69ರ ಸಮೀಪಕ್ಕೆ ಹೋಗಿ ರೂ 63 ರಲ್ಲಿ ಅಂತ್ಯಗೊಂಡು, ಎ ಗುಂಪಿನಲ್ಲಿ ಹೆಚ್ಚಿನ ಏರಿಕೆ ಕಂಡ ಕಂಪೆನಿಯಾಗಿ ಹೊರ ಹೊಮ್ಮಿತು.1.2 ಲಕ್ಷ ಕಿ.ಮೀ. ಉದ್ದದ ಇಂಟರ್ ಸಿಟಿ ಫೈಬರ್ ಆಫ್ಟಿಕಲ್ ಜಾಲವನ್ನು ಹಿರಿಯ ಸಹೋದರನ ಕಂಪೆನಿಯು ಉಪಯೋಗಿಸಿಕೊಳ್ಳಲು ಆದ ಒಪ್ಪಂದದ ಕಾರಣ ಅನಿಲ್ ಅಂಬಾನಿ ಸಮೂಹವು ರೂ1,200 ಕೋಟಿ ಹಣವನ್ನು ಪಡೆಯಲಿದೆ. ಇದು ಸ್ವಾಗತಾರ್ಹ ಬದಲಾವಣೆ. ನಂತರ ಮುಕೇಶ್ ಸಮೂಹವು ರೂ800 ಕೋಟಿ ಹಣವನ್ನು ಅನಿಲ್ ಸಮೂಹದ ಮ್ಯುಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಿರುವುದು ಬೆಸುಗೆಯನ್ನು ಸಧೃಡ ಪಡಿಸುವುದಾಗಿದೆ.ಮತ್ತೊಂದು ಪ್ರಮುಖ ಬೆಳವಣಿಗೆ ಸಕ್ಕರೆ ಮಾರಾಟವನ್ನು ಸರ್ಕಾರಿ ನಿಯಂತ್ರಣ ಮುಕ್ತಗೊಳಿಸಿರುವುದು. ಇದರಿಂದ ಶುಕ್ರವಾರ ಪೇಟೆಯ ಆರಂಭಿಕ ಕ್ಷಣಗಳಲ್ಲಿ ಉತ್ತಮ ಸ್ಪಂದನ ಲಭಿಸಿತಾದರೂ, ನಂತರ ಪ್ರಭಾವ ಕ್ಷೀಣಿಸಿತು. ಇದು ಹೂಡಿಕೆದಾರರ ನಂಬಿಕೆ ಕೊರತೆ ಹಾಗೂ ವಿದೇ ವಿತ್ತೀಯ ಸಂಸ್ಥೆಗಳ ಮಾರಾಟದ ಒತ್ತಡ ಎನ್ನಬಹದು.ಹಿಂದಿನ ವಾರಗಳಲ್ಲಿ ಕೆಲವು ಕಂಪೆನಿಗಳ ಕುಸಿದಿದ್ದ ದರಗಳು ಈ ವಾರ ಉತ್ತಮ ಚೇತರಿಕೆ ಕಾಣುವಂತಾಯಿತು. ಅವುಗಳಲ್ಲಿ ಕೋರ್ ಎಜುಕೇಷನ್ ಟೆಕ್ನಾಲಜಿಸ್ ಸುಮಾರು ರೂ51 ರಿಂದ ರೂ66ರ ವರೆಗೂ ಜಿಗಿದು ರೂ59 ರಲ್ಲಿ ಅಂತ್ಯಗೊಂಡಿತು. ಇಂದ್ರಪ್ರಸ್ತಾ ಗ್ಯಾಸ್ ಕಂಪೆನಿಯು ಪೆಟ್ರೋಲಿಯಂ ಅಂಡ್ ನ್ಯಾಚುರಲ್ ಗ್ಯಾಸ್ ನಿಯಂತ್ರಕ ಸಂಸ್ಥೆಯ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ಮುಂದೂಡಲಾಗಿದೆ.ಇದರಿಂದ ಶುಕ್ರವಾರ ಷೇರಿನ ಬೆಲೆಯು ಸುಮಾರು ರೂ30ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿದ್ದು ಅಚ್ಚರಿ ಮೂಡಿಸಿದೆ. ಶೂನ್ಯ ಮಾರಾಟಗಾರರು, ಕೊಳ್ಳುವಿಕೆಯ ಒತ್ತಡವಿರಬಹುದಾದರೂ ಇಂತಹ ಏರಿಕೆ ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ. ಉಳಿದಂತೆ ಅಸ್ಟ್ರಾಜನಿಕ್ ಫಾರ್ಮಾ, ಆಪ್ಟೋಸರ್ಕ್ಯುಟ್, ಡಾಬರ್‌ಗಳು ಏರಿಕೆ ಪಡೆದು  ಸೂಚ್ಯಂಕ ಕುಸಿತದ ನಡುವೆಯೂ ಪೇಟೆಯಲ್ಲಿ ಮಿಂಚಿದವು.ಒಟ್ಟರೆ ಕಳೆದ ವಾರದಲ್ಲಿ ಸಂವೇದಿ ಸೂಚ್ಯಂಕವು 385 ಅಂಶಗಳಷ್ಟು ಹಾನಿಗೊಳಗಾದರೆ ಮಧ್ಯಮ ಶ್ರೇಣಿ ಸೂಚ್ಯಂಕ ಕೇವಲ 2 ಅಂಶಗಳಷ್ಟು  ಏರಿಕೆಯಿಂದ ಸಮತೋಲನದಲ್ಲಿತ್ತು. ಆದರೆ, ಕೆಳ ಮಧ್ಯಮ ಶ್ರೇಣಿ ಸೂಚ್ಯಂಕ 109 ಅಂಶಗಳಷ್ಟು ಏರಿಕೆಯಿಂದ ವಹಿವಾಟುದಾರರ ಆಸಕ್ತಿಯನ್ನು ತನ್ನತ್ತ ಸೆಳೆದುಕೊಂಡಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ರೂ630 ಕೋಟಿ ಮೊತ್ತದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯ ರೂ63.39 ಲಕ್ಷ ಕೋಟಿಗೆ ಇಳಿದಿದೆ.ಹೊಸ ಷೇರಿನ ವಿಚಾರ

ಕೋಲ್ಕತ್ತ ಮತ್ತು ಮದ್ರಾಸ್ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಜನೆರಾ ಆಗ್ರಿ ಕಾರ್ಪ್ ಲಿ. 5 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಟಿ ಗುಂಪಿನಲ್ಲಿ ವಹಿವಾಟು ಆರಂಭಿಸಿದೆ.ಎಸ್.ಎಂ.ಇ. ವಿಭಾಗದ ಕಂಪೆನಿ ಲಕೋಟೆಯಾ ಪೊಲಿಸ್ಟರ್ಸ್ (ಇಂಡಿಯಾ) ಇತ್ತೀಚೆಗೆ ಪ್ರತಿ ಷೇರಿಗೆ ರೂ35 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು 4 ರಿಂದ ಬಿ.ಎಸ್.ಇ.ಯ ಎಂಟಿ ವಿಭಾಗದಲ್ಲಿ, 4000 ಷೇರುಗಳ ಗುಚ್ಚದೊಂದಿಗೆ ವಹಿವಾಟು ಆರಂಭಿಸಿದೆ.ಎಸ್.ಎಂ.ಇ. ವಿಭಾಗದ ಕಂಪೆನಿ ಜಿ.ಸಿ.ಎಂ. ಸೆಕ್ಯುರಿಟೀಸ್ ಲಿ. ಪ್ರತಿ ಷೇರಿಗೆ ರೂ20 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು 5 ರಿಂದ ಬಿ.ಎಸ್.ಇ.ಯು. ಎಂಟಿ  ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. ಈ ಕಂಪೆನಿಗೆ 6000 ಷೇರುಗಳು ವಹಿವಾಟು ಗುಚ್ಚವೆಂದು ಗೊತ್ತುಪಡಿಸಲಾಗಿದೆ.ಎಸ್.ಆರ್.ಬಿ. ಬೇರಿಂಗ್ಸ್ ಲಿ. ಕಂಪೆನಿಯ ಇಂಡಸ್ಟ್ರಿಯಲ್ ಬೇರಿಂಗ್ಸ್ ವಿಭಾಗವನ್ನು ಬೇರ್ಪಡಿಸಿ ಎನ್.ಆರ್.ಬಿ. ಇಂಡಸ್ಟ್ರಿಯಲ್ ಬೇರಿಂಗ್ಸ್ ಲಿ ರಚಿಸಿ ಎನ್.ಆರ್.ಬಿ. ಬೇರಿಂಗ್ಸ್‌ನ 4 ಷೇರಿಗೆ ಒಂದು ಹೊಸ ಷೇರನ್ನು ನೀಡಲಾಗಿದೆ. ಈ ಹೊಸ ಎನ್.ಆರ್.ಬಿ. ಇಂಡಸ್ಟ್ರಿಯಲ್ ಬೇರಿಂಗ್ಸ್ ಲಿ. ಕಂಪೆನಿ ಷೇರು 9ನೇ ಏಪ್ರಿಲ್‌ನಿಂದ ಟಿ ಗುಂಪಿನಲ್ಲಿ ವಹಿವಾಟಾಗಲಿದೆ.ಬೋನಸ್ ಷೇರಿನ ವಿಚಾರ

ಅನ್ಸಾಲ್ ಹೌಸಿಂಗ್ ಅಂಡ್ ಕನ್ಸ್‌ಟ್ರಕ್ಷನ್ ಲಿ. ಕಂಪೆನಿಯು ವಿತರಿಸಲಿರುವ 2:1ರ ಅನುಪಾತದ ಬೋನಸ್‌ಗೆ ಎಪ್ರಿಲ್ 12 ನಿಗದಿತ ದಿನವಾಗಿದೆ.ಲಾಭಾಂಶ

ಜೆ. ಎಂಬ್ರುವರೀಸ್ ಶೇ 25, ರಿಲಯನ್ಸ್ ಇಂಡಸ್ಟ್ರಿಯಲ್ ಇನ್‌ಫ್ರಾ, 10 ರಂದು, ಕೆಂಫ್ಯಾಬ್ ಆಲ್ಕಲೀಸ್ 11 ರಂದು, ವಿ.ಎಸ್.ಟಿ. ಇಂಡಸ್ಟ್ರೀಸ್ ಮತ್ತು ಮೈಂಡ್ ಟ್ರೀ ಕಂಪೆನಿಗಳು 18 ರಂದು, ಟಾಟ ಎಲಾಕ್ಸ್ 19 ರಂದು ಲಾಭಾಂಶ ಪ್ರಕಟಿಸಲಿವೆ.ವಿಪ್ರೊ ವ್ಯವಸ್ಥಿತ ಯೋಜನೆ

ವಿಪ್ರೊ ಕಂಪೆನಿಯು ಷೇರುದಾರರು ಇಚ್ಚಿಸಿದಲ್ಲಿ ಅಜೀಂ ಪ್ರೇಮ್‌ಜಿ ಕಸ್ಟೋಡಿಯಲ್ ಸರ್ವಿಸಸ್ ಲಿ. (ಕಂಪೆನಿ ಹೆಸರನ್ನು ವಿಪ್ರೋ ಎಂಟರ್ ಪ್ರೈಸಸ್‌ಲಿ. ಎಂದು ಬದಲಿಸುವ ಹಂತದಲ್ಲಿದೆ) ಕಂಪೆನಿಯ ರೂ10ರ ಮುಖ ಬೆಲೆಯ ಒಂದು ಷೇರನ್ನು 5 ವಿಪ್ರೋ ಷೇರುಳ್ಳವರಿಗೆ ನೀಡಲಾಗುವುದಲ್ಲದೆ ಒಂದು ವಿಪ್ರೊ ಎಂಟರ್ ಪ್ರೈಸಸ್‌ನ ಶೇ 7ರ ಬಡ್ಡಿಗಳಿಸುವ ರೂ50ರ ಮುಖ ಬೆಲೆಯ ರಿಡೀಮಬಲ್ ಪ್ರಿಫರನ್ಸ್ ಷೇರು ಹಾಗೂ 1:65 ಹೊಸ ಷೇರು ಪಡೆಯುವವರಿಗೆ ಒಂದು ವಿಪ್ರೊ ಷೇರನ್ನು ನೀಡುವ ಯೋಜನೆ ರೂಪಿಸಿದೆ. ಈ ಆಪ್‌ಶನ್ ನೋಟೀಸನ್ನು ಪಡೆಯಲು ಏಪ್ರಿಲ್ 11 ನಿಗದಿತ ದಿನವಾಗಿದೆ. ಈ ಆಪ್‌ಶನ್ ನೋಟೀಸ್ ಹಸ್ತಾಂತರಕ್ಕೆ ಅವಕಾಶವಿಲ್ಲ.ವಾರದ ವಿಶೇಷ

ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಕಂಪೆನಿಗಳ ಸಂಖ್ಯೆಯು ವಿಶ್ವದ ಪ್ರಮುಖ ಷೇರು ವಿನಿಮಯ ಕೇಂದ್ರಗಳಿಗೆ ಹೋಲಿಸಿದರೆ ಅತಿ ಹೆಚ್ಚಾಗಿದೆ ಎಂಬ ಅಂಶವು ಹೆಮ್ಮೆ ತರುವಂತಾಗಿದೆ. ಇದರಲ್ಲಿ ಎಲ್ಲಾ ತರಹದ ಕಂಪೆನಿಗಳೂ ಇವೆ. ಉತ್ತಮ, ಘನವಾದ, ಸಾಧಾರಣವಾದ, ಕಳಪೆಯಾದ, ಜೊಳ್ಳಿನಂತಹ ಕಂಪೆನಿಗಳೂ ಇವೆ. ಕೇವಲ ಒಂದೆರಡು ಪೈಸೆಗಳಿಗೂ ವಹಿವಾಟಾಗುವಂತಹ ಷೇರುಗಳಿವೆ.ಹಲವಾರು ಬಾರಿ ಕೇವಲ ಒಂದೆರಡು ಷೇರುಗಳು ಮಾತ್ರ ವಹಿವಾಟಾಗಿ ಆವರಣ ಮಿತಿಯ ಹಾವು ಏಣಿಯಾಟದ ಲಾಭ ಪಡೆದ ಸಂದರ್ಭಗಳೂ ಉಂಟು. ಈ ರೀತಿಯ ಅಸಹಜ ಚಟುವಟಿಕೆಗೆ ಮಂಗಳ ಹಾಡಲು ಇಂತಹ ಸುಲಭವಾಗಿ ಮಾರಾಟ ಮಾಡಲಾಗದ ಷೇರುಗಳನ್ನು ಪ್ರತ್ಯೇಕ ಗುಂಪಿನಲ್ಲಿ ವಹಿವಾಟು ನಡೆಸಬೇಕೆಂದು `ಸೆಬಿ'ಯ ಸೆಕಂಡರಿ ಮಾರ್ಕೆಟ್ ಅಡ್ವೈಸರಿ ಕಮಿಟಿ ಶಿಫಾರಸನ್ನು ಜಾರಿಗೊಳಿಸಿದೆ. ಈ ಬೆಳವಣಿಗೆಯು ಮುಂಬೈ ಷೇರು ವಿನಿಮಯ ಕೇಂದ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಕಾರಣ ಎನ್‌ಎಸ್‌ಇಯು. ಇಂತಹ ಷೇರುಗಳಲ್ಲಿ ವಹಿವಾಟು ನಡೆಸದೆ ಕೇವಲ ಕೆನೆಬರಿತ ಕಂಪೆನಿಗಳಿಗೆ ಅವಕಾಶ ಮಾಡಿಕೊಟ್ಟಿದೆ.ಪ್ರತಿ ತ್ರೈಮಾಸಿಕದಲ್ಲಿ ಹತ್ತು ಸಾವಿರ ಷೇರುಗಳಿಗಿಂತ ಕಡಿಮೆ ವಹಿವಾಟಾದಲ್ಲಿ, ಸರಾಸರಿ ದಿನಕ್ಕೆ 50 ವಹಿವಾಟುಗಳು ಪ್ರತಿ ತ್ರೈಮಾಸಿಕದಲ್ಲಿ ದಾಖಲಿಸಲು ವಿಫಲವಾದಲ್ಲಿ ಆ ಕಂಪೆನಿಗಳನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುವುದು ಇವುಗಳನ್ನು ಹೊಸ ಷೇರುಗಳ ಕಾಲ್ ಆಕ್ಷನ್ ಮಾದರಿಯಲ್ಲಿ ವಹಿವಾಟಿಗೆ ಅವಕಾಶ ನೀಡಲಾಗುವುದು. ಮೊದಲ 45 ನಿಮಿಷಗಳಲ್ಲಿ ಆರ್ಡರ್ ಎಂಟ್ರಿ ಮಾಡಬಹುದು, ನಂತರದ 8 ನಿಮಿಷಗಳಲ್ಲಿ ಆರ್ಡರ್ ಮ್ಯಾಚಿಂಗ್ ಮಾಡಿ ನಂತರದ 7 ನಿಮಿಷಗಳ ನಂತರ ಮುಂದಿನ ಚಟುವಟಿಕೆಗೆ ಅವಕಾಶ ನೀಡಲಾಗುವುದು. ಇದು ಒಂದು ದೃಷ್ಠಿಯಲ್ಲಿ ಉತ್ತಮವಾಗಿ ಕಂಡುಬಂದರೂ ಆಸಕ್ತರು ಅಸಹಜ ಚಟುವಟಿಕೆಯಿಂದ ಈ ಗುಂಪಿನಿಂದ ಹೊರಬರಲು ಪ್ರಯತ್ನಿಸಲು ಪ್ರೇರಣೆಯಾಗಿ ಅಸಹಜ ಮಟ್ಟದ ಚಟುವಟಿಕೆಗೆ ಕಾರಣವಾಗಲೂಬಹುದು.ಈ ಹೊಸ ಪದ್ಧತಿ ಜಾರಿಗೊಳಿಸಲು ಮುಂದಾಗಿರುವ ಮುಬೈ ಷೇರು ವಿನಿಮಯ ಕೇಂದ್ರವು ಸುಮಾರು 2050 ಕಂಪೆನಿಗಳ ಪಟ್ಟಿ ಬಿಡುಗಡೆ ಮಾಡಿ ಈ ಕಂಪೆನಿಗಳು 8 ರಿಂದ ವಿಶೇಷ ಗವಾಕ್ಷಿ ಮೂಲಕ ಪೇಟೆ ಪ್ರವೇಶಿಸಲಿವೆ. ಇವುಗಳಲ್ಲಿ ಪ್ರಮುಖ ಕಂಪೆನಿಗಳೂ ಸೇರಿವೆ.ಬಣ್ಣಾರಿಯಮ್ಮನ್ ಶುಗರ್ಸ್, ಬಿಹಾರ್ ಸ್ಪಾಂಜ್, ಡೈಯಮೈನ್ಸ್ ಅಂಡ್ ಕೆಮಿಕಲ್ಸ್, ಕೈನೆಟಿಕ್ ಎಂಜಿನಿಯರಿಂಗ್, ಎಕ್ಸೆಲ್ ಇಂಡಸ್ಟ್ರೀಸ್, ಯೂನಿಫಾಸ್ ಎಂಟರ್‌ಪ್ರೈಸಸ್, ಔರಂಗಾಬಾದ್ ಪೇಪರ್, ಲಕ್ಷ್ಮಿಮಿಲ್ಸ್ ಕಂ, ಮಾಲ್ಪ ಕಾಟನ್; ಸಿಂಪ್ಲೆಕ್ಸ್ ರಿಯಾಲ್ಟಿ, ಝೊಡಿಯಕ್ ವೆಂಚರ್ಸ್, ಶ್ರೀ ದಿನೇಶ್ ಮಿಲ್ಸ್, ಝಡ್ ಎಫ್ ಸ್ಟೀರಿಂಗ್, ಮ್ಯಾಕ್‌ಚಾರ್ಲ್ಸ್, ಫಾಲ್ಕನ್ ಟೈರ್ಸ್‌, ದೀಪಕ್ ಸ್ಪಿನ್ನರ್ಸ್‌, ಸುಖಜಿತ್ ಸ್ಟಾರ್ಚ್, ರಾಣಿ ಬ್ರೆಕ್ಸ್, ರಾಣಿ ಎಂಜಿನ್ ಮುಂತಾದವುಗಳಿವೆ. ಉತ್ತಮ ಗುಣಮಟ್ಟದ ಹೂಡಿಕೆದಾರ ಸ್ನೇಹಿ ಕಂಪೆನಿಗಳು ಚಟುವಟಿಕೆಯಲ್ಲಿಲ್ಲದ ಕಾರಣ ಈ ಶಿಕ್ಷೆಗೆ ಗುರಿಯಾಗಿವೆ. ಇದು ಪೇಟೆಯ ಬೆಳವಣಿಗೆಗೆ ಪೂರಕವೊ? ಅಥವಾ ಮಾರಕವೋ ಮುಂದಿನ ದಿನಗಳು ನಿರ್ಧರಿಸಲಿವೆ.

ಪ್ರತಿಕ್ರಿಯಿಸಿ (+)