ಅಂಬೇಡ್ಕರ್ ನೆನಪು: ಅಂದು ಮತ್ತು ಇಂದು

7

ಅಂಬೇಡ್ಕರ್ ನೆನಪು: ಅಂದು ಮತ್ತು ಇಂದು

ರಾಮಚಂದ್ರ ಗುಹಾ
Published:
Updated:
ಅಂಬೇಡ್ಕರ್ ನೆನಪು: ಅಂದು ಮತ್ತು ಇಂದು

ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿ 2016ರ ಅಕ್ಟೋಬರ್ 14ಕ್ಕೆ ಅರವತ್ತು ವರ್ಷಗಳಾದವು. ರಾಜಕೀಯ ವರ್ಗದ ಗಮನಕ್ಕೆ ಬಾರದೆಯೇ ಈ ಘಟನೆ ನಡೆದ ದಿನ ಸಾಗಿ ಹೋಗಿದೆ. ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಅವರ ಬಗ್ಗೆ ಭಾರಿ ಅಭಿಮಾನ ಪ್ರಕಟಿಸುತ್ತಿರುವ ಭಾರತದ ಇಬ್ಬರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾದ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ಗಮನಕ್ಕೂ ಇದು ಬಂದಿಲ್ಲ. ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ,  ಪ್ರಾದೇಶಿಕ ಪಕ್ಷಗಳ ಯಾವುದೇ ಪ್ರಮುಖ ಮುಖಂಡ ಅಥವಾ ಮಾರ್ಕ್ಸ್‌ವಾದಿ ಮುಖಂಡರು ಈ ದಿನವನ್ನು ನೆನಪಿಸಿಕೊಂಡದ್ದು ನನ್ನ ಗಮನಕ್ಕೆ ಬಂದಿಲ್ಲ. ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತಿರಸ್ಕರಿಸಿದರು ಎಂಬುದನ್ನು ನಾವು ನೆನಪಿಸಿಕೊಳ್ಳುವುದು ಬಿಜೆಪಿಗಾಗಲಿ ಕಾಂಗ್ರೆಸ್‌ಗಾಗಲಿ ಬೇಕಾಗಿಲ್ಲ. ಅಂಬೇಡ್ಕರ್ ಅವರು ನಾಸ್ತಿಕವಾದವನ್ನು ಆಯ್ಕೆ ಮಾಡಿಕೊಳ್ಳದೆ ಬೇರೊಂದು ಧರ್ಮವನ್ನು ಆಯ್ಕೆ ಮಾಡಿಕೊಂಡರು ಎಂಬುದು ಮಾರ್ಕ್ಸ್‌ವಾದಿಗಳಿಗೂ ಇಷ್ಟವಾಗುವ ವಿಷಯ ಅಲ್ಲ.

 

ಈ ತಿಂಗಳ 6ರಂದು  ಅಂಬೇಡ್ಕರ್ ಅವರ ಅರವತ್ತನೇ ಪುಣ್ಯತಿಥಿ ಆಚರಿಸಲಾಗಿದೆ. ಆ ಕಾಲದಲ್ಲಿ ಅಂಬೇಡ್ಕರ್  ಸಾವನ್ನು ಹೇಗೆ ಸ್ವೀಕರಿಸಲಾಯಿತು? ರಾಜಕೀಯ ಮುಖಂಡರು ಮತ್ತು ಸಾಂಸ್ಕೃತಿಕ ನಾಯಕರು ಹೇಗೆ ಪ್ರತಿಕ್ರಿಯೆ ನೀಡಿದರು? ಅರವತ್ತು ವರ್ಷಗಳ ಹಿಂದೆ ಮುದ್ರಣವಾದ ಕೆಲವು ಪತ್ರಿಕೆಗಳ ಮಾಸಿದ ಮೈಕ್ರೊಫಿಲಂಗಳ ಅಧಾರದಲ್ಲಿ ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಈ ಅಂಕಣದಲ್ಲಿದೆ.

 

1956ರ ಡಿ. 6ರಂದು ದೆಹಲಿಯಲ್ಲಿ ಅಂಬೇಡ್ಕರ್ ಮೃತಪಟ್ಟರು. ಇಡೀ ದಿನ ಜನರು ಅಂತಿಮ ದರ್ಶನ ಪಡೆದರು. ಅಂಬೇಡ್ಕರ್ ಅವರು ಸಂವಿಧಾನದ ಶಿಲ್ಪಿ ಎಂದು ಅವರ ಗೌರವಾರ್ಥ ಸಂಸತ್ ಕಲಾಪ ಮುಂದೂಡಿಕೆಗೆ ಮುನ್ನ ಪ್ರಧಾನಿ ಜವಾಹರಲಾಲ್ ನೆಹರೂ ಹೇಳಿದರು. ಸಂವಿಧಾನವನ್ನು ರೂಪಿಸಲು ಅಂಬೇಡ್ಕರ್ ಅವರಷ್ಟು ಕಾಳಜಿ ಮತ್ತು ತೊಂದರೆಯನ್ನು ಬೇರೆ ಯಾರೂ ತೆಗೆದುಕೊಂಡಿಲ್ಲ ಎಂದು ನೆಹರೂ ಬಣ್ಣಿಸಿದರು. ಅಂಬೇಡ್ಕರ್ ಅವರ ಇನ್ನೊಂದು ಅತ್ಯಂತ ದೊಡ್ಡ ಆಸಕ್ತಿಯಾಗಿದ್ದ ಹಿಂದೂ ವೈಯಕ್ತಿಕ ಕಾನೂನುಗಳ ಸುಧಾರಣೆ ಬಗ್ಗೆ ಮಾತನಾಡಿದ ನೆಹರೂ, ಈ ನಿಟ್ಟಿನಲ್ಲಿ  ಸುಧಾರಣೆಗಳು ನಡೆದಿರುವುದು ಅವರ ಸಂತಸಕ್ಕೆ ಕಾರಣವಾಗಿತ್ತು. ಇದು ಅವರೇ ರೂಪಿಸಿದ ಕರಡು ಅಲ್ಲವಾದರೂ ಪ್ರತ್ಯೇಕ ಪ್ರತ್ಯೇಕವಾಗಿ ಹಲವು ಸುಧಾರಣೆಗಳು ಆಗಿವೆ ಎಂದರು. ಈ ಎಲ್ಲಕ್ಕಿಂತ ಮುಖ್ಯವಾಗಿ ಅಂಬೇಡ್ಕರ್ ಅವರನ್ನು ಹಿಂದೂ ಸಮಾಜದ ಎಲ್ಲ ದಮನಕಾರಿ ಆಚರಣೆಗಳ ವಿರುದ್ಧ ಬಂಡಾಯವೆದ್ದ ವ್ಯಕ್ತಿ ಮತ್ತು ಸಂಕೇತವಾಗಿ ನೆನಪಿನಲ್ಲಿ ಇರಿಸಿಕೊಳ್ಳಲಾಗುತ್ತದೆ ಎಂದು ನೆಹರೂ ಹೇಳಿದರು.

 

ಸುದೀರ್ಘ ಕಾಲ ತೀವ್ರವಾಗಿ ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಅಂಬೇಡ್ಕರ್  ಸೇರ್ಪಡೆ ಬಗ್ಗೆಯೂ ನೆಹರೂ ಮಾತನಾಡಿದರು.  ವಿರೋಧ ಪಕ್ಷದವರ ರೀತಿಯಲ್ಲಿ ವರ್ತಿಸುವ ಅವರನ್ನು ಸರ್ಕಾರ ಸೇರುವಂತೆ ನಾನು ಆಹ್ವಾನಿಸಿದಾಗ ಹಲವರಿಗೆ ಆಶ್ಚರ್ಯ ಆಗಿತ್ತು. ಸಂವಿಧಾನ ರೂಪಿಸುವಲ್ಲಿ  ಅತ್ಯಂತ ಮುಖ್ಯವಾದ ಮತ್ತು ರಚನಾತ್ಮಕವಾದ ಪಾತ್ರವನ್ನು ಅವರು ವಹಿಸಿದ್ದರು ಎಂಬುದು ನನ್ನ ತಲೆಯಲ್ಲಿತ್ತು. ಅದೇ ರೀತಿ ಸರ್ಕಾರದಲ್ಲಿಯೂ ಅಷ್ಟೇ  ರಚನಾತ್ಮಕವಾದ ಪಾತ್ರ ವಹಿಸಬಹುದು ಎಂದು ನಾನು ಭಾವಿಸಿದ್ದೆ. ಅದನ್ನು ಅವರು ಮಾಡಿದರು ಎಂದು ನೆಹರೂ ಹೇಳಿದರು.

 

 ಹಿಂದೂ ಸಮಾಜದ ಎಲ್ಲ ದಮನಕಾರಿ ಅಂಶಗಳ ವಿರುದ್ಧದ ಬಂಡಾಯದ ಸಂಕೇತ ಎಂದು ನುಡಿನಮನದ ಮೊದಲ ಭಾಗದಲ್ಲಿ  ನೆಹರೂ ಅವರು ಅಂಬೇಡ್ಕರ್ ಅವರನ್ನು ಬಣ್ಣಿಸಿರುವುದು ಹೆಚ್ಚು ಔದಾರ್ಯದಿಂದ ಕೂಡಿದೆ. ಎರಡನೆಯದು, ಆಶ್ರಯದಾತನ ರೀತಿಯ ಹೇಳಿಕೆ- ಅಲ್ಲಿ ನೆಹರೂ ತಮ್ಮ ಬಗ್ಗೆಯೇ ಗಮನ ಸೆಳೆಯಲು ಬಯಸುತ್ತಾರೆ. ಅಂಬೇಡ್ಕರ್ ಅವರ ವಿರೋಧವನ್ನು ಮಣಿಸಿ ಆ ಮೂಲಕ ವಿರೋಧ ಪಕ್ಷದ ನಾಯಕನನ್ನು ಸರ್ಕಾರಕ್ಕೆ ಸೇರಿಸುವಲ್ಲಿ ತಮ್ಮ ಪಾತ್ರದತ್ತ ಎಲ್ಲರ ಗಮನ ಹರಿಯುವಂತೆ ಮಾಡುತ್ತಾರೆ.

 

ಭಾರತೀಯ ಜನಸಂಘ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯಾವುದೇ ಮುಖಂಡ ನಮನ ಸಲ್ಲಿಸಿದ ಬಗ್ಗೆ ನಾನು ಪರಿಶೀಲಿಸಿದ ವರದಿಗಳಲ್ಲಿ ಉಲ್ಲೇಖ ಇರಲಿಲ್ಲ. ಅವರು ಈ ಬಗ್ಗೆ ಮೌನವಾಗಿದ್ದಂತೆ ಕಾಣಿಸುತ್ತದೆ. ಹಿಂದೂ ಮಹಾಸಭಾದ ಎನ್.ಸಿ.ಚಟರ್ಜಿ  ಮಾತ್ರ ಅಂಬೇಡ್ಕರ್‌ಗೆ ನಮನ ಸಲ್ಲಿಸುತ್ತಾರೆ. ಅದು ನೆಹರೂ ಅವರಿಗಿಂತಲೂ ಹೆಚ್ಚು ಔದಾರ್ಯ ತೋರುವ ರೀತಿಯಲ್ಲಿತ್ತು. ಚಟರ್ಜಿ ಅವರು ಅಂಬೇಡ್ಕರ್ ಅವರನ್ನು ಆಧುನಿಕ ಭಾರತದ ಅತ್ಯಂತ ಶ್ರೇಷ್ಠ ಹಿಂದೂ ನಾಯಕರಲ್ಲೊಬ್ಬ ಎಂದು ಹೇಳುತ್ತಾರೆ. ‘ದಯಾನಂದ ಸರಸ್ವತಿ, ಗಾಂಧಿ ಮತ್ತು ಸಾವರ್ಕರ್ ಅವರಂತಹ ಹಿಂದೂಗಳು ಹರಿಜನ ಸೋದರ ಸೋದರಿಯರ ಏಳಿಗೆಗಾಗಿ ಶ್ರಮಿಸಿದ್ದಾರೆ. ಆದರೆ ಈ ಇಡೀ ಚಳವಳಿಗೆ ಅಂಬೇಡ್ಕರ್ ಹೊಸ ಆಯಾಮವನ್ನೇ ನೀಡಿದರು. ಅಸ್ಪೃಶ್ಯತೆಯ ಸೋಂಕಿನಿಂದ ಭಾರಿ ಪ್ರಮಾಣದಲ್ಲಿ ತೊಂದರೆಗೆ ನೇರವಾಗಿ ಒಳಗಾದ ವ್ಯಕ್ತಿಯಾದುದರಿಂದ ಅನೈಚ್ಛಿಕವಾಗಿಯೇ ಅವರು ಅದನ್ನು ಮಾಡಿದ್ದಾರೆ’ ಎಂದು ಚಟರ್ಜಿ ಹೇಳಿದ್ದರು.

 

ಜಾತಿ ವ್ಯವಸ್ಥೆಯನ್ನು ಅಂಬೇಡ್ಕರ್ ವಿರೋಧಿಸಲು ಕಾರಣವಾಗಿದ್ದ ಎರಡು ಪ್ರಮುಖ ಅಂಶಗಳನ್ನು ಹಿಂದೂ ಮಹಾಸಭಾದ ಮುಖಂಡ ನಿರ್ಲಕ್ಷಿಸಲು ಯತ್ನಿಸಿದ್ದಾರೆ. ಮೊದಲನೆಯದು, ಅನೈತಿಕ ಮತ್ತು ದಮನಕಾರಿಯಾಗಿದ್ದ ಹಿಂದೂ ಸಾಮಾಜಿಕ ಪದ್ಧತಿಯನ್ನು ಅಂಬೇಡ್ಕರ್ ಅವರು ಬೌದ್ಧಿಕವಾಗಿ ವಿಮರ್ಶಿಸುತ್ತಾರೆ. ‘ದ ಅನಿಹಿಲೇಷನ್ ಆಫ್‌ ಕಾಸ್ಟ್’ ಮುಂತಾದ ಕೃತಿಗಳಲ್ಲಿ ಅದನ್ನು ಕಾಣಬಹುದು. ಅನೈಚ್ಛಿಕ ಎಂದು ಹೇಳುವ ಮೂಲಕ ಅದನ್ನು ಅಲ್ಲಗಳೆಯುವ ಪ್ರಯತ್ನ ಮಾಡಲಾಗಿದೆ. ಎರಡನೆಯದಾಗಿ, ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತಿರಸ್ಕರಿಸಿದ್ದನ್ನು ಚಟರ್ಜಿ ನಿರ್ಲಕ್ಷಿಸಿದ್ದಾರೆ ಅಥವಾ ಹೆಚ್ಚು ನಿಖರವಾಗಿ ಹೇಳಬೇಕೆಂದರೆ ಮುಚ್ಚಿಟ್ಟಿದ್ದಾರೆ. ಅಂಬೇಡ್ಕರ್ ಶ್ರೇಷ್ಠ ಹಿಂದೂ ನಾಯಕರಲ್ಲಿ ಒಬ್ಬರು ಎಂದು ಹೇಳಿರುವುದು ಅಪ್ರಾಮಾಣಿಕವಾದ ಹೇಳಿಕೆ. 1935ರ ವೇಳೆಗೇ ತಮ್ಮನ್ನು ಹಿಂದೂ ಎಂದು ಗುರುತಿಸಿಕೊಳ್ಳಲು ಅಂಬೇಡ್ಕರ್ ನಿರಾಕರಿಸಿದ್ದರು ಮತ್ತು ಕೊನೆಗೆ ಅವರು ಒಬ್ಬ ಬೌದ್ಧನಾಗಿ ಕೊನೆಯುಸಿರೆಳೆದರು.

 

ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಅಂಬೇಡ್ಕರ್ ಸಾವಿನ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ನೋಡೊಣ. 1949- 50ರಲ್ಲಿ ಹಿಂದೂ ವೈಯಕ್ತಿಕ ಕಾನೂನುಗಳ ಸುಧಾರಣೆಗೆ ಅಂಬೇಡ್ಕರ್ (ಮತ್ತು ನೆಹರೂ) ನಡೆಸಿದ ಪ್ರಯತ್ನಗಳನ್ನು ಪ್ರಸಾದ್ ತೀವ್ರವಾಗಿ ವಿರೋಧಿಸುತ್ತಾರೆ. ಆದರೆ ಆರು ವರ್ಷಗಳ ನಂತರ, ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಮತ್ತು ಭಾರತದ ಸಾರ್ವಜನಿಕ ಜೀವನದ ಶ್ರೇಷ್ಠ ವ್ಯಕ್ತಿ ಎಂಬ ಸಂದೇಶವನ್ನು ನೀಡಿದ್ದಾರೆ. ಅಂಬೇಡ್ಕರ್ ಅವರ ತವರು ರಾಜ್ಯದ ಮುಖ್ಯಮಂತ್ರಿ ವೈ.ಬಿ.ಚವಾಣ್ ಅವರು, ಅಂಬೇಡ್ಕರ್ ಅವರನ್ನು ‘ಮಣ್ಣಿನ ಮಗ’ ಎನ್ನುತ್ತಾರೆ.  ಹೊಗಳುವ ಭರದಲ್ಲಿ ಅಂಬೇಡ್ಕರ್ ಅವರು ಬಿಟ್ಟು ಹೋದ ಕ್ರಾಂತಿಕಾರಕ ಮತ್ತು ಸಮಾನತಾವಾದಿ ಪರಂಪರೆಯತ್ತ ರಾಷ್ಟ್ರಪತಿಯಾಗಲಿ, ಅಂಬೇಡ್ಕರ್ ಅವರ ರಾಜ್ಯದ ಮುಖ್ಯಮಂತ್ರಿಯಾಗಲಿ ಗಮನ ಹರಿಸುವುದೇ ಇಲ್ಲ.

ಅಂಬೇಡ್ಕರ್ ಬಗ್ಗೆ ಹೆಚ್ಚು ಒಳನೋಟಗಳುಳ್ಳ ಚಿತ್ರಣ ಕೊಟ್ಟವರು ಸಮಾಜವಾದಿ ಯುವ ಮುಖಂಡ ಮಧು ದಂಡವತೆ. ಶ್ರೇಷ್ಠ ವಿದ್ವಾಂಸ,  ಶಿಕ್ಷಣ ತಜ್ಞ, ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ, ಸಾಮಾಜಿಕ ಅಸಮಾನತೆ ವಿರುದ್ಧದ ದೊಡ್ಡ ಬಂಡಾಯಗಾರ ಮತ್ತು ಸಾಮಾಜಿಕ ಬದಲಾವಣೆಯ ಹಿಂದಿನ ಚಲನಶೀಲ ಶಕ್ತಿ ಎಂದು ಅಂಬೇಡ್ಕರ್ ಅವರನ್ನು ದಂಡವತೆ ಬಣ್ಣಿಸುತ್ತಾರೆ. ಅಂಬೇಡ್ಕರ್ ಸಾಧನೆಯನ್ನು ದಂಡವತೆ ಅವರು ಬಣ್ಣಿಸಿದ ಕ್ರಮವನ್ನು ಸ್ವತಃ ಅಂಬೇಡ್ಕರ್ ಅವರೂ ಒಪ್ಪುತ್ತಿದ್ದರು ಎಂಬುದು ನನ್ನ ಭಾವನೆ. ಚಟರ್ಜಿ, ಪ್ರಸಾದ್  ಮಾತ್ರವಲ್ಲದೆ ನೆಹರೂ ಕೂಡ ಅಂಬೇಡ್ಕರ್ ಅವರು ಗಮನಾರ್ಹವಾದ ವಿದ್ವಾಂಸ ಎಂಬುದನ್ನು ಮರೆತುಬಿಡುತ್ತಾರೆ. ಅಂಬೇಡ್ಕರ್ ಅವರಿಗೆ ಸಲ್ಲಿಕೆಯಾದ ಅತ್ಯುತ್ತಮ ನುಡಿನಮನ ದಂಡವತೆ ಅವರದ್ದೇ ಆಗಿದೆ.

 

ಅಂಬೇಡ್ಕರ್ ಅವರ ಪಾರ್ಥಿವ ಶರೀರವನ್ನು ಇಂಡಿಯನ್ ಏರ್‌ಲೈನ್ಸ್ ವಿಮಾನದ ಮೂಲಕ ಡಿ. 6ರಂದೇ ಮುಂಬೈಗೆ ತರಲಾಯಿತು. ದಾದರ್ ಹಿಂದೂ ಕಾಲೊನಿಯಲ್ಲಿದ್ದ ಅವರ ನಿವಾಸ ರಾಜಗೃಹದಲ್ಲಿ ಇರಿಸಲಾಯಿತು. ಇಡೀ ದಿನ ಸಾವಿರಾರು ಜನರು ಅಂತಿಮ ದರ್ಶನ ಪಡೆದರು. ಮರುದಿನ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಮೆರವಣಿಗೆ ಮೂಲಕ ಕಡಲ ಕಿನಾರೆಗೆ ಒಯ್ಯಲಾಯಿತು. ಮೆರವಣಿಗೆಯಲ್ಲಿ ಬಾಂಬೆ ಪೊಲೀಸ್‌ನ ಒಂದಿಡೀ ತುಕಡಿ ಇತ್ತು. ನಗರದ ಅರ್ಧಕ್ಕೂ ಹೆಚ್ಚು ಬಟ್ಟೆ ಗಿರಣಿಗಳು ಮುಚ್ಚಿದ್ದವು. ಕಾರ್ಮಿಕರು  ರಸ್ತೆಯುದ್ದಕ್ಕೂ ನಿಂತಿದ್ದರು. ಇನ್ನೂ ಹೆಚ್ಚು ಗಮನಾರ್ಹವಾದ ನಮನ ಎಂದರೆ ಅದೇ ದಿನ, ಅಂಬೇಡ್ಕರ್ ಅನುಯಾಯಿಗಳಾಗಿದ್ದ ಸುಮಾರು 50 ಸಾವಿರ ಜನ ಬೌದ್ಧ ಧರ್ಮ ಸ್ವೀಕಾರ ಮಾಡಿದರು.

 

ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ಕಳೆದ ಅಕ್ಟೋಬರ್‌ನಲ್ಲಿ ಇದೇ ಅಂಕಣದಲ್ಲಿ ಬರೆದುದಕ್ಕೆ ‘ಬಾಂಬೆ ಕ್ರಾನಿಕಲ್’ ಪತ್ರಿಕೆ ಮುಖ್ಯ ಆಕರವಾಗಿತ್ತು. 1956ರ ಡಿಸೆಂಬರ್‌ನಲ್ಲಿ ಅಂಬೇಡ್ಕರ್ ಮೃತಪಟ್ಟಾಗ ‘ಎ ಗ್ರೇಟ್ ಸನ್ ಆಫ್ ಇಂಡಿಯಾ’ ಎಂಬ ಶೀರ್ಷಿಕೆಯಲ್ಲಿ ಅಂಬೇಡ್ಕರ್ ಅವರ ಕೊಡುಗೆಗಳ ಬಗ್ಗೆ ಅತ್ಯುತ್ತಮವಾದ ಸಂಪಾದಕೀಯ ಪ್ರಕಟಿಸಿತ್ತು. ಅಂಬೇಡ್ಕರ್ ಅವರ ಜೀವನ, ಅತ್ಯಂತ ಸಂಕಟಕರ ಸನ್ನಿವೇಶದಲ್ಲಿಯೂ ಸೋಲೊಪ್ಪದ ಧೈರ್ಯ ಮತ್ತು ಅಚಲ ನಂಬಿಕೆಯ ಮೂಲಕ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸ್ಫೂರ್ತಿದಾಯಕ ಉದಾಹರಣೆಯಾಗಿದೆ ಎಂದು ‘ಬಾಂಬೆ ಕ್ರಾನಿಕಲ್’ ಬಣ್ಣಿಸಿದೆ. ಹುಟ್ಟಿನಿಂದಲೇ ಇದ್ದ ಹಲವು ಸಾಮಾಜಿಕ ಅನನುಕೂಲಗಳನ್ನು ಮೆಟ್ಟಿ ನಿಲ್ಲಲು ಅಂಬೇಡ್ಕರ್ ನಡೆಸಿದ ಹಲವು ಹೋರಾಟಗಳಿಗೆ ಪತ್ರಿಕೆ ನಮಿಸಿದೆ. ವಯಸ್ಕರಾದ ಮೇಲೆ ಹಲವು ಬಾರಿ ಕಾಡಿದ ಅನಾರೋಗ್ಯವನ್ನು ಕೂಡ ಅವರು ಹೇಗೆ ನಿಭಾಯಿಸಿದರು ಎಂಬುದನ್ನೂ ಪತ್ರಿಕೆ ಹೇಳಿದೆ.

 

ಅಂಬೇಡ್ಕರ್‌ಗೆ ನುಡಿ ನಮನ ಸಲ್ಲಿಸಿದ ಹಲವರು ಮರೆತರೂ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರವಾದ ಅಂಶವನ್ನು ‘ಕ್ರಾನಿಕಲ್’ ಪ್ರಸ್ತಾಪಿಸಿದೆ. ಸಂವಿಧಾನ ರೂಪಿಸುವ ಕೆಲಸ ಮತ್ತು ಅಸ್ಪೃಶ್ಯರ ವಿಮೋಚನೆಯಲ್ಲಿ ಅವರು ಮಾಡಿದ ಸಾಧನೆ ಬಗ್ಗೆ ಬರೆದಿರುವ ಪತ್ರಿಕೆ, ಅವರು ಆಗಾಗ ತೋರುತ್ತಿದ್ದ ಉರಿದೇಳುವ ಸ್ವಭಾವ ಇಲ್ಲದಿದ್ದರೂ ಈ ಸಾಧನೆ ಸಾಧ್ಯವಾಗುತ್ತಿತ್ತು ಎಂದು ಅವರ ಟೀಕಾಕಾರರು ಹೇಳುತ್ತಿದ್ದುದನ್ನು ಉಲ್ಲೇಖಿಸಿದೆ. ಅವರ ಚಿಂತನೆ, ವ್ಯಕ್ತಿತ್ವದಲ್ಲಿದ್ದ ಜಟಿಲತೆ ಮತ್ತು ವಿರೋಧಾಭಾಸಗಳಿಗಿಂತ ಈ ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಜಾತಂತ್ರವನ್ನು ಗಾಢವೂ ಗಟ್ಟಿಯೂ ಆಗಿ ರೂಪಿಸುವಲ್ಲಿ ಅವರ ಪ್ರಭಾವ ಅತ್ಯಂತ ಮಹತ್ವದ್ದು ಎಂದು ‘ಕ್ರಾನಿಕಲ್’ ಹೇಳಿದೆ.

 

ದುರದೃಷ್ಟವಶಾತ್ ‘ಕ್ರಾನಿಕಲ್‌’ ಸಂಪಾದಕೀಯದಲ್ಲಿ ಯಾರದೇ ಸಹಿ ಇಲ್ಲ. ಆದರೆ, ಅಂಬೇಡ್ಕರ್ ಅವರ ಜೀವನ ಮತ್ತು ವೃತ್ತಿಯನ್ನು ನಿಕಟವಾಗಿ ಗಮನಿಸಿದ್ದ ವ್ಯಕ್ತಿಯೇ ಈ ಸಂಪಾದಕೀಯ ಬರೆದಿರಬೇಕು. ಪ್ರಕಾಂಡ ಪಂಡಿತನಾಗಿದ್ದರೂ ಸದಾ ಜಾಗೃತವಾಗಿದ್ದ ಹಾಸ್ಯಪ್ರಜ್ಞೆ ಅವರಲ್ಲಿತ್ತು. ಹೊರಗೆ ಒರಟನಂತೆ ಕಾಣಿಸುತ್ತಿದ್ದ ಅವರೊಳಗೆ ಮಾನವೀಯತೆಯ ಸೆಲೆಯೇ ಅಡಗಿತ್ತು ಎಂದು ಪತ್ರಿಕೆ ಹೇಳಿದೆ. ಸಿನಿಮಾ ನೋಡಿ ಅವರು ಭಾವುಕರಾಗುತ್ತಿದ್ದರು, ತಮ್ಮ ಸಾಕು ನಾಯಿಯ ಬಗ್ಗೆ ಭಾರಿ ವಾತ್ಸಲ್ಯ ಹೊಂದಿದ್ದರು (ಅದು ಸತ್ತಾಗ ಅವರು ಕಣ್ಣೀರಿಟ್ಟಿದ್ದರು), ಸಂಗೀತ ಕೇಳುತ್ತಿದ್ದರು ಮತ್ತು ಚಿತ್ರ ಬಿಡಿಸುತ್ತಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಅವರು ವಯೊಲಿನ್ ಕಲಿಯಲು ಆರಂಭಿಸಿದ್ದರು. ಅವರ ಸಾವಿನ ಮೂಲಕ ಭಾರತ ಸೂಕ್ಷ್ಮ ದೃಷ್ಟಿಯ, ದಣಿವರಿಯದ ಹೋರಾಟದ, ವರ್ಣಮಯ ಮತ್ತು ಅತ್ಯಂತ ವಿರಳ ವ್ಯಕ್ತಿತ್ವವೊಂದನ್ನು ಕಳೆದುಕೊಂಡಿತು ಎಂದು ‘ಕ್ರಾನಿಕಲ್’ ಬರೆದಿದೆ. ಇದು ನಿಜವೂ ಹೌದು.

 

ಅಂಬೇಡ್ಕರ್  ಬಗ್ಗೆ  ಈಗಲೂ ಇರುವ ಮುಖ್ಯ ಪುಸ್ತಕ ಧನಂಜಯ ಕೀರ್ ಬರೆದ ಜೀವನ ಚರಿತ್ರೆಯೇ ಆಗಿದೆ. 1950ರ ದಶಕದಲ್ಲಿ ಪ್ರಕಟವಾದ ಇದು ನಂತರ ಹಲವು ಮುದ್ರಣಗಳನ್ನು ಕಂಡಿದೆ. ಅವರ ಜೀವನದ ಹಲವು ಅಂಶಗಳು ಪುಸ್ತಕದಲ್ಲಿ ಇವೆ. ಆದರೆ ಚಾರಿತ್ರಿಕ ವಿಶ್ಲೇಷಣೆ ಇಲ್ಲ. ಜತೆಗೆ ಭಕ್ತಿಭಾವವೇ ಹೆಚ್ಚಾಗಿದೆ.

ದಲಿತರಲ್ಲಿ ಅಂಬೇಡ್ಕರ್  ಬಗ್ಗೆ ಆರಾಧನಾ ಭಾವ ಹೆಚ್ಚಾಗುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಸಾಂಪ್ರದಾಯಿಕ ವಿಶ್ಲೇಷಕ ಅರುಣ್ ಶೌರಿ  1996ರಲ್ಲಿ ‘ವರ್ಷಿಪಿಂಗ್ ಫಾಲ್ಸ್ ಗಾಡ್’ ಎಂಬ ಪುಸ್ತಕ ಬರೆದಿದ್ದಾರೆ. ಇದು ಒರಟು ಮತ್ತು ಖಂಡನಾ ಮನೋಭಾವದ ಕೃತಿ. ನಂತರ ಇನ್ನೊಂದು ಅತಿರೇಕದ ಸರಣಿ ಪುಸ್ತಕಗಳು ಪ್ರಕಟವಾದವು. ಅಲ್ಲಿ ಅಂಬೇಡ್ಕರ್ ಅವರ ಜೀವನದ ಒಂದು ಲೋಪ, ಒಂದು ತಪ್ಪು ಹೆಜ್ಜೆಯೂ ಇಲ್ಲದೆ ಅಭಿಮಾನ ಭಟ್ಟಂಗಿತನವಾಗಿ ಬದಲಾಯಿತು.

 

ಇಂತಹ ಏಕಪಕ್ಷೀಯ ಕೃತಿಗಳಿಗೆ ಹೋಲಿಸಿದರೆ ‘ಬಾಂಬೆ ಕ್ರಾನಿಕಲ್‌’ನ ನುಡಿನಮನ ಇಂತಹ ಕೃತಿಗಳು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದೆ. ನವಿರಾದ, ಸೂಕ್ಷ್ಮವಾದ ಮತ್ತು ಪತ್ರಿಕಾ ಲೇಖನಕ್ಕಿಂತ ಹೆಚ್ಚು ಸಮಗ್ರವಾದ ಜೀವನಚರಿತ್ರೆಯೊಂದು ಈಗ ನಮಗೆ ಬೇಕಾಗಿದೆ. ಅಷ್ಟನ್ನಾದರೂ ನಾವು ಅಂಬೇಡ್ಕರ್ ಅವರಿಗಾಗಿ ಮಾಡಬೇಕು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry