ಶನಿವಾರ, ಮೇ 21, 2022
26 °C

ಅಕ್ಕಮಹಾದೇವಿಯ ಯೋಗಮಾರ್ಗ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಹಲವು ಕಾರಣಗಳಿಂದ ಅಕ್ಕಮಹಾದೇವಿಯ ಬದುಕು-ಬರಹಗಳು ಸಮಕಾಲೀನ ಮನಸ್ಸುಗಳಲ್ಲಿ ಆಸಕ್ತಿ ಕೆರಳಿಸಿವೆ. ಇಡೀ ಕನ್ನಡ ಸಂಸ್ಕೃತಿಯಲ್ಲಿ ಆಕೆಯದು ಅತ್ಯಂತ ಅಪರೂಪ ಮತ್ತು ಅನರ್ಘ್ಯವಾದ ವ್ಯಕ್ತಿತ್ವ.

 

ಕನ್ನಡದ ಮಹಿಳಾಭಿವ್ಯಕ್ತಿಯ ಮಾತೃಕೆಗಳಂತಿರುವ ಅಕ್ಕನ ವಚನಗಳ ಅನುಭಾವ ತೀವ್ರತೆ ಮತ್ತು ಅನುಭವದ ಶ್ರಿಮಂತಿಕೆ ಎಷ್ಟು ಮಹತ್ವಪೂರ್ಣವೋ ಅಷ್ಟೇ ಮನೋಹರವಾದುದು ಅವುಗಳ ಅಭಿವ್ಯಕ್ತಿ ಸೌಂದರ್ಯ. ಆಕೆಯ ಉನ್ನತ ವ್ಯಕ್ತಿತ್ವವನ್ನು ಆಕೆಯ ಸಮಕಾಲೀನರಾದ ಬಸವಾದಿ ಶರಣರು ಬಾಯ್ತುಂಬ ಹೊಗಳಿದ್ದಾರೆ, ಮೆಚ್ಚಿಕೊಂಡಿದ್ದಾರೆ.ಹನ್ನೆರಡನೆ ಶತಮಾನದಲ್ಲಿ ಬದುಕಿದ ಅಕ್ಕನ ಜೀವನ ಮುಂದಿನ ಶತಮಾನಗಳಲ್ಲಿ ಹಲವು ಕಾವ್ಯ-ಕಥನಗಳ ವಸ್ತುವಾದದ್ದು ಆಕೆಯ ಗಾಢ ಪ್ರಭಾವದ ದ್ಯೋತಕ. ಈ ಪ್ರಭಾವ ಇಪ್ಪತ್ತನೆಯ ಶತಮಾನದವರೆಗೂ ಮುಂದುವರಿದಿದ್ದು ಹಲವು ಕಾದಂಬರಿಗಳು, ನಾಟಕಗಳು, ಕವಿತೆಗಳು ಅಕ್ಕನನ್ನು ಕೇಂದ್ರವನ್ನಾಗಿಟ್ಟುಕೊಂಡು ರಚಿತವಾಗಿವೆ.ಬಿ.ಪುಟ್ಟಸ್ವಾಮಯ್ಯ, ಬಸವರಾಜ ಕಟ್ಟೀಮನಿ ಮುಂತಾದ ಹೆಸರಾಂತ ಲೇಖಕರು ಈ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ, ಇಪ್ಪತ್ತನೆ ಶತಮಾನದ ಉತ್ತರಾರ್ಧದ ಕನ್ನಡ ಮಹಿಳಾ ಕಾವ್ಯಾಭಿವ್ಯಕ್ತಿಯ ಸ್ವನಿರ್ವಚನಕ್ಕೆ ಅಕ್ಕನ ಕೊಡುಗೆ ತುಂಬಾ ಮೌಲಿಕವಾಗಿದೆ.ಇಪ್ಪತ್ತನೆ ಶತಮಾನದವರೆಗೆ ಕೇವಲ ಕನ್ನಡದ ಸಂಪತ್ತಾಗಿದ್ದ ಅಕ್ಕನ ಪ್ರಭಾವ ಕನ್ನಡದ ಗಡಿಗಳನ್ನು ದಾಟಿಹೋಯಿತು. ಇಂಗ್ಲಿಷ್ ಅನುವಾದಗಳ ಮೂಲಕ ವಿಶಾಲ ಜಗತ್ತನ್ನು ತಲುಪಿದ ಅಕ್ಕನ ವಚನಗಳು ಹಲತೆರನ ಕಲಾತ್ಮಕ ಮತ್ತು ವೈಚಾರಿಕ ಅಭಿವ್ಯಕ್ತಿಗಳಿಗೆ ಪ್ರೇರಣೆ ನೀಡಿದವು.ನೀಲಿಮಾ ಶೇಖ್‌ರಂತಹ ಕಲಾವಿದರು ಅಕ್ಕನ ಕುರಿತ ಚಿತ್ರಗಳನ್ನು ರಚಿಸಿದರು. ಮಧುಶ್ರಿ ದತ್ತಾ ಅಕ್ಕನ ಜೀವನ ಕುರಿತ ಅದ್ಭುತ ಸಿನಿಮಾವೊಂದನ್ನು ಇಂಗ್ಲಿಷ್‌ನಲ್ಲಿ ತಯಾರಿಸಿದರು. ಭಾರತದ ರಂಗಭೂಮಿಯ ಖ್ಯಾತವಿಮರ್ಶಕರಾದ ಶಮಿಕ್ ಬಂದೋಪಾಧ್ಯಾಯ ಹೇಳುವಂತೆ ಅಕ್ಕನ ಪ್ರಭಾವ ಪರೋಕ್ಷವಾಗಿ ಪ್ರಸಿದ್ಧ ಮಣಿಪುರಿ ರಂಗ ನಿರ್ದೇಶಕ ಕನ್ಹೈಲಾಲ್ ಅವರ  `ದ್ರೌಪದಿ~ ನಾಟಕಕ್ಕೆ ಪ್ರೇರಣೆಯನ್ನೊದಗಿಸಿತು.ತನ್ನ ಕಾಲ-ದೇಶ-ಭಾಷೆ-ಸಂಸ್ಕೃತಿಗಳಾಚೆಗೂ ಅಕ್ಕನ ಪ್ರಭಾವ ಹಬ್ಬುತ್ತಿರುವುದಕ್ಕೆ ಇವೆಲ್ಲವೂ ನಿದರ್ಶನಗಳಾಗಿವೆ.`ಮಹಾದೇವಿಯಕ್ಕನ ನಿಲವ ನೋಡಾ~ - ಈ ತೆರನ ಹಲವು ಉದ್ಗಾರಗಳಿಂದ ಅಕ್ಕನ ಸಮಕಾಲೀನ ಹಿರಿಯ ಶರಣರು ಆಕೆಯ ವ್ಯಕ್ತಿತ್ವ-ಸಾಧನೆಗಳ ಬಗ್ಗೆ ನಿಬ್ಬೆರಗಿನಿಂದ, ಮೆಚ್ಚುಗೆಯಿಂದ ಅತ್ಯಂತ ಗೌರವದಿಂದ ಮಾತಾಡಿದ್ದಾರೆ.

 

ಆಕೆಯ ನಗ್ನತೆಯೂ ಹಲವು ರೀತಿಯ ಪ್ರತಿಕ್ರಿಯೆಗಳಿಗೆ ಒಳಗಾಗಿದೆ. ಆಧುನಿಕರು ಬಹುಮಟ್ಟಿಗೆ ಅಕ್ಕನ ವಚನಗಳನ್ನು ಆಸಕ್ತಿಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಅವನ್ನು ಹಲವು ವಿಭಿನ್ನ ದೃಷ್ಟಿಕೋನಗಳಿಂದ ಅರ್ಥೈಸಲು ಯತ್ನ ಮಾಡಿದ್ದಾರೆ.ಅಕ್ಕನ ಅಭಿವ್ಯಕ್ತಿಯನ್ನು ಮಹಿಳೆಯರು ಸ್ತ್ರೀವಾದೀ ನೆಲೆಗಟ್ಟಿನಿಂದ ಬಿಚ್ಚಿನೋಡಲು ಪ್ರಯತ್ನಿಸಿದ್ದಾರೆ. ಆದರೆ ಅಕ್ಕನ ಬಹು ಮುಖ್ಯ ಆಯಾಮವಾದ ಯೋಗ ಮತ್ತು ಅನುಭಾವದ ವಿಶ್ಲೇಷಣೆಗೆ ಸಿಗಬೇಕಾದಷ್ಟು ಆದ್ಯತೆ ಸಿಕ್ಕಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ವಚನಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆಕರವಾಗಿದೆ.ಅಕ್ಕನ `ಯೋಗಾಂಗ ತ್ರಿವಿಧಿ~ ಎಂಬುದು ಒಂದು ಸಂಕ್ಷಿಪ್ತ ಕೃತಿ. ಇದನ್ನು ಗಮನವಿಟ್ಟು ಓದಿದಾಗ ವಚನ ವಾಜ್ಞ್ಮಯದ ಹಿನ್ನೆಲೆಯಲ್ಲಿ ಮತ್ತು ಇಡೀ ಭಾರತೀಯ ದಾರ್ಶನಿಕ ಭಿತ್ತಿಯಲ್ಲಿ ಅಕ್ಕನ ಯೌಗಿಕ ಮತ್ತು ಅನುಭಾವಿ ದರ್ಶನ ಎಷ್ಟು ವಿಶಿಷ್ಟವೆನ್ನುವುದನ್ನು ಗುರುತಿಸಬಹುದು.ಅಷ್ಟೇ ಅಲ್ಲದೆ ಇವತ್ತು ಪ್ರಚಲಿತವಿರುವ ಯೋಗ ಮತ್ತು ಅನುಭಾವಗಳನ್ನು ಕುರಿತ ಬಹುತೇಕ ಚಿಂತನಾಧಾರೆಗಳು, ಗ್ರಹಣಕ್ರಮಗಳು, ಸಾಧನಾಪಧ್ಧತಿಗಳು ಈ ಬಗ್ಗೆ ಸಂಸ್ಕೃತದಲ್ಲಿ ರಚನೆಯಾಗಿರುವ ಆಕರಗಳನ್ನು ಆಧರಿಸಿವೆ. ಇತರ ಭಾರತೀಯ ಭಾಷೆಗಳಲ್ಲಿ ಉಪಲಬ್ಧವಿರುವ ಈ ಕುರಿತ ಧಾರಣೆಗಳನ್ನು ಕಡೆಗಣಿಸಿವೆ.ಕನ್ನಡದಲ್ಲಿ ಯೋಗ ಅನುಭಾವಗಳ ಅನೇಕ ಸುಳಿವುಗಳು ವಚನಗಳಲ್ಲಿ, ಸ್ವರವಚನಗಳಲ್ಲಿ, ದಾಸರ ಪದಗಳಲ್ಲಿ, ತತ್ವಪದಗಳಲ್ಲಿ ಯಥೇಚ್ಛವಾಗಿ ದೊರಕುವುದಲ್ಲದೆ, ಯೋಗವನ್ನೇ ಕುರಿತ ಹಲವು ಕೃತಿಗಳು ರಚಿತವಾಗಿವೆ. ಉದಾಹರಣೆಗೆ ಅಲ್ಲಮನ `ಮಂತ್ರಗೋಪ್ಯ~ , ಚನ್ನಬಸವಣ್ಣನ  `ಕರಣಹಸಿಗೆ~ಯಂತಹ ರಚನೆಗಳು ಯೋಗಾನುಭವವನ್ನು, ಸಾಧನೆಯ ರಹಸ್ಯಗಳನ್ನು ಮಾರ್ಮಿಕವಾಗಿ ಪರಿಚಯಿಸುತ್ತವೆ.ನಿಜಗುಣ, ಸರ್ಪಭೂಷಣ, ಚಿದಾನಂದಾವಧೂತ, ಶಂಕರಾನಂದ ಶಿವಯೋಗಿ ಮುಂತಾದವರು ರಚಿಸಿದ, ಬಹುಮಟ್ಟಿಗೆ ವೇದಾಂತಪರವಾದ ಕೈವಲ್ಯಸಾಹಿತ್ಯದ ಕೃತಿಗಳೂ ಈ ಸಾಲಿಗೆ ಸೇರುತ್ತವೆ. ಇದೇ ಗುಂಪಿಗೆ ಸೇರಿದರೂ ಅತ್ಯಂತ ವಿಶಿಷ್ಟವಾಗಿರುವ ಕೃತಿ ಅಕ್ಕನ `ಯೋಗಾಂಗ ತ್ರಿವಿಧಿ~.  ಅಕ್ಕನ ವ್ಯಕ್ತಿತ್ವದ ಅಪರಿಚಿತ ಮಗ್ಗುಲೊಂದನ್ನು ಪರಿಚಯಿಸುವುದರ ಜೊತೆಗೆ ಯೋಗದರ್ಶನದ ಬಗೆಗೆ ವಿಶಿಷ್ಟ ದೃಷ್ಟಿಕೋನವೊಂದನ್ನು ನೀಡುತ್ತದೆ.ಶಿವನೂ ಆಗಿರುವ ಗುರುವಿನ ವಂದನೆಯಿಂದ ಅಕ್ಕ ತನ್ನ ಕೃತಿರಚನೆ ಮುಂದಾಗಿ ಹೇಳುತ್ತಾಳೆ: `ಮೊದಲು ಮಾಡುವೆ ನಾನು ಸದಮಲ ಗುರುವಿನ/ಚದುರಮತಿಗಳನು ಬಲಗೊಂಡು/ತತ್ವದಪದಗಳನೋತು ಮುದದಿಂದ~. ಇಲ್ಲಿ ಅಕ್ಕ ಮಾತಾಡುತ್ತಿರುವುದು ಮುಂದೆ ಕನ್ನಡದಲ್ಲಿ ವಿಪುಲವಾಗಿ ಬೆಳೆದ ತತ್ವಪದದ ಶೈಲಿಯಲ್ಲಿ.ಹದಿನೆಂಟನೆ ಶತಮಾನದ ನಂತರ ಕಡಕೋಳು ಮಡಿವಾಳಪ್ಪ, ಶಿಶುನಾಳ ಷರೀಫ ಮುಂತಾದ ಅಸಂಖ್ಯಾತರು ಶ್ರಿಮಂತಗೊಳಿಸಿದ ಈ ಅಭಿವ್ಯಕ್ತಿ ಕ್ರಮದಲ್ಲಿ ಅಕ್ಕ ಮೊದಲಿಗಳಾಗಿದ್ದಾಳೆ ಅನ್ನುವುದು ಗಮನಾರ್ಹ. `ಯೋಗಾಂಗ ತ್ರಿವಿಧಿ~ಯಲ್ಲಿ ಅಕ್ಕ ಬಳಸುವ ಅಭಿವ್ಯಕ್ತಿಯ ಭಾಷೆ ಎಲ್ಲ ತತ್ವಪದಗಳಲ್ಲಿರುವಂತೆ ನೇರ ಮತ್ತು ಬೆಡಗಿನ ಶೈಲಿಗಳ ಮಿಶ್ರಣ.ಕೆಲವು ಸಲ ಅರ್ಥಗಳು ಸ್ವಯಂಪ್ರಕಾಶವಾಗಿ ಬೆಳಗುತ್ತವೆ. ಕೆಲವು ಸಲ ಸಂಕೇತಗಳ ಬಳಕೆಯಿಂದ ಗೂಢವಾಗಿ ನಮ್ಮನ್ನು ತಲುಪುತ್ತವೆ. ಇಷ್ಟಾದರೂ ಯೋಗಸಾಧನೆಯ ಬಗ್ಗೆ ಒಂದು ಸ್ಪಷ್ಟವಾದ ಸುವ್ಯವಸ್ಥಿತವಾದ ಗ್ರಹಿಕೆಯನ್ನು ಅದು ಮಂಡಿಸುತ್ತದೆ. ವಚನಗಳು ಮೂಲತಃ ಉಪನಿಷತ್ತುಗಳಂತೆ ಸ್ವಾನುಭವದ ಉದ್ಗಾರಗಳು.ಆದರೆ `ಯೋಗಾಂಗ ತ್ರಿವಿಧಿ~ ಸಂಸ್ಕೃತದ ಶಾಸ್ತ್ರಗ್ರಂಥಗಳ ಮಾದರಿಗೆ ಹೊರತಾಗಿಯೂ ಒಂದು ಶಾಸ್ತ್ರರಚನೆ. ವಿಶೇಷವೆಂದರೆ ಇಂಥಾ ಶಾಸ್ತ್ರಗ್ರಂಥದಲ್ಲೂ ಹಲವೆಡೆ ಅಕ್ಕನ ಕಾವ್ಯಪ್ರತಿಭೆ ಮಿಂಚುತ್ತದೆ. ಉದಾಹರಣೆಗೆ ಒಂದು ತ್ರಿಪದಿ:  `ಮಾಗಮಾಸವು ಪೋಗಿ ಮೇಗೆ ಬಂದಿತು ಚೈತ್ರ/ಬೇಗ ಮಾಮರನು ತಳಿರಿತ್ತು-ಅದ ಕಂಡು/ಕೂಗಿ ಕರೆದಿತ್ತು ಕಳಕಂಠ~.  ಅಕ್ಕನ ಕಾವ್ಯಾತ್ಮಕ ವಚನಗಳನ್ನು ತಾತ್ಪರ್ಯಗೊಳಿಸುವುದು ಕಷ್ಟ.ಅವನ್ನು ಹಾಗೇ ಸವಿದು ಅರ್ಥಗಳನ್ನು ಒಳಗಿಳಿಸಿಕೊಳ್ಳಬೇಕು. ಆದರೆ  `ಯೋಗಾಂಗ ತ್ರಿವಿಧಿ~ಯನ್ನು ತಾತ್ಪರ್ಯದ ಮೂಲಕ ಸಂಗ್ರಹವಾಗಿ ಹೇಳಲಿಕ್ಕೆ ಬರುತ್ತದೆ.

ಸಂಸ್ಕೃತದ ಪ್ರಸಿದ್ಧ ಯೋಗಶಾಸ್ತ್ರದ ಗ್ರಂಥಗಳಾದ ಪತಂಜಲಿಯ `ಯೋಗಸೂತ್ರಗಳು~, `ವಿಜ್ಞಾನ ಭೈರವ `, `ಶಿವಸೂತ್ರ~, `ಘೇರಂಡ ಸಂಹಿತ~ ಮುಂತಾದವು ಸೂತ್ರರೂಪವಾಗಿ ವಿಚಾರಗಳನ್ನು ಮಂಡಿಸುತ್ತವೆ.ಅವು ಅತ್ಯಂತ ಸಂಕ್ಷಿಪ್ತವಾಗಿರುವುದರಿಂದ ಅರ್ಥಸಂದಿಗ್ಧವುಂಟಾಗಿ ಮುಂದೆ ಅವುಗಳನ್ನು ವಿವರಿಸಲು ಟೀಕುಗಳನ್ನು ರಚಿಸಲಾಯಿತು. ಪತಂಜಲಿಯ `ಯೋಗಸೂತ~್ರಕ್ಕೆ ವ್ಯಾಸಮುನಿ ಬರೆದ ಟೀಕು ಅತ್ಯಂತ ಪ್ರಸಿದ್ಧವಾಗಿದೆ. ತಮಿಳಿನಲ್ಲಿ ರಚಿತವಾಗಿರುವ ಯೌಗಿಕ ಗ್ರಂಥಗಳಾಗಿರುವ ತಿರುಮೂಲರ  `ತಿರುಮಂದಿರಂ~  ಮತ್ತು ಮೇಯ್ಕಂಡ ದೇವರ `ಸಿವಜ್ಞಾನ ಬೋದಂ~  ಇದೇ ತೆರನ ಸೂತ್ರಗ್ರಂಥಗಳು. ಆದರೆ ಅಕ್ಕನ  `ಯೋಗಾಂಗ ತ್ರಿವಿಧಿ~  ಈ ಮಾದರಿಗಳನ್ನು ಅನುಸರಿಸಿಲ್ಲ.ಇ್ಲ್ಲಲಿ ಶಾಸ್ತ್ರದ ಚೌಕಟ್ಟಿನೊಳಗೆ ಕಾವ್ಯಾತ್ಮಕತೆಯೂ ಹಾಸುಹೊಕ್ಕಾಗಿದೆ. ಆದ್ದರಿಂದ ಟೀಕುಗಳ ನೆರವಿಲ್ಲದೆ ನೇರವಾಗಿ ನಾವೇ ಅದನ್ನು ಬಹುಮಟ್ಟಿಗೆ

ಅರ್ಥಮಾಡಿಕೊಳ್ಳಬಹುದು.ಭಾರತೀಯ ಯೌಗಿಕ ಪರಂಪರೆಯ ಕೇಂದ್ರದಲ್ಲಿರುವ ಹಲವು ಕಲ್ಪನೆಗಳು ಅಕ್ಕನ ಅನುಭಾವಕ್ಕೂ ಆಧಾರವಾಗಿವೆ. ಉದಾಹರಣೆಗೆ ಅನುಭಾವದ ಸಾಧನೆಯಲ್ಲಿ ಗುರುವಿನ ಕೇಂದ್ರತ್ವ. ಆದರೆ ಈ ಗುರು ಯಾರು? ಇಂದಿನ ಯೌಗಿಕ ಪಂಥಗಳಲ್ಲಿ ಗುರುವಿನ ಕೇಂದ್ರತ್ವವನ್ನು ಗುರುವಿನ ವ್ಯಕ್ತಿಪೂಜೆಯೊಂದಿಗೆ ಸಮೀಕರಿಸಲಾಗಿದೆ.ಇದನ್ನು ಸಮರ್ಥಿಸುವ ಕತೆಗಳು, ಮೂಢನಂಬಿಕೆಗಳು ಪರಂಪರೆಗಳಲ್ಲಿ ಯಥೇಚ್ಛವಾಗಿವೆ. ಗುರುವಿನ ಬಗೆಗಿನ ಅಂಧಶ್ರದ್ಧೆಯಿಂದ ಗುರುಗಳಿಗೆ ಬಹಳ ಲಾಭವೂ ಶಿಷ್ಯರಿಗೆ ಬಹಳ ನಷ್ಟವೂ ಆಗಿರುವುದನ್ನು ಎಲ್ಲೆಲ್ಲಿಯೂ ಕಾಣಬಹುದು. ಆದರೆ ಈ ಬಗ್ಗೆ ಇರುವ ಇತರ ವಾಸ್ತವವಾದಿ, ಅನುಭಾವ ಪ್ರಧಾನ ವಿಚಾರಗಳನ್ನು ಕಡೆಗಣಿಸಲಾಗಿದೆ.

 

ಕಾಶ್ಮೀರದ `ಶಿವಾದ್ವೈತ~ದಲ್ಲಿ ಗುರುವಿನ ಪ್ರಾಮುಖ್ಯವನ್ನು ಒಪ್ಪಿಕೊಂಡಿದ್ದರೂ ಅಂತಿಮವಾಗಿ ತನ್ನತನದ ಪರಮಸ್ವರೂಪವಾದ ಪರಶಿವ ಚೈತನ್ಯವನ್ನೇ ಗುರುವಾಗಿ ನೋಡಲಾಗಿದೆ. ಒಬ್ಬ ಶಿಷ್ಯನಿಗೆ ಒಬ್ಬನೇ ಗುರುವಿರಬೇಕೆಂಬ ನಿಯಮವೂ ಇಲ್ಲ.ಆಚಾರ್ಯ ಅಭಿನವ ಗುಪ್ತರು  ತಾವು, ಊರುಜನ ಗುರುಗಳಿಂದ ಕಲಿತುದಾಗಿಯೂ ಆ ಗುರುಗಳು ತಾವು ಹೇಳಿದ್ದೇ ಅಂತಿಮವೆಂದು ಘೋಷಿಸಿದಾಗ ಅವರಿಗೆ ವಂದಿಸಿ ಮುಂದೆ ನಡೆದುದಾಗಿಯೂ ಹೇಳುತ್ತಾರೆ. `ಅರಿವೇ ಗುರು~ ಎನ್ನುವ ಶರಣರ ಉಕ್ತಿಯ್ಲ್ಲಲಿಯೂ ಒಳಗುರುವಿನ ಮೇಲಿನ ಒತ್ತು ಕಾಣುತ್ತದೆ.

 

ಅಕ್ಕನ  `ಯೋಗಾಂಗ ತ್ರಿವಿಧಿ~ಯಲ್ಲಿ ವಂದಿತನಾಗಿರುವ ಗುರು ಅಸಲಿನಲ್ಲಿ ಅರಿವಿನ ಶುದ್ಧಸ್ವರೂಪವಾದ ಚನ್ನಮಲ್ಲಿಕಾರ್ಜುನನೆಂಬುದು ಬಹಳ ಮುಖ್ಯವಾಗುತ್ತದೆ. ಅಥವಾ ಶಿವವ್ಯಾಪ್ತಿಯನ್ನು ಪಡೆದ ಆ ಹೆಸರಿನ ವ್ಯಕ್ತಿಯೊಬ್ಬ ಅಕ್ಕನ ಗುರುವಾಗಿರಲಿಕ್ಕೂ ಸಾಕು. `ಶಿವಸೂತ್ರ~ದಲ್ಲಿನ ಒಂದು ಮಾತು:  `ವಿಸ್ಮಯೋ ಯೋಗಭೂಮಿಕಾ~. ಅಂದರೆ ಯೋಗದ ಹಂತಗಳು ವಿಸ್ಮಯಕಾರಿಯಾದವು. ಈ ವಿಸ್ಮಯವನ್ನೇ ಶರಣರು ಬೆಡಗು ಅಂದರು.ಬೆಡಗಿನ ವಚನಗಳೆಂಬ ಶರಣರ ಅಭಿವ್ಯಕ್ತಿಗಳು ವಿಸ್ಮಯದ ಮೂಲಕ ಅನುಭವ ನಿವೇದನೆ ಮಾಡುತ್ತವೆ. ಅವುಗಳಲ್ಲಿ ಅಲ್ಲಮನ ಬೆಡಗಿನ ವಚನಗಳಿಗೆ ವಿಶೇಷ ಸ್ಥಾನವಿದೆ. ಗುರು ವಂದನೆಯ ನಂತರ ಮೂಲತಃ ಬೆಡಗಿನ ವಚನಕಾರ್ತಿಯಲ್ಲದ ಅಕ್ಕ ಹಲವು ಬೆಡಗಿನ ಉಪಮೆಗಳ ಮೂಲಕ ಶಬ್ದಸುಲಭವಲ್ಲದ ಅನುಭವಗಳನ್ನು ಹೇಳುತ್ತಾ ಹೋಗುತ್ತಾಳೆ.

 

ಉದಾಹರಣೆಗೆ:  `ಕುಂಡಲಿಯ ಸರ್ಪನ ಕಂಡು ಮೇಲಕೆ ತೆಗೆಯೆ/ಮಂಡಲ ಮೂರು ಬೆಳಗಾಗೆ-ನಡುವಳ/ಖಂಡಜ್ಯೋತಿಯಲಿ ಬಯಲಾದೆ~.  ಇದು ಯೋಗ-ತಂತ್ರಶಾಸ್ತ್ರಗಳಲ್ಲಿ ಪ್ರಸಿದ್ಧವಾಗಿರುವ ಕುಂಡಲಿನಿಶಕ್ತಿಯ ವರ್ಣನೆ. ಕುಂಡಲಿನಿಯ ಜಾಗೃತಿಯ ನಂತರ ಮೂರು ಮಂಡಲಗಳು - ಅಗ್ನಿ, ಸೂರ್ಯ, ಸೋಮಮಂಡಲಗಳು-ಬೆಳಗತೊಡಗುತ್ತವೆ.ನಡುವಳಖಂಡ ಜ್ಯೋತಿಯೆನ್ನುವುದು ನಡುನಾಳವಾದ ಸುಷುಮ್ನೆಯಲ್ಲಿನ ಬೆಳಕು.

ಹೀಗೆ ಯೋಗ-ತಂತ್ರಶಾಸ್ತ್ರಗಳ ಸಂಕೇತಗಳನ್ನು ಸ್ವೀಕರಿಸಿಯೂ ಕೂಡ ಅಕ್ಕ ತನ್ನ ಯೋಗ ಭಿನ್ನವೆನ್ನುವುದನ್ನು ತಿಳಿಸುತ್ತಾಳೆ: `ಅಷ್ಟಾಂಗ ಯೋಗಗಳ ಮಾಡಿ ಬಳಲುವರು/ದೃಷ್ಟಿಯಿಡುವುದನು ಮರೆವರು~.

 

ಒಂದು ಅರ್ಥದಲ್ಲಿ ಇದು ಪತಂಜಲ ಅಷ್ಟಾಂಗ ಯೋಗದ ನಿರಾಕರಣೆ ಮತ್ತು ವಚನಗಳಲ್ಲಿ ಗೋಪ್ಯವಾಗಿ ಮಂಡಿತವಾಗಿರುವ ದೃಷ್ಟಿಯೋಗದ ಸಮರ್ಥನೆ. ಇಂದು ಬಹುತೇಕ ಯೋಗ ಕಾರ್ಪೊರೆಟ್ ಗುರುಗಳು ಅಷ್ಟಾಂಗ ಯೋಗವೊಂದೇ ಯೋಗವೆಂಬಂತೆ ಮಾತಾಡುತ್ತಾರೆ. ಆದರೆ ಅಕ್ಕ ಸ್ಪಷ್ಟವಾಗಿ ಅದು ನಿರರ್ಥಕವೆನ್ನುತ್ತಾಳೆ. ಹಾಗಿದ್ದರೆ ಅಕ್ಕ ಹೇಳುವ ಯೋಗಪದ್ಧತಿಯ ಸ್ವರೂಪ ಏನೆಂಬುದು ಮುಖ್ಯ ಪ್ರಶ್ನೆ.ತಮಿಳುನಾಡಿನ ದ್ವೈತಪ್ರಧಾನವಾದ ಶೈವಸಿದ್ಧಾಂತ ಮತ್ತು ಕಾಶ್ಮೀರದ ಪೂರ್ಣಾದ್ವೈತಪರವಾದ ಶೈವಧರ್ಮಕ್ಕಿಂತ ಭಿನ್ನವಾದ ಶರಣಪಥ ಅಂಗ-ಲಿಂಗಗಳನ್ನು ಪ್ರಧಾನ ಪರಿಕಲ್ಪನೆಗಳಾಗಿ ಮಂಡಿಸಿದೆ. ಅವೆಂದರೆ ಸಂಕುಚಿತವಾದ ಜೀವಭಾವ, ಲಿಂಗವೆಂದರೆ ಅಬಾಧಿತವಾದ ಪರಮಸತ್ಯ. ಲಿಂಗಾಂಗಳ ಸಂಯೋಗವೇ ಶರಣಸಾಧನೆಯ ಗುರಿ.

 

ಅದಕ್ಕೆ ದಾರಿ ಷಟ್‌ಸ್ಥಲ ಸಾಧನೆ. ಅಕ್ಕ ಈ ಪರಿಕಲ್ಪನೆಗಳನ್ನೊಪ್ಪಿಯೂ ಅವನ್ನು ಮಂಡಿಸುವ ಬಗೆ ವಿಭಿನ್ನವಾಗಿದೆ. ಷಟ್‌ಸ್ಥಲಗಳನ್ನು ಕುಂಡಲಿನಿಯೋಗದ ಷಟ್ ಚಕ್ರಗಳೊಂದಿಗೆ ಸಮೀಕರಿಸಿರುವ ಅಕ್ಕ ಸಾಧನೆಯ ನಿರೂಪಣೆಯಲ್ಲಿ ತನ್ನದೇ ಆದ ದಾರಿ ತುಳಿದಿದ್ದಾಳೆ.ಪಂಚೇಂದ್ರಿಯ ಮತು ಚಿತ್ತಗಳಿಂದಾಗುವ ಇಂದ್ರಿಯ ಮತ್ತು ಮನೋಮೂಲ ಸವಿಗಳನ್ನು ಸಮರ್ಪಣಭಾವನೆಯಿಂದ ಸದಾ ಸವಿಯುವುದೇ ಅಕ್ಕ ಹೇಳುವ ಅನುಭಾವ. ಅಕ್ಕನ ವಚನಗಳ ಗಾಢ ಐಂದ್ರಿಕತೆಯನ್ನು ಈ  ಮೂಲಕವೂ ನೋಡಬಹುದು. ಒಟ್ಟಿನಲ್ಲಿ ಅಕ್ಕನ ದೃಷ್ಟಿಯಲ್ಲಿ ಯೋಗಸಾಧನೆ ಒಂದು ಕ್ರಮವಲ್ಲ.ಅದೊಂದು ಸಹಜ ಇರುವಿಕೆ. ಇದನ್ನೇ ಜಪಾನಿನ ಝೆನ್ ದರ್ಶನದಲ್ಲಿ ಪ್ರತಿದಿನದ ಯೋಗ ಎಂದು ಕರೆಯಲಾಗಿದೆ.ಕೊನೆಗೆ ಅಕ್ಕ ಹೇಳುತ್ತಾಳೆ: `ಎಲ್ಲ ಭೋಗಂಗಳ ಪಲ್ಲೈಸಿ ಇರುವರು/ಬಲ್ಲಡೆ ಅವರ ಪರಿ ಬೇರೆ/ಶರಣರ ಖುಲ್ಲ ಮಾನವರು ಜರೆವರು~.  ಹೀಗೆ ಆರ್ಥಮಾಡಿಕೊಂಡಾಗ ಯೋಗ-ಭೋಗಗಳ ನಡುಗೆರೆ ಇಲ್ಲವಾಗುತ್ತದೆ. ಅಕ್ಕಮಹಾದೇವಿ  `ಯೋಗಾಂಗ ತ್ರಿವಿಧಿ~ಯಲ್ಲಿ ಬೋಧಿಸಿರುವ ಯೋಗಮಾರ್ಗ ವೇದಾಂತದ ನೇತಿಮಾರ್ಗಕ್ಕೆ ಬದಲಾಗಿ ಶರಣರ ಇತಿಮಾರ್ಗವಾಗಿದೆ.ಹೀಗಾಗಿ ಭಾರತ, ಟಿಬೆಟ್, ಚೀಣಾದ ತಾಂತ್ರಿಕ ಪಂಥಗಳಿಗೆ, ಜಪಾನಿನ ಝೆನ್ ಮತ್ತು ನಿಷೆರಿನ್ ಬೌಧ್ಧಮಾರ್ಗಗಳಿಗೆ, ಕಾಶ್ಮೀರದ ಶೈವದರ್ಶನಕ್ಕೆ ಮತ್ತು ಸೂಫೀದರ್ಶನದ ಅತ್ಯುನ್ನತ ಅಭಿವ್ಯಕ್ತಿಗಳಿಗೆ ಹತ್ತಿರವಾಗಿದೆ. ಕೇವಲ ಒಂದು ಮತದ ಪಂಥದ ಸ್ವತ್ತು ಮಾತ್ರವಾಗಿರದೆ ಒಂದು ವಿಶ್ವಾತ್ಮಕ ಸತ್ಯದ ಕಡೆಗೆ ತುಡಿಯುತ್ತಿದೆ. ನಮ್ಮ ಮನೆಯ ಮೂಲೆಯನ್ನು ಬೆಳಗುವ ಜ್ಯೋತಿಯಾಗಿದ್ದೂ ವಿಶ್ವವನ್ನೇ ಬೆಳಗುವ ಸೂರ್ಯನೂ ಆಗಿದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in) 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.