ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ!

7

ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ!

ಐ.ಎಂ.ವಿಠಲಮೂರ್ತಿ
Published:
Updated:
ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ!

‘ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆ­ಯನು ತರುವೆನು// ನೇಹಕೆಂದು, ನಲುಮೆಗೊಂದು, ಗುರುತಿಗಿರಿಸಿ ಬರುವೆನು//’

ಹೀಗೆ ಎರಡೆರಡು ಬಾರಿ ತಮ್ಮ ಕವನವನ್ನು ವಾಚಿಸಿದರು ಕವಿ ವಿನಾಯಕ ಕೃಷ್ಣ ಗೋಕಾಕ್. ನಮ್ಮ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯ­ಕ್ರಮ­ದಲ್ಲಿ ಅವರು ಅತಿಥಿಗಳಾಗಿ ಮಾತನಾ­ಡುತ್ತ ಈ ಕವನವನ್ನು ವಾಚಿಸಿದಾಗ ಏಕಾಗ್ರತೆ­ಯಿಂದ ಕೇಳಿದ ನಾನು ಅವರೆಡೆಗೆ ತುಂಬ ಆಕರ್ಷಿತ­ನಾದೆ. ನಮ್ಮ ವಿಶ್ವವಿದ್ಯಾಲಯದ ಕುಲ­ಪ­ತಿಗಳಾಗಿದ್ದ ವಿ.ಕೃ.ಗೋಕಾಕರ ಎತ್ತರದ ವ್ಯಕ್ತಿ­ತ್ವಕ್ಕೆ, ಕಣ್ಣಿನ ಹೊಳಪಿಗೆ, ಕಾವ್ಯವಾಚನ ಶೈಲಿಗೆ ಮಾರುಹೋಗಿದ್ದೆ. ಅವರ ಕವನದ ಮೊದಲೆ­ರಡು ಸಾಲುಗಳನ್ನು ಸದಾ ಗುನುಗುನಿಸುತ್ತಿದ್ದೆ.ಕವಿ ಗೋಕಾಕರನ್ನು ಮತ್ತೆ ನೋಡಿದ್ದು 20 ವರ್ಷಗಳ ನಂತರ, ಅದೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿದ್ದಾಗ. ಮೊಟ್ಟ­ಮೊದಲ ಪಂಪ ಪ್ರಶಸ್ತಿ ಆಯ್ಕೆ ಸಮಿತಿಗೆ ಅವರು ಅಧ್ಯಕ್ಷರಾದಾಗ ಔಪಚಾರಿಕವಾಗಿ  ಅವರನ್ನು ಭೇಟಿ­ಯಾಗಿದ್ದೆ. ಅವರ ಕವನ ವಾಚನವನ್ನು ನಾನು ವಿದ್ಯಾರ್ಥಿಯಾಗಿ ಕೇಳಿದ ಖುಷಿಯನ್ನು ನೆನಪಿ­ಸಿದೆ. ಬಲು ಪ್ರೀತಿಯಿಂದ ಉಪಚರಿಸಿದರು.

ಕೆಲವು ವಾರಗಳ ನಂತರ ಒಂದು ಅಚಾ­ತುರ್ಯ ನಡೆದಿತ್ತು. ನಡೆಯಬೇಕಾಗಿದ್ದ ಸಭೆಗಳ ಬಗ್ಗೆ ಆಪ್ತ ಸಹಾಯಕಿ ಲೀಲಾವತಿಯವರಲ್ಲಿ ವಿಚಾ­ರಿ­ಸುತ್ತಿದ್ದೆ. ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ನಿಗದಿಯಾಗಿರುವ ಬಗ್ಗೆ  ತಿಳಿಸಿದರು. ಯಾರು, ಯಾವಾಗ ನಿಗದಿ ಮಾಡಿದರೆಂದು ವಿಚಾರಿ­ಸಿದೆ. ಜಂಟಿ ನಿರ್ದೇಶಕರು ಸಭೆಗೆ ಸೂಚನೆ ಕಳುಹಿಸಿದ್ದಾರೆ ಎಂದರು. ನಾನು ಕಡತ ಪಡೆದು ನೋಡಿದಾಗ ನನಗೆ ಆಘಾತವಾಯ್ತು.ಸಾಮಾನ್ಯವಾಗಿ ಸಮಿತಿಯ ಅಧ್ಯಕ್ಷರ ಸಮ­ಯಾ­ವ­ಕಾಶ, ಅನುಕೂಲ ತಿಳಿದು ಅವರ ಒಪ್ಪಿಗೆ ಪಡೆದು ಸಭೆ ನಿಗದಿಗೊಳಿಸುವುದು ಪದ್ಧತಿ. ಆದರೆ ಇಲ್ಲಿ ಕಳುಹಿಸಿದ್ದ ಸೂಚನೆ ಆದೇಶದ ರೀತಿ­ಯಲ್ಲಿತ್ತು. ಇಂತಹ ದಿನಾಂಕ, ಸಮಯದಲ್ಲಿ ಸಭೆ ನಿಗದಿಗೊಳಿಸಲಾಗಿದೆ, ತಾವು ಹಾಜರಾಗ­ತ­ಕ್ಕದ್ದು ಎಂದು ನೋಟಿಸ್‌ ನೀಡುವ ಧಾಟಿಯಲ್ಲಿ ತಿಳಿಸಲಾಗಿತ್ತು. ತಕ್ಷಣ ಗೋಕಾಕ್ ಅವರ ಮನೆಗೆ ತೆರಳಿ ಬೇರೆ ಮಾತಾಡುವ ಮುನ್ನ ನನ್ನನ್ನು ಕ್ಷಮಿಸ­ಬೇಕೆಂದು ಕೇಳಿದೆ. ನಮ್ಮ ಇಲಾಖೆಯ ಸೂಚನೆ­ಯನ್ನು ಆ ವೇಳೆಗಾಗಲೇ ಅವರು ಓದಿದ್ದ­ರಿಂದ ನಾನು ಏಕೆ ಕ್ಷಮೆ ­ಯಾಚಿಸುತ್ತಿದ್ದೇನೆ ಎಂಬುದರ ಅಂದಾಜು ಅವರಿಗಿತ್ತು. ಬಹಳ ಸಮಾ­ಧಾನ­ದಿಂದ ಮಾತನಾಡಿ ಅವರ ದೀರ್ಘಾ­ನು­ಭ­ವದಲ್ಲಿ ಈ ರೀತಿಯ ಘಟನೆಗಳ ಒಂದು ಪಟ್ಟಿ­ಯನ್ನೇ ತಿಳಿಸಿದರು.  ಕ್ಷಮೆ ಕೇಳಲು  ಹೋಗಿದ್ದ ನನ್ನನ್ನೇ ಸಂತೈಸಿ, ಮೈದಡವಿ ಕಳುಹಿಸಿದರು.ಮೊದಲ ಪಂಪ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದ ನನಗೆ ಅದರ ಕಾರ್ಯ ನಿರ್ವಹಣೆ ವಿಶೇಷ ಅನುಭವ ನೀಡಿತು. ಗೋಕಾಕ್‌ ಅವರು ಆ ವೇಳೆಗಾಗಲೇ ರಾಷ್ಟ್ರ­ಮಟ್ಟದ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದ­ರಿಂದ ಒಬ್ಬ ವಿದ್ಯಾರ್ಥಿಗೆ ತಿಳಿ ಹೇಳುವಂತೆ ಪ್ರತಿ ಕ್ರಮವನ್ನು ವಿವರಿಸಿ ಹೇಳುತ್ತಿದ್ದರು. ಸಮಿತಿ ಸದಸ್ಯ­ರಾಗಿದ್ದ ಎಸ್‌.ಎಲ್‌.ಭೈರಪ್ಪ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರತಿನಿಧಿ), ಜಿ.ಎಸ್‌. ಶಿವ­ರುದ್ರಪ್ಪ, ಸಿದ್ಧಯ್ಯ ಪುರಾಣಿಕ, ಹಾ.ಮಾ. ನಾಯಕ, ಜಿ.ಎಸ್‌. ಆಮೂರ ಇವರೆಲ್ಲ ಕನ್ನಡ ಸಾಹಿತ್ಯಲೋಕದ ದಿಗ್ಗಜರು. ಸಮಿತಿ ಸಭೆಗಳಲ್ಲಿ ಚರ್ಚಿ­ಸುತ್ತಿದ್ದ ವಿಷಯಗಳು ತುಂಬಾ ಮೌಲಿಕ­ವಾಗಿರುತ್ತಿದ್ದವು.ಪಂಪ ಪ್ರಶಸ್ತಿಯ ನಿರ್ಣಾಯಕ ಸಭೆ ಮುಂಬೈ­ಯಲ್ಲಿ ನಡೆಯುವುದು ಅನಿವಾರ್ಯವಾಯ್ತು. ಗೋಕಾಕ್‌ ಅವರು ಬೆಂಗಳೂರಿಗೆ ಪ್ರಯಾಣಿ­ಸಲು ಸಾಧ್ಯವಾಗದ್ದರಿಂದ ಅವರ ಮಗ ಅನಿಲ್‌ ಅವರ ನಿವಾಸದಲ್ಲಿ ಸಭೆ ನಡೆಯಿತು. ಸಮಿತಿ ಸದ­ಸ್ಯ­ರೆಲ್ಲ ಬೆಂಗಳೂರಿನಿಂದ ಮುಂಬೈಗೆ ರೈಲಿ­ನಲ್ಲಿ ಪ್ರಯಾಣಿಸಿದೆವು. ದಾರಿಯುದ್ದಕ್ಕೂ ಮಾತೇಮಾತು. ಸಾಹಿತ್ಯ ಲೋಕದ ಹಲವಾರು ವಿಚಾರ ಚರ್ಚೆ, ಕಾವ್ಯವಾಚನ, ತಮಾಷೆ, ಹರಟೆ. ಹಿರಿಯರೊಂದಿಗೆ ಕಳೆದ ಸಮಯ ಅವಿ­ಸ್ಮರಣೀಯ. ಮಹಾರಾಷ್ಟ್ರ ಸರ್ಕಾರದಲ್ಲಿ ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದ ಅನಿಲ್‌ ಗೋಕಾಕ್‌ ನಮಗೆಲ್ಲ ಉತ್ತಮ ಆತಿಥ್ಯ ನೀಡಿ, ಉಪಕರಿಸಿದರು. ಮುಂಬೈನ ಮೈಸೂರು ಸಂಘದ ಡಾ. ಮಂಜುನಾಥ್‌ ಮತ್ತವರ ಸ್ನೇಹಿ­ತರ ಆತಿಥ್ಯವೂ ಸಿಕ್ಕಿತು. ಮೊಟ್ಟಮೊದಲ ಪಂಪ ಪ್ರಶಸ್ತಿಗೆ ರಾಷ್ಟ್ರಕವಿ ಕುವೆಂಪು ಭಾಜನರಾದರು.ಗೋಕಾಕ್‌ ಅವರ ವಿಷಯ ಪ್ರಸ್ತಾಪಿಸುವಾಗ ಮತ್ತೊಂದು ವಿಷಯವನ್ನು ನಾನು ಹೇಳಲೇ­ಬೇಕು. ಕನ್ನಡ ಭಾಷೆಗೆ ಶಿಕ್ಷಣದಲ್ಲಿ ಪ್ರಾಶಸ್ತ್ಯ ನೀಡು­ವುದರ ಬಗ್ಗೆ ಡಾ. ಗೋಕಾಕ್‌ ವರದಿ­ಯನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದೊಡ್ಡ ಪ್ರಮಾಣದಲ್ಲಿ ಚಳವಳಿ ಪ್ರಾರಂಭ­ವಾಗಿತ್ತು. ಸಾಹಿತಿ, ಕಲಾವಿದರ ಬಳಗದ ನೇತೃತ್ವ­ದಲ್ಲಿ ಪ್ರಾರಂಭವಾದ ಹೋರಾಟಕ್ಕೆ ಡಾ. ರಾಜ್‌­ಕುಮಾರ್‌ ಧುಮುಕಿದಾಗ ಅದರ ಸ್ವರೂಪವೇ ಬದ­ಲಾಯ್ತು. ಹಿರಿಯರಾದ ಪಾಟೀಲ ಪುಟ್ಟಪ್ಪ, ಸಾಹಿ­ತಿ­ಗಳು, ಕಲಾವಿದರು ಮಾತ್ರವಲ್ಲದೆ ರೈತ ಮುಖಂ­ಡರು, ರಾಜಕೀಯ ನಾಯಕರು ಹೀಗೆ ಅದು    ಎಲ್ಲ ಜನಸಮುದಾಯ ಚಳವಳಿ­ಯಾ­ಯ್ತು.ಗದಗಿನಲ್ಲಿ ಅಸಿಸ್ಟಂಟ್‌ ಕಮಿಷನರ್‌ ಆಗಿದ್ದ ಸಮಯ. ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಚಳವಳಿ ನೇತೃತ್ವ ವಹಿಸಿ, ಬೆಂಬಲಿಗ­ರೊಂದಿಗೆ ನನ್ನ ಕಚೇರಿಯ ಮುಂದೆ ಧರಣಿ ಕುಳಿ­ತರು. ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ನನಗೆ ಇಕ್ಕಟ್ಟು ಎದುರಾಯ್ತು. ಸಿಆರ್‌ಪಿಸಿ ಸೆಕ್ಷನ್ 144 ಜಾರಿಯಲ್ಲಿತ್ತು. ಸ್ವಾಮೀಜಿ ನೂರಾರು ಜನರೊಂದಿಗೆ ಕಚೇರಿ ಮುಂದೆ ಕುಳಿತು, ಕಾಯ್ದೆ ಉಲ್ಲಂಘಿಸಿದ್ದರು. ಏನು ಮಾಡು­ವುದೆಂದು ತೋಚದೆ ನೇರವಾಗಿ ಭೇಟಿ­ಮಾಡಿ ಚರ್ಚಿಸಿದೆ. ಇಡೀ ಚಳವಳಿ ಬಗ್ಗೆ ನನ್ನ ವೈಯಕ್ತಿಕ ಸಹಾನುಭೂತಿ ಇತ್ತು. ಚರ್ಚಿಸುವ ಸಮ­ಯದಲ್ಲಿ ಸ್ವಾಮೀಜಿ ಒಂದು ಮಾತು ಹೇಳಿ­ದರು.

‘ಒಂದು ಭಾಷೆ ಬೆಳೆಯಬೇಕಾದರೆ ಸರ್ಕಾರ, ಜನ ಅದನ್ನು ಪೋಷಿಸಬೇಕು. ಅನು­ಕೂಲಕರ ವಾತಾವರಣ ನಿರ್ಮಾಣ ಮಾಡ­ಬೇಕು. ಹಾಗೇ ಬೆಳೆಯಲು ಅದೇನು ಮುಖದ ಮೇಲಿನ ಗಡ್ಡ–ಮೀಸೆಯಲ್ಲ’ ಎಂದರು. ನನ್ನ ಇಕ್ಕ­ಟ್ಟನ್ನು ಅರ್ಥ ಮಾಡಿಕೊಂಡ ಸ್ವಾಮೀಜಿ ಐದು ಜನಕ್ಕೆ ಹೆಚ್ಚಿಲ್ಲದಂತೆ ದೂರ, ದೂರ ಸ್ಥಳಗಳಲ್ಲಿ ಕುಳಿತು ಧರಣಿ ನಡೆಸಲು ಒಪ್ಪಿದರು. ಯಾವುದೇ ಅಹಿತಕರ ಘಟನೆಯಿಲ್ಲದೆ ತಾಂತ್ರಿಕವಾಗಿ ಕಲಂ 144ರ ಉಲ್ಲಂಘನೆಯಿಲ್ಲದೆ ಗೋಕಾಕ್‌ ಚಳವಳಿ ಬಹು ಯಶಸ್ವಿಯಾಗಿ ನಡೆಯಿತು.ಕವಿಯಾಗಿ, ಶಿಕ್ಷಣತಜ್ಞರಾಗಿ, ಕನ್ನಡ ಪ್ರೇಮಿಯಾಗಿ ಗೋಕಾಕ್‌ ಅವರು ಬಹಳ ಅಪರೂಪದ ವ್ಯಕ್ತಿ. ನಿಜ ಅರ್ಥದಲ್ಲಿ ಗೋಕಾಕ್‌ ಅವರದ್ದು ಬಹು ಎತ್ತರದ ವ್ಯಕ್ತಿತ್ವ. ಅವರು ರಚಿಸಿದ ಸಾಹಿತ್ಯ ಅಪಾರವಾದದ್ದು ಮತ್ತು ಅಪರೂಪದ್ದು. ಕನ್ನಡ ಸಂಸ್ಕೃತಿ ಇಲಾಖೆ ನನಗೆ ಎಂದೂ ಮರೆಯಲಾಗದ ಹಲವಾರು ಅನುಭವಗಳನ್ನು ನೀಡಿದೆ. ಒಮ್ಮೊಮ್ಮೆ ಅತಿ ಮಧುರ, ಮಗ­ದೊಮ್ಮೆ ವಿಚಿತ್ರ ಹಾಗೂ ಮುಜುಗರದ ಅನು­ಭವ­ಗಳು. ಪಂ. ಭೀಮಸೇನ ಜೋಶಿಯವರ ಸಂಗೀತವೆಂದರೆ ನನಗೆ ಬಲುಪ್ರೀತಿ. ಗದಗಿನಲ್ಲಿ ಎ.ಸಿ­ಯಾಗಿದ್ದಾಗ ರಾತ್ರಿಯಿಡಿ ಅವರ ಅಭಂಗ­ಗ­ಳನ್ನು ಕೇಳಿದ್ದೇನೆ.  ಅವರ ದೊಡ್ಡ ಅಭಿಮಾನಿ ನಾನು. ಒಂದುದಿನ ಸಂಸ್ಕೃತಿ ಇಲಾಖೆಗೆ ಫೋನ್‌ ಮಾಡಿ ‘ನಾನು ಭೀಮಸೇನ ಮಾತಾಡ್ತಿದ್ದೀನಿ. ನಾಡಿದ್ದು ಬೆಂಗಳೂರಿಗೆ ಬರ್ತಿದ್ದೀನಿ. ರಾಮಕೃಷ್ಣ ಹೆಗಡೆಗೆ ಹೇಳಿ ನನಗೆ ವುಡ್‌ಲ್ಯಾಂಡ್‌ ಹೋಟೆ­ಲ್‌­ನಲ್ಲಿ ಎರಡು ರೂಮ್‌ ಬುಕ್‌ ಮಾಡ್ಲಿಕ್ಕೆ ಹೇಳಿ’ ಎಂದರು ಅಷ್ಟೇ.. ಫೋನ್‌ ಕಟ್‌ ಮಾಡಿ­ದರು. ಹೆಗಡೆಯವರು ಮುಖ್ಯಮಂತ್ರಿ. ಅವರಿಗೆ ಹೇಗೆ ನಾನು ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ರೂಮ್‌ ಬುಕ್‌ ಮಾಡ್ಲಿಕ್ಕೆ ಹೇಳಲಿ!ನಂತರ ವಿಚಾರಿಸಿದಾಗ ತಿಳಿಯಿತು, ಹೆಗಡೆ­ಯವರು ದೆಹಲಿ ಕಾರ್ಯಕ್ರಮವೊಂದರಲ್ಲಿ ಜೋಶಿಯವರನ್ನು ಭೇಟಿಯಾಗಿದ್ದರು. ಆಗ ಅವರ ವಿಶೇಷ ಅಧಿಕಾರಿ ರಾಮಪ್ಪ ನನ್ನ ದೂರ­ವಾಣಿ ಸಂಖ್ಯೆ ಕೊಟ್ಟು ಬೆಂಗಳೂರಿಗೆ ಬಂದರೆ ಸಂಪರ್ಕಿಸುವಂತೆ ತಿಳಿಸಿದ್ದರು.

ಒಂದುದಿನ ಕಚೇರಿಯಲ್ಲಿದ್ದೆ. ಎತ್ತರದ ಬಿಳಿ­ಗಡ್ಡ, ಕೆದರಿದ ಕೂದಲು, ಮಾಸಲು ಬಣ್ಣದ ಜುಬ್ಬಾ–ಪೈಜಾಮ, ಕೋಟ್‌ ಧರಿಸಿ, ಬರಿಗಾ­ಲಲ್ಲಿ ಒಬ್ಬ ಫಕೀರನಂತಿದ್ದ ವ್ಯಕ್ತಿ ನನ್ನ ರೂಮಿ­ನೊಳಗೆ ಬಂದರು. ನೋಡುತ್ತೇನೆ, ಎಂ.ಎಫ್‌.­ಹುಸೇನ್. ನನ್ನೆದುರೇ ಅವರದೊಂದು ‘ಓಡುವ ಕುದುರೆ’ಯ ಪೇಂಟಿಂಗ್‌ ಇತ್ತು. ಅದರ ಬಣ್ಣ­ಗಳು ಸ್ವಲ್ಪ ಮಾಸಿದ್ದವು. ಅವರ ಬಗಲ ಬ್ಯಾಗ್‌­ನಿಂದ ಬ್ರಷ್‌ ಮತ್ತು ಬಣ್ಣ ತೆಗೆದು ಅದನ್ನು ಮತ್ತೆ ಪೂರ್ವಸ್ಥಿತಿಗೆ ತಂದು, ಒಮ್ಮೆ ದಿಟ್ಟಿಸಿ ನೋಡಿ ಮುಗುಳ್ನಕ್ಕರು. ಚಹಾ ಕುಡಿದು ಎದ್ದು ನಡೆದೇ­ಬಿಟ್ಟರು. 15 ವರ್ಷಗಳ ನಂತರ ಕನ್ನಡ, ಸಂಸ್ಕೃತಿ ಇಲಾಖೆಗೆ ಕಾರ್ಯದರ್ಶಿಯಾಗಿ ಬರುವ ವೇಳೆಗೆ ‘ಓಡುವ ಕುದುರೆ’ ಪೇಂಟಿಂಗ್‌ ಪುನಃ ನೋಡಲು ಸಿಗಲಿಲ್ಲ. ಎಲ್ಲಿಗೋ ಓಡಿಹೋಗಿತ್ತು.ಪಂ. ಭೀಮಸೇನ ಜೋಶಿ, ಪಂ. ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್‌, ಮಲ್ಲಿಕಾರ್ಜುನ ಮನ್ಸೂರ್‌ ಇವರೆಲ್ಲ ಹಿಂದೂ­ಸ್ತಾನಿ ಗಾಯನದಲ್ಲಿ ತಮ್ಮ ಅದ್ಭುತ ಪ್ರತಿಭೆ­ಯಿಂದ ಕರ್ನಾಟಕದ ಘನತೆಯನ್ನು ಹೆಚ್ಚಿಸಿ­ದವರು. ಅವರೊಡನೆ ನಾನು ಕಳೆದ ಕ್ಷಣಗಳು ಅವಿಸ್ಮರಣೀಯ, ಆನಂದಮಯ. ಹಂಪಿ ಉತ್ಸವ ಉದ್ಘಾಟನೆಯಾದ ಮಾರನೇ ದಿನ ನಜೀರ್‌­ಸಾಬ್‌ ಅವರು ನಿಧನ ಹೊಂದಿದ್ದರಿಂದ ಉತ್ಸವ­ವನ್ನು ಮುಂದೂಡಲಾಯಿತು. ಮರುದಿನ ಕಾರ್ಯ­­ಕ್ರಮ ನೀಡಬೇಕಿದ್ದ ಕಲಾವಿದರೆಲ್ಲ ಬಂದಿ­ದ್ದರು. ಮಲ್ಲಿಕಾರ್ಜುನ ಮನ್ಸೂರರು ಸಹ ಬಂದಿ­ದ್ದರು. ಅವರ ಜೊತೆ ಮಾತನಾಡುತ್ತಾ ಕುಳಿತೆ.

ಜೇಬಿನಿಂದ ಒಂದು ಬೀಡಿ ತೆಗೆದು ಹಚ್ಚಿದರು. ಸುರಳಿ–ಸುರಳಿಯಾಗಿ ಹೊಗೆ ಬಿಡುತ್ತಿದ್ದರು. ಅಲ್ಲೇ ಇದ್ದ ಛಾಯಾಗ್ರಾಹಕ ಕ್ಯಾಮೆರಾ ಕ್ಲಿಕ್ಕಿ­ಸಿದ. ಅದೊಂದು ನನ್ನ ಬಳಿ ಇರುವ ಸ್ಮರಣಿಕೆ. ತಮ್ಮ ಹಾಡು ಕೇಳದೆ ನನಗೆ ತುಂಬಾ ನಿರಾಶೆ­ಯಾಯ್ತು ಎಂದೆ. ಒಮ್ಮೆ ದಿಟ್ಟಿಸಿ ನೋಡಿ ನಿಮಗೆ ಯಾವುದು ಇಷ್ಟ ಎಂದರು. ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ..’ ಎಂಬ ಅಕ್ಕನ ವಚನ ಬಹಳ ಇಷ್ಟವೆಂದೆ. ಪಕ್ಕಕ್ಕೆ ಕರೆದೊಯ್ದು ಕೂರಿಸಿ­ಕೊಂಡು ಆ ವಚನವನ್ನು 10–15 ನಿಮಿಷ ನನ­ಗೊಬ್ಬನಿಗೇ ಹಾಡಿದರು. ಉಳಿದವರು ಅದು ತಾಲೀಮು ಎಂದುಕೊಂಡು ಅಲ್ಲಲ್ಲಿ ಕುಳಿತು ಕೇಳು­­­ತ್ತಿ­ದ್ದರು. ಅತ್ಯಂತ ಸರಳ–ಸೌಜನ್ಯದ ಕಲಾ­ನಿಧಿ ಮನ್ಸೂರ್‌. ಅವರ ಪುತ್ರ ರಾಜಶೇಖರ್‌ ಮನ್ಸೂರ್‌ ಕೂಡ ಅಷ್ಟೇ, ಸೌಜನ್ಯದ ಕಲಾವಿ­ದರು.ಭಾರತದಲ್ಲಿ ರಷ್ಯಾ ಉತ್ಸವ ಒಂದು ಅದ್ಭುತ ಅಂತರರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ. ದೊಡ್ಡ ದೊಡ್ಡ ಕ್ರೀಡಾಂಗಣಗಳಲ್ಲಿ ಭಾರಿ ಪ್ರಮಾಣ­ದಲ್ಲಿ ನಡೆದ ಕಾರ್ಯಕ್ರಮಗಳು ಒಂದೆಡೆ­ಯಾದರೆ ಅಷ್ಟೇ ರಂಜನೀಯವಾದ ಸಣ್ಣ, ಸಣ್ಣ ಕಾರ್ಯಕ್ರಮಗಳು ಸಭಾಂಗಣದಲ್ಲಿ ನಡೆಯು­ತ್ತಿ­ದ್ದವು. ಅದೊಂದು ಅಪರೂಪದ ಉತ್ಸವವಾದ್ದ­ರಿಂದ ಬಹಳ ಜನ ವಿವಿಐಪಿಗಳಿಂದ ಪಾಸ್‌ಗಳಿ­ಗಾಗಿ ಉತ್ತಮ ಆಸನಗಳಿಗಾಗಿ ಒತ್ತಡವಿರು­ತ್ತಿತ್ತು. ಕೆಲವು ವಿವಿಐಪಿಗಳ ಆಪ್ತ ಸಹಾಯಕರು ಕೊನೆಕ್ಷಣದಲ್ಲಿ ಒತ್ತಡ ಹೇರಿ ಇಲಾಖೆಯ ಅಧಿ­ಕಾರಿ­ಗಳನ್ನು ಗದರಿಸುತ್ತಿದ್ದರು.ಕಾರ್ಯಕ್ರಮದ ಆಯೋಜನೆ, ನಿರ್ವಹಣೆ ಸಮಸ್ಯೆಗಿಂತ ಈ ವಿವಿಐಪಿಗಳ ಕಾಟವೇ ಅತಿ­ಯಾಗಿ ಇಲಾಖೆಯ ಅಧಿಕಾರಿಗಳು ಹೈರಾ­ಣಾಗಿ ಹೋಗಿ ಈ ಉತ್ಸವ ಮುಗಿದು­ಹೋದರೆ ಸಾಕು ಎನ್ನುವ ಸ್ಥಿತಿ ತಲುಪಿ­ದ್ದರು. ಅದಕ್ಕೊಂದು ಉಪಾಯ ಹುಡುಕಿದೆವು. ಮೊದಲು ಒಂದು ಸಾಲಿ­­ನಲ್ಲಿ ನಮ್ಮ ಇಲಾಖೆಯ ಗ್ರೂಪ್‌ ‘ಡಿ’ ನೌಕರರನ್ನು ಕೂರಿಸುವುದು. ಗಣ್ಯರು ಬಂದರೆ ಅವರು ಬಂದವರಿಗೆ ಜಾಗ ಬಿಟ್ಟು ಏಳುವು­ದೆಂದು. ಇದು ಇಲಾಖೆಯಲ್ಲಿ ಒಂದು ಪದ್ಧತಿ­ಯಾಗಿ ಬೆಳೆದಿದೆ. ಎಲ್ಲೊ ಮೂಲೆ­ಯಲ್ಲಿ ನಿಂತಿ­ರು­ತ್ತಿದ್ದ ‘ಡಿ’ ಗ್ರೂಪ್‌ ನೌಕರರಿಗೆ ಇದೊಂದು ಸುವರ್ಣ ಅವಕಾಶವಾಯ್ತು. ಹಿರಿಯ ಅಧಿಕಾರಿ­ಗ­ಳು ವಿವಿಐಪಿಗಳ ಆಗಮನ­ಕ್ಕಾಗಿ ಬಾಗಿಲಲ್ಲಿ ಕಾಯುತ್ತಾ ನಿಂತಿರುತ್ತಿದ್ದರೆ ಇವರು ಮಜವಾಗಿ ಮುಂದಿನ ಸಾಲಿನಲ್ಲಿ ಕುಳಿತು ಪ್ರಾರಂಭದಿಂದ ಕಾರ್ಯಕ್ರಮ ನೋಡಿ ಸುಖಿಸುತ್ತಿದ್ದರು.ಒಂದು ಕಾರ್ಯಕ್ರಮ. ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿದ್ದ ಬಿ.ಎಲ್‌. ಶಂಕರ್‌ ಮುಖ್ಯ ಅತಿಥಿಯಾಗಿದ್ದರು. ಸರಿಯಾದ ವೇಳೆಗೆ ಬಂದರು. ನಾನು ಅವರನ್ನು ಇನ್ನಿತರ ಅತಿಥಿಗಳ ಮೊದಲ ಸಾಲಿನ ಮಧ್ಯಭಾಗದಲ್ಲಿ ಕೂರಿಸಿದೆ. ಕಾರ್ಯಕ್ರಮ ಪ್ರಾರಂಭವಾಯ್ತು. ಇಲಾಖೆಯ ದಕ್ಷ ಹಾಗೂ ಸೌಜನ್ಯ ಅಧಿಕಾರಿ  ಎಸ್‌. ವಿಶ್ವ­ನಾಥ್‌ ಅಂದು ಕಾರ್ಯಕ್ರಮಕ್ಕೆ ಬರುತ್ತೇನೆಂದು ತಿಳಿಸಿದ್ದ ಮುಖ್ಯ ಕಾರ್ಯದರ್ಶಿ ಎ.ಬಿ. ದಾತಾರ್‌ ಅವರಿಗಾಗಿ ಕಾಯುತ್ತಾ ನಿಂತಿದ್ದರು. ಅವರು ತುಸು ತಡವಾಗಿ ಬಂದರು. ಮೊದಲ ಸಾಲಿನಲ್ಲಿ ಕುಳಿತಿದ್ದ ನಮ್ಮ ಅಟೆಂಡರ್‌ ಒಬ್ಬನನ್ನು ಎಬ್ಬಿಸಿ ದಾತಾರ್‌ ಅವರಿಗೆ ಸೀಟಿನ ವ್ಯವಸ್ಥೆ ಮಾಡಿದರು. ಮಧ್ಯಂತರದಲ್ಲಿ ಬೆಳಕು ಹಾಕಿದಾಗ ಅವರ ಅಕ್ಕಪಕ್ಕದಲ್ಲಿ ಕುಳಿತಿದ್ದ ಅಟೆಂಡರ್‌ಗಳನ್ನು ನೋಡಿ ಕಕ್ಕಾಬಿಕ್ಕಿಯಾದರು. ಅವರಿಗೆ ಬಹಳ ಕೋಪ­ಬಂದಿತ್ತು. ವಿವರಿಸಿ ಹೇಳಿದರೂ ಆ ಕ್ಷಣ­ದಲ್ಲಿ ಅವರಿಗೆ ನಮ್ಮ ಸಮಸ್ಯೆ ಅರ್ಥವಾಗಲಿಲ್ಲ. ನನ್ನನ್ನು ಬರಮಾಡಿಕೊಳ್ಳಲು ಯಾರನ್ನೋ ಕೆಳದರ್ಜೆ ನೌಕರನನ್ನು ನಿಲ್ಲಿಸಿದ್ದೆ ಎಂದು ಆಕ್ಷೇ­ಪಿ­ಸಿ­ದರು. ಮರುದಿನ ಬೆಳಿಗ್ಗೆ ನನ್ನ ಇಡೀ ಕಚೇ­ರಿಯ ಅಧಿಕಾರಿಗಳನ್ನು ಅವರ ಕೊಠಡಿಯಲ್ಲಿ ಪರೇಡ್‌ ಮಾಡಿ ತಿಳಿಸಿದೆ, ನಮ್ಮಲ್ಲಿರುವ ಅಧಿ­ಕಾರಿ­ಗಳು ನೋಡಲು ಈ ರೀತಿ ಇದ್ದಾರೆ. ಆದರೆ, ದಕ್ಷತೆ­ಯಲ್ಲಿ ಅವರು ಉಳಿದ ಇಲಾಖೆಗಳ ಅಧಿ­ಕಾರಿಗ­ಳಿ­ಗಿಂತ ಉತ್ತಮರು ಎಂದೆ. ಕನ್ನಡ ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಅದರಲ್ಲೂ ಮುಖ್ಯವಾಗಿ ರವೀಂದ್ರ ಕಲಾಕ್ಷೇತ್ರದ ಶೇಖರ–ನಾಗರಾಜ ಮುಂತಾ­­ದವರ ಕ್ರಿಯಾಶೀಲತೆ, ಉತ್ಸಾಹ, ದಣಿ­ವ­ರಿಯದ ಶ್ರಮ ಹೆಮ್ಮೆಯುಂಟುಮಾಡುತ್ತದೆ.ವಿವಿಐಪಿಗಳಿಂದ ನಮಗುಂಟಾದ ಕಿರಿಕಿರಿ–ತೊಂದ­­ರೆ­ಗಳ ಬಗ್ಗೆ ದಾತಾರ್‌ ಅವರಿಗೆ ವಿವರಿ­ಸಿದೆ. ಸಾಂಸ್ಕೃತಿಕ ಲೋಕದಲ್ಲಿ ಸಾಹಿತಿ ಕಲಾವಿ­ದರೇ ನಿಜವಾದ ವಿವಿಐಪಿಗಳು. ಅವರಲ್ಲದ ಉಳಿ­ದ­­ವ­ರೆಲ್ಲರೂ ಸಮಾನರು ಎಂಬ ನನ್ನ ನಿಲುವನ್ನು ಒಪ್ಪಿದರು, ಮೆಚ್ಚಿದರು.

ಗೋಕಾಕ್‌ ಅವರ ಈ ‘ಭಾವಗೀತೆ’ ಸಾಲು­ಗಳನ್ನು ಮತ್ತೊಮ್ಮೆ ನೋಡಿ:

ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು// ನೇಹಕೆಂದು, ನಲುಮೆಗೊಂದು, ಗುರುತಿಗಿ­ರಿಸಿ­ ಬರುವೆನು// ಹೋದ ಮೇಲೆ ಸುತ್ತಬೇಕು ಏಳುಕೋಟೆ ದ್ವಾರವು//ದಾರಿಯಲ್ಲಿ ತೀರದಂಥ ದುಃಖ­ವಿಹುದ­ಪಾರವು// ಸಾಧಿಸುತ್ತ ಜಯಿಸುವದೇ ಬಾಳುವದರ ಸಾರವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry