ಅಗೋಚರವಾಗಿದೆ `ಆಳುವ ವರ್ಗ'!

7

ಅಗೋಚರವಾಗಿದೆ `ಆಳುವ ವರ್ಗ'!

ಡಾ.ಆರ್.ಬಾಲಸುಬ್ರಹ್ಮಣ್ಯಂ
Published:
Updated:

ಒಂದು ತಿಂಗಳ ಹಿಂದೆ ವಿಶ್ವದ ಪ್ರಮುಖ ಪತ್ರಿಕೆಗಳು ಮತ್ತು ಟಿ.ವಿ ವಾಹಿನಿಗಳು ರಷ್ಯಾದಲ್ಲಿ ನಡೆದ ಮಹತ್ವದ ಸಂಗತಿಯನ್ನು ವರದಿ ಮಾಡಿದವು. ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ರಕ್ಷಣಾ ಸಚಿವ ಅನಾಟಲಿ ಸೆರ್ಡುಕೋವ್ ಅವರನ್ನು ವಜಾ ಮಾಡಿದರು.ಈ ಕ್ರಮ, ರಕ್ಷಣಾ ಸಚಿವಾಲಯ ಸಿಲುಕಿಕೊಂಡಿರುವ ಹಲವಾರು ಭ್ರಷ್ಟಾಚಾರ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗೆ ಅನುಕೂಲ ಮಾಡಿಕೊಡಲಿದೆ ಎಂದು ಅಧ್ಯಕ್ಷರ ಕಚೇರಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿತು. ಅನಾಟಲಿ ಅವರು ಹಲವು ಪ್ರಬಲ ಶಕ್ತಿಗಳ ವಿರೋಧ ಕಟ್ಟಿಕೊಂಡಿದ್ದುದೇ ಇದಕ್ಕೆ ಕಾರಣ ಎಂಬ ವದಂತಿಗಳು ಹಬ್ಬಿದವು.ಈ ಶಕ್ತಿಗಳಲ್ಲಿ ಬಹುತೇಕವು, ಸೇನಾ ಆಧುನೀಕರಣ ಕಾರ್ಯಕ್ರಮಗಳ ಲಾಭ ಪಡೆಯಲು ಬಯಸಿದ್ದ ಕಾರ್ಪೊರೇಟ್ ಶಕ್ತಿಗಳು ಮತ್ತು ಪ್ರಮುಖ ದಲ್ಲಾಳಿ ಗುಂಪುಗಳಾಗಿದ್ದವು. ತಮ್ಮ ಉತ್ಪನ್ನಗಳಿಗೆ ಕಡಿಮೆ ಬೆಲೆಯನ್ನು ಒಪ್ಪಿಕೊಳ್ಳುವಂತೆ ಮಾಡಿದ್ದ ಅನಾಟಲಿ ಅವರ ಕ್ರಮ, ಹಲವು ಕಂಪೆನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.ಹೀಗಾಗಿ ಅವುಗಳ ಮುಂದೆ ಇದ್ದುದು ಎರಡೇ ಪರ್ಯಾಯ ಆಯ್ಕೆಗಳು- ಅದು ಕಡಿಮೆ ಬೆಲೆಗೆ ಉತ್ಪನ್ನ ಸರಬರಾಜು ಮಾಡುವುದು ಅಥವಾ ತಮಗೆ ಸುಲಭವಾಗಿ ಮಣಿಯುವ ಸಚಿವರನ್ನು ಹೊಂದುವುದು.ರಷ್ಯಾ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾದ ಈ ವಿವರಗಳು ಕಡೆಗಣಿಸುವಂತಹವಲ್ಲ. ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಇಂತಹುದೇ ಘಟನೆಗಳಿಂದ ಉಂಟಾದ ಪರಿಣಾಮಗಳನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ.2008ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಹಾಗೂ ರಿಪಬ್ಲಿಕನ್ ಅಭ್ಯರ್ಥಿಗಳು ತೈಲ ಮತ್ತು ಅನಿಲ ಉದ್ದಿವೆುಯಿಂದ ಪಡೆದುಕೊಂಡಿದ್ದ ನಿಧಿಯ ಬಗ್ಗೆ ಈಗ ನಾವು ಗಮನ ಹರಿಸೋಣ. `ಪ್ರಮುಖ ಬಹುರಾಷ್ಟ್ರೀಯ ಹಾಗೂ ಸ್ವತಂತ್ರ ತೈಲ ಮತ್ತು ಅನಿಲ ಉತ್ಪಾದಕರು, ಸಂಸ್ಕರಣೆದಾರರು, ನೈಸರ್ಗಿಕ ಅನಿಲ ಪೈಪ್‌ಲೈನ್ ಕಂಪೆನಿಗಳು, ಗ್ಯಾಸೊಲಿನ್ ಸೇವಾ ಕೇಂದ್ರಗಳು ಮತ್ತು ಇಂಧನ ವಿತರಕರನ್ನು ಒಳಗೊಂಡಿರುವ ಈ ಉದ್ದಿಮೆ ವಾಷಿಂಗ್ಟನ್‌ನಲ್ಲಿ ಬಹಳ ಹಿಂದಿನಿಂದಲೂ ಸಾಕಷ್ಟು ಪ್ರಭಾವ ಹೊಂದಿದೆ' ಎಂದು `ದಿ ಸೆಂಟರ್ ಫಾರ್ ರೆಸ್ಪಾನ್ಸಿವ್ ಪಾಲಿಟಿಕ್ಸ್' ಎಂಬ ಸಂಸ್ಥೆ ಹೇಳುತ್ತದೆ.ಇದು ಪರಿಶುದ್ಧ ಮತ್ತು ಪಾರದರ್ಶಕ ರಾಜಕೀಯ ವ್ಯವಸ್ಥೆ ಜಾರಿಗೆ ಯತ್ನಿಸುತ್ತಿರುವ ಅಮೆರಿಕದ ಒಂದು ಲಾಭರಹಿತ ಸಂಸ್ಥೆಯಾಗಿದೆ. ಈ ಉದ್ದಿಮೆ ಕಂಪೆನಿಗಳ ಜೊತೆ ಸಂಯೋಜನೆಗೊಂಡಿರುವ ಖಾಸಗಿ ವ್ಯಕ್ತಿಗಳು ಹಾಗೂ ರಾಜಕೀಯ ಕ್ರಿಯಾ ಸಮಿತಿಗಳು 1990ರ ಚುನಾವಣೆಯಿಂದಲೂ 238.7 ದಶಲಕ್ಷ ಡಾಲರ್ ಹಣವನ್ನು ಅಭ್ಯರ್ಥಿಗಳು ಹಾಗೂ ಪಕ್ಷಗಳಿಗೆ ದೇಣಿಗೆ ನೀಡಿವೆ.ಇದರಲ್ಲಿ ಶೇ 75ರಷ್ಟು ಹಣ ರಿಪಬ್ಲಿಕನ್ನರಿಗೇ ಹೋಗಿದೆ. ಹೀಗೆ ಮಾಜಿ ತೈಲೋದ್ಯಮಿಗಳೇ ಆದ ಜಾರ್ಜ್ ಡಬ್ಲ್ಯು ಬುಷ್ ಮತ್ತು ಡಿಕ್ ಚೆನಿ ಅವರು 8 ವರ್ಷಗಳ ಕಾಲ ಶ್ವೇತಭವನವನ್ನು ಆಳಿದ್ದರೂ, ಆರ್ಕಟಿಕ್ ರಾಷ್ಟ್ರೀಯ ವನ್ಯಜೀವಿ ರಕ್ಷಿತಾರಣ್ಯದಲ್ಲಿ ಕೊರೆತದ ಮೇಲೆ ಹೇರಿರುವ ನಿಷೇಧ ಹಿಂತೆಗೆದುಕೊಳ್ಳಲು ಅಗತ್ಯವಾದ ಬೆಂಬಲ ಗಳಿಕೆ ಮಾತ್ರ ಅವುಗಳಿಗೆ ಸಾಧ್ಯವಾಗಿಲ್ಲ.ಡೆಮಾಕ್ರೆಟಿಕ್ ಅಧ್ಯಕ್ಷ ಬರಾಕ್ ಒಬಾಮ ಬೆಂಬಲಿಸುವ ಹವಾಮಾನ ಬದಲಾವಣೆ ಮಸೂದೆ ಬಗ್ಗೆಯೂ ಈ ಕಂಪೆನಿಗಳು ಎಚ್ಚರ ವಹಿಸಿವೆ. ಇಂತಹ ಸ್ಥಿತಿಯಲ್ಲಿ, 2008ರ ಚುನಾವಣೆಯಲ್ಲಿ ಒಬಾಮ ತೈಲ ಮತ್ತು ಅನಿಲ ಉದ್ದಿಮೆಯಿಂದ 8,84,000 ಡಾಲರ್ ಹಣ ಪಡೆದುಕೊಂಡಿದ್ದಾರೆ.ಇದು ಅವರ ರಿಪಬ್ಲಿಕನ್ ಎದುರಾಳಿಯಾದ ಸೆನೆಟರ್ ಜಾನ್ ಮೆಕೇನ್ ಅವರನ್ನು ಹೊರತುಪಡಿಸಿದರೆ ಇತರ ಯಾವುದೇ ಜನಪ್ರತಿನಿಧಿ ಪಡೆದಿರುವುದಕ್ಕಿಂತಲೂ ಹೆಚ್ಚಿನ ಹಣ. ಹೀಗಿರುವಾಗ ಈ ನೀತಿ ನಿರೂಪಕರು ಇಂತಹ ಕಂಪೆನಿಗಳ ಕಾರ್ಪೊರೇಟ್ ಹಿತಾಸಕ್ತಿಯ ನೆರಳಿಲ್ಲದೆ, ಬರೀ ಸಾರ್ವಜನಿಕ ಹಿತಾಸಕ್ತಿಯನ್ನಷ್ಟೇ ದೃಷ್ಟಿಯಲ್ಲಿಟ್ಟು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದು ಹೇಗೆ ನಿರೀಕ್ಷಿಸಲು ಸಾಧ್ಯ?ಭಾರತದಲ್ಲಿ ಇತ್ತೀಚೆಗೆ ಜೈಪಾಲ್ ರೆಡ್ಡಿ ಅವರು ತೈಲ ಮತ್ತು ಪೆಟ್ರೋಲಿಯಂ ಖಾತೆ ಕಳೆದುಕೊಳ್ಳುವುದರ ಹಿಂದೆ ರಿಲಯನ್ಸ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಕೈವಾಡ ಇತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಈ ಪ್ರಭಾವಿಕೈಗಾರಿಕಾ ಸಂಸ್ಥೆ ಒತ್ತಡಕ್ಕೆ ಮಣಿದಿದ್ದಾರೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ. ಸಚಿವರು ಸಂಸ್ಥೆಯ ವಿರುದ್ಧ ತಿರುಗಿಬಿದ್ದಿದ್ದರಿಂದ ಅದನ್ನು ಸಮಾಧಾನ ಮಾಡುವ ಸಲುವಾಗಿ ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ವರ್ಗ ಮಾಡಲಾಯಿತು ಎಂದೇ ಹೇಳಲಾಗುತ್ತಿದೆ.2ಜಿ ಸ್ಪೆಕ್ಟ್ರಂ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನೀಡಿದ ಹೇಳಿಕೆಯನ್ನು ನಾವು ಇಲ್ಲಿ ಸ್ಮರಿಸಬೇಕಾಗುತ್ತದೆ. ಕಾರ್ಪೊರೇಟ್ ಮಧ್ಯವರ್ತಿ ನೀರಾ ರಾಡಿಯಾ ಅವರ ದೂರವಾಣಿ ಸಂಭಾಷಣೆಯಿಂದ, ಕಾರ್ಪೊರೇಟ್ ಕುಳಗಳು ಹೊಂದಿದ್ದ ಪ್ರಭಾವ ಬಯಲಾಗಿ ಕೋರ್ಟ್ ಮತ್ತು ನ್ಯಾಯಾಧೀಶರು ದಂಗಾಗಿದ್ದರು.`ನಾವು ಗಂಗೆಯಂತಹ ಪವಿತ್ರ ನದಿಗಳ ಮಾಲಿನ್ಯದ ಬಗ್ಗೆ ಮಾತನಾಡುತ್ತೇವೆ. ಆದರೆ ಈ ಬಗೆಯ ಮಾಲಿನ್ಯ ಅದಕ್ಕಿಂತಲೂ ಅಗಾಧವಾದದ್ದು' ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ಪೀಠ ಹೇಳಿತ್ತು.ರಾಡಿಯಾ ಮತ್ತು ಡಿಎಂಕೆ ಸಂಸದರ ನಡುವಿನ ದೂರವಾಣಿ ಸಂಭಾಷಣೆ ಬಯಲಾದದ್ದು, ಕಡಿಮೆ ಬೆಲೆಗೆ ಸ್ಪೆಕ್ಟ್ರಂ ಮಾರಾಟ, ಎಫ್‌ಡಿಐಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಕೋಲಾಹಲ, ದಲ್ಲಾಳಿಗಳು- ರಾಜಕಾರಣಿಗಳು- ನೀತಿನಿರೂಪಕರ ನಡುವಿನ ಸಂಬಂಧ ಕುರಿತ ಮಾಧ್ಯಮ ವರದಿಗಳು ದೇಶದ ಆಡಳಿತವನ್ನು ಪ್ರಮುಖವಾಗಿ ಬಾಧಿಸುತ್ತಿರುವ ಸಂಗತಿಗಳನ್ನು ಹೊರಗೆಡವಿವೆ. ಇದು ಎಲ್ಲ ಜಾಗೃತ ನಾಗರಿಕರಲ್ಲೂ ಕಳವಳ ಉಂಟು ಮಾಡಿದೆ.ಸಂಪುಟ ಸಚಿವರ ಆಯ್ಕೆ, ಪ್ರಮುಖ ಅಧಿಕಾರಿಗಳ ನೇಮಕ ಹಾಗೂ ಆರ್ಥಿಕ- ಕೈಗಾರಿಕಾ ನೀತಿಗಳನ್ನು ರೂಪಿಸುವ ಕಾರ್ಯದಲ್ಲಿ ಮಧ್ಯವರ್ತಿಗಳು ಮತ್ತು ಉದ್ದಿಮೆದಾರರು ಅಪಾರ ಪ್ರಭಾವ ಹೊಂದಿದ್ದಾರೆ. ನೀತಿ ನಿರೂಪಣಾ ಪ್ರಕ್ರಿಯೆ, ರಾಜಕೀಯ ಪಕ್ಷಗಳ ವ್ಯವಹಾರ, ಸಂಸದೀಯ ವ್ಯವಹಾರಗಳಲ್ಲೂ ಕೆಲವೇ ವರ್ಷಗಳ ಹಿಂದೆ ಊಹಿಸಲೂ ಅಸಾಧ್ಯವಾಗಿದ್ದ ರೀತಿಯಲ್ಲಿ ವಾಣಿಜ್ಯ ಹಿತಾಸಕ್ತಿಗಳು ಮಧ್ಯಪ್ರವೇಶ ಮಾಡುತ್ತಿರುವ ಉದಾಹರಣೆಗಳು ಸಾಕಷ್ಟಿವೆ.ಕಾರ್ಪೊರೇಟ್ ಮತ್ತು ದಲ್ಲಾಳಿ ಗುಂಪುಗಳು ಪ್ರಮುಖ ಮಧ್ಯವರ್ತಿಗಳಾಗಿವೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಮೂಲಸೌಲಭ್ಯ, ಇಂಧನ, ದೂರಸಂಪರ್ಕ, ಗಣಿಯಂತಹ ವಾಣಿಜ್ಯ- ಸರ್ಕಾರಿ ಸಂಬಂಧಗಳನ್ನು ಒಳಗೊಂಡ ಕ್ಷೇತ್ರಗಳಲ್ಲೂ ಅವು ಪ್ರಮುಖ ಪಾತ್ರಧಾರಿಗಳಾಗಿವೆ. ಸೇನಾ ಗುತ್ತಿಗೆಗಳು, ಕೃಷಿ ಉದ್ದಿಮೆ, ಬೀಜ, ನಾಗರಿಕ ವಿಮಾನಯಾನ, ಮೆಟ್ರೊ- ವಾಲ್‌ಮಾರ್ಟ್‌ನಂತಹ ಬಹುರಾಷ್ಟ್ರೀಯ ಸೂಪರ್ ಮಾರ್ಕೆಟ್‌ಗಳು ಸೇರಿದಂತೆ ಸಂಘಟಿತ ವ್ಯವಹಾರದಲ್ಲಿ ಚಿಲ್ಲರೆ ವಹಿವಾಟಿನಂತಹ ಕ್ಷೇತ್ರಗಳಲ್ಲೂ ಅವು ಹೊಂದಿರುವ ಪ್ರಭಾವವನ್ನು ನಾವು ಕಡೆಗಣಿಸುವಂತಿಲ್ಲ.ಸರ್ಕಾರದ ಮೇಲೆ ಖಾಸಗಿ ಕಂಪೆನಿಗಳ ಈ ಪರಿಯ ಪ್ರಭಾವ ಇತ್ತೀಚಿನ ಬೆಳವಣಿಗೆ ಎಂಬಂತೆ ನಮಗೆ ಕಂಡರೂ, ದೇಶಕ್ಕೆ ಇದು ಹೊಸ ಪ್ರಕ್ರಿಯೆ ಏನಲ್ಲ. ಅಂತಹ ಪ್ರಭಾವವನ್ನು ಮೊದಲ ಬಾರಿಗೆ ಹೊಂದಿದ್ದುದು ಈಸ್ಟ್ ಇಂಡಿಯಾ ಕಂಪೆನಿ. ಅದನ್ನು ವಿಶ್ವದ ಮೊದಲ ಕಾರ್ಪೊರೇಟ್ ಸಂಸ್ಥೆ ಎಂದು ಸಹ ಹೇಳಲಾಗುತ್ತದೆ.ಆರಂಭದಲ್ಲಿ ಅದು, ಭಾರತದಲ್ಲಿ ವ್ಯಾಪಾರದ ಅವಕಾಶಗಳನ್ನು ತೆರೆಯಲು ಮೊದಲನೇ ರಾಣಿ ಎಲಿಜಬೆತ್‌ರಿಂದ 1600ರ ಡಿಸೆಂಬರ್ 31ರಂದು ಶಾಸನಬದ್ಧ ಅಧಿಕಾರಪಡೆದುಕೊಂಡ ಉದ್ದಿಮೆದಾರರ ಒಕ್ಕೂಟವಾಗಿತ್ತು. ಹತ್ತಿ, ರೇಷ್ಮೆ, ಇಂಡಿಗೋ ಡೈ ಮತ್ತು ಚಹಾಪುಡಿ ವ್ಯಾಪಾರ ಅದರ ಪ್ರಮುಖ ವಹಿವಾಟಾಗಿತ್ತು. ಆದರೆ, 1689ರ ಹೊತ್ತಿಗೆ ಈ ಕಂಪೆನಿ ವಸ್ತುಶಃ ಭಾರತದ ಬೃಹತ್ ಪ್ರಾಂತ್ಯಗಳಾದ ಬಂಗಾಳ, ಮದ್ರಾಸ್ ಮತ್ತು ಬಾಂಬೆಗಳಲ್ಲಿ ಆಡಳಿತ ನಿರ್ವಹಿಸುವ ಮಟ್ಟಕ್ಕೆ ಬೆಳೆದುನಿಂತಿತು ಮತ್ತು ಅಗಾಧವಾದ ಸೇನಾ ಬಲದ ಮೇಲೆ ನಿಯಂತ್ರಣ ಸಾಧಿಸಿತ್ತು.ವಾಣಿಜ್ಯೋದ್ಯಮದಿಂದ ಆಡಳಿತಾರೂಢ ಸಂಸ್ಥೆಯಾಗಿ ಪರಿವರ್ತಿತವಾದ ಕಂಪೆನಿ, ಭಾರತದಲ್ಲಿ ನಡೆದ `ದಂಗೆ' ಪರಿಣಾಮದಿಂದ 1858ರಲ್ಲಿ ವಿಸರ್ಜನೆಗೊಳ್ಳುವವರೆಗೂ ಸರ್ಕಾರ ಮತ್ತು ಸೇನಾ ಕಾರ್ಯಗಳ ಮೇಲೆ ಬಲವಾದ ಹಿಡಿತ ಸಾಧಿಸಿತ್ತು.ಕಂಪೆನಿ ಈ ಮಟ್ಟದ ಪ್ರಗತಿಯು, ಅದರ ನೌಕರರು ಇಂಗ್ಲೆಂಡ್‌ಗೆ ವಾಪಸಾಗಿ ಆಸ್ತಿಪಾಸ್ತಿ ಹೊಂದಲು, ಉದ್ದಿಮೆ ಸ್ಥಾಪಿಸಲು ಮತ್ತು ರಾಜಕೀಯ ಅಧಿಕಾರ ಪಡೆಯಲು ಅವಕಾಶ ಮಾಡಿಕೊಟ್ಟಿತು. ತತ್ಪರಿಣಾಮವಾಗಿ ಅದು ಸಹಜವಾಗಿಯೇ ಇಂಗ್ಲೆಂಡ್‌ನ ಸಂಸತ್ತಿನಲ್ಲಿ ಲಾಬಿ ಮಾಡಲು ಆರಂಭಿಸಿತು. ಹೀಗೆ ಈ ಕಾರ್ಪೊರೇಟ್ ಸಂಸ್ಥೆ ಭಾರತದಲ್ಲಷ್ಟೇ ಅಧಿಕಾರ ಅನುಭವಿಸಲಿಲ್ಲ, ತಾಯ್ನೆಲದಲ್ಲೂ ಕಾನೂನು ಮತ್ತು ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೇಗೆ ಪಡೆದುಕೊಂಡಿತು ಎಂಬುದನ್ನು ನಾವು ಕಾಣಬಹುದು.ಇದು ಕಥೆ ಒಂದು ಭಾಗ ಮಾತ್ರ. ಇನ್ನು ಕೈಗಾರಿಕೋದ್ಯಮಿಗಳು- ರಾಜಕಾರಣಿಗಳ ನಡುವಿನ ಹೊಸ ಬಗೆಯ ಸಂಬಂಧದ ಬಗ್ಗೆ ಸಹ ನಾವು ಜಾಗೃತರಾಗಿ ಇರಬೇಕಾಗುತ್ತದೆ. ಕೈಗಾರಿಕೋದ್ಯಮಿಗಳಾದ ವಿಜಯ್ ಮಲ್ಯ, ನವೀನ್ ಜಿಂದಾಲ್, ಪ್ರಫುಲ್ ಪಟೇಲ್, ರಾಜೀವ್ ಚಂದ್ರಶೇಖರ್ ಅಂತಹವರು ಮಾತ್ರ ರಾಜಕೀಯದ ಆಟ ಆಡಲು ಆರಂಭಿಸಲಿಲ್ಲ; ಕಟ್ಟಾ ರಾಜಕಾರಣಿಗಳಾದ ನಿತಿನ್ ಗಡ್ಕರಿ, ಶರದ್ ಪವಾರ್, ಮುರುಗೇಶ್ ನಿರಾಣಿ ಮತ್ತಿತರರು ಕೈಗಾರಿಕೋದ್ಯಮಿಗಳಾಗಿ ರೂಪಾಂತರ ಹೊಂದಿದರು.ಇಂತಹವರು ಹಿತಾಸಕ್ತಿಗಳ ಜೊತೆಗಿನ ಸಂಘರ್ಷವನ್ನು ಯಾವ ರೀತಿ ತಡೆದು ನಾಗರಿಕರಿಗೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಬದ್ಧರಾಗಿರುತ್ತಾರೆ ಎಂಬುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ಪ್ರಭಾವಶಾಲಿ ಗುಂಪುಗಳ ಹಿತಾಸಕ್ತಿಗೆ ಹೇಗೆ ಮನ್ನಣೆ ಸಿಗುತ್ತಿದೆ ಎಂಬುದು, ರಾಜಕೀಯ ಕ್ಷೇತ್ರವು ಯಾವ ರೀತಿಯಲ್ಲಿ ಕಾರ್ಪೊರೇಟ್ ಕ್ಷೇತ್ರಕ್ಕೆ ಅನುಕೂಲ ಮಾಡಿಕೊಡುತ್ತಿದೆ ಎಂಬುದನ್ನು ನೋಡಿದರೇ ನಮಗೆ ಸ್ಪಷ್ಟವಾಗುತ್ತದೆ.ಕೈಗಾರಿಕೆ ಮತ್ತು ಕಾರ್ಪೊರೇಟ್ ಕ್ಷೇತ್ರಕ್ಕೆ ನೀಡುವ ರಿಯಾಯಿತಿ/ ವಿನಾಯಿತಿಗಳಿಂದ ಸುಮಾರು 5 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗುತ್ತಿದೆ ಎಂದು 2012- 13ರ ಕೇಂದ್ರ ಬಜೆಟ್‌ನ `ಮುನ್ನೋಟ' ತಿಳಿಸಿದೆ. ಸಾಮಾಜಿಕ ಕ್ಷೇತ್ರಕ್ಕೆ ತಗ್ಗುತ್ತಿರುವ ಸಂಪನ್ಮೂಲಗಳ ಜೊತೆಗೆ ನಾವು ಇದನ್ನು ಹೋಲಿಸಿ ನೋಡಬಹುದು. ಉದ್ಯೋಗ ಸೃಷ್ಟಿ, ಆಹಾರ ಭದ್ರತೆ ಅಥವಾ ಸಾಮಾಜಿಕ ಸೇವಾ ಯೋಜನೆಗಳಿಗೆ ಅಗತ್ಯವಾದ ಸಂಪನ್ಮೂಲ ಪೂರೈಸಲಾಗದ ತನ್ನ ಅಸಹಾಯಕತೆಯನ್ನು ಸರ್ಕಾರ ಒಪ್ಪಿಕೊಳ್ಳುತ್ತದೆ.ಬಡವರಿಗೆ ಕೊಡುವ ಸಬ್ಸಿಡಿಯೇ ಒಂದು ಸಮಸ್ಯೆ ಎಂದು ಹಣಕಾಸು ಸಚಿವ ಚಿದಂಬರಂ ವಿಷಾದಿಸುತ್ತಾರೆ. ದೇಶದ ಎಲ್ಲ ಆರ್ಥಿಕ ಸಂಕಷ್ಟಗಳಿಗೂ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಡುವುದೊಂದೇ ಪರಿಹಾರ ಎಂದು ಅವರು ಪ್ರತಿಪಾದಿಸುತ್ತಾರೆ.ಆದರೆ ಇಂತಹ ಎಲ್ಲ ಸಮಸ್ಯೆಗಳನ್ನೂ `ಮುನ್ನೋಟ' ಪ್ರಸ್ತಾಪಿಸಿರುವ ತೆರಿಗೆ ನಷ್ಟದಿಂದ ತುಂಬಿಸಿಕೊಳ್ಳುವ ಮೂಲಕ ಸರಳವಾಗಿ ಪರಿಹರಿಸಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ? ಬಹುತೇಕ ರಾಜಕೀಯ ಹಿತಾಸಕ್ತಿಗಳು ಶ್ರೀಮಂತರು ಮತ್ತು ಬಲಶಾಲಿಗಳನ್ನಷ್ಟೇ ಪ್ರತಿನಿಧಿಸಲು ಮುಂದಾದರೆ, ಬಡವರಿಗೆ ದನಿಯಾಗುವವರು ಯಾರು? ದೇಶದ ಶ್ರಮಿಕ ವರ್ಗದ ಹಿತಾಸಕ್ತಿಗಳನ್ನು ನಿಜವಾಗಲೂ ಕಾಯಲಾಗುವುದೇ?ಕಾರ್ಪೊರೇಟ್ ಬಲ ಹಾಗೂ ವಶೀಲಿಬಾಜಿ ರಾಜಕಾರಣಿ- ಅಪರಾಧಿಗಳ ನಡುವಿನ ಸಂಬಂಧಕ್ಕಿಂತಲೂ ಹೆಚ್ಚು ಘಾತಕವಾದುದು ಮತ್ತು ವ್ಯಾವಹಾರಿಕವಾಗಿ ವಂಚನೆಯಿಂದ ಕೂಡಿದ್ದು. ಅಲ್ಲದೆ ಅದು ರಾಷ್ಟ್ರ ಮಟ್ಟದಲ್ಲೂ ಸಾಕಷ್ಟು ಹಾನಿಯನ್ನು ಉಂಟು ಮಾಡುತ್ತದೆ. ಅದು ವಿನಾಶಕಾರಿ ಮಟ್ಟದಲ್ಲಿ ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುತ್ತದೆ,ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಭ್ರಷ್ಟಗೊಳಿಸುತ್ತದೆ. ನೀತಿ ನಿರ್ಧಾರ ಕೈಗೊಳ್ಳುವಲ್ಲಿ ಬಾಹ್ಯ ಶಕ್ತಿಗಳ ಪ್ರಭಾವವನ್ನು ಹೆಚ್ಚಿಸಿ, ಸಾರ್ವಜನಿಕ ಹಿತಾಸಕ್ತಿ ನಾಶವಾಗುವಂತೆ ಮಾಡುತ್ತದೆ. ಇಡೀ ಆಡಳಿತ ವ್ಯವಸ್ಥೆಯು ಕಳಪೆ, ಭ್ರಷ್ಟಾಚಾರ, ಸಿನಿಕತನ ಮತ್ತು ಲಂಚಗುಳಿತನದಿಂದ ತುಂಬಿಹೋಗಲು ಕಾರಣವಾಗುತ್ತದೆ.ನಮ್ಮ ಪ್ರಸಕ್ತ ಪ್ರಜಾಪ್ರಭುತ್ವವು ಜನರನ್ನು `ಆಳ್ವಿಕೆಗೆ ಒಳಪಡುವ ವರ್ಗ' ಮತ್ತು ಚುನಾಯಿತ ಜನಪ್ರತಿನಿಧಿಗಳನ್ನು `ಆಳುವ ವರ್ಗ' ಎಂದು ಗುರುತಿಸಿರಬಹುದು. ಆದರೆ, ಕಟು ವಾಸ್ತವವೆಂದರೆ ನಮ್ಮ ದೇಶದಲ್ಲಿ ಅಗೋಚರವಾದ ಮೂರನೇ ವರ್ಗವೂ ಒಂದಿದೆ.ಅದೆಂದರೆ, ಅಪಾರ ಪ್ರಭಾವ ಹೊಂದಿದ್ದರೂ ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆ ಇಲ್ಲದ ಶಕ್ತಿಶಾಲಿ ಕಾರ್ಪೊರೇಟ್‌ಗಳನ್ನು ಒಳಗೊಂಡ `ಆಳುವ ವರ್ಗ'.

ಇಂತಹ ವಿಷಕಾರಿ ಪ್ರಭಾವವನ್ನು ತೊಡೆದುಹಾಕದಿದ್ದರೆ ಅದು ನಮ್ಮ ಅತ್ಯಮೂಲ್ಯ ಆಸ್ತಿಯಾದ ಪ್ರಜಾಪ್ರಭುತ್ವವನ್ನೇ ಶಿಥಿಲಗೊಳಿಸುತ್ತದೆ ಹಾಗೂ ಅದರ ವಿನಾಶಕ್ಕೆ ಕಾರಣವಾಗುತ್ತದೆ.ಇಂತಹ ವಾಣಿಜ್ಯ ಹಿತಾಸಕ್ತಿಗಳು ಮತ್ತು ಲೂಟಿಕೋರ ಕಾರ್ಪೊರೇಟ್ ದಲ್ಲಾಳಿಗಳಿಂದ ಪ್ರಜಾಪ್ರಭುತ್ವವನ್ನು ಖಂಡಿತವಾಗಿಯೂ ಸಂರಕ್ಷಿಸಬೇಕಾಗಿದೆ. ಈ ಬೆದರಿಕೆಯ ಬಗ್ಗೆ ನಮ್ಮ ನಾಗರಿಕರು ಜಾಗೃತರಾಗಿ, ತಮ್ಮ ಸಲುವಾಗಿ ತಾವು ನಿಜವಾದ ಆಡಳಿತಗಾರರನ್ನು ಆರಿಸಿಕೊಳ್ಳುವಂತಹ ವಾತಾವರಣ ನಿರ್ಮಾಣ ಆಗಬೇಕಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry