ಅಗ್ರಮಾನ್ಯ ಕಂಪನಿಗಳತ್ತ ಹೆಚ್ಚು ಆಸಕ್ತಿ

7

ಅಗ್ರಮಾನ್ಯ ಕಂಪನಿಗಳತ್ತ ಹೆಚ್ಚು ಆಸಕ್ತಿ

ಕೆ. ಜಿ. ಕೃಪಾಲ್
Published:
Updated:
ಅಗ್ರಮಾನ್ಯ ಕಂಪನಿಗಳತ್ತ ಹೆಚ್ಚು ಆಸಕ್ತಿ

ಷೇರುಪೇಟೆಗೆ ಈ ವಾರ ಸಂಭ್ರಮೋತ್ಸಾಹದ ವಾರವಾಗಿತ್ತು. ಸಂವೇದಿ ಸೂಚ್ಯಂಕವು ಬುಧವಾರದಿಂದ ಪ್ರತಿ ದಿನವೂ 35 ಸಾವಿರ ಪಾಯಿಂಟುಗಳ  ಮೀರಿದ ಗರಿಷ್ಠದ ದಾಖಲೆಯನ್ನು ನಿರ್ಮಿಸಿದೆ. ವಾರಾಂತ್ಯದ ದಿನ 35,542.17 ರ ಸಾರ್ವಕಾಲಿಕ ಗರಿಷ್ಠವನ್ನು ದಿನದ ಮಧ್ಯಂತರದಲ್ಲಿ ತಲುಪಿ 35,511.58 ರಲ್ಲಿ ಕೊನೆಗೊಂಡಿತು.

ಷೇರುಪೇಟೆಯ ಸಂವೇದಿ ಸೂಚ್ಯಂಕ ಬುಧವಾರ 35 ಸಾವಿರ ಅಂಶಗಳ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಈ ವಾರದಲ್ಲಿ ಆ್ಯಕ್ಸಿಸ್‌ ಬ್ಯಾಂಕ್ ಚುರುಕಾದ ಏರಿಕೆ ಪ್ರದರ್ಶಿಸಿತು. ಗುರುವಾರ ₹599 ನ್ನು ತಲುಪಿ ವಾರ್ಷಿಕ ಗರಿಷ್ಠ ದಾಖಲಿಸಿದರೆ ಇದರೊಂದಿಗೆ  ಈ ವಾರ ಬ್ಯಾಂಕಿಂಗ್ ವಲಯದ ಐಸಿಐಸಿಐ ಬ್ಯಾಂಕ್ ₹ 355 ಕ್ಕೆ  ಏರಿಕೆ ಕಂಡಿದೆ.  ಮತ್ತೊಂದು ಬ್ಯಾಂಕ್ ಎಸ್‌ಬಿಐ ಈ ವಾರ ಆರಂಭದಲ್ಲಿ ₹305 ರ ಸಮೀಪದಿಂದ ₹292 ರ ಸಮೀಪ ಕುಸಿದಿದ್ದು ಅಲ್ಲಿಂದ ಪುಟಿದೆದ್ದು ₹317  ರವರೆಗೂ ಜಿಗಿದು, ಕೊನೆಯಲ್ಲಿ ₹309 ರ ಸಮೀಪದಲ್ಲಿ ಕೊನೆಗೊಂಡಿದೆ.

ಇತ್ತೀಚೆಗಷ್ಟೇ ಪ್ರತಿ ಷೇರಿಗೆ ₹1,150 ರಂತೆ ಮರುಖರೀದಿ ನಿರ್ವಹಿಸಿದ ಇನ್ಫೊಸಿಸ್‌,  ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಹೆಚ್ಚು ಲವಲವಿಕೆಯಿಂದ ವಾರ್ಷಿಕ ಗರಿಷ್ಠವನ್ನು ದಾಖಲಿಸಿವೆ. ಈ ಮೂಲಕ ಸಂವೇದಿ ಸೂಚ್ಯಂಕವನ್ನು ಉತ್ತುಂಗಕ್ಕೆ ತಲುಪಿಸಿವೆ.

ಬಾಂಬೆ ಡೈಯಿಂಗ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು ಸಹ ಹೆಚ್ಚಿನ ಬದಲಾವಣೆಗಳನ್ನು ಪ್ರದರ್ಶಿಸಿದೆ. ಮಂಗಳವಾರ  ಮಧ್ಯಂತರದಲ್ಲಿ ₹285 ರ ಸಮೀಪವಿದ್ದಂತಹ ಷೇರಿನ ಬೆಲೆ ಬುಧವಾರ ಕುಸಿದು ₹249 ರ ವರೆಗೂ ತಲುಪಿ ನಂತರ ವ್ಯಾಲ್ಯೂ ಪಿಕ್ ಕಾರಣ ಚೇತರಿಕೆಯಿಂದ ₹270 ರವರೆಗೂ ತಲುಪಿ ₹267 ರ ಸಮೀಪ ಕೊನೆಗೊಂಡಿದೆ.

ಕೇವಲ ಒಂದೇ ವಾರದಲ್ಲಿ ₹288 ರ ಗರಿಷ್ಠದಿಂದ ₹237 ರ ಕನಿಷ್ಠಕ್ಕೆ  ಕುಸಿದಿರುವುದು ಅಂದರೆ ಸುಮಾರು ₹ 51 ರಷ್ಟು ಕುಸಿದು ಚೇತರಿಕೆ ಕಂಡಿರುವುದು ಕುತೂಹಲಕಾರಿವಿದ್ಯಮಾನವಾಗಿದೆ.

ಕೆನರಾಬ್ಯಾಂಕ್ ಷೇರಿನ ಬೆಲೆ ₹360 ರ ಸಮೀಪದಿಂದ ₹335 ಕ್ಕೆ ಕುಸಿದು ಮತ್ತೊಮ್ಮೆ ₹365ಕ್ಕೆ ಪುಟಿದೆದ್ದಿದೆ. ಅದೇ ರೀತಿ ಎಸ್‌ಬಿಐ ಸಹ ಏರಿಳಿತ ಪ್ರದರ್ಶಿಸಿದೆ. ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ,  ಅಲೆಂಬಿಕ್ ಫಾರ್ಮಾ, ಲುಪಿನ್, ಮಾರುತಿ ಸುಜುಕಿ,  ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಲಾರ್ಸನ್ ಆ್ಯಂಡ್ ಟೂಬ್ರೊ, ಹೀರೊ ಮೋಟೊಕಾರ್ಪ್, ಬಜಾಜ್ ಆಟೊ,  ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಟಿ ಸಿ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾದಂತಹ ಅಗ್ರಮಾನ್ಯ ಕಂಪನಿಗಳು ಪ್ರದರ್ಶಿಸಿದ ತ್ವರಿತ ಏರಿಳಿತಗಳು ವಿಸ್ಮಯಕಾರಿ ಅಂಶವಾದರೂ ಪೇಟೆಯು ಕೇವಲ ವ್ಯಾವಹಾರಿಕ ರೀತಿಯಲ್ಲಿ ಸಾಗಿದೆ. ಇದು ದೀರ್ಘಕಾಲೀನ ಹೂಡಿಕೆಯ ದೃಷ್ಟಿಯಿಂದ ಸರಿಯಲ್ಲ. ತ್ವರಿತ ಏರಿಕೆ ತ್ವರಿತ ಲಾಭದ ಚಟುವಟಿಕೆ ನಡೆಸಿದರೂ ಸಹ ಚಟುವಟಿಕೆಯ ಲೆಕ್ಕಾಚಾರ ಶಿಸ್ತುಬದ್ಧ, ಕ್ರಮಬದ್ಧವಾಗಿರುವುದು ಅತ್ಯವಶ್ಯಕ.

ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಚುರುಕಾಗಿರುವ ಕಾರ್ಬನ್ ವಲಯದ ಷೇರುಗಳಾದ ಓರಿಯೆಂಟಲ್ ಕಾರ್ಬನ್, ಎಚ್‌ಇಜಿ, ಗೋವಾ ಕಾರ್ಬನ್, ಗ್ರಾಫೈಟ್ ಇಂಡಿಯಾ ಗಳು ಸಹ ಇದೇ ರೀತಿಯ ಅಸಹಜ ಚಟುವಟಿಕೆ ಪ್ರದರ್ಶಿಸಿವೆ.

ಸೋಜಿಗವೆಂದರೆ ಸಂವೇದಿ ಸೂಚ್ಯಂಕ ಏರಿಕೆಯಲ್ಲೇ ಇದ್ದು  ಎಲ್ಲರ ಗಮನವನ್ನು ಆಕರ್ಷಿಸಿ ಪ್ರವರ್ಧಮಾನದಲ್ಲಿರುವಾಗ ಎಲೆ ಮರೆ ಕಾಯಿಯಂತೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳು ಮಾರಾಟದ ಒತ್ತಡ ಎದುರಿಸಿವೆ. ಇದು ವಹಿವಾಟುದಾರರ ಆಸಕ್ತಿ ಅಗ್ರಮಾನ್ಯ ಕಂಪನಿಗಳತ್ತ ತಿರುಗಿರಬಹುದೆ ಎಂಬ ಭಾವನೆ ಮೂಡಿಸುತ್ತದೆ.

ಕಂಪನಿಗಳು ಪ್ರಕಟಿಸುತ್ತಿರುವ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿದ್ದು, ಚಟುವಟಿಕೆ ರಭಸವಾಗಿರುವುದು ಸಹ ಈ ಬದಲಾವಣೆಗೆ ಕಾರಣವಾಗಿದೆ. ಹೆಚ್ಚಿನ ಷೇರುಗಳ ಬೆಲೆಗಳು ಪಕ್ವತೆಯತ್ತ ಸಾಗಿದ್ದು, ಸಾಧನೆಗಿಂತ ವರ್ಣನೆಗೆ ಬೆಲೆ ಹೆಚ್ಚಿರುವಾಗ ಅತಿ ಹೆಚ್ಚಿನ ಎಚ್ಚರ ಅಗತ್ಯ.

ಹೊಸ ಷೇರು: ಪ್ರತಿ ಷೇರಿಗೆ ₹275 ರಂತೆ ಸಾರ್ವಜನಿಕ ವಿತರಣೆ ಮಾಡಿದ ಅಪೋಲೊ ಮೈಕ್ರೊ ಸಿಸ್ಟಮ್ಸ್ ಲಿಮಿಟೆಡ್ ಕಂಪನಿ  22ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಟಿ ವಿಭಾಗದಲ್ಲಿ ವಹಿವಾಟಾಗಲಿದೆ.

ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಸಂತೋಷ್ ಇಂಡಸ್ಟ್ರೀಸ್ ಲಿಮಿಟೆಡ್, 18 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.  ಈ ಕಂಪನಿಯು ಪೆರಿಯಾಡಿಕ್ ಕಾಲ್ ಆಕ್ಷನ್ ಸಿಸ್ಟಮ್ ರೀತಿ ವಹಿವಾಟಾಗುತ್ತಿದೆ.

ಮೆಟ್ರೋಪಾಲಿಟನ್ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಸಾಧನ ಬ್ರಾಡ್ ಕ್ಯಾಸ್ಟ್ ಲಿಮಿಟೆಡ್ ಗುರುವಾರದಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಗ್ಯಾಲಕ್ಸಿ ಸರ್ಫಾಕ್ ಟಂಟ್ಸ್ ಲಿಮಿಟೆಡ್ ಕಂಪನಿಯ ₹10 ರ ಮುಖಬೆಲೆಯ ಷೇರುಗಳನ್ನು ಈ ತಿಂಗಳ 29 ರಿಂದ 31 ರವರೆಗೂ ಆರಂಭಿಕ ಷೇರುಗಳನ್ನು ಸಾರ್ವಜನಿಕ ವಿತರಣೆ ಮಾಡಲಿದೆ.  ₹1,470 ರಿಂದ ₹1,480 ರ ಅಂತರದಲ್ಲಿ ವಿತರಿಸಲಾಗುವ ಈ ಐಪಿಒದಲ್ಲಿ ಅರ್ಜಿಯನ್ನು 10 ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ವಿಭಾಗ ಬೇರ್ಪಡಿಸುವಿಕೆ:  ಗಾಯತ್ರಿ ಪ್ರಾಜೆಕ್ಟ್ಸ್ ಲಿಮಿಟೆಡ್ ಕಂಪನಿಯ ಮೂಲಭೂತ ಸೌಕರ್ಯ, ರಸ್ತೆ ನಿರ್ಮಿಸುವ, ನಿರ್ವಹಿಸುವ, ವರ್ಗಾಯಿಸುವ ಸ್ವತ್ತುಗಳ ವ್ಯವಹಾರವನ್ನು ಗಾಯತ್ರಿ ಪ್ರಾಜೆಕ್ಟ್ಸ್ ನಿಂದ ಬೇರ್ಪಡಿಸಿ ಗಾಯತ್ರಿ ಡೊಮಿಸಿಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಲೀನಗೊಳಿಸಲು ಈ ತಿಂಗಳ 31 ನಿಗದಿತ ದಿನ. ಈ ಯೋಜನೆ ಪ್ರಕಾರ ಪ್ರತಿ ಒಂದು ಗಾಯತ್ರಿ ಪ್ರಾಜೆಕ್ಟ್ಸ್ ಷೇರಿಗೆ ಒಂದು ಗಾಯತ್ರಿ ಡೊಮಿಸಿಲ್ ಪ್ರೈವೇಟ್ ಲಿಮಿಟೆಡ್ ಷೇರು ನೀಡಲಾಗುವುದು.  ಮುಂದೆ ಈ ಷೇರು ಸಹ ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ಬಿಡುಗಡೆಯಾಗುವುದು.  ಈ ತಿಂಗಳ 30 ರಿಂದ ಗಾಯತ್ರಿ ಪ್ರಾಜೆಕ್ಟ್ಸ್ ಲಿಮಿಟೆಡ್ 'ಟಿ’ ಗುಂಪಿಗೆ ವರ್ಗಾಯಿಸಲಾಗುವುದು.

ಹಕ್ಕಿನ ಷೇರು:  ಟಾಟಾ ಸ್ಟಿಲ್ ಲಿಮಿಟೆಡ್ ಕಂಪನಿ ವೈಶಿಷ್ಟಮಯ ಹಕ್ಕಿನ ಷೇರಿನ ಯೋಜನೆ ಪ್ರಕಟಿಸಿದೆ.

ಈ ಯೋಜನೆಯ ಪ್ರಕಾರ, ಎರಡು ವಿಧದ ಷೇರುಗಳಲ್ಲಿ ಒಂದನೆಯದು ಪೂರ್ಣ ಮುಖಬೆಲೆಯ ಷೇರಿಗೆ ₹510 ರಂತೆ 4:25 ರ ಅನುಪಾತದಲ್ಲಿ  ವಿತರಿಸಲಿದೆ.

ಎರಡನೆಯದು  ಭಾಗಶಃ ಮುಖಬೆಲೆಯ (ಪಾರ್ಟ್ಲಿ ಪೇಯ್ಡ್‌) ಷೇರಿಗೆ ₹615 ರಂತೆ 2:25 ರ ಅನುಪಾತದಲ್ಲಿ ವಿತರಿಸಲಿದೆ.  ಪಾರ್ಟ್ಲಿ ಪೇಯ್ಡ್‌ ಷೇರುಗಳಿಗೆ ಎರಡು ಹಂತದಲ್ಲಿ ಹಣ ಸಂಗ್ರಹಿಸಲಾಗುವುದು. ಅರ್ಜಿಯೊಂದಿಗೆ ಕನಿಷ್ಠಶೇ 25 ರಷ್ಟು ಸಂಗ್ರಹಿಸಲಾಗುವುದು.

ಉಳಿದ ಹಣವನ್ನು ಹನ್ನೆರಡು ತಿಂಗಳೊಳಗೆ ಮೊದಲನೇ ಮತ್ತು ಕೊನೆಯ ಹಂತದ ಕಂತಿನಲ್ಲಿ ಸಂಗ್ರಹಿಸಲಾಗುವುದು. ವಿವರಗಳನ್ನು ಆಫರ್ ಲೆಟರ್‌ನಲ್ಲಿ ತಿಳಿಸಲಾಗುವುದು. ಈ ಹಕ್ಕಿನ ಷೇರಿಗೆ  ನಿಗದಿತ ದಿನವಾಗಿದೆ.  ಹಕ್ಕಿನ ಷೇರು ವಿತರಣೆ ಫೆಬ್ರುವರಿ 14 ರಂದು ಆರಂಭವಾಗಿ 28 ರವರೆಗೂ ತೆರೆದಿರುತ್ತದೆ.

ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ  ಈ ಕಂಪನಿ 2010–11 ರಲ್ಲೂ ₹610 ರಂತೆ ವಿತರಿಸಿತ್ತು  ನಂತರದ ವರ್ಷಗಳಲ್ಲಿ ಷೇರಿನ ಬೆಲೆ ₹200 ರ ಸಮೀಪಕ್ಕೆ ಕುಸಿದು  2015ರ ಆಗಸ್ಟ್ ತಿಂಗಳಲ್ಲಿ ಮತ್ತೆ ₹600 ನ್ನು ದಾಟಿದೆ. ಈಗ ಮತ್ತೆ ಅದೇ ದರದ ಸಮೀಪ ಹಕ್ಕಿನ ಷೇರು ವಿತರಣೆ ಮಾಡುತ್ತಿದೆ.

(9886313380, ಸಂಜೆ 4.30 ರನಂತರ)

ವಾಯಿದಾ ವಹಿವಾಟಿನ ಪ್ರಭಾವ ನಿರೀಕ್ಷೆ (ವಾರದ ಮುನ್ನೋಟ)

ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರನೇ ತ್ರೈಮಾಸಿಕದಲ್ಲಿ ಪ್ರಮುಖ ಕಂಪನಿಗಳ ಆರ್ಥಿಕ ಸಾಧನೆ, ವಾಯಿದಾ ವಹಿವಾಟು ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ ಎಂದು ತಜ್ಞರು ಹೇಳಿದ್ದಾರೆ.

ಗಣರಾಜ್ಯೋತ್ಸವದ ಪ್ರಯುಕ್ತ ಶುಕ್ರವಾರ ವಹಿವಾಟಿಗೆ ರಜೆ. ಹೀಗಾಗಿ ನಾಲ್ಕು ದಿನಗಳ ವಹಿವಾಟಿನಲ್ಲಿ ಆಕ್ಸಿಸ್‌ ಬ್ಯಾಂಕ್‌, ಮಾರುತಿ ಸುಜುಕಿ, ಕೆನರಾ ಬ್ಯಾಂಕ್‌ನಂಥ ಕಂಪನಿಗಳಆರ್ಥಿಕ ಸಾಧನೆ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿವೆ ಎಂದು ಹೇಳಿದ್ದಾರೆ.

ಸರ್ಕಾರಿ ಬಾಂಡ್‌ಗಳ ಜನವರಿ ತಿಂಗಳ ವಾಯಿದಾ ವಹಿವಾಟು ಗುರುವಾರಅಂತ್ಯವಾಗಲಿದೆ. ಇದು ಸಹ ಸೂಚ್ಯಂಕದ ಏರಿಳಿತಕ್ಕೆ ಕಾರಣವಾಗಬಹುದು ಎನ್ನುವುದು ತಜ್ಞರ ವಿಶ್ಲೇಷಣೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry