ಮಂಗಳವಾರ, ಅಕ್ಟೋಬರ್ 15, 2019
25 °C

ಅಣ್ಣಾಗೆ ಬೇಕು ಸರ್ಕಾರೇತರ ಸಂಸ್ಥೆಗಳ ಬೆಂಬಲ

ಕುಲದೀಪ ನಯ್ಯರ್
Published:
Updated:

ಭ್ರಷ್ಟಾಚಾರದ ವಿರುದ್ಧ ವ್ಯವಹರಿಸುವ ದಿಸೆಯಲ್ಲಿ ಲೋಕಪಾಲ ಮಸೂದೆಯನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಈಚೆಗೆ ನಡೆದ ಘಟನಾವಳಿಗಳು ಹೇಗೆ ಜನಾಂದೋಲನ ಮತ್ತು ಚುನಾವಣಾ ರಾಜಕಾರಣಗಳು ಭಿನ್ನವಾಗಿವೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿವೆ.ಮೊದಲನೆಯದಾಗಿ, ಸಹಸ್ರ ಸಹಸ್ರ ಸಂಖ್ಯೆಯ ಜನರ ಬೆಂಬಲವಿದ್ದೂ, ಜನಪ್ರಿಯತೆಯನ್ನು ನಂಬಿ ನಿಂತವರು ಗುರಿ ಈಡೇರಿಕೆಯ ನಿಟ್ಟಿನಲ್ಲಿ ಗಟ್ಟಿಯಾಗಿ ನಿಲ್ಲಲಾಗಲೇ ಇಲ್ಲ. ಆದರೆ, ಎರಡನೆಯದಾಗಿ ಶಾಸನಸಭೆಗಳಲ್ಲಿ ತಲೆ ಎಣಿಕೆಯ ಲೆಕ್ಕಾಚಾರಗಳನ್ನು ಕರಾರುವಾಕ್ಕಾಗಿ ಅರಿತಿರುವವರು ಲೋಕಪಾಲ ಮಸೂದೆ ಪ್ರಸಂಗವನ್ನೂ ತಮ್ಮ ಚುನಾವಣಾ ರಾಜಕಾರಣಕ್ಕೆ ಅನುಕೂಲಕರವಾಗಿ ಬಳಸಿಕೊಳ್ಳುವಲ್ಲಿ ಯಶಸ್ಸು ಪಡೆದರು.ಅತ್ತ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದರು, ಸಾವಿರಾರು ಮಂದಿ ಬೀದಿಗಿಳಿದು ಅಣ್ಣಾ ಪರ ಧ್ವನಿ ಎತ್ತಿದ್ದರು. ಆದರೆ ಇತ್ತ, ಲೋಕಸಭೆಯೊಳಗೆ ಮೂರು ಅಂಶಗಳಿಗೆ ಸದಸ್ಯರು ಹಸಿರು ನಿಶಾನೆ ತೋರಿಯೇ ಬಿಟ್ಟರು.ನೀರು ಮತ್ತು ವಿದ್ಯುಚ್ಛಕ್ತಿ ಹೊಂದುವ ಹಕ್ಕು ಸೇರಿದಂತೆ ಕೆಲವು ವಿಷಯಗಳ ನಾಗರಿಕ ಸನ್ನದು, ಲೋಕಪಾಲ ವ್ಯಾಪ್ತಿಯೊಳಗೆ ನೌಕರಶಾಹಿಯ ಕೆಳವರ್ಗದ ನೌಕರರನ್ನೂ ತರುವುದು, ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆಯ ಸ್ಥಾಪನೆ. ಆದರೆ ಒತ್ತಡಕ್ಕೆ ಒಳಗಾದ ಸರ್ಕಾರ ರಾಜ್ಯಗಳಲ್ಲಿ ಲೋಕಾಯುಕ್ತ ಸ್ಥಾಪನೆಗೆ ಸಂಬಂಧಿಸಿದ ಕೇಂದ್ರದ ಪಾರಮ್ಯವನ್ನು ಈ ಮಸೂದೆಯ ವ್ಯಾಪ್ತಿಯಿಂದ ಕೈಬಿಟ್ಟಿತಷ್ಟೆ.ಸಿಬಿಐ ಮೇಲಿನ ತನ್ನ ಹಿಡಿತವನ್ನು ಸರ್ಕಾರ ಬಿಟ್ಟುಕೊಡಲಿಲ್ಲ. ಇದೇ ವೇಳೆ, ಲೋಕಸಭೆಯು ಹಲ್ಲುಕಿತ್ತ ಮಸೂದೆಗೆ ಅಂಗೀಕಾರದ ಮುದ್ರೆ ಒತ್ತಿತು. ಜನ ಲೋಕಸಭೆಯಲ್ಲಿ ನಡೆದದ್ದನ್ನೆಲ್ಲಾ ಮೂಕಪ್ರೇಕ್ಷಕರಾಗಿ ನೋಡಿದರು.ಆದರೆ ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಎಲ್ಲವೂ ತಲೆಕೆಳಗಾಯಿತು. ಲೋಕಸಭೆಯಲ್ಲಿ ಸಲೀಸಾಗಿ ಅಂಗೀಕಾರ ಪಡೆದ ಮಸೂದೆಯನ್ನು ಮೇಲ್ಮನೆಯಲ್ಲಿ ಮತಕ್ಕೆ ಹಾಕಲೂ ಸಾಧ್ಯವಾಗಲಿಲ್ಲ. ಅದರ ಬಗ್ಗೆ ಚರ್ಚೆ, ಭಾಷಣ, ವಾಗ್ವಾದಗಳು ಮಧ್ಯರಾತ್ರಿವರೆಗೂ ಮುಂದುವರಿದಿತ್ತು. ಆದರೆ ಸಭಾಧ್ಯಕ್ಷರೂ ಆದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕಲಾಪವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದರು. ಹಲವು ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಗಲಿಲ್ಲ.

 

ಸರ್ಕಾರ ಅಧಿವೇಶನವನ್ನು ಮುಂದುವರಿಸಬಹುದಿತ್ತು. ಹಾಗೇನೂ ಮಾಡಲಿಲ್ಲ. ಅದೇ ವೇಳೆ ಅಣ್ಣಾ ಹಜಾರೆ ಮುಂಬೈನಲ್ಲಿ ನಡೆಸುತ್ತಿದ್ದ ತಮ್ಮ ಉಪವಾಸವನ್ನು ಅರ್ಧಕ್ಕೇ ನಿಲ್ಲಿಸಿದರು. ದೆಹಲಿಯಲ್ಲಿ ನಡೆಸಬೇಕೆಂದಿದ್ದ ಉಪವಾಸ ಸತ್ಯಾಗ್ರಹವನ್ನು ಅವರು ಮುಂಬೈನಲ್ಲಿ ನಡೆಸಿದರಾದರೂ, ಅಲ್ಲಿ ಅವರು ದೆಹಲಿಯಲ್ಲಿದ್ದಷ್ಟು ಜನರನ್ನು ಸೆಳೆಯಲು ಸಾಧ್ಯವಾಗಲಿಲ್ಲ. ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಹಲವಾರು ಸಲ ಕಲಾಪ ಮುಂದೂಡಲಾಗಿದ್ದೊಂದು ವಿಪರ್ಯಾಸ. ಅದೇ ವೇಳೆ ಲಾಲೂ ಪ್ರಸಾದ್ ಅವರು ತಮ್ಮ ಹಾಸ್ಯಚಟಾಕಿಗಳಿಂದ ಕಲಾಪಕ್ಕೆ ರಂಗು ನೀಡುತ್ತಲೇ ಆಡಳಿತಗಾರರ ನೆರವಿಗೆ ನಿಂತು ಬಿಟ್ಟರು.ಸರ್ಕಾರದ ಆದ್ಯತೆಗಳು, ಒತ್ತಡಗಳು ಏನೇನೋ ಇರಬಹುದು, ನಿಜ. ಆದರೆ ಇದು ಲೋಕಸಭೆಯ ನಿರ್ಣಯಗಳ ಮೇಲೆ ನಡೆದ ಸವಾರಿಯಷ್ಟೇ. ಈ ವೇಳೆ ಎಲ್ಲಾ ರಾಜಕೀಯ ಪಕ್ಷಗಳೂ ಸದ್ಯದಲ್ಲೇ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಏಳುಬೀಳುಗಳ ಬಗ್ಗೆಯೇ ಲೆಕ್ಕಾಚಾರದಲ್ಲಿ ತೊಡಗಿದ್ದವು. ಹೀಗಾಗಿ ಜನಹೋರಾಟದಲ್ಲಿ ನಂಬಿಕೆ ಇಟ್ಟಿದ್ದವರಿಗೆ ಈ ಪ್ರಸಂಗವೊಂದು ಪಾಠ ಎನ್ನುವುದಂತೂ ನಿಜ.ಈ ಸಂಗತಿಗಳಿಗೆ ಸಂಬಂಧಿಸಿದಂತೆ ನಾನು ಹಿಂದೆ ಹಾಗೆ ಹೇಳಿದ್ದೆ, ಹೀಗೆ ಹೇಳಿದ್ದೆ ಎಂಬ ವಾದ ನಡೆಸಲು ಇಚ್ಛಿಸುವುದಿಲ್ಲ. ಆದರೂ, ಹಿಂದೆ ಅಣ್ಣಾ ಹೋರಾಟದ ತಾತ್ಕಾಲಿಕ ನಿಲುಗಡೆಯ ಕುರಿತು ಎಚ್ಚರಿಕೆಯ ಮಾತುಗಳನ್ನು ಬರೆದಿದ್ದೆ. ಆಗ ನನ್ನನ್ನು ಕಾಡಿದ್ದ ಭಯ ಈಗ ನಿಜವಾಗಿದೆ.ದೇಶದಾದ್ಯಂತ ಉಕ್ಕೇರಿದ್ದ ಆ ಹೋರಾಟದ ಕಾವು ಈಗ ತಣ್ಣಗಾಗಿದ್ದು, ಮತ್ತೆ ಆ ಎತ್ತರಕ್ಕೆ ಕೊಂಡೊಯ್ಯುವುದು ಸುಲಭವೇನಲ್ಲ. ಈ ಜನಚಳವಳಿಯ ನೇತಾರರು ತಿಕ್ಕಲುತನದಿಂದ ವರ್ತಿಸುತ್ತಾರೆ, ಬೇಕೆಂದಾಗ ಪ್ರತಿಭಟನೆಗೆ ಕರೆ ಕೊಡುತ್ತಾರೆ, ಅಷ್ಟೇ ಸಲೀಸಾಗಿ ಆ ನಿರ್ಧಾರವನ್ನೇ ಹಿಂದಕ್ಕೆ ಪಡೆಯುತ್ತಾರೆ ಇತ್ಯಾದಿ ಮಾತುಗಳು ಜನಸಾಮಾನ್ಯರಲ್ಲಿ ಹರಡಿಬಿಟ್ಟಿವೆ. ಹೀಗಾಗಿ ಮತ್ತೆ ಚಳವಳಿಗಾರರು ಹೊಸತಂತ್ರಗಳನ್ನು ರೂಪಿಸಬೇಕಿದೆ.ಆಡಳಿತಗಾರರು ಎತ್ತಿಕೊಂಡಿರುವ ಲೋಕಪಾಲದ ದೌರ್ಬಲ್ಯಗಳು ಜನಮನ ತಲುಪುವ ನಿಟ್ಟಿನಲ್ಲಿ, ಸಿಬಿಐನ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಂಶದ ಮೇಲೆಯೇ ಹೋರಾಟಗಾರರು ಗಮನವನ್ನು ಕೇಂದ್ರೀಕರಿಸಲಿ. ಆಡಳಿತಗಾರರು ಸಿಬಿಐ ಸಂಸ್ಥೆಯನ್ನು ರಾಜಕೀಯ ಅಸ್ತ್ರವಾಗಿ ಬಳಸುವಂತಾಗಬಾರದು. ನಿರ್ದಿಷ್ಟ ಅವಧಿಯಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಮೂಗಿನ ನೇರಕ್ಕೆ ಸಿಬಿಐ ಕಾರ್ಯನಿರ್ವಹಿಸುವಂತಾಗಬಾರದು.ಇದಕ್ಕೆ ಸಂಬಂಧಿಸಿದಂತೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವನ್ನಷ್ಟೇ ದೂರುವ ಅಗತ್ಯವೇನಿಲ್ಲ. ಹಿಂದೆ ಅಟಲ್ ಬಿಹಾರಿ ವಾಜಪೇಯಿ, ಪಿ.ವಿ.ನರಸಿಂಹರಾವ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಗಲೂ ಇದೇ ಕಥೆ ಇತ್ತು ಎಂಬುದನ್ನು ನಾವು ಮರೆಯುವಂತಿಲ್ಲ.ಜನ ಹೋರಾಟವು ದುರ್ಬಲಗೊಂಡಿರುವುದರ ಜತೆಯಲ್ಲೇ ಮತ್ತವೇ ಪ್ರಶ್ನೆಗಳು ಧುತ್ತೆಂದು ಎದ್ದಿವೆ. ಚುನಾವಣಾ ರಾಜಕಾರಣದಿಂದ ಜನಾಂದೋಲನದ ಹೋರಾಟಗಾರರು ದೂರ ಉಳಿಯುವುದನ್ನು ಮುಂದುವರಿಸಬೇಕೆ? ಕೆಲವು ವಾದಗಳ ಪ್ರಕಾರ ಈ ಹೋರಾಟಗಾರರು ಇಂತಹದ್ದೊಂದು ರಾಜಕಾರಣಕ್ಕೆ ಧುಮುಕಿದರೆ ಜಾತಿ ರಾಜಕಾರಣ, ಹಣವನ್ನು ನೀರಿನಂತೆ ಸುರಿಯುವುದು ಮುಂತಾದ ಪ್ರಕ್ರಿಯೆಗಳಲ್ಲಿ ತೊಡಗಲೇ ಬೇಕಾಗುತ್ತದೆ.ಅದೇನೇ ಇದ್ದರೂ, ಈ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಯಿಂದ ತಪ್ಪಿಸಿಕೊಂಡು ಎಲ್ಲಿಯೂ ಓಡುವಂತಿಲ್ಲ. ರಾಜ್ಯ ವಿಧಾನಸಭೆಗಳು, ಸಂಸತ್ತು ಜನಪ್ರತಿನಿಧಿಗಳಿಂದಲೇ ಜೀವ ಪಡೆದಿರುವುದು. ಈ ಜನಪ್ರತಿನಿಧಿಗಳೇ ಇವತ್ತು ತೀರ್ಪುಗಾರರು. ಆದರೆ ಇವತ್ತು ಈ ತೀರ್ಪುಗಾರರು ಜನರ ಪರವಾಗಿ, ಜನಸಮೂಹದ ಧ್ವನಿಯಾಗಿ ಸಂಸತ್ತಿನೊಳಗೆ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ತಾವು ಪ್ರತಿನಿಧಿಸುವ ಪಕ್ಷಗಳ ಆಜ್ಞಾಪಾಲಕರಂತೆ ವರ್ತಿಸುತ್ತಿದ್ದಾರೆ. ಸಂವಿಧಾನದ ಮೂಲ ಮಂತ್ರವಾದ ಜನರಿಗೆ ಶಕ್ತಿ ಕೊಡುವ ಮಾತು ಅಕ್ಷರಗಳಲ್ಲಷ್ಟೇ ಇದೆ ಎನಿಸತೊಡಗಿದೆ. ಕಳೆದ ಮೂರು ದಶಕಗಳಲ್ಲಿ ರಾಷ್ಟ್ರ ರಾಜಕಾರಣದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳು ಈ ನಿಟ್ಟಿನಲ್ಲಿ ಜನರಿಗೆ ನಿರಾಸೆ ಉಂಟು ಮಾಡಿದವು. ಆ ಪಕ್ಷಗಳೆಲ್ಲದರ ಹೆಗ್ಗುರಿ ಅಧಿಕಾರ ಹಿಡಿಯುವುದು ಮತ್ತು ಅದನ್ನು ಉಳಿಸಿಕೊಳ್ಳುವುದಷ್ಟೇ.ಗಾಂಧಿವಾದಿ ಜಯಪ್ರಕಾಶ್ ನಾರಾಯಣ್ ಜನ ಚಳವಳಿ ಕಟ್ಟಿ ಆ ಮೂಲಕ ಇಂದಿರಾಗಾಂಧಿ ನೇತೃತ್ವದ ಸರ್ಕಾರವನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಆ ಆಂದೋಲನದ ಮೂಸೆಯಿಂದ ಮೂಡಿ ಬಂದ ಜನತಾ ಪಕ್ಷ ಮೂರೂವರೆ ದಶಕಗಳ ಹಿಂದೆ ಲೋಕಸಭೆಯಲ್ಲಿ ಬಹುಮತ ಗಳಿಸಿತ್ತು.

 

ಜಯಪ್ರಕಾಶ್ ನಾರಾಯಣ್ ಅವರೂ ಅಂದು ಜನಾಂದೋಲನಕ್ಕಷ್ಟೇ ಗಮನ ಕೇಂದ್ರೀಕರಿಸಿದ್ದರು. ಆ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದ ಬಗ್ಗೆಯೇ ಇಂದಿರಾಗಾಂಧಿಯವರೂ ಪದೇ ಪದೇ ಮಾತನಾಡುತ್ತಿದ್ದರು. ಜಯಪ್ರಕಾಶ್ ನಾರಾಯಣ್ ಅವರು ಇಂದಿರಾಗಾಂಧಿಯವರನ್ನು ಒಮ್ಮೆ ಭೇಟಿ ಮಾಡಿ ಚುನಾವಣೆಗಳಲ್ಲಿ ಭಾರಿ ಮೊತ್ತದ ಹಣ ಖರ್ಚು ಮಾಡುವುದನ್ನು ನಿಲ್ಲಿಸಬೇಕು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬ ಬಗ್ಗೆ ಮಾತನಾಡಿದ್ದರು. ಆಗ ಇಂದಿರಾಗಾಂಧಿ `ನಮ್ಮ ಬಳಿ ಎಲ್ಲಿದೆ ಹಣ.ನಮ್ಮದು ಸರಳ ನಡೆನುಡಿ. ಲಂಚಗುಳಿತನದ ವಿರುದ್ಧ ಹೋರಾಟವೇ ನಮ್ಮ ಧ್ಯೇಯ~ ಎಂದಿದ್ದರು. ಇವತ್ತಿಗೂ ಕಾಂಗ್ರೆಸ್ ಪಕ್ಷ ಅದೇ ಧಾಟಿಯಲ್ಲಿ ಮಾತನಾಡುತ್ತಿದೆ.

ಒಂದು ವ್ಯತ್ಯಾಸವೆಂದರೆ ಮನಮೋಹನ್ ಸಿಂಗ್ ನೇತೃತ್ವದ ಈ ಸರ್ಕಾರ ಜನರ ದಶಕಗಳ ಪಡಿಪಾಟಲಿಗೆ ಕ್ಷಮಾ ಯಾಚನೆಯ ರೂಪದಲ್ಲಿ ಲೋಕಪಾಲ ಮಸೂದೆಯನ್ನು ತರಲು ಯತ್ನಿಸಿರುವುದು.ಈ ನಡುವೆ ಅಣ್ಣಾ ತಂಡದವರು ತಮ್ಮ ಹೋರಾಟಕ್ಕೆ ಕಮ್ಯುನಿಸ್ಟರನ್ನೂ ಜತೆಗಿರಿಸಿಕೊಳ್ಳಲು ಯತ್ನಿಸಿದ್ದಾರೆ. ಕಮ್ಯುನಿಸ್ಟರು ಬೂರ್ಜ್ವಾ ವ್ಯವಸ್ಥೆಯ ವಿರುದ್ಧ ಹೋರಾಟದ ಗುರಿ ಹೊಂದಿರುವವರು.ವಿಶೇಷವೆಂದರೆ ಈ ಬೂರ್ಜ್ವಾ ವ್ಯವಸ್ಥೆಯೇ ಚುನಾವಣಾ ರಾಜಕಾರಣದ ಅಡಿಪಾಯದ ಮೇಲೆಯೇ ನಿಂತಿದೆ. ಹೀಗಾಗಿ ಕಮ್ಯುನಿಸ್ಟರ ನಿಲುವುಗಳು ತಮಾಷೆಯ ಸಂಗತಿಯಾಗಿದೆ.

ಇವರು ಸರ್ವಾಧಿಕಾರದ ಮೇಲೆ ನಂಬಿಕೆ ಇರುವ ಕಮ್ಯುನಿಸ್ಟ್ ವಿಚಾರಧಾರೆಯನ್ನು ಹೇಳುತ್ತಲೆ, ಪ್ರಜಾಪ್ರಭುತ್ವ ಪ್ರಕ್ರಿಯೆಯಾದ ಚುನಾವಣಾ  ರಾಜಕಾರಣದಲ್ಲಿ ಮುಳುಗೇಳುತ್ತಿದ್ದಾರೆ. ಹೀಗಾಗಿ ಅವರ ಪ್ರಭಾವ ಸೀಮಿತವಲಯದಲ್ಲಿದೆ. ಅವರು ತಮ್ಮ ತಾತ್ವಿಕ ನಿಲುವುಗಳಿಗೆ ಸಂಬಂಧಿಸಿದಂತೆ ಕೆಲವು ಮಟ್ಟಿಗಿನ ರಾಜಿ ಮಾಡಿಕೊಳ್ಳುವವರೆಗೂ ಅವರ ಈ ಗೊಂದಲ ಮುಂದುವರಿದಿರುತ್ತದೆ.

 

ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು, ಮುಕ್ತ ಚಿಂತನೆಯ ಹಾದಿಯಲ್ಲಿ ಸಾಗಿದಾಗ ಮಾತ್ರ ನಾಗರಿಕ ಸಮಾಜವನ್ನು ಆಕರ್ಷಿಸಬಹುದು. ಈ ಮೂಲಕ ಅದು ತನ್ನ ಪ್ರಭಾವವನ್ನು ಇನ್ನಷ್ಟೂ ಹೆಚ್ಚಿಸಿಕೊಳ್ಳಬಹುದು. ಮಹಾತ್ಮ ಗಾಂಧೀಜಿಯವರು ಚುನಾವಣಾ ಪ್ರಕ್ರಿಯೆಯ ಮೂಲಕವೂ ಬ್ರಿಟಿಷರ ವಿರುದ್ಧ ಸಮರ ನಡೆಸಿದ್ದರು. ಅದು ಆ ಕಾಲದ ಮಟ್ಟಿಗೆ ದುರ್ಬಲವಾಗಿದ್ದಷ್ಟೇ ಅಲ್ಲ, ಕೆಲವೇ ಪ್ರದೇಶಕ್ಕೆ ಸೀಮಿತವಾಗಿತ್ತು. ಅದೇನೇ ಇದ್ದರೂ, ಅವರು ಕಾಂಗ್ರೆಸ್ ಪಕ್ಷವನ್ನು ಬ್ರಿಟಿಷರ ಮೇಲೆ ನೇರ ಹೋರಾಟಕ್ಕೆ ತಂದು ನಿಲ್ಲಿಸಿದ್ದರು. ಗಾಂಧೀಜಿಯನ್ನು ನಾವು ಕೇವಲ ಪಕ್ಷಕ್ಕಷ್ಟೇ ಸೀಮಿತಗೊಳಿಸಿ ನೋಡುವಂತಿಲ್ಲ. ಒಂದಿನಿತೂ ಸ್ವಾರ್ಥವಿಲ್ಲದೆ ಅವರು ಸ್ವಾತಂತ್ರ್ಯಕ್ಕಾಗಿ, ಸಮಾಜದ ಒಳಿತಿಗಾಗಿ ಟೊಂಕ ಕಟ್ಟಿ ನಿಂತಿದ್ದವರು. ಅಣ್ಣಾ ಹಜಾರೆಯವರು ಮಹಾತ್ಮ ಗಾಂಧಿಯೂ ಅಲ್ಲ, ಜಯಪ್ರಕಾಶ್ ನಾರಾಯಣರೂ ಅಲ್ಲ. ಆದರೆ ಭ್ರಷ್ಟಾಚಾರದಿಂದ ನೊಂದ ಜನಗಳ ಧ್ವನಿಯಾಗಿ ಅಣ್ಣಾ ಎದ್ದು ನಿಂತಿರುವುದಂತೂ ನಿಜ. ಅವರು ಯಾವುದೇ ಪಕ್ಷದ ಬೆನ್ನು ಹಿಡಿಯುವ ಅಗತ್ಯವೂ ಇಲ್ಲ.ಅಣ್ಣಾ ಅವರು ಪಕ್ಷ ಮತ್ತು ಪ್ರಾದೇಶಿಕ ರಾಜಕೀಯಗಳೆಲ್ಲವನ್ನೂ ಮೀರಿ ನಿಂತಿದ್ದಾರೆ. ಅವರು ಕಟ್ಟಿರುವ ಜನಾಂದೋಲನಕ್ಕೆ ಸರ್ಕಾರೇತರ ಸಂಸ್ಥೆಗಳೆಲ್ಲವೂ ಬೆಂಬಲಿಸಬೇಕು. ಆದರೆ ಅವರ ತಂಡದ ಕೆಲವು ಸದಸ್ಯರ ಬಗ್ಗೆ ಈ ತೆರನಾದ ನಿಲುವು ತೆಗೆದುಕೊಳ್ಳುವುದು ಅಸಾಧ್ಯ ಬಿಡಿ. ಅದೇನೆ ಇರಲಿ, ಜನಾಂದೋಲನವೊಂದರ ವೈಫಲ್ಯವೆಂದರೆ ಅದು ದುರಾಡಳಿತ ಅಥವಾ ಹದಗೆಟ್ಟ ಆಡಳಿತ ವ್ಯವಸ್ಥೆಯ ವಿರುದ್ಧದ ಶಾಂತಿಯುತ ಹೋರಾಟದ ವೈಫಲ್ಯ ಎಂದೇ ಪರಿಗಣಿಸಬೇಕಾಗುತ್ತದೆ.

Post Comments (+)