ಗುರುವಾರ , ಮಾರ್ಚ್ 4, 2021
19 °C

ಅತ್ಯಾಚಾರಕ್ಕೆ ಶಿಕ್ಷೆಯಾಗದ ಕಥಾನಕ

ಸಿ.ಜಿ. ಮಂಜುಳಾ Updated:

ಅಕ್ಷರ ಗಾತ್ರ : | |

ಅತ್ಯಾಚಾರಕ್ಕೆ ಶಿಕ್ಷೆಯಾಗದ ಕಥಾನಕ

ಇತ್ತೀಚೆಗೆ ನಿಧನರಾದ ಶುಶ್ರೂಷಕಿ ಅರುಣಾ ಶಾನಭಾಗ್ ಅವರ ಕಥೆ ಎರಡು ಕಾರಣಗಳಿಗಾಗಿ ಮುಖ್ಯ. ಒಂದು, ಅವರ ಕಥೆ, ರಾಷ್ಟ್ರದಲ್ಲಿ ದಯಾಮರಣ ಕುರಿತಾದ ವಾಗ್ವಾದಕ್ಕೆ ನಾಂದಿಯಾಯಿತು. ಅತ್ಯಾಚಾರ ಸಂತ್ರಸ್ತೆಯಾಗಿ ಕೋಮಾಗೆ ಜಾರಿದ ಅರುಣಾ ಅವರ  ಬದುಕು– ಅಸ್ತಿತ್ವದ  ಅರ್ಥಹೀನತೆ, ಘನತೆಯಿಂದ ಸಾಯುವ ಹಕ್ಕು ಇತ್ಯಾದಿ ಪ್ರಶ್ನೆಗಳನ್ನು ಎತ್ತಿತು. ಮತ್ತೊಂದು, ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷಾಭಯ ಇಲ್ಲದಿರುವುದು ಮುಂದುವರಿಯುತ್ತಿರುವ ಸ್ಥಿತಿಗೆ ಅರುಣಾ  ಕಥೆ ರೂಪಕವಾಗಿದ್ದು.ಈ ಅಂಕಣ ಬರೆಯುತ್ತಿರುವ ಇಂದಿನ ದಿನ (ಜೂನ್ 1) ಅರುಣಾ ಶಾನಭಾಗ್‌ರ 68ನೇ ಜನ್ಮದಿನವನ್ನು ಆಕೆಯನ್ನು ಆರೈಕೆ ಮಾಡಿದ ಮುಂಬೈನ ಕೆ.ಇ.ಎಂ ಆಸ್ಪತ್ರೆಯ ಸಿಬ್ಬಂದಿ ಆಚರಿಸಿ ಅವರ ನೆನಪನ್ನು ಜೀವಂತವಾಗಿರಿಸಲು ಯತ್ನಿಸಿದ್ದಾರೆ. 42 ವರ್ಷಗಳ ಕಾಲ ಆಕೆಯನ್ನು ಬಂಧಿಯಾಗಿಸಿದ್ದ ಆಸ್ಪತ್ರೆಯ ರೂಮ್ ನಂಬರ್ 4ಕ್ಕೆ ಅರುಣಾರ ಹೆಸರಿಡಲೂ ನಿರ್ಧರಿಸಲಾಗಿದೆ. ಕೋಮಾದಲ್ಲಿ 42 ವರ್ಷಗಳ  ಕಾಲ ಬದುಕು  ಸವೆಸುವುದು ಸಾಮಾನ್ಯವಾದುದಲ್ಲ. ಕಡೆಗೆ ಕೊನೆಯುಸಿರೆಳೆದದ್ದು ಕಳೆದ ಮೇ 18ರಂದು.ಲೈಂಗಿಕ  ಅತ್ಯಾಚಾರಕ್ಕೆ ಒಳಗಾದಾಗ ಅರುಣಾ 26 ವರ್ಷದ ಯುವತಿ. ಕರ್ನಾಟಕದ ಕಾರವಾರ ಬಳಿಯ ಹಳದಿಪುರ ಗ್ರಾಮದ ಅರುಣಾಗೆ ಕಿರಿಯ ವೈದ್ಯ ಡಾ.ಸಂದೀಪ್ ಸರ್‌ದೇಸಾಯಿ ಅವರ ಜೊತೆ ವಿವಾಹವೂ ನಿಶ್ಚಯವಾಗಿತ್ತು.  ಆದರೆ ಆಕೆಯ ಮುಂದಿದ್ದ  ಬದುಕು, ಭರವಸೆಗಳು ನುಚ್ಚುನೂರಾಗಿತ್ತು. ಇದಕ್ಕೆ ಕಾರಣನಾದ ಸೋಹನ್‌ಲಾಲ್ ವಾಲ್ಮೀಕಿ  ಅನುಭವಿಸಿದ್ದು ಕೇವಲ ಏಳು ವರ್ಷಗಳ ಜೈಲು ಶಿಕ್ಷೆ. 1980ರಲ್ಲಿ ಆತನ ಬಿಡುಗಡೆಯಾಗಿತ್ತು. ನಂತರ ಉತ್ತರ ಪ್ರದೇಶದ ಗಾಜಿಯಾಬಾದ್ ಬಳಿ ಪರ್ಪಾ ಎಂಬ ಗ್ರಾಮದಲ್ಲಿ ಕಳೆದ 35 ವರ್ಷಗಳಿಂದ  ಮಾಮೂಲಿ ಬದುಕು ನಡೆಸಲು ಆತನಿಗೆ ಯಾವುದೇ ಅಡ್ಡಿ ಆತಂಕ ಎದುರಾಗಿಲ್ಲ ಎಂಬುದನ್ನು ಕಳೆದ ವಾರ ಮರಾಠಿ ಪತ್ರಿಕೆಯೊಂದು ಪತ್ತೆ ಮಾಡಿದೆ. ಈಗಾಗಲೇ ವಾಲ್ಮೀಕಿ ಶಿಕ್ಷೆ ಅನುಭವಿಸಿಯಾಗಿದೆ. ಹೀಗಾಗಿ ಮತ್ತೊಮ್ಮೆ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆ ಎಂಬ ಬಗ್ಗೆ ಕಾನೂನು ಸಮಾಲೋಚನೆ ನಡೆಸಲಾಗುವುದು ಎಂಬಂತಹ ಮಾತುಗಳನ್ನು ಈ ಸಂದರ್ಭದಲ್ಲಿ ಪೊಲೀಸರು ಆಡಿದ್ದಾರೆ. ಯಾವುದೇ ಅಪರಾಧಕ್ಕೆ ಒಮ್ಮೆ ಮಾತ್ರ ಶಿಕ್ಷೆ ವಿಧಿಸಲು ಸಂವಿಧಾನ ಅವಕಾಶ ನೀಡುತ್ತದೆ. ಲೈಂಗಿಕ ಆಕ್ರಮಣದ ನಂತರ ಹಲವು ವರ್ಷಗಳ ಕಾಲ ಬದುಕಿದ ಸಂತ್ರಸ್ತೆಯ ಸಾವಿಗೆ ಇತರ ವೈದ್ಯಕೀಯ ಸಮಸ್ಯೆಗಳು ಕಾರಣವಾಗಬಹುದು. ಈಗ ಅರುಣಾ  ಸತ್ತಿದ್ದು  ನ್ಯುಮೋನಿಯಾದಿಂದ ಎಂಬುದು ವೈದ್ಯರು ಹೇಳಿಕೆ. ಅಲ್ಲದೆ ಸಾಮಾನ್ಯವಾಗಿ ಆರೋಪಿ ಇನ್ನೂ ವಿಚಾರಣಾ ಹಂತದಲ್ಲಿದ್ದ ಸಂದರ್ಭದಲ್ಲಷ್ಟೇ ಆಕ್ರಮಣಕ್ಕೊಳಗಾಗಿದ್ದ ವ್ಯಕ್ತಿ ಸತ್ತಲ್ಲಿ ಕೊಲೆ ಯತ್ನ ಆರೋಪವನ್ನು ಕೊಲೆ ಆರೋಪವಾಗಿ ಪರಿವರ್ತಿಸಲಾಗುತ್ತದೆ ಎಂಬಂತಹ ಮಾತುಗಳನ್ನು ಪೊಲೀಸರು ಹೇಳಿದ್ದಾರೆ.‘ಅರುಣಾಳ ಕಥೆ ಕುರಿತು ತನಿಖೆಯಲ್ಲಿ ತೊಡಗಿದ್ದಾಗ ಅರುಣಾ ಮೇಲೆ ಅತ್ಯಾಚಾರ ನಡೆದದ್ದು ಹೇಗೆಂಬುದನ್ನು ಕಂಡುಕೊಂಡೆ. ಆದರೆ ಅದಕ್ಕಾಗಿ ಅತ್ಯಾಚಾರಿ ಶಿಕ್ಷೆಯನ್ನೇ ಅನುಭವಿಸಿಲ್ಲ ಎಂಬಂತಹ ಆಘಾತಕಾರಿ ಸಂಗತಿಯನ್ನೂ ಕಂಡುಕೊಂಡೆ. ಆಗ ನಾನು ಅರುಣಾಳ ನಿಜ ಕಥೆಯನ್ನು ಹೇಳಬೇಕೆಂದು ನಿರ್ಧರಿಸಿದೆ’  ಎಂದು ಪತ್ರಕರ್ತೆ ಪಿಂಕಿ ವಿರಾನಿ  ತಮ್ಮ ‘ಅರುಣಾಸ್ ಸ್ಟೋರಿ: ದಿ ಟ್ರೂ ಅಕೌಂಟ್ ಆಫ್ ಎ ರೇಪ್ ಅಂಡ್ ಇಟ್ಸ್ ಆಫ್ಟರ್‌ಮತ್’ (ಪೆಂಗ್ವಿನ್ ಪ್ರಕಾಶನ) ಪುಸ್ತಕದಲ್ಲಿ ಹೇಳಿದ್ದಾರೆ. ಅರುಣಾ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಆ ಅಪರಾಧಕ್ಕಾಗಿ  ಶಿಕ್ಷೆಯನ್ನೇ ಅನುಭವಿಸಲಿಲ್ಲ ಎಂಬುದು ನಮ್ಮ ಸಾಮಾಜಿಕ ಹಾಗೂ ಕಾನೂನು ವ್ಯವಸ್ಥೆಯ ವೈಪರೀತ್ಯಗಳಿಗೆ ದ್ಯೋತಕ. ವಾಸ್ತವವಾಗಿ ಆ ಸಂಜೆ ನಡೆದದ್ದೇನು? ಅಪರಾಧಿಗೆ ಶಿಕ್ಷೆ ಏಕೆ ಆಗಲಿಲ್ಲ? ಈ ಎಲ್ಲಾ ವಿವರಗಳನ್ನು ನಿಜ ಜೀವನದ ಘಟನೆಗಳನ್ನಾಧರಿಸಿ ಕಥನ ತಂತ್ರ ಅಳವಡಿಸಿಕೊಂಡು ಈ ಪುಸ್ತಕ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತದೆ.ಸೋಹನ್‌ಲಾಲ್, ಅರುಣಾ ಮೇಲೆ ಆಕ್ರಮಣ ಮಾಡಿದ್ದು 1973ರ ನವೆಂಬರ್ 27ರಂದು. ನಾಯಿಯ ಸರಪಳಿಯನ್ನು ಆಕೆಯ ಕುತ್ತಿಗೆಗೆ ಬಿಗಿದು ಅತ್ಯಾಚಾರವೆಸಗಿದ್ದ. ಅಂದು ಆಕೆಗೆ ಋತುಸ್ರಾವದ ದಿನ. ಆದರೂ ಅನೈಸರ್ಗಿಕ ಲೈಂಗಿಕ ಕ್ರಿಯೆಯ ದೌರ್ಜನ್ಯ (ಸಡೊಮಿ) ಎಸಗಿದ್ದ ಆತ.  ಈ ಸಂದರ್ಭದಲ್ಲಿ ಕುತ್ತಿಗೆಯ ನರಕ್ಕೆ  ಹಾನಿಯಾದ ಪರಿಣಾಮವಾಗಿ ಮಿದುಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡು ಅರುಣಾರ ಮುಂದಿನ ಇಡೀ ಜೀವನ ಕಮರಿಹೋಯಿತು. ಪ್ರಜ್ಞಾಹೀನ ವಲಯಕ್ಕೆ ಜಾರಿದ ಆಕೆ ಮತ್ತೆ ಜೀವಂತಿಕೆಯ ಬದುಕಿಗೆ ಮರಳಲಾಗದ ದಾರುಣ ಸ್ಥಿತಿ ತಲುಪಿದರು. ತನ್ನೆಲ್ಲಾ ಬಂಧುಗಳು ತನ್ನನ್ನು ತೊರೆದಿದ್ದಾರೆಂಬುದನ್ನು  ಗ್ರಹಿಸುವುದೂ ಅಸಾಧ್ಯವಾದ ಸ್ಥಿತಿ ಅದು.   ಅರುಣಾಳ ಬದುಕು ಲೈಂಗಿಕ ಆಕ್ರಮಣದ ಹಿಂಸಾತ್ಮಕತೆಗೆ ಪ್ರತೀಕ. ಇಂತಹ ಹಿಂಸಾತ್ಮಕತೆ ಈಗಲೂ ಮುಂದುವರಿದಿದೆ ಎಂಬುದು ವಿಪರ್ಯಾಸ. 2012ರ ಡಿಸೆಂಬರ್ 16ರಂದು ದೆಹಲಿ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆಕೆಯ ಕರುಳನ್ನೇ ಬಗೆಯಲಾಗಿತ್ತು.  ಇತ್ತೀಚೆಗೆ ಪಂಜಾಬ್‌ನ ಮೋಗಾದಲ್ಲಿ ಚಲಿಸುವ ಬಸ್‌ನಲ್ಲಿ ಹದಿಹರೆಯದ ಬಾಲಕಿಯ ಮೇಲೆ ಲೈಂಗಿಕ ದುರ್ವರ್ತನೆ ತೋರಿ  ಬಸ್ಸಿನಿಂದ ಕೆಳಕ್ಕೆ ದೂಡಿದ ಪರಿಣಾಮ ಆಕೆಯ ಸಾವಿಗೆ ಕಾರಣವಾದಂತಹ ರೀತಿಯ ಪ್ರಕರಣಗಳೂ ನಿಂತಿಲ್ಲ. ‘ಪ್ರೀತ್ಸೆ ಪ್ರೀತ್ಸೆ’ ಎಂದು ಪೀಡಿಸುತ್ತಾ  ತಮ್ಮನ್ನು ನಿರಾಕರಿಸುವ ಯುವತಿಯ ಮೇಲೆ  ಆಸಿಡ್ ಎರಚುವ ಮನಸ್ಥಿತಿಗೆ ಏನು ಹೇಳುವುದು? ಕಬ್ಬಿಣದ ಸರಳುಗಳು, ಕಲ್ಲಗಳು ಅಥವಾ ಮೇಣದ ಬತ್ತಿಗಳಂತಹ ವಸ್ತುಗಳನ್ನು ಅತ್ಯಾಚಾರ ಸಂತ್ರಸ್ತರಿಗೆ ತುರುಕುವುದು ಕಂಡು ಬರುತ್ತಿದೆ. ಈ ಬಗೆಯ ಬರ್ಬರ ಅತ್ಯಾಚಾರಕ್ಕೊಳಗಾಗುವರಲ್ಲಿ ಹೆಚ್ಚಿನವರು ಮಕ್ಕಳು. ಇಂತಹ ಘೋರ, ನಂಬಲಸಾಧ್ಯವಾದ ಹಿಂಸೆಗಳು ಸಮಾಜದಲ್ಲಿ ಮಾಮೂಲಾಗುತ್ತಾ ಸಾಗಿವೆ ಎಂಬುದೇ ಇಂದು ಸಮಾಜದ ಮುಂದಿರುವ ದೊಡ್ಡ ಸವಾಲಾಗಿದೆ.

ಆಗ ಮತ್ತು ಈಗ ಮಹಿಳಾ ಸುರಕ್ಷತೆಯ ಸಮಸ್ಯೆ  ಮುಂದುವರಿದೇ ಇದೆ. ಅಸಡ್ಡೆ ತೋರುವ ಪೊಲೀಸ್ ವ್ಯವಸ್ಥೆ ಹಾಗೂಸಮಾಜದ ಅಸೂಕ್ಷ್ಮತೆಯೂ ಹಾಗೇ ಇದೆ. ಅರುಣಾರ ಮೇಲಾದಂತಹ ಮೃಗೀಯ ವರ್ತನೆಗಳು ಮುಂದುವರಿದಿವೆ. ಆದರೆ ಇಂತಹ ಪ್ರಕರಣಗಳ ವಿರುದ್ಧದ ಸಮಾಜದ ಆಕ್ರೋಶ ಆಯ್ಕೆಯದಾಗಿದೆ.ಹೀಗಿದ್ದೂ ಈಗ ಕಾಲ ಒಂದಷ್ಟು ಬದಲಾಗಿದೆ ಎಂದುಕೊಳ್ಳಬಹುದು. ಅತ್ಯಾಚಾರ ಮತ್ತು ಲೈಂಗಿಕ ಹಿಂಸೆ ಕುರಿತಾದ ಕಾನೂನುಗಳು ಕಠಿಣವಾಗಿವೆ ಸರಿ. ಆದರೆ ಅತ್ಯಾಚಾರದ ಆಯಾಮಗಳು ಅನೇಕ ಸಂದರ್ಭಗಳಲ್ಲಿ ಕಾನೂನಿನ ಪರಿಭಾಷೆಗೆ ನಿಲುಕುವುದಿಲ್ಲ.  ಅರುಣಾ  ಪ್ರಕರಣದಲ್ಲಾದದ್ದೂ ಆದೇ.  ಅತ್ಯಾಚಾರದ ವಿವರಣೆಗೆ ಇದ್ದ ಸೀಮಿತ ಕಾನೂನಿನ ವ್ಯಾಖ್ಯೆ ಹಾಗೂ  ಆಸ್ಪತ್ರೆ ಸಿಬ್ಬಂದಿ ಸಿದ್ಧಪಡಿಸಿದ್ದ ವೈದ್ಯಕೀಯ ವರದಿಯನ್ನಾಧರಿಸಿ ಸೋಹನ್‌ಲಾಲ್ ವಿರುದ್ಧ  ಆಕ್ರಮಣ ಹಾಗೂ ದರೋಡೆ ಆರೋಪಗಳನ್ನು ಮಾತ್ರ ಹೊರಿಸಲಾಯಿತು. ಏಕೆಂದರೆ ಅತ್ಯಾಚಾರ ಎಸಗಿದ ನಂತರ ಆತ ಅರುಣಾ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ರಿಸ್ಟ್ ವಾಚ್ ತೆಗೆದುಕೊಂಡು ಪರಾರಿಯಾಗಿದ್ದ. ಆತನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗಲೇ ಇಲ್ಲ. ಅರುಣಾ ಕೋರ್ಟ್‌ಗೆ ಬಂದು ಸಾಕ್ಷ್ಯ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಆಕೆಯ ಮನೆಯವರೂ ದೂರು ನೀಡಲು ಸಿದ್ಧರಿರಲಿಲ್ಲ. ಹೀಗಾಗಿ ವಿವಾಹವಾಗಬೇಕಿರುವ ಹುಡುಗಿ ಬಾಳು ಹಾಳಾಗ ಬಾರದೆಂಬ ಉದ್ದೇಶದಿಂದ ಆಗ ಆಸ್ಪತ್ರೆಯವರೂ ಲೈಂಗಿಕ ದೌರ್ಜನ್ಯದ ವಿಚಾರವನ್ನೇ ದೂರಿನಲ್ಲಿ ಪ್ರಸ್ತಾಪಿಸಲಿಲ್ಲ ಎಂಬುದು ಅತ್ಯಾಚಾರ ಅಪರಾಧದ ಬಗ್ಗೆ ಸಮಾಜ ತೋರುವ ನಿಲುವಿಗೆ ಸಂಕೇತ.ಆಸ್ಪತ್ರೆಯ ನಾಯಿ ಶಸ್ತ್ರಚಿಕಿತ್ಸೆ ಸಂಶೋಧನಾ ಪ್ರಯೋಗಾಲಯದಲ್ಲಿ ಅರುಣಾ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಸೋಹನ್‌ಲಾಲ್ ತಾತ್ಕಾಲಿಕ ಕ್ಲೀನರ್ ಆಗಿದ್ದ.  ನಾಯಿಗೆ ಹಾಕಬೇಕಾದ ಮಾಂಸವನ್ನೂ ಆತ ಕದಿಯುತ್ತಿದ್ದ. ಕೆಲಸದಲ್ಲಿ ಕಟ್ಟುನಿಟ್ಟಿನ ಶಿಸ್ತು ಬಯಸುತ್ತಿದ್ದ ಅರುಣಾ  ಈ ಬಗ್ಗೆ ಆತನಿಗೆ ಎಚ್ಚರಿಸಿದ್ದರು. ಮೇಲಿನವರ ಗಮನಕ್ಕೆ ತರುವುದಾಗಿ ಬೆದರಿಸಿದ್ದರು. ತಪ್ಪುಗಳನ್ನು ಎತ್ತಿ ಆಡಿ ಆಕೆ ತನಗೆ ನಿರ್ದೇಶನ ನೀಡುತ್ತಿದ್ದುದು ಸೋಹನ್‌ಗೆ ಅಪಥ್ಯವಾಗಿತ್ತು.ಅರುಣಾರ ದುರಂತ ಕುರಿತು ಮೇಟ್ರನ್ ಬೇಳಿಮಾಳ್ ಹಾಗೂ ಸಿಸ್ಟರ್ ಪ್ರೇಮಾ ಪೈ ನಡೆಸುವ ಮಾತುಕತೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಕುರಿತಂತೆ ಇರುವ ವೈರುಧ್ಯದ ಭಾವಗಳಿಗೆ ಸಾಕ್ಷಿಯಾಗಿದೆ. ಪಿಂಕಿ ವಿರಾನಿಯವರ ಪುಸ್ತಕದಲ್ಲಿ ಈ ಮಾತುಗಳು ದಾಖಲಾಗಿವೆ. ಬೇಳಿಮಾಳ್ ಹೇಳುತ್ತಾರೆ: ‘ಆತ ಮಾಡುತ್ತಿದ್ದ ತಪ್ಪು ಕೆಲಸಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಅರುಣಾ ಸುಮ್ಮನಿರಬೇಕಿತ್ತು. ಗುಡಿಸುವ ಕೆಲಸದವರೊಂದಿಗೆಲ್ಲಾ ಮಾತ್ಯಾಕೆ?’.‘ನಾವು ನಮ್ಮ ಧರ್ಮ ಮಾಡಬೇಕು. ಆದರೆ ನಮ್ಮ ಧರ್ಮ ಮಾಡುವಾಗ ನಮ್ಮನ್ನೂ ನಾವು ನೋಡಿಕೊಳ್ಳಬೇಕು. ಏಕೆಂದರೆ ಸಮಾನತೆ ಎಂಬುದಿಲ್ಲ. ಮಹಿಳೆ – ಪುರುಷರ ಮಧ್ಯೆ ಮಾತ್ರವಲ್ಲ, ವಿವಿಧ ವರ್ಗಗಳ ಜನರ ಮಧ್ಯೆಯೂ ಸಮಾನತೆ ಇಲ್ಲ’.ರಾಜಸ್ತಾನದ ಭಂನ್ವರಿ ದೇವಿ ಕಥೆಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ರಾಜಸ್ತಾನ ಸರ್ಕಾರದ ಸಾಥಿನ್ ಆಗಿ ಕೆಲಸ ಮಾಡುತ್ತಿದ್ದ ಆಕೆಗೆ ಬಾಲ್ಯ ವಿವಾಹ ತಡೆಯುವುದು ಕರ್ತವ್ಯವಾಗಿತ್ತು.  ಆದರೆ ಕೆಳಜಾತಿಯ ಮಹಿಳೆಯೊಬ್ಬಳು ಮೇಲ್ಜಾತಿಯ ಕುಟುಂಬದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹ ತಡೆಗೆ ಹೊರಟಿದ್ದು ಅಪಥ್ಯವಾಯಿತು. ಇದಕ್ಕಾಗಿ ಆಕೆಗೆ ಸಿಕ್ಕ ಶಿಕ್ಷೆ ಸಾಮೂಹಿಕ ಅತ್ಯಾಚಾರ. ನಂತರ ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲೇ ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆಗೆ ಮಾರ್ಗದರ್ಶಿ ಸೂತ್ರಗಳನ್ನು ಸುಪ್ರೀಂಕೋರ್ಟ್ ಪ್ರಕಟಿಸಿದ್ದು ಚಾರಿತ್ರಿಕ ಸಂಗತಿಯಾಗಿತ್ತು.ಅತ್ಯಾಚಾರವನ್ನು ಕಾನೂನು ಪರಿಭಾವಿಸುವ ವಿಧಾನದಲ್ಲಿ ಈಗ ಬದಲಾವಣೆಯಾಗಿದೆ. ಆದರೆ ಸಾಮಾಜಿಕ ಪ್ರಜ್ಞೆ ಹಾಗೂ ಸಂಸ್ಕೃತಿಯಲ್ಲಿ ಈ ವಿಚಾರ ಕುರಿತಾಗಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಅತ್ಯಾಚಾರ ಸಂತ್ರಸ್ತೆಯನ್ನೇ ದೂಷಿಸುವ ಸಂಸ್ಕೃತಿಯಂತೂ ವ್ಯಾಪಕವಾಗಿದೆ. ಕಾನೂನು ಸುಧಾರಣೆಯಾಗಿದ್ದರೂ ಕಾನೂನು ಪ್ರಕ್ರಿಯೆಗೆ ಒಳಗಾಗುವುದೇ ಒಂದು ಅಗ್ನಿಪರೀಕ್ಷೆ ಆಗಿರುವುದೂ ಮುಂದುವರಿದಿದೆ.ಇಂತಹದೊಂದು ಕೃತ್ಯ ಇಂದು ನಡೆದಿದ್ದರೆ ಅರುಣಾಗೆ ಕನಿಷ್ಠ ಕಾನೂನಿನ ನೆಲೆಯಲ್ಲಿ ಇನ್ನಷ್ಟು ನ್ಯಾಯ ಹೆಚ್ಚು ಸಿಕ್ಕಿರುತ್ತಿತ್ತೆ  ಎಂಬುದು ದೊಡ್ಡ ಪ್ರಶ್ನೆ. ಲೈಂಗಿಕ ಆಕ್ರಮಣದಿಂದ ಆಕೆ ಕೋಮಾದಂತಹ ದುರ್ಗತಿಗೆ ಸಿಲುಕದೇ ಇದ್ದಿದ್ದರೆ ಇದೇ ಬಗೆಯ ಕಾಳಜಿ, ಬೆಂಬಲ   ಅರುಣಾಗೆ ಸಿಕ್ಕಿರುತ್ತಿತ್ತೆ? ಇವೆಲ್ಲಾ ಈಗಲೂ ಕಾಡಿಸುವ ಕ್ಲಿಷ್ಟ ಪ್ರಶ್ನೆಗಳು. ಸಾಮುದಾಯಿಕ ನೆಲೆಯಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

ಘನತೆಯಿಂದ ಸಾಯುವ ವಿಚಾರದ ಬಗ್ಗೆ ಅರುಣಾ  ಪ್ರಕರಣ ಪ್ರಶ್ನೆಗಳನ್ನು ಎತ್ತಿದೆ ಎಂಬುದು ಅತ್ಯಂತ ಮುಖ್ಯ ವಿಚಾರ. ಅರುಣಾರಿಗೆ ದಯಾಮರಣ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಪತ್ರಕರ್ತೆ ಪಿಂಕಿ ವಿರಾನಿ ಅರ್ಜಿ ಸಲ್ಲಿಸಿದ್ದರು. ಸಾಂವಿಧಾನಿಕವಾಗಿ ನೀಡಲಾದ ಬದುಕುವ ಮೂಲಭೂತ ಹಕ್ಕು ಹಾಗೂ ಮತ್ತೊಬ್ಬರ ಬದುಕಿನ ಬಗ್ಗೆ ತೀರ್ಮಾನ ಕೈಗೊಳ್ಳುವಂತಹ ನೈತಿಕ ಸಂದಿಗ್ಧತೆಯ ಪ್ರಶ್ನೆಗಳು ಇಲ್ಲಿದ್ದವು. ಅರುಣಾಗೆ  ದಯಾಮರಣ ಮನವಿಯನ್ನು ತಿರಸ್ಕರಿಸಲಾಯಿತು.  ಆದರೆ ಬದುಕಿನ ಮುಂದುವರಿಕೆಗೆ ಅತ್ಯಗತ್ಯವಾದ ಜೀವ ರಕ್ಷಕ ಉಪಕರಣಗಳನ್ನು ಸ್ಥಗಿತಗೊಳಿಸುವ ‘ಪ್ಯಾಸಿವ್ ಯುಥನೇಸಿಯಾ’ಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದು ಮೈಲುಗಲ್ಲಾಯಿತು.  ಈಗ, ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು 2011ರಲ್ಲಿ ನೀಡಲಾದ ಈ ತೀರ್ಪಿನ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದಾಗಿ ಹೇಳಿದ್ದಾರೆ. ಹೀಗಿದ್ದೂ ಈ ಸಂಬಂಧದಲ್ಲಿ ಶಾಸನ ರೂಪಿಸುವ ಪ್ರಸ್ತಾವ ಇಲ್ಲವೆಂದೂ ಸಚಿವರು ಹೇಳಿದ್ದಾರೆ. ಆದರೆ ಇಂತಹ ಮುಖ್ಯ ವಿಚಾರವನ್ನು ನ್ಯಾಯಾಂಗದ ವಿವೇಚನೆಗಷ್ಟೇ ಬಿಡುವುದು ಸಲ್ಲದು. ‘ಚಟಕ್ ಚಾಂದನಿ’ ಎಂದರೆ  ‘ಚುರುಗುಡುವ ಬೆಳದಿಂಗಳು’. ಗುಜರಾತಿ ಲೇಪ ಇರುವ ಈ ಬಾಂಬೆ ಹಿಂದಿ ನುಡಿಗಟ್ಟು ಅರುಣಾಗೆ ಸೂಕ್ತವಾಗುತ್ತದೆಂದು ಅವರ ಸಹೋದ್ಯೋಗಿಯೊಬ್ಬರು ಭಾವಿಸಿದ್ದರು. ಇಂತಹ ‘ಚಟಕ್ ಚಾಂದನಿ’ಯ ಕಥೆ ಮನುಷ್ಯ ಸ್ವಭಾವದ ಅಂತರ್ಗತ ವೈರುಧ್ಯದ ಕಥಾನಕಗಳಿಗೂ ಹಿಡಿದ ಕನ್ನಡಿ ಎಂಬುದನ್ನು ಮರೆಯಲಾಗದು. ಆಸ್ಪತ್ರೆ ಸಿಬ್ಬಂದಿಯ ಔದಾರ್ಯದ ಕಥೆ ಒಂದೆಡೆ. ಮತ್ತೊಂದೆಡೆ ಮನುಷ್ಯನ ಪಾಶವೀತನದ ಅನಾವರಣ. ಸಾರ್ವತ್ರಿಕ ಪ್ರಜ್ಞೆಯಲ್ಲಿ ಅರುಣಾರ ಕಥೆಯ ಈ ಎರಡೂ ಎಳೆಗಳ ಅಸ್ತಿತ್ವ ಮುಂದುವರಿಯಲಿದೆ. ಬಿಳಿ ಸಮವಸ್ತ್ರದ ಮಹಿಳಾ ಸಮುದಾಯದ ಷರತ್ತುರಹಿತ ವಾತ್ಸಲ್ಯ, ಜೀವನಪ್ರೀತಿಯ ಬೆಳಕಾಗಿ ಪೊರೆಯುವಂತಹದ್ದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.