ಅತ್ಯಾಚಾರ ಘಟನೆಗಳಿಗೆ ಸಿನಿಮಾದವರೇ ಹೊಣೆ

7

ಅತ್ಯಾಚಾರ ಘಟನೆಗಳಿಗೆ ಸಿನಿಮಾದವರೇ ಹೊಣೆ

ಗಂಗಾಧರ ಮೊದಲಿಯಾರ್
Published:
Updated:

ನವದೆಹಲಿಯಲ್ಲಿ ಇತ್ತೀಚೆಗೆ ಚಲಿಸುವ ಬಸ್‌ನಲ್ಲೇ ನಡೆದ ಪೈಶಾಚಿಕ ಅತ್ಯಾಚಾರ ಪ್ರಕರಣಕ್ಕೆ ಚಲನಚಿತ್ರರಂಗದವರೇ ಕಾರಣ ಎಂದು ಹೇಳಿದರೆ ಯಾರೂ ಬೆಚ್ಚಿ ಬೀಳಬೇಕಿಲ್ಲ. ಸುಸಂಸ್ಕೃತ ಸಮಾಜವೊಂದನ್ನು ಕಟ್ಟುವ ಹೊಣೆಗಾರಿಕೆ ವಿವಿಧ ಸಂಸ್ಥೆಗಳಿಗೆ, ಸಂಘಟನೆಗಳಿಗೆ, ಮಾಧ್ಯಮಗಳಿಗೆ ಸದಾ ಇರುತ್ತದೆ.

ಅದರಲ್ಲೂ ಅನಕ್ಷರಸ್ಥರೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಜನ ದೃಶ್ಯ ಮಾಧ್ಯಮದ ದಟ್ಟ ಪ್ರಭಾವಕ್ಕೆ ಒಳಗಾಗಿರುವುದು ಒಪ್ಪಿತ ಸತ್ಯವಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಚಲನಚಿತ್ರ ಪ್ರೇಕ್ಷಕರನ್ನು ಹೊಂದಿರುವ ನಮ್ಮ ದೇಶದಲ್ಲಿ ಅಂತಹ ಪ್ರೇಕ್ಷಕರನ್ನು ಸಂತೋಷಪಡಿಸುವ, ರಂಜಿಸುವ, ಮುದನೀಡುವ,ನೈತಿಕ ಸ್ಥೈರ್ಯ ತುಂಬುವ ಗುರುತರವಾದ ಜವಾಬ್ದಾರಿ ಸಿನಿಮಾದ್ದಾಗಿದೆ.

ನಗರ ಪ್ರದೇಶದ ಜನ ಸಾಮಾಜಿಕ ಒತ್ತಡಗಳಿಂದ ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಯುವ ಜನಾಂಗವಂತೂ ನಿರುದ್ಯೋಗ ಸೇರಿದಂತೆ ಹಲವಾರು ಆಮಿಷಾತ್ಮಕ ಸಮಸ್ಯೆಗಳಿಂದ ಪ್ರಕ್ಷುಬ್ಧರಾಗಿರುತ್ತಾರೆ. ಗ್ರಾಮೀಣ ಪ್ರದೇಶದ ಪ್ರೇಕ್ಷಕರೂ ಕೂಡ ಜಂಜಾಟಗಳಿಂದ ಮುಕ್ತರಾಗಲು ಸಿನಿಮಾಕ್ಕೆ ಬರುತ್ತಾರೆ. ಅಂತಹ ಹಿನ್ನೆಲೆಯನ್ನು ಅಧ್ಯಯನ ಮಾಡಬೇಕಾದ ಕ್ರಿಯಾಶೀಲತೆ ಸಿನಿಮಾ ಜನರಿಗಿರಬೇಕಾಗುತ್ತದೆ.

ಪ್ರೇಕ್ಷಕರ ಮಾನಸಿಕ ಸಮತೋಲ ಕಾಪಾಡುವಂತ, ಅವರನ್ನು ಸದಾ ಸಮಸ್ಥಿತಿಯಲ್ಲಿಡಬೇಕಾದಂತಹ ವಾತಾವರಣವನ್ನು ಸಿನಿಮಾ ಮೂಲಕ ನಿರ್ಮಿಸಬಹುದಾಗಿದೆ.ಹೆಣ್ಣಿನ ಬಗ್ಗೆ ನಿಕೃಷ್ಟಭಾವನೆ ಮೂಡುವ ಸನ್ನಿವೇಶವನ್ನು ಸೃಷ್ಟಿಸಿರುವುದೇ ಚಿತ್ರರಂಗ ಎಂಬುದು ನನ್ನ ಭಾವನೆ.

ಮಹಿಳಾ ಪಾತ್ರಗಳನ್ನು ಅಸಹಾಯಕ ವ್ಯಕ್ತಿತ್ವವನ್ನಾಗಿ, ಅವಲಂಬನೆಯ ವ್ಯಕ್ತಿಯನ್ನಾಗಿ ಚಿತ್ರಿಸಿರುವುದು, ಹೆಣ್ಣು ದಾಸಿ, ಕೀಳು ಎಂಬ ಅಸಡ್ಡೆಯನ್ನು ಆ ಪಾತ್ರಕ್ಕೆ ಸಮೀಕರಿಸುವ ಪರಂಪರೆ ಮುಂದುವರೆದಿರುವುದು ಒಂದು ರೀತಿಯ ವ್ಯಂಗ್ಯ. ನೂರು ವರ್ಷದ ಚಲನಚಿತ್ರ ಇತಿಹಾಸದ ಪುಟಗಳನ್ನೇ ತೆರೆದು ನೋಡಿ, ಮಹಿಳೆಯನ್ನು ಪುರುಷ ಪಾತ್ರದ ಸೇವಕಿಯಾಗಿಯೇ ನೋಡಲಾಗಿದೆ.

ಪುರುಷನ ಸೇವೆಗಾಗಿಯೇ ಮಹಿಳೆ ಇರುವುದು ಎನ್ನುವ ಭಾವನೆ ಪ್ರೇಕ್ಷಕನ ಮನದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಲಾಗಿದೆ. ಇಂತಹ ತರತಮವನ್ನು ಅಸಹಾಯಕವಾಗಿ ವೀಕ್ಷಿಸುತ್ತಲೇ ಇರಬೇಕಾದ ಪರಿಸ್ಥಿತಿ ಸೆನ್ಸಾರ್ ಮಂಡಳಿಯದೂ ಕೂಡ. ನಾಯಕ ಪ್ರಧಾನ ಚಿತ್ರಗಳ ಪಾರಮ್ಯವನ್ನೇ ಭಾರತೀಯ ಚಿತ್ರರಂಗ ರೂಢಿಸಿಕೊಂಡಿದೆ. ಪಾಶ್ಚಾತ್ಯ ಸಿನಿಮಾಗಳೂ ಕೂಡ ಇದರಿಂದ ಹೊರತಲ್ಲ.

ನಾಯಕ ಮನೆಗೆ ಬಂದಾಗ ಸ್ವಾಗತಿಸಲು ಹೆಂಡತಿ ಬಾಗಿಲ ಬಳಿ ನಿಂತಿರಬೇಕು, ಅವನ ಶೂ ಕಳಚಿ ಅವನನ್ನು ಆರೈಕೆ ಮಾಡಬೇಕು. ಅವನಿಗೆ ಬಿಸಿ ಬಿಸಿ ಕಾಫಿ ಮಾಡಿಕೊಟ್ಟು ಅವನ ದಣಿವಾರಿಸಬೇಕು. ಅವನಿಗೆ ಕಾಲು ನೋವಾದರೆ ಕಾಲನ್ನು ಒತ್ತಬೇಕು. ಯಾವುದೇ ಪಾರ್ಟಿಯಾದರೂ ಒಂದು ಹೆಣ್ಣೇ ಅವನಿಗೆ ಮನರಂಜನೆ ನೀಡಬೇಕು. ಅರೆಬರೆ ಬಟ್ಟೆ ತೊಟ್ಟು ಕ್ಯಾಬರೆ ಮಾಡಬೇಕು.

ನಾಯಕಿಯನ್ನು ದುಷ್ಟರಿಂದ ಪಾರು ಮಾಡಲು ನಾಯಕನೇ ಅವತರಿಸಬೇಕು. ಅತ್ಯಾಚಾರವಾಗುವಾಗ ನಾಯಕಿಯಾಗಲಿ, ಯಾವುದೇ ಸ್ತ್ರೀ ಪಾತ್ರವಾಗಲಿ ಪ್ರತಿಭಟಿಸುವ ಶಕ್ತಿ ಇದ್ದರೂ ಆಕೆ ಪ್ರತಿಭಟಿಸುವುದಿಲ್ಲ. ಖಳರನ್ನು ಹೊಡೆಯುವ ಶಕ್ತಿ ಇದ್ದರೂ,ಪ್ರತಿಭಟಿಸುವ ಶಕ್ತಿ ಇದ್ದರೂ ಅದಕ್ಕೆ ನಿರ್ದೇಶಕರು ಅನುಮತಿ ಕೊಡುವುದಿಲ್ಲ. ನಾಯಕನೇ ಬಂದು ಅವರನ್ನು ರಕ್ಷಿಸಬೇಕು....

ಇಂತಹ ಒಂದು ಚೌಕಟ್ಟನ್ನು ಚಲನಚಿತ್ರರಂಗ ತಾನೇ ರೂಪಿಸಿಕೊಂಡಿದೆ. ಹೀಗಾಗಿ ಮಹಿಳಾ ಸಾಮರ್ಥ್ಯವನ್ನು ಸಮಾಜದ ಮುಂದೆ ದುರ್ಬಲವಾಗಿ ಪ್ರತಿಪಾದಿಸಿದಂತಾಗಿದೆ.ಚಲನಚಿತ್ರರಂಗದವರ ಮತ್ತೊಂದು ವಿಕೃತ ಧೋರಣೆ ಎಂದರೆ, ಮಹಿಳೆಯರಿರುವುದೇ ಗಂಡಸರ ಮನರಂಜನೆಗಾಗಿ ಎನ್ನುವ ಭಾವನೆ. ಯಾವುದೇ ಮುಖ್ಯವಾಹಿನಿ ಚಿತ್ರವನ್ನೇ ಗಮನಿಸಿದರೂ ಪ್ರಚೋದನಾತ್ಮಕವಾದ ಈ ಅಂಶ ನಿಮಗೆ ಸ್ಪಷ್ಟವಾಗುತ್ತದೆ.

ಅರೆಬರೆ ಡ್ರೆಸ್ ಹಾಕಿಕೊಂಡ ತರುಣಿಯೊಬ್ಬಳು, ಅಶ್ಲೀಲ ಭಂಗಿಗಳಲ್ಲಿ ಕ್ಯಾಬರೆ ಮಾಡುವಾಗ ಸುತ್ತ ಸೇರಿರುವವರೆಲ್ಲಾ ಚಪ್ಪಾಳೆ ತಟ್ಟುವುದು, ಶಿಳ್ಳೆ ಹಾಕುವುದು, ನೋಟು ಎಸೆಯುವುದು ಇವೆಲ್ಲಾ ಜಮೀನ್ದಾರಿ ಸಂಸ್ಕೃತಿಯ ಕುರುಹು. ದಾಸ್ಯ ಮನೋಭಾವದ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ.

`ಶೋಲೆ' ಚಿತ್ರದಲ್ಲಿ ಹೇಮಾಮಾಲಿನಿ ಖಳನ ಹಿಂಸೆಗೆ ಮಣಿದು ಬಂಡೆಗಳ ಮೇಲೆ, ಗಾಜಿನ ತುಣುಕುಗಳ ಮೇಲೆ ನರ್ತಿಸುವ ದೃಶ್ಯಗಳನ್ನೇ ನೆನಪಿಸಿಕೊಳ್ಳಿ. ಪುರುಷರ ಮನದಾಳದ ವಿಕೃತಿಯನ್ನು ಇದು ಸಂಕೇತಿಸುತ್ತದೆ. ಮಹಿಳೆಯನ್ನು ದೈಹಿಕವಾಗಿ ಹಿಂಸಿಸುವ ಮೂಲಕ ಆನಂದಾನುಭವವನ್ನು ಪಡೆಯುವ ಪುರುಷ ಪ್ರವೃತ್ತಿಯನ್ನು ಇದು ಪ್ರೋತ್ಸಾಹಿಸುತ್ತದೆ ಮತ್ತು ಪೋಷಿಸುತ್ತದೆ.

ಸಮಾಜದಲ್ಲಿ ಇಂದು ಮಹಿಳೆಯರನ್ನು ನಾನಾ ವಿಧದ ಹಿಂಸೆಗೆ ಒಳಪಡಿಸಿ, ಆತ್ಮಹತ್ಯೆಯತ್ತ ದೂಡುವುದು, ಸಿಗರೇಟಿನಿಂದ ಅವರ ದೇಹದ ವಿವಿಧ ಭಾಗಗಳನ್ನು ಸುಡುವುದು, ಮೊದಲಾದವೆಲ್ಲಾ ಸಿನಿಮಾಗಳು ನೀಡಿದ ಕಾಣಿಕೆ.ನೂರು ವರ್ಷದ ಸಿನಿಮಾ ನಡೆದು ಬಂದ ಹಾದಿಯನ್ನೇ ನೋಡಿ. ಸಾಮಾನ್ಯವಾಗಿ ಬಹುತೇಕ ಚಲನಚಿತ್ರಗಳ ಕಥಾವಸ್ತು ಸೆಕ್ಸ್ (ಅತ್ಯಾಚಾರ) ಮತ್ತು ಸೇಡು. ಖಳನಾಯಕನ ತೆಕ್ಕೆಯಲ್ಲಿರುವ ನಾಯಕಿಯನ್ನು ಹೋರಾಟದ ಮೂಲಕ ನಾಯಕ ಪಡೆಯುವುದು ಒಂದು ಸೂತ್ರವಾದರೆ, ಮತ್ತೆ ಕೆಲವರು ಅದೇ ಸೂತ್ರವನ್ನೇ ಬದಲಿಸಿ ಬೇರೆ ಬೇರೆ ಪ್ರಯೋಗ ಮಾಡುತ್ತಿರುತ್ತಾರೆ.

ನಾಯಕನ ಹೆಂಡತಿ ಇಲ್ಲವೇ ಮಗಳು ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುತ್ತಾಳೆ. ಅತ್ಯಾಚಾರಿಗಳನ್ನು ಪತ್ತೆಹಚ್ಚಿ ಕೊಲೆ ಮಾಡುವುದು, ಆ ಮೂಲಕ ಸೇಡು ತೀರಿಸಿಕೊಳ್ಳುವುದೇ ನಾಯಕನ ಕೆಲಸವಾಗುತ್ತದೆ. ಮೂರು ಗಂಟೆಯ ಕಾಲ ಸೇಡಿನ ವೈಭವೀಕರಣವನ್ನು ಪ್ರೇಕ್ಷಕ ನೋಡಿ ಆನಂದಿಸುತ್ತಾನೆ. ಪ್ರೇಕ್ಷಕ ಬದಲಾವಣೆ ಬಯಸುತ್ತಾನೆ ಎಂದು ಆದರ್ಶದ ಮಾತುಗಳನ್ನಾಡುವ ನಿರ್ಮಾಪಕರು ಕೆಲವೊಮ್ಮೆ ಅತ್ಯಾಚಾರಕ್ಕೊಳಗಾದ ಮಹಿಳೆಯೇ ಸೇಡು ತೀರಿಸಿಕೊಳ್ಳುವ ಕಥಾನಕವನ್ನೂ ಸೃಷ್ಟಿಸಿದ ಉದಾಹರಣೆಗಳಿವೆ.

`ರೇಪ್' ಎನ್ನುವುದು ಬಾಕ್ಸ್ ಆಫೀಸಿನ ಯಶಸ್ವಿ ಸೂತ್ರ ಎನ್ನುವುದು ಅರಿವಾಗುತ್ತಲೇ ಚಲನಚಿತ್ರರಂಗ ಅದನ್ನು ಖಾಯಂ ಅಂಶವನ್ನಾಗಿ ಮಾಡಿಕೊಂಡಿತು.  ಸಾಮಾಜಿಕ ಕಟ್ಟುಪಾಡುಗಳು ಎಂಬ ಸಂಹಿತೆಯೊಂದನ್ನು ನಾವು ಪಾಲಿಸಬೇಕು ಎನ್ನುವ ಪರಿಜ್ಞಾನ ಕೂಡ ಮರೆಯಾಯಿತು. ರೇಪ್ ದೃಶ್ಯಗಳಲ್ಲೂ ನಿರ್ದೇಶಕರು ಒಂದೊಂದು ಚಿತ್ರದಲ್ಲೂ ಒಂದೊಂದು ರೀತಿಯ `ಆನಂದ'ವನ್ನು ಕಾಣಲಾರಂಭಿಸಿದ್ದು ಮಾತ್ರ ವಿಪರ್ಯಾಸ.

ನಾಯಕಿಯ ಬಟ್ಟೆ ಹರಿಯುವುದು, ಅವಳು ಮಾನ ಮುಚ್ಚಿಕೊಳ್ಳಲು ಹರಸಾಹಸ ಮಾಡುವುದು ಅಂದಿನ ಕಾಲದಿಂದಲೂ ನಾವು ನೋಡಿಕೊಂಡು ಬಂದ ರೇಪ್ ಶೈಲಿ. ನಾಯಕಿಯನ್ನು ಮಂಚಕ್ಕೋ, ಕಂಭಕ್ಕೋ ಕಟ್ಟಿಹಾಕಿ, ಅಸ್ತವ್ಯಸ್ತ ಸ್ಥಿತಿಯಲ್ಲಿರುವ ಅವಳ ಸುತ್ತ ತಿರುಗುತ್ತಾ ಡೈಲಾಗ್ ಹೇಳುವುದು ಮತ್ತೊಂದು ಶೈಲಿ.

ಕಾರಿನಲ್ಲಿ, ಆಟೋದಲ್ಲಿ, ಬಸ್ಸಿನಲ್ಲಿ ಅತ್ಯಾಚಾರ ಮಾಡುವ ಕಲ್ಪನೆಗಳನ್ನು ಕಟ್ಟಿಕೊಟ್ಟದ್ದೂ ನಮ್ಮ ಸಿನಿಮಾಗಳು ಹಾಗೂ ಟಿ.ವಿ.ಚಾನಲ್‌ಗಳು. ಹುಟ್ಟಿನಿಂದಲೇ ಯಾರೂ ಅತ್ಯಾಚಾರಿಗಳಾಗಿರುವುದಿಲ್ಲ. ಇಂತಹ ಸಿನಿಮಾಗಳು ಅಂತಹ ಕೃತ್ಯಕ್ಕೆ ಪ್ರಚೋದನೆ ನೀಡುತ್ತವೆ. ಯುವ ಮನಸ್ಸುಗಳ ಮೇಲೆ ಪರಿಣಾಮ ಉಂಟುಮಾಡುತ್ತವೆ. ಬಸ್‌ನಲ್ಲಿ ಅತ್ಯಾಚಾರ ಮಾಡುವ ಹೀನಕೃತ್ಯ ಇಂತಹ ಪ್ರೇರೇಪಿತ ಮನೋವಿಕಾರಿಗಳಿಂದಾದದ್ದು ಎನ್ನುವುದನ್ನು ಗಮನಿಸಬೇಕು.

ಸಂಬಂಧಗಳನ್ನು ಗುರುತಿಸಿಕೊಳ್ಳುವ ಮಾಧ್ಯಮವಾಗಿಯೂ ಸಿನಿಮಾ ಪ್ರಭಾವ ಮತ್ತು ಪರಿಣಾಮ ಬೀರುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಮನರಂಜನೆ ಎಂದರೆ ಸಿನಿಮಾ ಒಂದೇ, ಟಿವಿಗಳ ಮೂಲಕ ಬರುವ ಚಿತ್ರಗಳು, ಕ್ರೈಂ ನ್ಯೂಸ್‌ಗಳು, ಮೂಢನಂಬಿಕೆಗಳನ್ನು ಒತ್ತಿಹೇಳುವ ಕಪೋಲಕಲ್ಪಿತ ಕತೆಗಳು ಪ್ರೇಕ್ಷಕನ ಮುಗ್ಧ ಮನಸ್ಸನ್ನು, ನಿಜವೆಂದೇ ನಂಬಿಸುವಂತಹ ತಾಂತ್ರಿಕ ಶಕ್ತಿ ಪಡೆದಿರುತ್ತವೆ.

ಬೌದ್ಧಿಕ ಕಪಟತನ, ಮೋಸಗಾರಿಕೆಯ ತಂತ್ರವನ್ನು ಟಿಆರ್‌ಪಿ ರೇಟಿಗಾಗಿ ಟಿವಿಯವರು ಅನುಸರಿಸುವುದರಿಂದ ಪ್ರೇಕ್ಷಕನ ಮನಃಸ್ಥಿತಿ ಸುಲಭವಾಗಿ ಆ ಸಮ್ಮೊಹನಕ್ಕೆ ಬಲಿಯಾಗಿ ಬಿಡುತ್ತದೆ. “ಪಾತಾಳ ಮೋಹಿನಿ” ನೋಡಿದವರು ಬುದ್ಧಿಭ್ರಮಣೆಗೆ ಈಡಾಗಿದ್ದಿದೆ. `ಶರಪಂಜರ' ನೋಡಿ ದಿಗ್ಭ್ರಾಂತಿಗೊಳಗಾದವರಿದ್ದಾರೆ, “ಆಪ್ತಮಿತ್ರ”ನನ್ನು ನೋಡಿ ಚಂದ್ರಮುಖಿಯ ಕಾಟದ ಭಯದಲ್ಲಿ ಸತ್ತವರ ಸುದ್ದಿ ವದಂತಿಗಳನ್ನು ಕೇಳಿದ್ದೇವೆ ಇವೆಲ್ಲಾ ಸಿನಿಮಾ ಪ್ರಭಾವದಿಂದಲೇ ಆದದ್ದು ಎನ್ನಲು ಕಾರಣವಿಲ್ಲದಿಲ್ಲ.

ನಾಯಕ ನಟನೊಬ್ಬ ಸಿಗರೇಟು ಸೇದುವ ಶೈಲಿಯನ್ನು ಯುವಕರು ಅನುಕರಿಸುತ್ತಾರೆ. ನಾಯಕ ಸದಾ ಕುಡಿಯುತ್ತಿದ್ದರೆ ಹಾಗೆ ಮಾಡಿದರೆ ನಾನೂ ನಾಯಕನ ಹಾಗೆ ದೊಡ್ಡ ವ್ಯಕ್ತಿಯಾಗಬಹುದು ಎನ್ನುವ ಮನೋಭಾವ ಮೂಡುತ್ತದೆ. ನಾಯಕರು ಸಿಗರೇಟು ಸೇದುವ ಶೈಲಿಗೆ ಈಗ ಕಡಿವಾಣ ಹಾಕಿರುವುದು ಸಿನಿಮಾ ಬೀರುವ ಇಂತಹ ದುಷ್ಪರಿಣಾಮಕ್ಕೆ ಉದಾಹರಣೆಯಾಗಿದೆ. ಸಿನಿಮಾ ನೋಡಿ ವಿದ್ಯಾರ್ಥಿಯೊಬ್ಬ ಶಿಕ್ಷಕಿಗೆ ಇರಿಯುತ್ತಾನೆ. ಮತ್ತೊಬ್ಬ ವಿದ್ಯಾರ್ಥಿ ಶಾಲೆಗೆ ಪಿಸ್ತೂಲು ತಂದು ಶೂಟೌಟ್ ಮಾಡುತ್ತಾನೆ.

`ದಂಡುಪಾಳ್ಯ' ಚಿತ್ರ ಬಂದ ನಂತರ ಬೆಂಗಳೂರು ಸೇರಿದಂತೆ ಹಲವಾರು ನಗರಗಳಲ್ಲಿ ಒಂಟಿ ಮಹಿಳೆಯರ ಅತ್ಯಾಚಾರ ಪ್ರಕರಣಗಳು ಹೆಚ್ಚಾದುದನ್ನು ಕೂಡ ಇಲ್ಲಿ ಗಮನಿಸಬೇಕು. ಸಿನಿಮಾಕ್ಕೆ ಹೀಗೆ ಪ್ರಭಾವ ಬೀರುವ, ದುರ್ಬಲ ಮನಸ್ಸುಗಳನ್ನು ಬೇಗನೆ ಆಕ್ರಮಿಸುವ ಗುಣವಿದೆ. ಸಿನಿಮಾದೊಳಗಿರುವ ಇಂತಹ ಅಪಾಯಕಾರಿ ಮಗ್ಗುಲನ್ನು ಬಹುತೇಕ ನಿರ್ಮಾಪಕ ನಿರ್ದೇಶಕರು ಮರೆತುಬಿಟ್ಟಿರುತ್ತಾರೆ.

`ಮರೆತು ಬಿಟ್ಟಿರುತ್ತಾರೆ' ಎನ್ನುವುದು ಉದ್ದೇಶಪೂರ್ವಕವೂ ಆಗಿರಬಹುದು. ಈ ವಿಷಯದಲ್ಲಿ ಸಿನಿಮಾ ಮಂದಿಯನ್ನು ಕ್ಷಮಿಸಲು ಸಾಧ್ಯವಿಲ್ಲ. ಹಣ ದೋಚುವುದೇ ಸಿನಿಮಾ ನಿರ್ಮಾಪಕನ ಮೊದಲ ಆದ್ಯತೆಯಾಗಿರುವುದರಿಂದ ಸಾಮಾಜಿಕ ಹೊಣೆಗಾರಿಕೆಯನ್ನು ಆತ ಹೊತ್ತುಕೊಳ್ಳಲು ಸಿದ್ಧನಿರುವುದಿಲ್ಲ.

ರೇಪ್, ಹಿಂಸೆ, ಮಾರಾಮಾರಿ, ಸೆಕ್ಸ್ ಇಂತಹ ವಿಕೃತ ಸರಕುಗಳನ್ನು ತಯಾರಿಸಿ ಮಾರುಕಟ್ಟೆಗೆ ಸರಬರಾಜು ಮಾಡುವುದೇ ಸಿನಿಮಾರಂಗದ ಕೆಲಸ. ಅದರಿಂದ ಸಮಾಜ ಹಾಳಾಗುವುದಾದರೆ ಅವನ ಗಂಟೇನೂ ಮುಳುಗಿಹೋಗುವುದಿಲ್ಲವಲ್ಲ.ಇಂತಹ `ರೇಪ್' ಚಲನಚಿತ್ರಗಳನ್ನು ತಡೆಯಲು ಸಾಧ್ಯವಿಲ್ಲವೇ? ಸೆಕ್ಸ್ ಮತ್ತು ಹಿಂಸೆಯನ್ನು ಸೆನ್ಸಾರ್ ಮಂಡಳಿ ಇಷ್ಟಪಡುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಭಾರತದ ಸೆನ್ಸಾರ್ ಮಂಡಳಿ ಸಂಪ್ರದಾಯವಾದಿ ನೀತಿಯನ್ನುಳ್ಳದ್ದು ಎಂದು ಎಲ್ಲರೂ ಪರಿಭಾವಿಸುತ್ತಾರೆ.

ಆದರೆ ಬಿಡುಗಡೆಯಾಗಿರುವ ಚಲನಚಿತ್ರಗಳನ್ನು ನೋಡಿದರೆ ಬ್ರಿಟನ್, ಅಮೆರಿಕಗಳಿಗಿಂತ ಭಾರತದ ಸೆನ್ಸಾರ್ ಮಂಡಳಿಯೇ ಸೆಕ್ಸ್, ರೇಪ್ ವಿಷಯದಲ್ಲಿ ಧಾರಾಳಿಯಾಗಿರುವಂತೆ ಕಾಣುತ್ತಿದೆ. ಇಂತಹ ಸಿನಿಮಾಗಳಿಗೆ ಅನುಮತಿ ಕೊಡಲೆಂದೇ ಎ, ಯು/ಎ, ಯು ಮೊದಲಾದ ವಿಂಗಡಣೆಗಳನ್ನು ಅನುಕೂಲ ಸಿಂಧುವಾಗಿ ಮಾಡಿಕೊಳ್ಳಲಾಗಿದೆ.

ಹಾಲಿವುಡ್‌ನಲ್ಲಿ ಆರಂಭಿಕವಾಗಿ ಬಂದ ಚಿತ್ರಗಳಲ್ಲಿ ಬಹುತೇಕವು ಈ ರೀತಿ ಅತ್ಯಾಚಾರವನ್ನು ಕೇಂದ್ರೀಕರಿಸಿದಂತವು. “ದಿ ವರ್ಜಿನ್ ಸ್ಪ್ರಿಂಗ್‌”ನಿಂದ ಪ್ರೇರಣೆ ಪಡೆದ ಚಿತ್ರಗಳು ಒಂದು ರೀತಿಯ ಪ್ರವಾಹದಂತೆ ಹರಿದುಬಂದವು. ಸಮಾಜದಲ್ಲಿ ಬೇರೂರಿರುವ ನೈತಿಕ ಮೌಲ್ಯವನ್ನು ಶಿಥಿಲಗೊಳಿಸುವಂತಹ ಇಂತಹ ಚಿತ್ರಗಳ ವಿರುದ್ಧ 1960 ರಲ್ಲಿ ಅತ್ಯಾಚಾರಗಳ ಚಿತ್ರ ವಿರೋಧಿ ಚಳವಳಿ ಆರಂಭವಾಯಿತು.

ಆಂಡ್ರಿ ಮತ್ತು ಕ್ಯಾಥರಿನ್ ಮ್ಯಾಕಿನ್ನಾನ್ ಎಂಬ ಇಬ್ಬರು ಮಹಿಳಾವಾದಿಗಳು ನಗ್ನತೆ, ಅಶ್ಲೀಲ ಚಿತ್ರ, ಅತ್ಯಾಚಾರ ತುಂಬಿ ತುಳುಕುವ ಚಲನಚಿತ್ರಗಳು ನೈಜ ಜಗತ್ತಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರೇರೇಪಿಸುತ್ತದೆ ಎಂದು ವಾದಿಸಿ, ಅಮೆರಿಕದಾದ್ಯಂತ ಚಳವಳಿ ಆರಂಭಿಸಿದರು. ಚಳವಳಿಯ ಪರಿಣಾಮವಾಗಿ 1920ರ ನಂತರ ಹಾಲಿವುಡ್ ಚಿತ್ರರಂಗದಲ್ಲಿ ಬದಲಾವಣೆ ಬಂದಿತು.

ಭಾರತೀಯ ಚಿತ್ರರಂಗದಲ್ಲಿ ಮಹಿಳೆಯರನ್ನು  ಹೀನಾಯವಾಗಿ ತೋರಿಸುವುದರಿಂದಾಗಿ ಅವರನ್ನು ಲಘುವಾಗಿ ಪರಿಗಣಿಸಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ದೆಹಲಿಯಲ್ಲಿ ರಾತ್ರಿ 9 ಗಂಟೆಯ ವೇಳೆಯಲ್ಲಿ ಚಲಿಸುವ ಬಸ್‌ನಲ್ಲಿ ಅತ್ಯಾಚಾರ ನಡೆದ ಘಟನೆಯನ್ನು ಖಂಡಿಸಿ, ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ನವದೆಹಲಿಯ ರೈಸಿನಾ ಹಿಲ್ ಮುಂದೆ, ಜಂತರ್‌ಮಂತರ್ ಬಳಿ, ನಡೆಯುತ್ತಿರುವ ಯುವಕ ಯುವತಿಯರ ಬೃಹತ್ ಚಳವಳಿ ಒಂದು ಎಚ್ಚರಿಕೆಯ ಗಂಟೆ.

ಸಿನಿಮಾ ಮೂಲಕ ಜನರ ಮನಸ್ಸಿನಲ್ಲಿ  ಅತ್ಯಾಚಾರ ಮನೋಭಾವನೆಯನ್ನು ತುಂಬುತ್ತಿರುವ ಸಿನಿಮಾರಂಗದವರ ಈ ಮನೋಭಾವದ ವಿರುದ್ಧವೂ ಆ ರೀತಿಯ ಒಂದು ಚಳವಳಿ ಆರಂಭಿಸಲು ಇದುವೇ ಸಕಾಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry