ಭಾನುವಾರ, ಮೇ 9, 2021
25 °C

ಅತ್ಯಾಚಾರ: ಮರುಹುಟ್ಟು ಪಡೆದ `ಯಮುನೆ'ಯರು

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

 


ದೆಹಲಿಯಲ್ಲಿ ಈಚೆಗೆ ನಡೆದ ಬಹುಚರ್ಚಿತವಾದ ಆ ಬರ್ಬರ ಮಾನಭಂಗದ ಘಟನೆ ಇಡೀ ರಾಷ್ಟ್ರದ ಜನಮಾನಸವನ್ನು ಬುಡ ಸಮೇತ ಅಲ್ಲಾಡಿಸಿಬಿಟ್ಟಿದೆ. ಆ ಘಟನೆಯ ವಿವರಗಳು ಕಾಳ್ಗಿಚ್ಚಿನಂತೆ ನಾಡಿನುದ್ದಕ್ಕೂ ಹೊರನಾಡುಗಳಲ್ಲೂ ಹಬ್ಬಿ ಬಹುಕೃತ ಮನಸ್ಸುಗಳನ್ನು ಆಳದಲ್ಲಿ ಕಲಕಿ, ಆ ಆಳಗಳಲ್ಲಿ ಅವಿಸಿಕೊಂಡಿದ್ದ ಆದಿಮ ಭೀತಿಗಳನ್ನು ರೋಷಗಳನ್ನು ಅಗ್ನಿಪರ್ವತದಂತೆ ಆಸ್ಫೋಟಿಸಿಬಿಟ್ಟಿದೆ.ಉಗ್ರ ಪ್ರತಿಭಟನೆಗಳ, ಆರೋಪ - ಪ್ರತಿ ಆರೋಪಗಳ ಹೆಬ್ಬಲೆಗಳು ನಮ್ಮೆಲ್ಲರನ್ನು ಆವರಿಸಿದೆ. ನಾವು ಸ್ಥಿರವೆಂದುಕೊಂಡಿದ್ದ `ನಾಗರಿಕ' ಜಗತ್ತಿನ ನೆಲ ನಮ್ಮ ಕಾಲಡಿಯಲ್ಲಿ ಕರಗಿದಂತಾಗಿ ನಾವೆಂದೂ ಊಹಿಸಲಾಗದಂತಹ ಬಿರುಗಾಳಿ ನಮ್ಮನ್ನು ಎತ್ತೆತ್ತಲೋ ತೂರಾಡಿಸುತ್ತಿದೆ. ನಿನ್ನೆಯವರೆಗೆ ಮರ್ಯಾದಸ್ತಿಕೆಯ ಮೌನ ತಳೆದಿದ್ದ ಮಹಿಳೆಯರು, ಮಕ್ಕಳು, ಪುರುಷರು ಆ ಘಟನೆಯ ನೇರ ಶಿಕಾರಿಗಳು ತಾವೇ ಆಗಿರುವಂತೆ ಹತೋಟಿ ಮೀರಿದ ಕ್ರೋಧದಿಂದ, ಆಕ್ರೋಶದ ಮುಖಭಾವದಿಂದ ನಗರಮಧ್ಯಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ, ಮಾಧ್ಯಮಗಳಲ್ಲಿ, ಅಂತರ್ಜಾಲದ ಸೈಟುಗಳಲ್ಲಿ ಪ್ರತಿಭಟಿಸಹತ್ತಿದ್ದಾರೆ. ಲಾಠಿಯೇಟುಗಳನ್ನು, ಗ್ಯಾಸ್ ಷೆಲ್ಲುಗಳನ್ನು, ನೀರಿನಗನ್ನುಗಳನ್ನು ಲೆಕ್ಕಿಸದೆ ಬೀದಿಗಿಳಿಯುತ್ತಾರೆ. ಇವರಾರೂ ಬಾಡಿಗೆಯ ಜನರಲ್ಲ. ಘಟನೆಯ ಬರ್ಬರತೆಯನ್ನು ಪರೋಕ್ಷ ಮಾಧ್ಯಮಗಳ ಮೂಲಕ ಗ್ರಹಿಸಿ ತಮಗೆ, ತಮ್ಮ ಮಕ್ಕಳಿಗೆ, ಅಕ್ಕ-ತಂಗಿಯರಿಗೆ, ಹೆಂಡತಿಯರಿಗೆ, ಪ್ರೇಯಸಿಯರಿಗೆ, `ಬಲಿಯಾದ ಹುಡುಗಿ'ಗಾದ ಗತಿ ಬರಬಹುದೆಂಬ ಆತಂಕದಲ್ಲಿ ಅನಿವಾರ್ಯವೆಂಬಂತೆ, ಅಂತಿಮಾಸ್ತ್ರವೆಂಬಂತೆ ಪ್ರತಿಭಟನೆಯೊಳಗೆ ಧುಮುಕಿದ್ದಾರೆ. ಈ ದುರಂತದ ಘಟನೆ ನಮ್ಮ ಪ್ರಗತಿಯ ಬೆನ್ನಿಗಂಟಿರುವ, ನಮ್ಮ ನಾಗರಿಕ ಆವರಣದ ಹಿಂದೆ ಅವಿತಿರುವ ಬರ್ಬರತೆಯ ಸಂಕೇತವಾಗಿಬಿಟ್ಟಿದೆ. ಪುಣ್ಯಭೂಮಿಯಲ್ಲಿ ನಡೆದ ಕ್ರೂರ ಮಾನಭಂಗದ ಘಟನೆ ಇದೊಂದೇ ಅಲ್ಲ. ಈ ಘಟನೆ ನಡೆದ ತಿಂಗಳ ಹಿಂದೆ ದೆಹಲಿಯ ಪೊಲೀಸು ಠಾಣೆಗಳಲ್ಲಿ ಮೂರು ಮಾನಭಂಗಗಳ ಪ್ರಕರಣಗಳು ದಾಖಲಾದವು. ಆ ಮಾನಭಂಗಗಳ ಬಲಿಗಳಿಗೆ ಏನಾಯಿತು? ಪ್ರತಿಭಟನೆಕಾರರಾಗಲೀ ಮಾಧ್ಯಮದವರಾಗಲೀ ತಲೆಕೆಡಿಸಿಕೊಂಡಿಲ್ಲ. ಅದಾದ ಮೂರು ದಿನಗಳ ನಂತರ ಮಸೂರಿಯಲ್ಲಿ ಹದಿನೇಳರ ಹರಯದ ಹುಡುಗಿಯನ್ನು ಮೂವರು ಧೂರ್ತರು ಮಾನಭಂಗ ಮಾಡಿದ್ದರು. ಆಕೆಗೇನಾಯಿತು? ಕೆಲವೇ ತಿಂಗಳ ಹಿಂದೆ ದೆಹಲಿಯ ಅನಾಥಾಶ್ರಮವೊಂದರಲ್ಲಿ 12ಕ್ಕೂ ಕಡಿಮೆ ವಯಸ್ಸಿನ ಹುಡುಗ ಹುಡುಗಿಯರನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದು ಪತ್ತೆಯಾಯಿತು. ಆ ಘಟನೆಯ ಬಲಿಗಳಿಗೇನಾಯಿತು?ಫಲಾನುಭವಿಗಳಿಗೆ ಯಾವ ಸಜಾ ದೊರಕಿತು? ಮನೋರಮಾ ಎಂಬ ಹುಡುಗಿಯ ಮಾನಭಂಗ ಮತ್ತು ಕೊಲೆಯ ನಂತರ ಇಡೀ ಮಣಿಪುರದ ಜನತೆ ಸಿಡಿದೆದ್ದರು. ಪರಿಣಾಮವೇನಾಯಿತು? ಹೀಗೆ ನಮ್ಮನ್ನು ನಾವು ಕೇಳುತ್ತಾ ಹೋದಾಗ ಮಹಾರಾಷ್ಟ್ರದ ಖೇರ್ಲಂಜಿ ಗ್ರಾಮದಲ್ಲಿ ಒಂದು ಕುಟುಂಬದ ದಲಿತ ಹೆಂಗಸರ ಗ್ಯಾಂಗ್ ರೇಪ್, ಆ ನಂತರ ಅವರೊಂದಿಗೆ ಆ ಕುಟುಂಬದ ಗಂಡಸರು ಮತ್ತು ಮಕ್ಕಳ ಬರ್ಬರ ಕೊಲೆ ಒಂದು ಮನರಂಜನಾ ಪ್ರಸಂಗವೆಂಬಂತೆ ಮೇಲುಜಾತಿಯ ಮೌನ ಪ್ರೇಕ್ಷಕರ ಸಮಕ್ಷಮದಲ್ಲಿ ನಡೆದದ್ದು ನೆನಪಾಗುತ್ತದೆ. ಆ ಘಟನೆಯ ಆರೋಪಿಗಳಿಗೇನಾಯಿತು?ಉತ್ತರಾಖಂಡದ ಚಳವಳಿಯ ಹೆಣ್ಣುಮಕ್ಕಳ ಸಾಮೂಹಿಕ ಮಾನಭಂಗ ಕುಪ್ರಸಿದ್ಧವಾದ ಮೀರಟ್ ಕರಾಳ ಪ್ರಕರಣದಲ್ಲಿ ಕಾನೂನಿನ ಠೇಕೇದಾರರ ಬಲಪ್ರಯೋಗದಿಂದ ನಡೆಯಿತಲ್ಲ, ಆ ಘಟನೆಯ ದುಷ್ಕರ್ಮಿಗಳಿಗೆ ಯಾವ ಸಜೆ ದೊರಕಿತು? ಮಾನಭಂಗದಿಂದ ಜರ್ಝರಿತರಾಗಿ ಆ ಹೆಣ್ಣುಮಕ್ಕಳು ತಮ್ಮ ಗಂಡಂದಿರ, ಮಕ್ಕಳ, ಪರಿವಾರದವರ ಬಳಿಗೆ ಹಿಂತಿರುಗಿದಾಗ ಅವರ ಭವಿಷ್ಯ ಹೇಗಾಯಿತು? ದಿನನಿತ್ಯ ಬೃಹತ್ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ಸಣ್ಣಸಣ್ಣ ಪ್ರಾದೇಶಿಕ ಪತ್ರಿಕೆಗಳಲ್ಲಿ ವರದಿಯಾಗುವ ಎಷ್ಟು ಘಟನೆಗಳಲ್ಲಿ ನೊಂದವರಿಗೇನಾಯಿತು, ನೋಯಿಸಿ ಕೊಂದವರಿಗೇನು ಶಿಕ್ಷೆಯಾಯಿತು? ಆ ಬಗ್ಗೆ ಓದಿ ತಿಳಿದ ನಾವಾಗಲಿ ಅಥವಾ ಆ ಘಟನೆಯ ಬಗ್ಗೆ ಪ್ರಾಮಾಣಿಕ ಕಾಳಜಿಯಿಂದ ಪ್ರತಿಭಟಿಸಿದ ಸಂಘಟನೆಯವರಾಗಲಿ ಮುಂದಿನ ಪರಿಣಾಮದ ಬೆನ್ನುಹತ್ತಿಲ್ಲ. ಕೇಸುಗಳು ಪೋಲೀಸು ಠಾಣೆಗಳಲ್ಲಿ ದಾಖಲಾಗಿ, ಪತ್ರಿಕೆಗಳಲ್ಲಿ ವರದಿಯಾದ ಮಾನಭಂಗದ ಘಟನೆಗಳು ಮಾತ್ರ ನಿಜವಾಗಿ ನಡೆದಿರುವ ಎಲ್ಲ ಮಾನಭಂಗದ ಘಟನೆಗಳಲ್ಲ. ದಾಖಲಾಗದ, ವರದಿಯಾಗದ ಸಹಸ್ರಾರು ಮಾನಭಂಗಗಳ ಮೌನ ಇತಿಹಾಸವೂ ಬಹಳ ದೀರ್ಘವಾದುದು. ಇಂತಹ ಅನ್ಯಾಯಗಳು ಯಾಕೆ ಸಾರ್ವಜನಿಕ ವಲಯಗಳಲ್ಲಿ ಚರ್ಚಿತವಾಗದೆ ದೆಹಲಿಯ ಒಂದು ಘಟನೆ ಇಷ್ಟು ಮಹತ್ವ ಪಡೆಯುತ್ತಿದೆ ಎಂಬ ಸಾಮಯಿಕ ಪ್ರಶ್ನೆಯನ್ನು ಅರುಂಧತಿ ರಾಯ್ ಕೇಳಿದ್ದಾರೆ. ಅಂದ ಮಾತ್ರಕ್ಕೆ ದೆಹಲಿಯ ಕರಾಳ ಘಟನೆಯ ಅಕ್ಷಮ್ಯ ಬರ್ಬರತೆ ಕಡಿಮೆಯೆಂದಾಗಲೀ, ನಡೆಯುತ್ತಿರುವ ಪ್ರತಿಭಟನೆಗಳು ನಿಷ್ಪ್ರಯೋಜಕವೆಂದಾಗಲಿ ಅಲ್ಲ. ದೆಹಲಿಯ ರೇಪ್ ಘಟನೆ ಸ್ತ್ರೀವಿರೋಧಿ ಅಪರಾಧಗಳ ಪ್ರಕ್ಷುಬ್ಧ ಸಾಗರದ ಒಂದು ಕಪ್ಪು ಹನಿ ಮಾತ್ರ. ಅಥವಾ ಮಾನಭಂಗವೆಂಬ ಕ್ರೂರ ರಕ್ಕಸನಿಗೆ ಲಕ್ಷಾಂತರ ಮೋರೆಗಳು, ಲಕ್ಷಾಂತರ ದಾಡೆಗಳು, ಕೋಟ್ಯಂತರ ಕೈಗಳು ಮತ್ತು  ಕೋಟ್ಯಂತರ  ತೀಕ್ಷ್ಣ ನಖಗಳು.ಒಂದು ಗಣತಿಯ ಪ್ರಕಾರ ಮಹಾರಾಷ್ಟ್ರವೊಂದರಲ್ಲೇ ಪ್ರತಿ ವರ್ಷ 3500 ಮಾನಭಂಗಗಳು ವರದಿಯಾಗುತ್ತವೆ. ಇದರಲ್ಲಿ ಮಾನಭಂಗಕ್ಕೊಳಗಾಗುವರು ಬಹುತೇಕ ದಲಿತ ಮಹಿಳೆಯರು. ಮಾನಭಂಗವನ್ನೆಸಗುವವರಲ್ಲಿ ಸಜೆ ಅನುಭವಿಸುವವರ ಸಂಖ್ಯೆ ನಗಣ್ಯ. ಅಧಿಕ ಸಂಖ್ಯೆಯ ದುಷ್ಕರ್ಮಿಗಳು ಕಾನೂನಿನ ಕಿಟಕಿ-ಕಿಂಡಿಗಳಿಂದ ಪರಾರಿಯಾಗಿ ಬಿಡುತ್ತಾರೆ. ಮಾನಭಂಗಕ್ಕೆ ಅಧಿಕಸಂಖ್ಯೆಯಲ್ಲಿ ಬಲಿಯಾಗುವವರು ಆದಿವಾಸಿ ಹೆಂಗಸರು. ಮಾನಭಂಗ ಪ್ರಕರಣಗಳಲ್ಲಿ ಬಹುತೇಕ ಘಟನೆಗಳು ಜರುಗುವುದು ಕುಟುಂಬಗಳೊಳಗೆ.ಮಾನಭಂಗಕಾರರಲ್ಲಿ ಮಹಿಳೆಯರ ಹತ್ತಿರದ ಸಂಬಂಧಿಗಳದೇ ಮೇಲುಗೈ. ಅಥವಾ ರಕ್ತ ಸಂಬಂಧಿಗಳದು. ಬಹಳ ಸಲ ಆಸುಪಾಸಿನ ಜನಗಳದು. ಕುಟುಂಬದೊಳಗಡೆ ಅಥವಾ ಆಸುಪಾಸಿನ್ಲ್ಲಲಿ ನಡೆಯುವ ಬಲಾತ್ಕಾರಗಳು ಬಯಲಿಗೆ ಬರದಂತೆ ಅಯಾ ಪರಿವಾರದವರೇ ಎಚ್ಚರಿಕೆ ವಹಿಸುತ್ತಾರೆ, ಹುಡುಗಿಯ  ಭವಿಷ್ಯದ ದೃಷ್ಟಿಯಿಂದ, ಸುಗಮವಾಗಿ ಮದುವೆಯೆಂಬುದೊಂದು ಆಗಿಬಿಡಲಿ ಎಂಬ ದೃಷ್ಟಿಯಿಂದ, ಮುಂದೆ ಅವಳಿಗೆ ಮಕ್ಕಳಾದರಾಯಿತು, ಎಲ್ಲಾ ಸರಿಹೋಗುತ್ತದೆ ಎಂಬ ಭರವಸೆಯಿಂದ.ದೆಹಲಿಯ ಪ್ರಕರಣ ಘಟಿಸಿದಾಗಲಾಯ್ತು, ಭಾರತ ಪ್ರಗತಿಯ ಹೆದ್ದಾರಿಯಲ್ಲಿ ಶರವೇಗದಿಂದ ಮುನ್ನುಗ್ಗುತ್ತಿದೆಯೆಂದು ಭಾವಿಸಲಾಗುತ್ತಿರುವ ಶುಭ ಸಂದರ್ಭದಲ್ಲಿ, ವರ್ಲ್ಡ್‌ಬ್ಯಾಂಕಿನ ಅಂಕಿ ಅಂಶಗಳ ಆಧಾರದ ಮೇರೆಗೆ ಮುಂದುವರಿದ ರಾಷ್ಟ್ರಗಳೂ ಭಾರತ ಬಂಡವಾಳಹೂಡಿಕೆಗೆ ಮತ್ತು ಮಾರುಕಟ್ಟೆಯ ವಿಕಾಸಕ್ಕೆ ಆದರ್ಶ ರಾಷ್ಟ್ರವೆಂದು ನಂಬಿರುವ ಪ್ರಸಂಗದಲ್ಲಿ ಇಂಥಾ ಘಟನೆಗಳು ಭಾರತಕ್ಕೆ ಕಳಂಕಪ್ರಾಯವಾಗುತ್ತದಲ್ಲ ಎಂದು ಭಾರತದ ಮತ್ತು ಹೊರನಾಡುಗಳ ಉದ್ಯೋಗಸಾರ್ವಭೌಮರಿಗೆ ಚಿಂತೆ.  ಮಾನಭಂಗಕಾರರರಿಗೆ ಗಲ್ಲು ಶಿಕ್ಷೆ ಇನ್ನೂ ಏಕಾಗಿಲ್ಲ ಎಂದು ಇನ್ನು ಕೆಲವರ ಚಿಂತೆ. ಇಂತಹ ಘಟನಾವಳಿಗಳ ಪುನರಾವರ್ತನೆಯನ್ನು ಹೇಗೆ ತಡೆಯುವುದು ಎಂಬುದು ಕೆಲವರ ಚಿಂತೆ.  ಈ ಘಟನೆ ಹೊತ್ತಿಸಿರುವ ಬೆಂಕಿಯಲ್ಲಿ ತಮ್ಮ ರಾಜಕೀಯ ಲಾಭದ ರೊಟ್ಟಿಯನ್ನು ಹೇಗೆ ಸುಟ್ಟುಕೊಳ್ಳಬಹುದು, ತಮ್ಮ ಬೇಳೆಕಾಳನ್ನು ಹೇಗೆ ಬೇಯಿಸಿಕೊಳ್ಳುವುದು ಎಂದು ಇತರ ಕೆಲವರ ಚಿಂತೆ.  ಹೀಗೆ ಇಡೀ ದುರ್ಘಟನೆಯನ್ನು ಖಂಡಿಸುತ್ತಿರುವವರಲ್ಲಿ ಎಲ್ಲರಿಗೂ ತಮ್ಮದೇ ಆದ ಕಾರಣಗಳಿವೆ, ಪ್ರೇರಣೆಗಳಿವೆ, ಲೆಕ್ಕಾಚಾರಗಳಿವೆ.ಇನ್ನು ಕೆಲವು ಮಹನೀಯರು (ಮತ್ತು ಮಹಿಳೆಯರೂ!) ಮಹಾನ್ ಜ್ಞಾನಿಗಳಂತೆ ಪೋಸು ಕೊಡುತ್ತಾ ಬಲಿಯಾದ ಹುಡುಗಿಯ ತಲೆ ಮೇಲೆ ತಪ್ಪು ಹೊರಿಸುತ್ತಿರುವುದು ಇಡೀ ಸಂದರ್ಭದ ಅತ್ಯಂತ ಕ್ರೂರ ವ್ಯಂಗ್ಯ. ಅವರ ಪ್ರಕಾರ, ಆ ಹುಡುಗಿ ಹುಷಾರಾಗಿರಬೇಕಾಗಿತ್ತು. ಅಷ್ಟು ರಾತ್ರಿಯಲ್ಲಿ ಮನೆ ಬಿಟ್ಟು ಕ್ರೂರ ಹೊರಜಗತ್ತಿಗೆ ಹೋಗಬಾರದಾಗಿತ್ತು. ಗಂಡಸರಲ್ಲಿ ಕಾಮೋದ್ರೇಕವುಂಟಾಗದ ಹಾಗೆ ಮೈ ತುಂಬ ಬಟ್ಟೆ ಹಾಕಿಕೊಳ್ಳಬೇಕಾಗಿತ್ತು. ಖಾಸಗಿ ಬಸ್ಸನ್ನೇರಬಾರದಾಗಿತ್ತು. ದೆಹಲಿಯ ಒಬ್ಬ ಮಹಿಳಾ ವಿಜ್ಞಾನಿ ಇನ್ನೂ ಮುಂದೆ ಹೋಗಿ ಅಪ್ಪಣೆ ಕೊಡಿಸಿದರು: `ಆರು ಜನ ಗಂಡಸರು ಮೇಲೆರಗಿ ಬಂದಾಗ ಆ ಹುಡುಗಿ ಪರಿಸ್ಥಿತಿಯನ್ನು ಕಿಲಾಡಿತನದಿಂದ ನಿಭಾಯಿಸಬೇಕಾಗಿತ್ತು; ಅವರ ಜೊತೆ ತಾನೇ ಸಹಕರಿಸಿಬಿಟ್ಟಿದ್ದರೆ ಆ ಮಹಾನುಭಾವರು ಕಡೇ ಪಕ್ಷ ಅವಳ ಕರುಳುಗಳನ್ನು ಜಖಂ ಮಾಡುತ್ತಿರಲಿಲ್ಲ'. ಇನ್ನೊಬ್ಬರು ಘೋಷಿಸಿದರು: `ಪ್ರತಿಭಟನೆ ಮಾಡುವ ಹುಡುಗಿಯರು, ಡಿಸ್ಕೊ ಡಾನ್ಸ್‌ಗೆ ಹೋಗುತ್ತಾರೆ, ಮೇಕ್‌ಅಪ್ ಮಾಡಿಕೊಳ್ಳುತ್ತಾರೆ. ಆದ್ದರಿಂದ ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲ'.ದುರಂತನಾಟಕವೊಂದರ ಯಃಕಶ್ಚಿತ್ ವಿವಿಧ ವಿದೂಷಕರಂತೆ ಕಾಣುವ ಇಂಥಾ ಜನರ ಮಾತನ್ನು ಕೇಳಿ ನಗುವುದೂ ಕಷ್ಟವಾಗುತ್ತಿದೆ. ಯಾಕೆಂದರೆ ಈ ಪ್ರಕರಣ ಮತ್ತು ಅದಕ್ಕೆ ಬಂದಿರುವ ಉಗ್ರ ಪ್ರತಿಕ್ರಿಯೆಗಳು (ಅದೇ ರೀತಿ ಹಾರಿಕೆಯ ಹೇಳಿಕೆಗಳು) ನಾವು ಜಾಣಗುರುಡುತನದಿಂದ ಮತ್ತೆ ಮತ್ತೆ ಮರವೆಯೊಳಗೆ ತಳ್ಳುವ ನಮ್ಮ ಸಮಾಜದ ಲೈಂಗಿಕ ರಾಜಕಾರಣದ ಭಯಾನಕ, ಕರಾಳ ಮುಖ ನಮ್ಮೆಲ್ಲರಿಗೂ ಕಾಣುವಂತೆ ಮಾಡಿದೆ. ಆ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಇಂಥಾ ಘಟನೆಗಳ ಬಗ್ಗೆ ಅರಿವನ್ನು ಮೂಡಿಸುತ್ತಿದೆ. ತಪ್ಪಿತಸ್ಥರಿಗೆ ಕಾನೂನು ರೀತ್ಯಾ ಸಜಾ ಆಗಬೇಕೆಂಬುದು ಅಗತ್ಯ. ಆದರೆ ಅವರೆಲ್ಲರನ್ನೂ ಗಲ್ಲಿಗೇರಿಸಿದ ಮಾತ್ರಕ್ಕೇ ಮಾನಭಂಗಗಳ ಪುನರಾವರ್ತನೆ ನಿಲ್ಲುವುದಿಲ್ಲ. 1978ರಲ್ಲಿ ಮಾನಭಂಗ ಮತ್ತು ಕೊಲೆಗಳನ್ನೆಸಗಿ ಸಿಕ್ಕಿ ಬಿದ್ದ ಬಿಲ್ಲಾ ಮತ್ತು ರಂಗಾ ಎಂಬ ಗೂಂಡಾಗಳಿಗೆ 1984ರಲ್ಲಿ ಮೃತ್ಯುದಂಡವನ್ನು ಜಾರಿಗೊಳಿಸಲಾಯಿತು. ಅಂದ ಮಾತ್ರಕ್ಕೇ ಎಳೆಯರ ಕೊಲೆ ಮತ್ತು ಮಾನಭಂಗಗಳು ನಿಲ್ಲಲಿಲ್ಲ. ನಮ್ಮ ಮುಂದಿರುವ ಮುಖ್ಯ ಪ್ರಶ್ನೆಗಳು ಇವು: ಹೆಂಗಸರ ಮಾನಭಂಗಗಳನ್ನು ಇನ್ನೆಂದೂ ಜರುಗದಂತೆ ತಡೆಯುವುದು ಹೇಗೆ? ಪೊಲೀಸು ಪಡೆಯ ಸಚೇತನೀಕರಣ ಮತ್ತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿಕೆಯ ಎರಡು ಪರಿಹಾರಗಳನ್ನು ಅಮೆರಿಕಾದಲ್ಲಿ ಪ್ರಯತ್ನಿಸಲಾಯಿತು. ಇದರ ಪರಿಣಾಮಗಳು  ತಜ್ಞರ ಅಧ್ಯಯನದ ಪ್ರಕಾರ, ಪೋಲಿಸರ ಸಚೇತನೀಕರಣದಿಂದ ಅಂಥಾ ಪ್ರಯೋಜನವಾಗಲಿಲ್ಲ. ಬದಲಾಗಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕ್ರಮ ಬಹುಮಟ್ಟಿಗೆ ನಿರೀಕ್ಷಿತ ಸುಧಾರಣೆ ತಂದಿತು. ಆದ್ದರಿಂದ ಸರ್ಕಾರ ಮತ್ತು ಜನತೆ ನಮ್ಮ ದೇಶದಲ್ಲೂ ಕೂಡ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಮತ್ತು ತಿಳಿವಳಿಕೆ ನೀಡಿಕೆಯ ಜವಾಬ್ದಾರಿಯನ್ನು ಬಹಳ ಗಂಭೀರವಾಗಿ ದೀರ್ಘಕಾಲೀನ ಯೋಜನೆಯಾಗಿ ತೆಗೆದುಕೊಳ್ಳಬೇಕು. ದೆಹಲಿ ಘಟನೆ ಉಂಟುಮಾಡಿರುವ ಚರ್ಚೆಗಳ ಕಾವು ಈ ಪ್ರಯತ್ನದ ಪ್ರಾರಂಭಕ್ಕೆ ಭದ್ರ ಬುನಾದಿ ಹಾಕಿದೆ. ಈಗ ಈ ಪ್ರಕ್ರಿಯೆಗೆ ಚಾಲನೆ ಕೊಡದಿದ್ದರೆ ಹಿಂದಿನ ಅನೇಕ ಈ ರೀತಿಯ ಪ್ರಕರಣಗಳ ವಿಷಯದಲ್ಲಿ ನಡೆದಂತೆ ಸಾರ್ವಜನಿಕರ ಪ್ರತಿಭಟನೆ ಮತ್ತು ಪರಿಹಾರದ ಬೇಡಿಕೆ ಆರಂಭಶೂರತ್ವದಲ್ಲಿ ಪರ್ಯವಸಾನವಾಗುವ ಅಪಾಯವಿದೆ.ಅದೇ ಅಧ್ಯಯನ ಮುಂದುವರಿದು ಹೋಗಿ ಹೇಳುತ್ತದೆ: ತಿಳಿವಳಿಕೆಯನ್ನು ಹೆಚ್ಚಿಸುವುದಕ್ಕಿಂತಾ ಮುಖ್ಯವಾದದ್ದು,  ಸಾಮಾಜಿಕ ನಡವಳಿಕೆಯಲ್ಲಿ ಮತ್ತು ಚೇತನದಲ್ಲಿ ಅತಿಸೂಕ್ಷ್ಮವಾಗಿ ಹಾಸುಹೊಕ್ಕಾಗಿರುವ ಗಂಡಾಳಿಕೆಯ ಮೌಲ್ಯಗಳ ಮೂಲೋತ್ಪಾಟನೆ ಮಾಡಬೇಕಾದುದು. ಇದು ದೀರ್ಘ ಕಾಲೀನ ಪ್ರಕ್ರಿಯೆ ಮತ್ತು ಅಂತಿಮ ಸಮಾಧಾನ. ದೆಹಲಿಯ ಹುಡುಗಿಯ ಮಾನಭಂಗದ ವಿರುದ್ಧ ಪ್ರತಿಭಟನಕಾರರಲ್ಲಿ ಕೆಲವರು ಪೋಲೀಸರನ್ನು `ನೀವೆಲ್ಲಾ ಬಳೆ ತೊಟ್ಟುಕೊಳ್ಳಿ ಹೋಗಿ' ಎಂದು ಹಂಗಿಸುತ್ತಿದ್ದರಂತೆ. ಇಂಥಾ ಬೈಗುಳಗಳೇ ಮೂಲತಃ ಸ್ತ್ರೀವಿರೋಧಿ ಮಾನಸಿಕತೆಯಿಂದ ಬಂದುದೆಂಬುದು ಅವರಿಗೆ ಹೊಳೆಯಲಿಲ್ಲ. ಯಾಕೆಂದರೆ ಗಂಡಿನ ಪಾರಮ್ಯ ನಮ್ಮ ಭಾಷೆ -ಸಂಸ್ಕೃತಿಗಳ ಅಂತರಾಳದಲ್ಲಿ ಬೇರೂರಿದೆ. ಹೆಂಗಸರನ್ನು  `ಚೀಸು ಬಡೀ ಹೈ ಮಸ್ತ್ ಮಸ್ತ್ ` ಆಗಿ ಚಿತ್ರಿಸುವ ಸಿನಿಮಾಗಳೂ, ಸರುಕುಗಳ ವಿತರಣೆ ಸಾಧನವಾಗಿ ನೋಡುವ ಜಾಹಿರಾತುಗಳೂ ಬಲಾತ್ಕಾರದ ಬುನಾದಿಗಳನ್ನು ನಿರ್ಮಿಸುತ್ತಿರುತ್ತವೆ.ಮಹಿಳೆಯರ ಬಲಾತ್ಕಾರದ ಘಟನೆಗಳನ್ನು ಪ್ರತ್ಯೇಕ ಸಮಸ್ಯೆಯಾಗಿ ನೋಡುವ ಅಗತ್ಯವಿದೆಯಾದರೂ ಅದರ ಜೊತೆಗೆ ತಳುಕುಹಾಕಿಕೊಂಡ ಇತರ ಶೋಷಣಾ ನೆಲೆಗಳನ್ನು ಮರೆಯುವಂತಿಲ್ಲ. ವರ್ಗ, ಜಾತಿ, ಜನಾಂಗಮೂಲವಾದ ಶೋಷಣಾನೆಲೆಗಳು ಬಲಾತ್ಕಾರಕ್ಕೆ ಪೋಷಕಗಳಾಗಿರುವುದು ಲಭ್ಯವಿರುವ ಅಂಕಿ-ಅಂಶಗಳಿಂದ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದ್ದರಿಂದ ಈ ಪೀಡೆಗಳ ನಿವಾರಣೆಯೂ ಬಲಾತ್ಕಾರ ನಿವಾರಣೆಯ ಬಹುಮುಖ್ಯ ಅಂಗ. ಕಾನೂನಿನ ಬಲೆಯಿಂದ ಬಚಾವಾದ ಬಲಾತ್ಕಾರಕಾರರ ಜೊತೆಗೆ ಅಮೆರಿಕಾದಲ್ಲಿ ನಡೆಸಿದ ವ್ಯಾಪಕ ಸಂದರ್ಶನದಲ್ಲಿ ಆ ರುಸ್ತುಮರೆಲ್ಲಾ ಹೆಂಗಸಿಗೆ ಎಷ್ಟು ಹಿಂಸೆಯಾಗುತ್ತಿತ್ತೋ ಅಷ್ಟು ಮಜಾ ಸಿಗುತ್ತಿತ್ತೆಂದು ಕೊಚ್ಚಿಕೊಂಡಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಶೋಷಣೆಗಾರರಿಗೆ ದೊರಕುವ ಮಜಾ ಕೂಡಾ ಇದೇ ನಮೂನೆಯದು.ನಮ್ಮ ಮುಂದಿನ ಇನ್ನೊಂದು ಪ್ರಶ್ನೆ ಅತ್ಯಂತ ಮಾನವೀಯವಾದುದು: ಅದು ಬಲಾತ್ಕಾರಪೀಡಿತ ಮಹಿಳೆಯರ ಭವಿಷ್ಯವನ್ನು ಕುರಿತದ್ದು. ಒಮ್ಮೆ ಬಲತ್ಕಾರಕ್ಕೊಳಗಾದ ಹೆಣ್ಣು ಆ ನಂತರ ಜೀವಂತ ಹೆಣವಾಗಿ ಬದುಕಬೇಕಾಗುತ್ತದಲ್ಲಾ ಎಂದು ಒಬ್ಬ ಪ್ರಸಿದ್ಧ ಮಹಿಳಾರಾಜಕಾರಣಿ ಕಳವಳ ವ್ಯಕ್ತಪಡಿಸಿದ್ದಾರೆ. ಇಂಥಹ `ಅಯ್ಯೋಪಾಪ' ಭಾವನೆ ಮಾನಭಂಗಪೀಡಿತರ ವಿಷಯದಲ್ಲಿ ಅತ್ಯಂತ ನೇತ್ಯಾತ್ಮಕ ಮತ್ತು ಕ್ರೂರ. ಮಾನಭಂಗದಂಥ ಹಿಂಸ್ರ ಅನುಭವವನ್ನು ಹಾದು ಬಂದ ಹೆಂಗಸರು ಎಲ್ಲರಂತೆ ತಲೆಯೆತ್ತಿ ಬದುಕುವಂಥ ಪುನರ್ವಸತೀಕರಣ ಕ್ರಮಗಳೂ, ಮನೋಧರ್ಮಗಳೂ ಕುಟುಂಬಗಳಲ್ಲಿ ಮತ್ತು ಸಮಾಜದಲ್ಲಿ ನಿರ್ಮಾಣವಾಗಬೇಕು.ಉತ್ತರಾಖಂಡದ ಪರಿಸರಪರ ಆಂದೋಲನಾನಿರತ ಮಹಿಳೆಯರು ತಮ್ಮ ಹಿಮಾಲಯದ ಸೀಮೆಗಳಿಂದ ಗುಂಪುಗುಂಪಾಗಿ ಹೊರಟು ತಮ್ಮ ಪ್ರತಿಭಟನೆಯ ಗಮ್ಯಸ್ಥಾನವಾದ ದೆಹಲಿಗೆ ಕಾಲುನಡಿಗೆಯಲ್ಲಿ ಹೋಗುವ ಹಾದಿಯಲ್ಲಿ ಮೀರಟ್‌ನ ಬಳಿಯ ಹೊಲಗದ್ದೆಗಳ ಆಸುಪಾಸಿನಲ್ಲಿ ರಾತ್ರಿ ಹೊತ್ತು ಬಿಡಾರ ಹೂಡುವರು. ಅವರ ಮೇಲೆ ರಾತ್ರೋರಾತ್ರಿ ಗುಂಪಾಗಿ ಕಾನೂನಿನ ಠೇಕೇದಾರರು ಎರಗಿ ಸಾಮೂಹಿಕ ಮಾನಭಂಗ ಮಾಡಿದರು. ಆ ಬಲಾತ್ಕಾರ ಮಾಡಿದವರು ಕಾನೂನಿನ ಹಿಡಿತದಿಂದ ಬಚಾವಾಗಿಬಿಟ್ಟರು. ಆದರೆ ಆ ಸಾಮೂಹಿಕ ಬಲಾತ್ಕಾರಕ್ಕೊಳಗಾದ ಮಹಿಳೆಯರ ಮುಂದಿನ ಜೀವನವೇನಾಯಿತು? ಇದು ನನ್ನ ಆತ್ಮೀಯ ಮಿತ್ರರೂ ಉತ್ತರಾಖಂಡದ  ಸಾಮಾಜಿಕ ಆಂದೋಲನದ ಸಕ್ರಿಯ ಕಾರ್ಯಕರ್ತರೂ ಆದ ತ್ರಿಪನ್ ಸಿಂಗ್  ಚೌಹಾಣ್ ಅವರ  `ಯಮುನಾ' ಎಂಬ ಹಿಂದಿ ಕಾದಂಬರಿಯ ಹುರುಳು. ಆಂದೋಲನದ ನೆನಪು ಗಾಢವಾಗಿರುವ ಹಿಮಾಲಯದ ಗಡವಾಲ್ ಮತ್ತು ಕುಮಾವೊ ಪ್ರದೇಶಗಳಲ್ಲಿ  ಈ ಕಾದಂಬರಿ ಮನೆಮಾತಾಗಿದೆ.

ಕಥಾನಾಯಕಿ ಯಮುನಾ ಸಮಕಾಲೀನ ಇತಿಹಾಸದ ಅತ್ಯಂತ ಘೋರ ಸಾಮೂಹಿಕ ಮಾನಭಂಗ ಘಟಿಸಿದ ಆ ರಾತ್ರಿ ದುರಾಚಾರಕ್ಕೆ ಬಲಿಯಾಗಿ ತನ್ನೂರಿಗೆ ಹಿಂತಿರುಗುತ್ತಾಳೆ. ಆಂದೋಲನಕ್ಕೆ ಹೊರಟಾಗ ತನ್ನ ತಿಂಗಳ ಮಗುವನ್ನು ಗಂಡನ ಜೊತೆ ಬಿಟ್ಟು ಬಂದಿರುತ್ತಾಳೆ. ಆದರೆ ಈಗ ಗಂಡನ, ಮಗನ ಮುಖ ನೋಡುವ ಧೈರ್ಯ ಅವಳಿಗಿಲ್ಲ.ಮಗುವಿಲ್ಲದ ಬಾಣಂತಿತನಕ್ಕಾಗಿ ತಾಯ ಮನೆ ಸೇರುತ್ತಾಳೆ. ತಾಯಿ ಮಗಳು ಇಬ್ಬರಿಗೂ ಒಬ್ಬರೊಬ್ಬರ ಮುಖ ನೋಡುವುದೂ ಕಷ್ಟವಾಗಿರುತ್ತದೆ. ಜೊತೆಗೆ ತನ್ನ ಎದೆಯಲ್ಲಿನ  ಹಾಲನ್ನು ಮಗುವಿಗೆ ಕುಡಿಸಲವಕಾಶವಿಲ್ಲದೆ ಅದು ಒತ್ತತೊಡಗುತ್ತದೆ. ಅದನ್ನು ಕಳೆದುಕೊಳ್ಳುವ ಸಲುವಾಗಿ ಕಾಡಿಗೆ ಹೋಗಿ ಕಾಡಿನ ಗಿಡಮರಗಳೂ ತನ್ನ ಶಿಶುಗಳೆಂದು ಬಗೆದು ಅವುಗಳ ಬುಡಗಳಿಗೆ ತನ್ನೆದೆ ಹಾಲನ್ನು ಹಿಂಡತೊಡಗುತ್ತಾಳೆ. ತಾನು ಕೇವಲ ಒಬ್ಬ ಮಾನಭಂಗವಾದ ಹೆಣ್ಣಲ್ಲ, ಇಡೀ ಕಾಡಿನ ತಾಯಿ ಎಂಬ ಭಾವನೆ ಬರತೊಡಗಿ ಧೈರ್ಯ ತಾಳುತ್ತಾಳೆ. ತನ್ನನ್ನು  ಗಾಢವಾಗಿ ಪ್ರೀತಿಸುವ ಗಂಡನ ಮನೆಗೆ ಹಿಂತಿರುಗುತ್ತಾಳೆ.ಎಷ್ಟೇ ಪರಸ್ಪರ ಪ್ರೀತಿ ಇದ್ದರೂ ಅವರಿಬ್ಬರೂ ಸ್ವಸ್ಥ ದಾಂಪತ್ಯ ಜೀವನಕ್ಕೆ ಮರುಳುವಲ್ಲಿ  ಪಟ್ಟ ಪಡಿಪಾಟಲುಗಳನ್ನು ಕಾದಂಬರಿ ಹೃದ್ಯವಾಗಿ ಚಿತ್ರಿಸುತ್ತದೆ. ಈ ದೀರ್ಘ ಪ್ರಯತ್ನದ ಫಲವಾಗಿ ಅವರಿಬ್ಬರ ದಾಂಪತ್ಯ ಪ್ರೇಮ ಮೊದಲಿಗಿಂತಲೂ ಗಾಢವಾಗುತ್ತದೆ. ತ್ರಿಪನ್ ಹೇಳಿದ ಪ್ರಕಾರ ಆ ಯಮುನಾ ಕೇವಲ ಕಾದಂಬರಿಯ ಪಾತ್ರವಲ್ಲ. ಒಬ್ಬ ನಿಜ ವ್ಯಕ್ತಿ. ಉತ್ತರಾಖಂಡದ ಉದ್ದಗಲ ಅಂಥಹ ಎಷ್ಟೋ ಯಮುನಾರಿದ್ದಾರೆ. ತಮ್ಮ ಸೋಲೊಪ್ಪದ ಧೈರ್ಯದಿಂದ, ಮನೆಯವರ ಬೆಂಬಲದಿಂದ ಅಂಥವರಲ್ಲಿ ಬಹು ಮಂದಿ ಆ ದುಃಸ್ವಪ್ನದಿಂದ ಪಾರಾಗಿ ಕೌಟುಂಬಿಕ ಜೀವನಕ್ಕೆ ವಾಪಸಾಗಿರುವುದಲ್ಲದೆ ಮತ್ತೆ ಆಂದೋಲನದ ಕಣಕ್ಕೆ ಧುಮುಕಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.