ಬುಧವಾರ, ಡಿಸೆಂಬರ್ 11, 2019
24 °C

ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಗೊಳಿಸಬಹುದೇ?

Published:
Updated:
ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಗೊಳಿಸಬಹುದೇ?

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವುದರೊಂದಿಗೆ ಚುನಾವಣೆ ಪ್ರಕ್ರಿಯೆ ಕಾವು ಪಡೆಯಲಾರಂಭಿಸಿದೆ. ಪ್ರಮುಖ ಪಕ್ಷಗಳಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಮಹಿಳಾ ದೃಷ್ಟಿಕೋನದಿಂದ ನೋಡಿದರೆ ನಿರಾಸೆಯಾಗುವಂತಹದ್ದು. ಕಳಂಕಿತರಿಗೂ ಈ ಪಟ್ಟಿಗಳಲ್ಲಿ ಸ್ಥಾನ ಸಿಗುತ್ತದೆ. ಆದರೆ ಮತದಾರರಲ್ಲಿ ಸುಮಾರು ಅರ್ಧದಷ್ಟಿರುವ ಮಹಿಳೆಯರ ಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ಟಿಕೆಟ್ ಸಿಗುವುದಿಲ್ಲ. ಅವಳ ದನಿ ಶಾಸಕಾಂಗದಲ್ಲಿ ಗಟ್ಟಿಯಾಗಿ ಕೇಳುವುದು ಎಂದಿಗೆ ಎಂಬುದು ಹಳಹಳಿಕೆ ಮಾತ್ರವಾಗಿ ಪರಿಣಮಿಸುತ್ತಿದೆಯೇ? ಪದೇ ಪದೇ ಈ ವಿಚಾರಗಳ ಬಗ್ಗೆ  ಒತ್ತಾಯಿಸುವ ಮಹಿಳೆಯರ ದನಿಗೆ ಏಕತಾನತೆ ಪ್ರಾಪ್ತವಾಗುತ್ತಿದೆಯೇ? ನೀತಿಗಳನ್ನು ರೂಪಿಸುವ, ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರ ಸ್ಥಾನಗಳಲ್ಲಿ ಮಹಿಳೆಯ ಪ್ರಾತಿನಿಧ್ಯ ಕೊರತೆ ಮುಂದುವರಿಯುತ್ತಿರುವಂತೆಯೇ ಮಹಿಳೆಯನ್ನು ಸಮಾನ ನೆಲೆಯಲ್ಲಿ ಸಹಜೀವಿಗಳಾಗಿ ಪರಿಗಣಿಸದ ನಮ್ಮ ಸಾಮಾಜಿಕ ‘ವಿಸಂಸ್ಕೃತಿ’ ಬೇರೆಬೇರೆ ನೆಲೆಗಳಲ್ಲಿ ಅನಾವರಣಗೊಳ್ಳುತ್ತಲೇ ಇದೆ.

ಮಹಿಳೆಯನ್ನು ನಿಯಂತ್ರಿಸಲು, ಬಗ್ಗುಬಡಿಯಲು ಅಥವಾ ಬೇರೆ ಇನ್ನಾವುದೋ ರಾಜಕಾರಣಕ್ಕಾಗಿ ಅತ್ಯಾಚಾರದಂತಹ ಹೀನ ಅಪರಾಧಗಳು ಎಗ್ಗಿಲ್ಲದೆ ನಡೆಯುತ್ತಿರುವುದಕ್ಕೆ ಏನು ವಿವರಣೆ ನೀಡುತ್ತೀರಿ? ಅತ್ಯಾಚಾರ ಪ್ರಕರಣಗಳ ಬಗ್ಗೆ  ಅಧಿಕಾರಸ್ಥರ  ಪ್ರತಿಸ್ಪಂದನ ಯಾವ ಬಗೆಯದು ಎಂಬುದನ್ನು ಹಿಂದಿನ ಅನೇಕ ಪ್ರಕರಣಗಳಲ್ಲಿ ನೋಡಿದ್ದೇವೆ. ಈಗ ಮತ್ತೆ ಉತ್ತರ ಪ್ರದೇಶದ ಉನ್ನಾವ್ ಹಾಗೂ ಜಮ್ಮುವಿನ ಕಠುವಾ ಅತ್ಯಾಚಾರ ಪ್ರಕರಣಗಳಲ್ಲಿ ನಮ್ಮ ರಾಜಕೀಯ ನೇತಾರರ ಒಳಗೊಳ್ಳುವಿಕೆ ಹಾಗೂ ಪ್ರತಿಸ್ಪಂದನದ ರೀತಿಗೆ ಸಾಕ್ಷಿಯಾಗಿದ್ದೇವೆ. ಉನ್ನಾವ್‍ನಲ್ಲಂತೂ ಬಿಜೆಪಿ ಶಾಸಕನೇ ಆರೋಪಿ. ಕಠುವಾದಲ್ಲಿ ಅತ್ಯಾಚಾರ ಆರೋಪಿಗಳ ಪರ ಬೆಂಬಲ ವ್ಯಕ್ತಪಡಿಸಿದ್ದ ಇಬ್ಬರು ಬಿಜೆಪಿ ಸಚಿವರು ರಾಜೀನಾಮೆ ನೀಡಬೇಕಾದ ಸ್ಥಿತಿ ಜನರ ಪ್ರತಿಭಟನೆಗಳಿಂದ ಸೃಷ್ಟಿಯಾಯಿತು. ಕಠುವಾ ಬಾಲಕಿಯ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದಿದ್ದು ಜನವರಿ ತಿಂಗಳಲ್ಲಿ. ಈ ಪ್ರಕರಣದ ಆರೋಪಪಟ್ಟಿಯಲ್ಲಿರುವ ವಿವರಗಳನ್ನು ಓದಿದ ಯಾವುದೇ ಮನುಷ್ಯರ ರಕ್ತ ಕುದಿಯದಿರಲು ಸಾಧ್ಯವಿಲ್ಲ.     

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಈಗಲೂ ಪ್ರತಿಭಟನಾ ಸರಣಿಗಳು ಮುಂದುವರಿದಿವೆ. ನ್ಯಾಯಕ್ಕಾಗಿ ಒತ್ತಾಯಿಸುವ ಬರಹ ಇರುವ ಹಾಳೆಗಳನ್ನು ಹಿಡಿದುಕೊಂಡು ಸ್ವಯಂಪ್ರೇರಿತವಾಗಿ ಸಣ್ಣ ಸಣ್ಣ ಗುಂಪುಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಗರಿಕರು ಆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬರ್ಬರ ಅತ್ಯಾಚಾರ ಹಾಗೂ ನಂತರ ಭೀಕರ ರೀತಿಯಲ್ಲಿ ಕೊಲೆಯಾದ ಕಠುವಾದ ಬಾಲೆಯ ಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾದದ್ದು ಜನರಲ್ಲಿ ಉಕ್ಕಿಸಿದ ಸಹಾನುಭೂತಿ ಹಾಗೂ ಆಕ್ರೋಶದ ಅಲೆ ದೊಡ್ಡದು. 'ನನ್ನ ಮಗಳ ಹೆಸರಿನ ಜೊತೆ ಕಠುವಾ ಸಂತ್ರಸ್ತೆಯ ಹೆಸರನ್ನೂ ಸೇರಿಸುತ್ತೇನೆ’ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದ್ದೂ ವರದಿಯಾಗಿದೆ. ಇದೇ ಸಂದರ್ಭದಲ್ಲಿ ಕಠುವಾದ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಮಾಧ್ಯಮ ಸಂಸ್ಥೆಗಳಿಗೆ  ಕಳೆದ ವಾರ ದೆಹಲಿ ಹೈಕೋರ್ಟ್ ನೋಟಿಸ್‍ಗಳನ್ನು ನೀಡಿದ ವಿಚಾರವೂ ವರದಿಯಾಗಿರುವುದು ಕಾಕತಾಳೀಯ. ಸಂತ್ರಸ್ತೆಯ ಹೆಸರು ಅಥವಾ ಫೋಟೊ ಮೂಲಕ ಆಕೆಯ ಗುರುತನ್ನು ಬಹಿರಂಗಪಡಿಸುವುದನ್ನು ಕೋರ್ಟ್ ನಿರ್ಬಂಧಿಸಿದೆ. ಮಾಧ್ಯಮಗಳ ವರದಿಗಳು ಸಂತ್ರಸ್ತೆಯ ಖಾಸಗಿತನಕ್ಕೆ ಅಗೌರವ ತೋರಿದ್ದು ಮುಂದೆ ಹೀಗೆ ಗುರುತು ಬಹಿರಂಗಗೊಳಿಸಬಾರದೆಂದೂ ನಿರ್ದೇಶಿಸಿದೆ. ಆದರೆ ಈ ನಿರ್ದೇಶನ ಎಷ್ಟು ಸೂಕ್ತ? ಎಂಬುದು ಈಗ ಮತ್ತೊಂದು ಚರ್ಚೆಯ ರೂಪ ಪಡೆದುಕೊಂಡಿದೆ.

ನಿಜ. ಕಾನೂನಿನ ಪ್ರಕಾರ, ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸುವುದು ಅಪರಾಧ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 228 ಎ ಪ್ರಕಾರ, ಅಪರಾಧಕ್ಕೆ ಎರಡು ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಬಹುದು. ದಂಡ ವಿಧಿಸಲೂ ಅವಕಾಶವಿದೆ. ಸಂತ್ರಸ್ತೆಯ ಪುನರ್ವಸತಿ ಇಲ್ಲಿ ಮುಖ್ಯ ಕಾಳಜಿಯಾಗುತ್ತದೆ. ಅತ್ಯಾಚಾರ ಎಂಬುದು ಹೆಣ್ಣಿನ ಘನತೆಯ ಮೇಲಿನ ಆಕ್ರಮಣ. ತನ್ನದಾದ ದೇಹದ ಮೇಲಿನ ಅತಿಕ್ರಮಣದ ಅವಮಾನದಿಂದ ನರಳುವ ಸಂತ್ರಸ್ತೆಯ ಮಾನಸಿಕ ಸ್ಥಿತಿಯನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಇದಕ್ಕೆ ಕಾರಣರಾದ ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಶಿಕ್ಷಿಸುವುದು ಪ್ರಭುತ್ವದ ಕರ್ತವ್ಯ. ಜೊತೆಗೆ, ಸಂತ್ರಸ್ತೆಯನ್ನು ಆಕೆಯ ಮೊದಲ ಸ್ಥಿತಿಗೆ ತರುವುದೂ ಇಲ್ಲಿ ಮುಖ್ಯ. ಇಂತಹ ಸಂದರ್ಭದಲ್ಲಿ ಆಕೆಯ ಗುರುತು ಸಾರ್ವಜನಿಕಗೊಳ್ಳದಿದ್ದಲ್ಲಿ ನೋವು, ಅವಮಾನಗಳಿಂದ ಹೊರಬರುವಂತಹ ಮಾಯುವಿಕೆಯ ಹಾದಿ ಸುಲಭವಾಗುತ್ತದೆ. ಸಂತ್ರಸ್ತೆಯ ಗುರುತನ್ನು ಸರ್ಕಾರ ರಕ್ಷಿಸದಿದ್ದಲ್ಲಿ ಸರ್ಕಾರದಿಂದಲೇ ಆಕೆ ಇನ್ನಷ್ಟು ಶೋಷಿತಳಾಗಬೇಕಾಗುತ್ತದೆ ಎಂಬುದು ಇಲ್ಲಿರುವ ಚಿಂತನೆ.

ಸಂತ್ರಸ್ತೆಯ ಗುರುತು ಬಹಿರಂಗ ಮಾಡಬಾರದು ಎಂಬ ನೀತಿ ಸಂಹಿತೆಯನ್ನು ಮಾಧ್ಯಮ ಸಂಸ್ಥೆಗಳೂ ಅಳವಡಿಸಿಕೊಂಡಿವೆ. ಆದರೆ ಇದಕ್ಕೆ ಹೊರತಾದ ವಿನಾಯಿತಿ ಸಹ ಕಾನೂನಿನಲ್ಲೇ ಇದೆ. ಅಪರಾಧ ತನಿಖೆ ನಡೆಸುವ ಸಂದರ್ಭದಲ್ಲಿ ತನಿಖೆ ಉದ್ದೇಶಕ್ಕೆ ಸಂತ್ರಸ್ತೆಯ ಗುರುತು ಬಹಿರಂಗಗೊಳಿಸಬಹುದು. ಹಾಗೆಯೇ ಲಿಖಿತ ರೂಪದಲ್ಲಿ ಅನುಮತಿ ನೀಡಿದ್ದಲ್ಲಿ ಗುರುತು ಬಹಿರಂಗಗೊಳಿಸಬಹುದು. ಜೊತೆಗೆ, ಸಂತ್ರಸ್ತೆ ಸತ್ತಿದ್ದಲ್ಲಿ ಅಥವಾ ಚಿಕ್ಕ ವಯಸ್ಸಿನವಳಾಗಿದ್ದಲ್ಲಿ ಅಥವಾ ಮಾನಸಿಕ ಸ್ಥಿತಿ ಸರಿ ಇಲ್ಲದವಳಾಗಿದ್ದಲ್ಲಿ ಸಂತ್ರಸ್ತೆಯ ಬಂಧುಗಳು ಅನುಮತಿ ನೀಡಿದಲ್ಲಿ ಗುರುತು ಬಹಿರಂಗಗೊಳಿಸಲು ಅವಕಾಶವಿದೆ ಎಂದು ಐಪಿಸಿ ಸೆಕ್ಷನ್ 228 ಎ (2)(ಸಿ)ನಲ್ಲಿ ಹೇಳಲಾಗಿದೆ.

ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿರುವ ಮತ್ತೊಬ್ಬ ಬಾಲಕಿಯ ಶವ ಕಳೆದ ವಾರ ಸೂರತ್‍ನಲ್ಲಿ ಪತ್ತೆಯಾಯಿತು. ಆಕೆಯ ಚಿತ್ರ ಸಾಮಾಜಿಕ ಜಾಲ ತಾಣಗಳು ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದವು. ಅತ್ಯಾಚಾರ ಸಂತ್ರಸ್ತೆಯ ವೈಯಕ್ತಿಕ ಮಾಹಿತಿ ಹಾಗೂ ಚಿತ್ರ ಪ್ರಕಟಿಸುವುದನ್ನು ಪೋಸ್ಕೊ ಕಾಯಿದೆಯೂ ನಿಷೇಧಿಸುತ್ತದೆ. ಹೀಗಾಗಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾದವು. ಬಾಲಕಿಯ ಗುರುತು ಪತ್ತೆಹಚ್ಚುವುದಕ್ಕಾಗಿ ಚಿತ್ರವನ್ನು ಮಾಧ್ಯಮಗಳಲ್ಲಿ ತಾವೇ ಬಹಿರಂಗಪಡಿಸಿದುದಾಗಿ ಸೂರತ್ ಪೊಲೀಸ್ ಆಯುಕ್ತ ಹೇಳಿಕೆ ನೀಡಿದ್ದರು. ಹೀಗಿದ್ದೂ ಟೀಕೆ ವ್ಯಕ್ತವಾದ ಕೆಲವೇ ಗಂಟೆಗಳಲ್ಲಿ ತಮ್ಮ ಫೇಸ್‍ಬುಕ್ ಹಾಗೂ ಟ್ವಿಟರ್ ಖಾತೆಗಳಿಂದ ಬಾಲಕಿಯ ಚಿತ್ರವನ್ನು ಪೊಲೀಸರು ತೆಗೆದುಹಾಕಿದ್ದರು.

ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸುವ ವಿಚಾರದಲ್ಲಿನ ಗೊಂದಲ ಹಾಗೂ ದ್ವಂದ್ವಗಳನ್ನು ಇದು ನಿರೂಪಿಸುತ್ತದೆ. ಅತ್ಯಾಚಾರ ಪ್ರಕರಣಗಳು ವರದಿ ಆಗುತ್ತಿರುವುದೇ ಕಡಿಮೆ. ಅತ್ಯಾಚಾರ ಸಂತ್ರಸ್ತೆಯನ್ನೇ ದೂಷಿಸುವುದು ನಮ್ಮ ಸಂಸ್ಕೃತಿ ಆಗಿರುವಾಗ ಅಸಾಧಾರಣ ಅಪಮಾನ, ಮೌನಕ್ಕೆ ಶರಣಾಗಬೇಕಾದ ಸ್ಥಿತಿಯನ್ನು ಈಗಲೂ ಸಂತ್ರಸ್ತೆಯರು ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಹೆಸರೂ ಬಹಿರಂಗಗೊಳ್ಳುತ್ತದೆ ಎಂದಾಗ ಸಂತ್ರಸ್ತೆಯರು ದೂರು ನೀಡಲೇ ಧೈರ್ಯ ಮಾಡಲಾರರು ಎಂಬಂಥ ವಾದಸರಣಿಯಲ್ಲಿ ಹುರುಳಿದೆ.

ಹಾಗೆಂದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ಗುರುತು ಬಹಿರಂಗಗೊಳ್ಳಲೇಬಾರದು ಎಂಬ ವಾದಕ್ಕೇ ಅಂಟಿಕೊಳ್ಳುವುದು ಸಲ್ಲದು. ’ಮೀ ಟೂ’ (#MeToo ) ಆಂದೋಲನ ಜಗತ್ತಿನಾದ್ಯಂತ ಪಸರಿಸುತ್ತಿರುವ ಕಾಲ ಇದು ಎಂಬುದು ನಮ್ಮ ನೆನಪಲ್ಲಿರಬೇಕು. ಹಾಲಿವುಡ್, ರಾಜಕಾರಣ, ಮಾಧ್ಯಮ ಹಾಗೂ ಸಿಲಿಕಾನ್ ಕಣಿವೆಯಲ್ಲಿ ಬಲಾಢ್ಯ ಪುರುಷರು ಮಹಿಳೆಯರಿಗೆ ನೀಡುವ ಲೈಂಗಿಕ ಕಿರುಕುಳಗಳ ಕಥಾನಕಗಳನ್ನು ಬಯಲುಗೊಳಿಸಿದ್ದ ‘ದಿ ನ್ಯೂಯಾರ್ಕ್ ಟೈಮ್ಸ್’ ಹಾಗೂ ‘ನ್ಯೂಯಾರ್ಕರ್’ ಪತ್ರಿಕೆಗಳು ತಮ್ಮ ಸಾರ್ವಜನಿಕ ಸೇವೆಗಾಗಿ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದುಕೊಂಡಿರುವ ಸುದ್ದಿಯೂ ಈಗಷ್ಟೇ ಪ್ರಕಟವಾಗಿದೆ. ಪತ್ರಿಕೆಯ ಲೇಖನಗಳಿಂದ ಸ್ಫೂರ್ತಿ ಪಡೆದ ನೂರಕ್ಕೂ ಹೆಚ್ಚು ಮಹಿಳೆಯರು ಆ ನಂತರ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್‍ಸ್ಟೀನ್ ವಿರುದ್ಧ ಲೈಂಗಿಕ ಕಿರುಕುಳಗಳ ವಿವರಗಳನ್ನು ಸಾರ್ವಜನಿಕವಾಗಿ ನೀಡಿದ್ದರು. ಇದು ಜಾಗತಿಕವಾಗಿ ‘ಮೀ ಟೂ’ ಆಂದೋಲನಕ್ಕೆ ಪ್ರೇರಕವಾಯಿತು. ತೆರೆಮರೆಯ ಕತ್ತಲಲ್ಲಿದ್ದ ಲೈಂಗಿಕ ದೌರ್ಜನ್ಯಗಳ ಮೌನ ಸಂಕಟಗಳಿಗೆ ಮಾತಿನ ಬೆಳಕು ದೊರಕಿಸಿಕೊಟ್ಟ ಬೆಳವಣಿಗೆ ಇದು.

26 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಭಂವರಿ ದೇವಿ ನೆನಪಾಗುತ್ತಾರೆ. ಅತ್ಯಾಚಾರಕ್ಕೆ ಅಂಟಿಕೊಂಡ ಕಳಂಕದ ಭಾವನೆಯನ್ನು ತೊಡೆದು ಅತ್ಯಾಚಾರದ ವಿರುದ್ಧದ ಹೋರಾಟಕ್ಕೆ ಶಕ್ತಿಯಾಗಿ ನಿಂತವರು ಅವರು. ಮುಂದೆ ಇದು ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದ ವಿರುದ್ಧದ ಕಾನೂನು ರಚನೆಗೆ ಕಾರಣವಾದದ್ದನ್ನು ಮರೆಯಲು ಸಾಧ್ಯವೇ? ಸುಜೆಟ್ ಜೋರ್ಡನ್‍ರನ್ನು ಕೋಲ್ಕತ್ತದ ‘ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಸಂತ್ರಸ್ತೆ’  ಎಂದೇ ಮಾಧ್ಯಮಗಳಲ್ಲಿ  ಹೆಸರಿಸಲಾಗುತ್ತಿತ್ತು. ಆದರೆ ತನ್ನ ಹೆಸರು ಹಾಗೂ ಬದುಕನ್ನು ಮರಳಿ ಪಡೆಯುವುದಾಗಿ ಘೋಷಿಸಿದ ಜೋರ್ಡನ್ ತನ್ನ ಹೆಸರನ್ನು ಬಹಿರಂಗಪಡಿಸಿದರು. ‘ಮುಖ ಮುಚ್ಚಿಕೊಂಡು ಅವಮಾನ ಅನುಭವಿಸಬೇಕಿರುವುದು ನಾನಲ್ಲ. ನನ್ನ ಆಕ್ರಮಣಕಾರರು’ ಎಂದು ಅವರು 2013ರಲ್ಲಿ ದಿಟ್ಟವಾಗಿ ಘೋಷಿಸಿದ್ದರು.

ನಮ್ಮಲ್ಲಿ ವಿಜಯಪುರದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ದಲಿತ ಬಾಲಕಿಯ ಹೆಸರಿರುವಂತಹ ಆಕೆಯ ಛಾಯಾಚಿತ್ರ ಹಿಡಿದೇ ನ್ಯಾಯಕ್ಕಾಗಿ ಒತ್ತಾಯಿಸಿ ಅನೇಕ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ರಾಘವೇಶ್ವರ ಭಾರತಿ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ತೆ ತಮ್ಮ ಗುರುತು ಮರೆಮಾಚಿರಲಿಲ್ಲ.

2012ರಲ್ಲಿ ಬರ್ಬರ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ನಿರ್ಭಯಾಳ ನಿಜನಾಮಧೇಯವನ್ನೇ ಅನೇಕ ಮಾಧ್ಯಮಗಳು ಈಗ ಪ್ರಕಟಿಸುತ್ತಿವೆ. ನಿರ್ಭಯಾಳ ತಾಯಿ ಆಶಾದೇವಿಯೂ ತನ್ನ ಮಗಳ ಹೆಸರು ಪ್ರಕಟಣೆಗೆ ವಿರೋಧವಿಲ್ಲ ಎಂದಿದ್ದರು. ಆದರೆ ‘ಇಂಡಿಯಾಸ್ ಡಾಟರ್’  ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಅತ್ಯಾಚಾರ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ್ದಕ್ಕೆ ನಿರ್ಭಯಾಳ ತಂದೆ ವಿರೋಧ ವ್ಯಕ್ತಪಡಿಸಿದ ವರದಿ ಪ್ರಕಟವಾಗಿ ಮತ್ತೊಮ್ಮೆ ಈ ವಿಚಾರದ ದ್ವಂದ್ವಗಳನ್ನು ಹೊರಗೆಡಹಿತ್ತು.

ಬುರಾರಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ದಲಿತ ಬಾಲೆಯ ಹೆಸರು  ಬಹಿರಂಗಪಡಿಸಿದ್ದಕ್ಕಾಗಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಬಿಕ್ಕಟ್ಟಿಗೆ ಸಿಲುಕಿದ್ದರು. ಸಂತ್ರಸ್ತೆಯ ಹೆಸರನ್ನು ತಾನು ಬಹಿರಂಗಗೊಳಿಸಿರಲಿಲ್ಲ ಎಂದು ಪ್ರತಿಪಾದಿಸಿದ್ದ ಮಳಿವಾಲ್ ನಂತರ  ಅದೇ ಉಸಿರಿಗೆ, ಅತ್ಯಾಚಾರ ಸಂತ್ರಸ್ತೆ ತನ್ನ ಗುರುತು ಯಾಕೆ ಮರೆಮಾಚಿಕೊಳ್ಳಬೇಕು ಎಂದೂ ಪ್ರಶ್ನಿಸಿದ್ದರು. ‘ತಲೆ ತಗ್ಗಿಸಿ ಅವಿತುಕೊಳ್ಳಬೇಕಾದವರು ಅತ್ಯಾಚಾರಿಗಳಲ್ಲವೇ?  ಕ್ರೌರ್ಯಕ್ಕೆ  ಗುರಿಯಾಗುವುದು ಸಂತ್ರಸ್ತೆಯ  ಅವಮಾನವೇ?’ ಎಂಬ ಅವರ ಪ್ರಶ್ನೆಯಲ್ಲಿ ಹುರುಳಿರುವುದು ನಿಜ.

‘ಸದ್ಯದ ಸಾಮಾಜಿಕ ವಾಸ್ತವಗಳಿಂದಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಗುರುತು ಪ್ರಕಟಿಸುವುದು ಎಲ್ಲಾ ಸಂದರ್ಭಗಳಲ್ಲೂ ಸಾಧ್ಯವಿಲ್ಲ. ಆದರೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಸಾರ್ವಜನಿಕವಾಗಿ ಹೇಳಿಕೊಳ್ಳುವ ಮಟ್ಟಕ್ಕೆ ಬರಬೇಕು. ಅತ್ಯಾಚಾರ ಬರೀ ಕಾಮದ ಲಾಲಸೆ ಅಲ್ಲ. ಕಠುವಾ ಪ್ರಕರಣದಲ್ಲೂ ಅಲೆಮಾರಿ ಮುಸ್ಲಿಂ ಸಮುದಾಯವನ್ನು ಓಡಿಸಲು  ಪುಟ್ಟ ಬಾಲೆಯ ಮೇಲೆ ಅತ್ಯಾಚಾರ ಎಸಗುವ ತಂತ್ರ ಹೆಣೆಯಲಾಯಿತು ಎಂದು ಪೊಲೀಸ್ ಆರೋಪಪಟ್ಟಿ ಹೇಳಿದೆ. ಪುರುಷ ರಾಜಕಾರಣದ ಯುದ್ಧದಲ್ಲಿ ಹೆಣ್ಣುಮಕ್ಕಳ ದೇಹ ರಣಾಂಗಣವಾಗುವ ಸ್ಥಿತಿ ಇದು. ಈ ಅನ್ಯಾಯಗಳ ವಿರುದ್ಧ ಹೋರಾಡುವುದಕ್ಕಾಗಿ ಸಾರ್ವಜನಿಕವಾಗಿ ಅದನ್ನು ಹೇಳುವ  ಧೈರ್ಯವನ್ನು ಹೆಣ್ಣುಮಕ್ಕಳು ಪಡೆದುಕೊಳ್ಳಬೇಕು. ಹೆಣ್ಣಿನ ಶೀಲಕ್ಕೆ ಅತಿಯಾದ ಪ್ರಾಮುಖ್ಯ ಕೊಡುವ ಸಮಾಜದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣು ಇನ್ನಷ್ಟು ಕುಗ್ಗಿಹೋಗುವ ಸ್ಥಿತಿ ಇರಬಾರದು. ಇಂತಹ ಮನಸ್ಥಿತಿಯಿಂದ ಹೊರಬರಬೇಕು’ ಎನ್ನುತ್ತಾರೆ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲಾ.

  ‘ವೈಯಕ್ತಿಕವಾದದ್ದು ರಾಜಕೀಯವಾದದ್ದು’ ಎಂಬುದು ಸ್ತ್ರೀವಾದದ ಮೂಲಮಂತ್ರ. ವಧು ದಹನ ಪ್ರಕರಣಗಳು ನಡೆಯಬಹುದು ಎಂಬ ಬಗ್ಗೆ 70ರ ದಶಕದ ಉತ್ತರಾರ್ಧದವರೆಗೆ ಕಲ್ಪನೆಯೇ ಇರಲಿಲ್ಲ. ಆಗ ‘ಸೀಮೆ ಎಣ್ಣೆ ಸ್ವೋವ್ ಸ್ಫೋಟಗೊಂಡು ಮಹಿಳೆ ಸಾವು’ ಎಂಬಂತಹ ಸುದ್ದಿಗಳು ಆ ಸುದ್ದಿಯ ಹಿಂದಿನ ಕಥೆಯನ್ನು ಅನಾವರಣಗೊಳಿಸುತ್ತಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಕುಟುಂಬದೊಳಗಿನ ವರದಕ್ಷಿಣೆ ಹಿಂಸೆ ಕಥೆಗಳನ್ನು ಚಿತ್ರ ಸಹಿತವಾಗಿ ಪತ್ರಕರ್ತೆಯರು ಕಟ್ಟಿಕೊಡಲು ಆರಂಭಿಸಿದ ನಂತರ ಕೌಟುಂಬಿಕ ದೌರ್ಜನ್ಯದ ಬಗ್ಗೆ ಹೊಸ ಗ್ರಹಿಕೆಗಳು ದಕ್ಕಿದವು. ಗಂಡಾಳ್ತನದ ಸಾಮಾಜಿಕ ಮೌಲ್ಯಗಳ ಹಿಡಿತದಲ್ಲಿ ಮೌನದೊಳಗೆ ಬಂಧಿಯಾಗುವ ಮೂಕಸಂಕಟಗಳನ್ನು ಹೊರತರುವುದು ಸಮಾಜದ ವಿಕಾಸಕ್ಕೆ ಅನಿವಾರ್ಯ. ಆದರೆ ಲೈಂಗಿಕ  ದೌರ್ಜನ್ಯದ ಸಂತ್ರಸ್ತೆ ತನ್ನ ಗುರುತು ಹೇಳಿಕೊಳ್ಳುವುದು ಅಥವಾ ಬಿಡುವುದು ಆಕೆಯದೇ ಹಕ್ಕು. ಗುರುತು ಬಹಿರಂಗಪಡಿಸುವುದು, ಸಾಮಾಜಿಕ ಅವಮಾನವನ್ನು ಮೀರುವ ಸಶಕ್ತೀಕರಣದ ಪ್ರಕ್ರಿಯೆಯೂ ಆಗಿ ಪರಿಣಮಿಸಬಹುದು.

ಪ್ರತಿಕ್ರಿಯಿಸಿ (+)