ಅದು ಮೂಢ ನಂಬಿಕೆಯಲ್ಲ...

7

ಅದು ಮೂಢ ನಂಬಿಕೆಯಲ್ಲ...

ಪ್ರಕಾಶ್ ರೈ
Published:
Updated:
ಅದು ಮೂಢ ನಂಬಿಕೆಯಲ್ಲ...

‘ಮನುಷ್ಯ ಅಂದಮೇಲೆ ಯಾವುದೋ ಒಂದನ್ನು ನಂಬಬೇಕಪ್ಪಾ... ನಂಬಿಕೆ ತಾನೆ ಬದುಕು... ಸಂಕಟ ಬಂದಾಗ

ವೆಂಕಟರಮಣ ರೀ...’

ಕಷ್ಟದ ಕಾಲದಲ್ಲಿ ಸಿಲುಕಿ ನಲುಗುವಾಗ ಈ ಮಾತನ್ನು ಹೇಳದವರು ಯಾರೂ ಇರಲಿಕ್ಕಿಲ್ಲ. ಸರಿ, ನಂಬಿಕೆಗೂ, ಮೂಢ ನಂಬಿಕೆಗೂ ವ್ಯತ್ಯಾಸವೇನು?

ಪ್ರಾರ್ಥನೆಯನ್ನೇ ತಗೊಳ್ಳೋಣ.

ದೇವರ ಬಳಿ ನಾವು ಮಾಡುವ ಪ್ರಾರ್ಥನೆ ನಂಬಿಕೆಯೋ, ಮೂಢನಂಬಿಕೆಯೋ?

***

ನನ್ನ ಗೆಳೆಯನ ಮಗು ತೀರಿಕೊಂಡಿತ್ತು. ಎಲ್ಲರೂ ದುಃಖತಪ್ತರಾಗಿ ಅಳುತ್ತಾ, ಆ ಮಗುವಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರು. ಆದರೆ ಆ ಮಗುವೇ ತನ್ನ ಪ್ರಾಣ, ಪ್ರಪಂಚವೆಂದು ನಂಬಿದ್ದ ನನ್ನ ಗೆಳೆಯ ಮಾತ್ರ ಕಲ್ಲಿನಂತೆ ಕುಳಿತಿದ್ದ. ನಾನು ಅಲ್ಲಿಗೆ ಹೋದೊಡನೆ ಯಾರೂ ಇಲ್ಲದ ಒಂದು ಮೂಲೆಗೆ ಕರೆದುಕೊಂಡು ಹೋಗಿ ಹೃದಯವೇ ಬಿರಿಯುವಂತೆ ಅತ್ತುಬಿಟ್ಟ.

‘ಮನೆಯವರನ್ನು ಸಮಾಧಾನ ಮಾಡಬೇಕಾದ ಜವಾಬ್ದಾರಿ ಇರುವ ನಾನು, ಅವರ ಮುಂದೆ ಅತ್ತರೆ ಯಾರಲ್ಲಿಯೂ ನಂಬಿಕೆ ಉಳಿದಿರೋದಿಲ್ಲ ಪ್ರಕಾಶ್’ ಎಂದು ಗೋಳಾಡಿದ.

ಕ್ರೈಸ್ತ ಧರ್ಮದ ಆಚಾರದಂತೆ ಅಂತಿಮ ಕಾರ್ಯಗಳು ನಡೆದವು.

ಬಿಕ್ಕಳಿಕೆಗಳಲ್ಲದೆ ಬೇರೆ ಯಾವ ಶಬ್ದವೂ ಅಲ್ಲಿರಲಿಲ್ಲ. ಪಾದ್ರಿಯೊಬ್ಬರು ಪ್ರಾರ್ಥಿಸುತ್ತಿದ್ದರು. ‘ನಿಮ್ಮ ಕಂದನನ್ನು ನೀವೇ ಮತ್ತೆ ನಿಮ್ಮ ಬಳಿ ಕರೆಸಿಕೊಂಡಿದ್ದೀರಿ ಕರ್ತರೇ. ಆ ಕಂದನ ಆತ್ಮಕ್ಕೆ ಶಾಂತಿ ದಯಪಾಲಿಸಿ’ ಎಂದು ಪ್ರಾರ್ಥಿಸುತ್ತಿದ್ದರು. ಅಲ್ಲಿದ್ದ ಎಲ್ಲರೂ ಆ ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದರೇ? ಅಥವಾ ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುವುದಕ್ಕಾಗಿ ದೇವರ ಮುಂದೆ ಕೈಚಾಚಿ ನಿಂತಿದ್ದರೇ? ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನಾನು ನನಗಾಗಿಯೋ ಅಥವಾ ಇನ್ನೊಬ್ಬರಿಗಾಗಿಯೋ ಕೈಚಾಚಿ ನಿಂತು ಪ್ರಾರ್ಥನೆ ಮಾಡಿದ್ದಿಲ್ಲ. ಆದರೆ ಮರಣ ಸಂಭವಿಸಿದ ಮನೆಯಲ್ಲಿ ಪ್ರಾರ್ಥನೆ ಮಾತ್ರ ಆ ಮನುಷ್ಯರಿಗೆ ಸಮಾಧಾನ ಹೇಳುತ್ತದೆ.

ನನ್ನ ದೃಷ್ಟಿಯಲ್ಲಿ ಪ್ರಾರ್ಥನೆಗೆ ದೊಡ್ಡ ಅರ್ಥವಿಲ್ಲ. ಬಿಸಿಲು, ಮಳೆ, ಹಿಮ, ಗಾಳಿಯನ್ನು ಹೇಗೆ ಎದುರುಗೊಳ್ಳುತ್ತೇವೋ ಹಾಗೆಯೇ ಬದುಕಿನಲ್ಲಿ ಸಂಭವಿಸುವ ಒಳ್ಳೆಯದು, ಕೆಟ್ಟದ್ದನ್ನು ಎದುರುಗೊಳ್ಳುತ್ತೇನೆ. ಹೀಗಾಗಿ ನನಗೆ ದೇವರುಗಳೋ, ಪ್ರಾರ್ಥನೆಯೋ, ಪವಾಡಗಳನ್ನು ಮಾಡುವ ಸ್ವಾಮಿಗಳೋ... ಇದ್ಯಾವುದರ ಅವಶ್ಯಕತೆಯೂ ಬೀಳಲಿಲ್ಲ. ನನಗೆ ಇವುಗಳ ಬಗ್ಗೆ ನಂಬಿಕೆ ಇಲ್ಲ ಎನ್ನುವ ಕಾರಣಕ್ಕಾಗಿ, ಮತ್ತೊಬ್ಬರಿಗೆ ಅದರ ಅವಶ್ಯಕತೆ ಇಲ್ಲ ಎಂದೋ, ಅದು ತಪ್ಪೆಂದೋ ವಿಮರ್ಶಿಸುವ ಹಕ್ಕು ನನಗಿಲ್ಲ.

ಬೆಕ್ಕು ಅಡ್ಡ ಬಂದರೆ ಅಪಶಕುನ, ಹೋಗುವ ಕೆಲಸ ಆಗೋಲ್ಲ ಅನ್ನೋದು ಬರೀ ಮೂರ್ಖತನವಲ್ಲ ಅದು ಮೂಢನಂಬಿಕೆ ಕೂಡ ಹೌದು. ಬೆಕ್ಕಿನ ವಿಚಾರದಲ್ಲಿ ‘ಹೋಗಲಿ ಬಿಡಿ’ ಎಂದು ಒಪ್ಪಿಕೊಳ್ಳಬಹುದು. ಆದರೆ ಹೆತ್ತ ತಾಯಿ ವಿಧವೆ ಆದಳು ಅನ್ನುವ ಕಾರಣಕ್ಕೆ, ಮನೆಯ ಶುಭ ಕಾರ್ಯಗಳಿಂದ ಆಕೆಯನ್ನು ದೂರವಿಟ್ಟರೆ, ಅದು ಅವರ ವೈಯಕ್ತಿಕ ನಂಬಿಕೆ ಎಂದು ಸುಮ್ಮನೆ ಇರಲು ಆಗದು. ಅದನ್ನು ಖಂಡಿಸಿಯೇ ತೀರುತ್ತೇನೆ.

ಹಲವು ಜಾತಿ, ಮತಗಳ ಆಚಾರಗಳಲ್ಲಿ ಅಡಗಿರುವ ಮೂಢನಂಬಿಕೆಗಳಂತೆ ಪ್ರಾರ್ಥನೆಯೂ ಒಂದು ಮೂಢನಂಬಿಕೆ ಎಂದು ನೋಡಲಾಗುವುದಿಲ್ಲ. ಹಿರಿಯರನ್ನು ಕಂಡೊಡನೆ ಎದ್ದುನಿಂತು ನಮಸ್ಕರಿಸುವ ಸಂಸ್ಕಾರ ಇದೆಯಲ್ಲಾ, ಪ್ರಾರ್ಥನೆಯೂ ಅಂಥದ್ದೇ. ತನ್ನ ಬದುಕಿನಲ್ಲಿ ಇನ್ನು ಯಾವ ಆಸರೆಯೂ ಇಲ್ಲ ಎಂದು ಹತಾಶರಾಗಿ ನಿಲ್ಲುವ ಪ್ರತಿ ವ್ಯಕ್ತಿಗೂ ಪ್ರಾರ್ಥನೆ ಆಸರೆಯಂತಿದೆ. ಹತ್ತುವ ಗುಡ್ಡವೆಲ್ಲಾ ಪಾಚಿ ಹಿಡಿದು, ಜಾರುವ ಹಾದಿಯಂತಿರುವ ತಮ್ಮ ಬದುಕಿನಲ್ಲಿ, ಜಾರದಂತೆ ತಡೆಯಲು ಪ್ರಾರ್ಥನೆ ಸಹಾಯ ಮಾಡುವುದಾದರೆ ಅದು ಮೂಢನಂಬಿಕೆಯಾಗಿದ್ದರೂ ಇರಲಿ ಬಿಡಿ...

***

ನನ್ನ ತಾಯಿ ತುಂಬಾ ಸಾಧು. ಗಟ್ಟಿಯಾಗಿ ಮಾತನಾಡುವವಳಲ್ಲ.

ಆದರೆ ಆಕೆ ಪ್ರಾರ್ಥನೆ ಮಾಡುವಾಗ ಅವಳ ಕೋಪ ಆಕ್ರೋಶವಾಗಿ ಹೊಮ್ಮುತ್ತಿತ್ತು. ನನ್ನ ತಾಯಿ ಇವಳೇ ಎಂದು ಆಶ್ಚರ್ಯಪಟ್ಟಿದ್ದೇನೆ. ಗಂಡನ ಆಸರೆ ಇಲ್ಲದೆ, ಮೂವರು ಮಕ್ಕಳನ್ನು ಚೆನ್ನಾಗಿ ಓದಿಸಿ, ಬೆಳೆಸಬೇಕಾದ ದೊಡ್ಡ ಜವಾಬ್ದಾರಿ ಹೊತ್ತ ಅಮ್ಮನಿಗೆ ತನ್ನ ಜೀವನದ ಸಂಕಟಗಳನ್ನು ಹೇಳಿಕೊಂಡು ಅಳುವುದಕ್ಕೆ ಯಾರೂ ಇರಲಿಲ್ಲ. ಹೊಟ್ಟೆ ತುಂಬಿದರೆ ನಗುವುದು, ಹಸಿವಾದಾಗ ಅಳುವುದು ಮಾತ್ರವೇ ಗೊತ್ತಿದ್ದ ಪುಟ್ಟ ಮಕ್ಕಳು ನಾವು. ಅವಳ ಆಸರೆಗೆ ನಿಲುಕಿದ್ದು, ಅವಳ ದೇವರು ಏಸು ಕ್ರಿಸ್ತ.

‘ನನ್ನನ್ನು ಹೀಗೇಕೆ ಶೋಧಿಸುತ್ತಿದ್ದೀಯಾ, ನಿನಗೆ ಮೇಣದ ಬತ್ತಿಯನ್ನು ಹೊತ್ತಿಸುವುದು ಕಡಿಮೆ ಮಾಡಿದ್ದೀನಾ, ಈ ವಾರ ನನ್ನ ಮಕ್ಕಳ ಸ್ಕೂಲ್ ಫೀ ಕಟ್ಟದೇ ಇದ್ದರೆ ಅವರನ್ನು ಹೊರಗೆ ಕಳುಹಿಸಿಬಿಡುತ್ತಾರೆ. ಹಾಗೇನಾದರೂ ಆದರೆ, ನಾನು ನಿನಗೆ ನಮಸ್ಕಾರವೇ ಮಾಡೋಲ್ಲ ಹೋಗು’ ಎಂದು ಏಸುನಾಥನಿಗೆ ಸವಾಲು ಹಾಕಿ ಜಗಳವಾಡುತ್ತಿದ್ದಳು.

ಆಮೇಲೆ ಹೇಗೋ ಕಷ್ಟಪಟ್ಟು ಹಣವನ್ನು ತಾನೇ ಹೊಂದಿಸುತ್ತಿದ್ದಳು. ನರ್ಸಾಗಿ ಕೆಲಸ ಮಾಡುತ್ತಿದ್ದ ಅವಳ ಪ್ರಾಮಾಣಿಕ ದುಡಿಮೆಯನ್ನು ನೋಡಿ, ಯಾರೋ ಒಬ್ಬ ದೊಡ್ಡ ಮನುಷ್ಯ ಪ್ರೀತಿಯಿಂದ, ಅಕ್ಕರೆಯಿಂದ, ‘ನಮ್ಮ ಮನೆಯವರನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕೆ ಧನ್ಯವಾದ, ಇಟ್ಕೊಳಮ್ಮ’ ಎಂದು ಹಣ ಕೊಟ್ಟು ಹೋಗಿರುತ್ತಿದ್ದ. ಕೆಲವೊಮ್ಮೆ ದಿಢೀರ್ ಎಂದು ಬೋನಸ್ ಸಿಕ್ಕಿರುತ್ತಿತ್ತು. ರಾತ್ರಿ ಹಗಲೆನ್ನದೆ ಓವರ್ ಟೈಂ ಕೆಲಸ ಮಾಡಿ ಕಾಸು ಕೂಡಿಸುವವಳಾಗಿದ್ದಳು. ಆದರೆ, ಇವೆಲ್ಲಾ ತನ್ನ ದುಡಿಮೆಯಿಂದ, ತನ್ನ ಪ್ರಾಮಾಣಿಕತೆಯಿಂದ, ತನ್ನ ಪ್ರತಿಭೆಯಿಂದ ದಕ್ಕಿದ್ದು ಎಂದು ನಂಬಿದವಳೇ ಅಲ್ಲ.

ದೇವರನ್ನು ಪ್ರಾರ್ಥಿಸುವಾಗ ಕೋಪದಿಂದ ಜಗಳಗಂಟಿಯಾಗಿದ್ದವಳು, ತಾನು ಹೋರಾಡಿ ಪಡೆದ ಗೆಲುವು ದೇವರಿಂದಲೇ ಪ್ರಾಪ್ತಿ ಆದದ್ದು ಎನ್ನುತ್ತ ಎಕ್ಸ್‌ಟ್ರಾ ಮೇಣದ ಬತ್ತಿ ಹಚ್ಚುತ್ತಿದ್ದಳು.

ನಾನು ರಾಷ್ಟ್ರಪ್ರಶಸ್ತಿಯನ್ನು ಪಡೆದು ಅವಳ ಮುಂದೆ ಹೋಗಿ ನಿಂತೆ.

‘ಕರ್ತರ ಬಳಿ ಪ್ರಾರ್ಥಿಸಿದೆ ಕಣೋ ಪ್ರಕಾಶ. ತಕ್ಷಣ ನೆರವೇರಿಸಿಬಿಟ್ಟರು ನೋಡು’ ಅಂದಳು.

ನಾನು ಅವಳ ದೇವರಿಗೆ ಥ್ಯಾಂಕ್ಸ್ ಹೇಳೋಲ್ಲ ಅಂತ ನನ್ನ ಬದಲು ತಾನೇ ಏಸುನಾಥನಿಗೆ ವಾರಗಟ್ಟಲೆ ಥ್ಯಾಂಕ್ಸ್ ಹೇಳುತ್ತಿದ್ದಳು.

ಹೆತ್ತ ಅಪ್ಪ, ಕಟ್ಟಿಕೊಂಡ ಗಂಡ, ತನ್ನ ಬದುಕಿನ ಮುಖ್ಯವಾದ ಸಂಬಂಧಗಳು... ಎಲ್ಲವೂ ಕೈಬಿಟ್ಟ ಸ್ಥಿತಿಯಲ್ಲಿ ಅವಳನ್ನು ಇಷ್ಟು ದೂರ ನಡೆಸಿಕೊಂಡು ಬಂದದ್ದೇ ಪ್ರಾರ್ಥನೆ ಮತ್ತು ಅದರ ಮೇಲೆ ಇಟ್ಟ ಗಾಢವಾದ ನಂಬಿಕೆ. ತನ್ನ ಪ್ರಾರ್ಥನೆಯಿಂದ ಈ ಪ್ರಪಂಚದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಇವತ್ತಿಗೂ ನಂಬಿ ಬದುಕುತ್ತಿದ್ದಾಳೆ. ‘ಅದು ನಿನ್ನ ಮುಗ್ಧತೆ, ಮೂರ್ಖತನ ಅಮ್ಮಾ’ ಎಂದು ಅವಳಿಗೆ ತಿಳಿಹೇಳುವ ಪ್ರಯತ್ನವನ್ನು ನಾನು ಮಾಡಲೇ ಇಲ್ಲ. ಅವಳ ನಂಬಿಕೆಯನ್ನು ನನ್ನ ಬುದ್ಧಿವಂತಿಕೆಯಿಂದ, ನಾನು ನಂಬುವ ಸತ್ಯಗಳಿಂದ ಛಿದ್ರಗೊಳಿಸಿದರೆ, ಅದಕ್ಕೆ ಬದಲಾಗಿ ಅವಳಿಗೆ ಬೇರೊಂದು ನಂಬಿಕೆಯನ್ನು ನಾನು ಕೊಡಬೇಕಾಗುತ್ತದೆ.

ಅದಲ್ಲವೇ ನ್ಯಾಯ...

ಅವಳ ಗಂಡ ಮನಸ್ಸು ಮಾಡಿದ್ದರೆ, ಅರ್ಥ ಮಾಡಿಕೊಳ್ಳುವವನಾಗಿದ್ದರೆ ಬಹುಶಃ ದೇವರ ಆಸರೆ ಇಲ್ಲದೆಯೇ ಅವಳು ಬದುಕಿರಬಹುದಿತ್ತೋ ಏನೋ...

ವೇದನೆಯಲ್ಲೇ ತನ್ನ ಯೌವನವನ್ನು ಕಳೆದವಳ ಬಳಿ ಹೋಗಿ ನನ್ನ ಬುದ್ಧಿವಂತಿಕೆಯನ್ನು ತೋರಿಸಿ ಏನು ಪ್ರಯೋಜನ? ಏನು ಸಾಧಿಸಿದಂತೆ ಆಗುತ್ತದೆ?

ಇರುವ ಇನ್ನಷ್ಟು ಕಾಲವನ್ನಾದರೂ ಅದೇ ನಂಬಿಕೆಗಳೊಂದಿಗೆ ಅವಳು ಕಳೆಯುವುದು ಅವಳಿಗೇ ಒಳ್ಳೆಯದು.

***

‘ನಾನು ಕೊಂದ ಹುಡುಗಿ’ ಅಜ್ಜಂಪುರ ಸೀತಾರಾಮಯ್ಯನವರು ‘ಆನಂದ’ ಎನ್ನುವ ಕಾವ್ಯನಾಮದಲ್ಲಿ ಬರೆದ ಒಂದು ಕತೆ. ನನ್ನನ್ನು ಗಾಢವಾಗಿ ಕಾಡಿದ ಕತೆ ಅದು.

ಪ್ರಾಚೀನ ದೇವಸ್ಥಾನದ ಶಿಲ್ಪಕಲೆಗಳನ್ನು ಅಧ್ಯಯನ ಮಾಡುವ ಒಬ್ಬ ವ್ಯಕ್ತಿ ಇರುತ್ತಾನೆ. ಊರಿಂದ ಊರಿಗೆ ಅಧ್ಯಯನ ಮಾಡುತ್ತಾ ಹೋಗ್ತಾ ಇದ್ದೋನು ಅವನು. ಒಂದು ಹಳ್ಳೀಲಿ ಒಂದೆರಡು ದಿನದ ಮಟ್ಟಿಗೆ ಉಳಿಯಬೇಕಾಗುತ್ತದೆ. ಆ ಹಳ್ಳಿಯ ದೊಡ್ಡ ಮನುಷ್ಯರೊಬ್ಬರು ತಮ್ಮ ಮನೆಯಲ್ಲಿ ಆತಿಥ್ಯ ನೀಡುತ್ತಾರೆ. ಅಂದು ಸಂಜೆ ಅವರ ಮನೆಯಲ್ಲಿ ಊಟಕ್ಕೆ ಕೂತಾಗ, ಗೆಜ್ಜೆ ಹೆಜ್ಜೆಯನಿಡುತ್ತಾ...

ಸುಂದರ ಹೆಣ್ಣುಮಗಳೊಬ್ಬಳು ನಾಚುತ್ತಲೇ ಬಂದು ಊಟ ಬಡಿಸಿ ಹೋಗುತ್ತಾಳೆ. ಆನಂತರ ಮನೆಯ ಹಿಂದಿನ ತೋಟದಲ್ಲಿ ನಡೆಯುತ್ತ ಇರುವಾಗ, ಆ ಹೆಣ್ಣುಮಗಳು ಯಾರೆಂದು ಆ ಮನೆಯ ಕೆಲಸಗಾರನನ್ನು ವಿಚಾರಿಸುತ್ತಾನೆ. ‘ಯಜಮಾನ್ರ ಮಗಳು, ಯಾಕೆ ಸ್ವಾಮಿ’ ಎಂದು ಇವನನ್ನು ಅನುಮಾನಿಸುತ್ತಾ ಉತ್ತರಿಸುತ್ತಾನೆ ಕೆಲಸಗಾರ.

ತಾನು ಮುಗ್ಧವಾಗಿ ಕೇಳಿದ್ದನ್ನು ಕೆಲಸಗಾರನು ಅಪಾರ್ಥ ಮಾಡಿಕೊಂಡನಲ್ಲ ಎಂದು ಕಸಿವಿಸಿಗೊಳ್ಳುತ್ತಲೇ, ತನ್ನ ಕೋಣೆಯನ್ನು ಸೇರಿ ತನ್ನ ಹೆಂಡತಿಗೆ ಈ ಬಗ್ಗೆ ಕಾಗದ ಬರೆಯುವಾಗ ಯಾರೋ ಬಾಗಿಲು ತಟ್ಟಿದಂತಾಗುತ್ತದೆ.

ಬಾಗಿಲು ತೆಗೆದರೆ ಆಶ್ಚರ್ಯ. ಮದುವಣಗಿತ್ತಿಯಂತೆ ಅಲಂಕಾರ ಮಾಡಿಕೊಂಡು ಕೈಯಲ್ಲಿ ಹಾಲಿನ ಲೋಟ, ತಾಂಬೂಲ ಹಿಡಿದು ಆ ಹೆಣ್ಣುಮಗಳು ಒಳಗೆ ಬಂದು ಬಾಗಿಲ ಚಿಲಕ ಹಾಕುತ್ತಾಳೆ.

ಏನೂ ಅರ್ಥವಾಗದೆ ನೋಡುತ್ತಿದ್ದವನಿಗೆ- ‘ನೀವು, ನನ್ನ ಬಗ್ಗೆ ವಿಚಾರಿಸಿದರಂತೆ. ಹೋಗಿ ಅವರನ್ನ ನೋಡ್ಕೋ ಅಂತ ಅಪ್ಪ ಕಳುಹಿಸಿಕೊಟ್ಟರು’ ಎನ್ನುತ್ತಾ ಮಂಚದ ಮೇಲೆ ಹೋಗಿ ಕೂರುತ್ತಾಳೆ.

ವಿಷಯ ಇಷ್ಟೇ, ಆ ಊರಿನ ದೊಡ್ಡ ಮನುಷ್ಯರ ಮೊದಲ ಮಗಳಿವಳು. ದೊಡ್ಡ ಮನುಷ್ಯರಿಗೆ ಬಹಳ ವರ್ಷಗಳವರೆಗೆ ಗಂಡು ಸಂತಾನದ ಭಾಗ್ಯವಿರಲಿಲ್ಲ. ವಂಶೋದ್ಧಾರಕ ಹುಟ್ಟುತ್ತಿಲ್ಲ ಎನ್ನುವ ಆತಂಕದಲ್ಲಿ, ‘ಮುಂದೆ ಗಂಡು ಮಗುವಾದರೆ ಇವಳನ್ನು ನಿನ್ನ ಸೇವೆಗೆ ಮೀಸಲಿಡುತ್ತೇನೆ’ ಎಂದು ಹರಕೆ ಹೊತ್ತ ಆ ದೊಡ್ಡ ಮನುಷ್ಯನಿಗೆ ಗಂಡು ಮಗುವಾಗುತ್ತದೆ.

ಹೊತ್ತ ಹರಕೆಯಂತೆ ಇವಳು, ಬರುವ ಅತಿಥಿಗಳನ್ನು ಸತ್ಕರಿಸುವ ದೇವದಾಸಿಯಾಗಿದ್ದಾಳೆ. ಹೀಗೆ ತನ್ನನ್ನು ಬಯಸುವ ಅತಿಥಿಗಳನ್ನು ಸತ್ಕರಿಸುವ ದೇವದಾಸಿಯಾಗುವುದೇ ತನ್ನ ಬದುಕಿನ ಸಾರ್ಥಕ್ಯವೆಂದು ಗಾಢವಾಗಿ ನಂಬಿ ಬದುಕುತ್ತಿದ್ದಾಳೆ, ಆ ಮುಗ್ಧ ಸುಂದರ ಹೆಣ್ಣುಮಗಳು.

ಇಂಥ ಕ್ರೂರ ಮೂಢನಂಬಿಕೆಯನ್ನು ಕಂಡು ತತ್ತರಿಸಿದ ಅವನು, ಆಕೆಯನ್ನು ಕೂರಿಸಿ, ‘ನೀನು ನಂಬಿರುವುದು ತಪ್ಪು. ನೀನು ಮಾಡುತ್ತಿರುವುದು ಸತ್ಕಾರವಲ್ಲ. ಅದು ವ್ಯಭಿಚಾರ. ಈ ಮೂಢನಂಬಿಕೆಯಿಂದ ಹೊರಗೆ ಬಾ’ ಎಂದು ಬೈದು ಕಳುಹಿಸುತ್ತಾನೆ. ತಾನು ನಂಬಿದ್ದ ಪ್ರಪಂಚವೇ ಕುಸಿದು ಬಿದ್ದಂತಾಗಿ ಅಳುತ್ತಲೇ ಓಡಿಹೋಗುತ್ತಾಳೆ ಆ ಮುಗ್ಧ ಹೆಣ್ಣುಮಗಳು.

ಮಾರನೆಯ ದಿನ ಬೆಳಿಗ್ಗೆ ತೋಟದ ಬಾವಿಯಲ್ಲಿ ಆ ಹುಡುಗಿಯ ಹೆಣ ತೇಲುತ್ತಿರುತ್ತದೆ. ಬದುಕಲು ಇದ್ದ ಕಾರಣವನ್ನು ಕಳೆದುಕೊಂಡ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ‘ಅವಳ ಸಾವಿಗೆ ಕಾರಣ ಯಾರು? ಅವಳು ನಂಬಿದ್ದ ನಂಬಿಕೆಯನ್ನು ಛಿದ್ರಗೊಳಿಸಿ, ಬೇರೊಂದು ನಂಬಿಕೆಯನ್ನು ಕೊಡಲಾಗದೆ, ನಾನೇ ಅವಳನ್ನು ಕೊಂದೆನೇ’ ಎನ್ನುವ ಪಾಪಪ್ರಜ್ಞೆ ಅವನನ್ನು ಕಾಡತೊಡಗುವಲ್ಲಿಗೆ ‘ನಾನು ಕೊಂದ ಹುಡುಗಿ’ ಕತೆ ಮುಗಿಯುತ್ತದೆ.

ನಾನು ನನ್ನ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಬಾರದೆನ್ನುವುದಕ್ಕೆ ಈ ಕತೆಯೇ ಕಾರಣ. ಮತ್ತೊಂದು ಬಲವಾದ ನಂಬಿಕೆಯನ್ನು ಕೊಡಲು ಸಾಧ್ಯವಾದರೆ ಮಾತ್ರ ಇನ್ನೊಬ್ಬರ ನಂಬಿಕೆಯ ಮೇಲೆ ನಾವು ಕೈ ಇಡಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಅವರವರ ನಂಬಿಕೆಗಳೊಂದಿಗೆ ಜನ ಬದುಕಲಿ. ಇದರಿಂದ ಲಾಭವಿಲ್ಲದಿದ್ದರೂ, ನಷ್ಟವಂತೂ ಖಂಡಿತವಾಗಿ ಇಲ್ಲ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry