ಅದೃಶ್ಯ ರಕ್ಷಕರು

7

ಅದೃಶ್ಯ ರಕ್ಷಕರು

ಗುರುರಾಜ ಕರ್ಜಗಿ
Published:
Updated:

ಹೋದ ವಾರ ಚಾರ್ಲ್ಸ್ ಪ್ಲಮ್ ಎಂಬ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯನ್ನು ಓದುತ್ತಿದ್ದೆ. ಆತ ಅಮರಿಕ ನೌಕಾ ಸಂಸ್ಥೆಯಲ್ಲಿ ತರಬೇತಿ ಪಡೆದವನು. ಆದರೆ ಅವನ ಕೆಲಸ ಫೈಟರ್ ಪೈಲಟ್, ಎಂದರೆ ಯುದ್ಧ ವಿಮಾನಗಳನ್ನು ಹಾರಿಸುವುದು. ಅದರಲ್ಲಿ ಆತ ತುಂಬ ನಿಷ್ಣಾತ. ಸಮುದ್ರದಲ್ಲಿ ತೇಲುವ ಬೃಹತ್ ಹಡಗುಗಳ ಮೇಲೆ ನಿಂತ ಯುದ್ಧ ವಿಮಾನದಲ್ಲಿದ್ದು ಆದೇಶ ದೊರೆತಾಕ್ಷಣ ಹಾರಿಸಿಕೊಂಡು ಹೋಗಿ ವೈರಿ ನೆಲೆಗಳ ಮೇಲೆ ದಾಳಿ ಮಾಡುವುದು ಅವನ ಕರ್ತವ್ಯ.ಅವನು ಎರಡನೇ ಮಹಾಯುದ್ಧದ ಕಾಲದಲ್ಲಿ ವಿಯಟ್ನಾಂ ಬಳಿಯ ಸಮುದ್ರದಲ್ಲಿ ನೆಲೆ ನಿಂತಿದ್ದ. ಹಗಲು ರಾತ್ರಿ ಎನ್ನದೇ ಸುಮಾರು ಎಪ್ಪತ್ತೈದು ಬಾರಿ ವೈರಿಗಳ ಮೇಲೆ ಹಾರಿ ಹೋಗಿ ದಾಳಿ ನಡೆಸಿದ. ಆದರೆ ಮುಂದಿನ ಬಾರಿ ಹಾರಿದಾಗ ವೈರಿಗಳು ಹಾರಿಬಿಟ್ಟ ಕ್ಷಿಪಣಿ ನೆಲದಿಂದೆದ್ದು ಇವನ ವಿಮಾನವನ್ನು ಚೂರು ಚೂರು ಮಾಡಿಬಿಟ್ಟಿತು. ತಕ್ಷಣ ಪ್ಲಮ್ ಪ್ಯಾರಾಷೂಟ್ ಹಾರಿಸಿ ಹೊರಗೆ ಜಿಗಿದುಬಿಟ್ಟ. ಗಾಳಿಯಲ್ಲಿ ಹಾರುತ್ತ ವೈರಿ ಪ್ರದೇಶದಲ್ಲಿ ಬಂದು ಬಿದ್ದ. ಅವನನ್ನು ಹಿಡಿದು ಸೆರೆಯಾಳಾಗಿ ಮಾಡಿದರು. ಕಮ್ಯುನಿಷ್ಟ್‌ ಜೈಲುಗಳಲ್ಲಿ ಆರು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸಿದ. ಬದುಕುವುದೇ ಸಾಧ್ಯವಿಲ್ಲ ಎಂದುಕೊಂಡಿದ್ದವನು, ಯುದ್ಧನಂತರ ಬಿಡುಗಡೆಯಾಗಿ ತನ್ನ ದೇಶಕ್ಕೆ ಮರಳಿದ.ನಂತರ ಅವನನ್ನು ಜನ ಭಾಷಣಕ್ಕೆ ಕರೆಯತೊಡಗಿದರು. ಪ್ಲಮ್ ದೇಶದುದ್ದಕ್ಕೂ ತಿರುಗಾಡಿ ತನ್ನ ಸೈನ್ಯದ ಪರಾಕ್ರಮವನ್ನು, ತಾನು ಅನುಭವಿಸಿದ ದಾರುಣತೆಯನ್ನು ಜನರ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತ ಬಂದ. ಒಂದು ದಿನ ತನ್ನ ಹೆಂಡತಿಯೊಂದಿಗೆ ಊಟಕ್ಕೆಂದು ರೆಸ್ಟೋರೆಂಟ್‌ಗೆ ಹೋಗಿದ್ದ. ಇವರು ಊಟಮಾಡುವಾಗ ಮತ್ತೊಂದು ಟೇಬಲ್ಲಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಪ್ಲಮ್‌ನನ್ನೇ ಸ್ವಲ್ಪ ಹೊತ್ತು ನೋಡುತ್ತಿದ್ದು ನಂತರ ಎದ್ದು ಬಂದು ಇವನನ್ನು ಮಾತನಾಡಿಸಿದ."ನೀವು ಚಾರ್ಲ್ಸ್ ಪ್ಲಮ್ ಅಲ್ಲವೇ? ಕಿಟ್ಟಿ ಹಾಕ್ ಯುದ್ಧ ವಿಮಾನವನ್ನು ವಿಯೆಟ್ನಾಂ ನಿಂದ ಹಾರಿಸಿಕೊಂಡು ಹೋದಾಗ ವೈರಿ ಕ್ಷಿಪಣಿಯಿಂದ ವಿಮಾನ ಸಿಡಿದಾಗ ಹೊರಗೆ ಹಾರಿದವರು ನೀವೇ ಅಲ್ಲವೇ?" ಪ್ರಶ್ನೆ ಕೇಳಿದಾತ ತುಂಬ ಭಾವೋದ್ವೇಗದಲ್ಲಿದ್ದಂತೆ ಕಂಡಿತು."ಹೌದು, ಹೌದು, ನಾನೇ ಚಾಲ್ಸ್ ಪ್ಲಮ್. ಆದರೆ ನಿಮಗೆ ಹೇಗೆ ಗೊತ್ತು? ನನ್ನ ಭಾಷಣವನ್ನೇನಾದರೂ ಕೇಳಿದ್ದಿರಾ?" ಕುತೂಹಲದಿಂದ ಕೇಳಿದ ಪ್ಲಮ್."ಇಲ್ಲ, ನಿಮ್ಮ ಜೊತೆಗೇ ನಾನು ನೌಕಾ ದಳದಲ್ಲಿದ್ದೆ. ಆದರೆ ನಾನು ನಿಮ್ಮ ವಿಮಾನದ ನಿರ್ವಹಣೆಯ ಜವಾಬ್ದಾರಿ ಹೊತ್ತವನ್ನು. ನಿಮ್ಮ ಪ್ಯಾರಾಷೂಟ್‌ನ್ನು ನಾನೇ ವ್ಯವಸ್ಥಿತವಾಗಿ ಮಡಿಚಿ ಇಟ್ಟಿದ್ದು. ನನ್ನದು ತುಂಬ ಕೆಳಮಟ್ಟದ ಕೆಲಸ, ತಾವು ಮೇಲ್ಮಟ್ಟದ ಫೈಟರ್ ಪೈಲಟ್. ತಮ್ಮನ್ನು ನಾನು ಆಗಾಗ ನೋಡುತ್ತಿದ್ದೆನೇ ವಿನ: ಮಾತನಾಡುವುದಾಗಿರಲಿಲ್ಲ" ಒಂದು ಕ್ಷಣ ಪ್ಲಮ್ ಉಸಿರು ಬಿಗಿಹಿಡಿದುಕೊಂಡು ಕಣ್ಣುಮುಚ್ಚಿದ. ಮತ್ತೆ ಆ ವ್ಯಕ್ತಿ ಕೇಳಿದ, "ನೀವು ವಿಮಾನದಿಂದ ಹೊರಗೆ ಹಾರುವಾಗ ಪ್ಯಾರಾಚೂಟ್ ಯಾವ ತೊಂದರೆಯೂ ಇಲ್ಲದೆ ತೆರೆದುಕೊಂಡಿತಲ್ಲವೇ?""ಅದು ತೆರೆದುಕೊಳ್ಳದಿದ್ದರೆ ನಿಮ್ಮೊಂದಿಗೆ ನಾನು ಮಾತನಾಡುವುದು ಸಾಧ್ಯವಿತ್ತೇ? ಸಹೋದರ, ನಿಮಗೆ ನನ್ನ ಸಾವಿರ ಪ್ರಣಾಮಗಳು. ನೀವು ವ್ಯವಸ್ಥಿತವಾಗಿ ಕೆಲಸ ಮಾಡಿದ್ದಕ್ಕೇ ನಾನು ಬದುಕಿದೆ".ಅಂದು ರಾತ್ರಿ ನಿದ್ರೆ ಬಾರದೆ ಪ್ಲಮ್ ಹೊರಳಾಡಿದ. ರೆಸ್ಟೋರೆಂಟ್‌ನಲ್ಲಿ ಕಂಡ ವ್ಯಕ್ತಿಯನ್ನು ತಾನು ನೌಕಾದಳದಲ್ಲಿ ಕಂಡ ನೆನಪೇ ಬರುತ್ತಿಲ್ಲ. ಅವನನ್ನು ಕಾಣದಿದ್ದರೂ ಅವನಿಂದಾಗಿಯೇ ತಾನು ಬದುಕಿದ್ದು. ಅವನಿಗೆ ತಾನು ಎಂದಾದರೂ ಕೃತಜ್ಞತೆ ಹೇಳಿದೆನೇ? ಬರೀ ನನ್ನ ಕಾರ್ಯವನ್ನೇ ಎಲ್ಲೆಡೆಗೆ ಹೇಳಿಕೊಂಡನೇ ಹೊರತು ಈ ಅಜ್ಞಾತವ್ಯಕ್ತಿ ನೀಡಿದ ರಕ್ಷೆಯ ಬಗ್ಗೆ ಮಾತನಾಡಲಾರದಷ್ಟು ಕೃತಘ್ನನಾದೆನೇ! ಆ ವ್ಯಕ್ತಿ ಅಷ್ಟು ವ್ಯವಸ್ಥಿತವಾಗಿ ಪ್ಯಾರಾಷೂಟ್‌ನ್ನು ಮಡಿಚದೆ ಹೋಗಿದ್ದರೆ, ತಾನು ಹಾರಿದಾಗ ಅದು ತೆರೆಯದೆ ಇದ್ದರೆ ತಾನು ಬದುಕುತ್ತಿರಲಿಲ್ಲ. ತನ್ನ ಬದುಕಿಗೆ ಕಾರಣನಾದವನು ಏನು ಆ ಅಜ್ಞಾತ ವ್ಯಕ್ತಿ.ನಮ್ಮ ಬದುಕಿನಲ್ಲಿ ಸಂತೋಷದ ಗಳಿಗೆಗಳಿಗೆ, ಯಶಸ್ಸುಗಳಿಗೆ, ಧನ್ಯತೆಯ ಕ್ಷಣಗಳಿಗೆ ಯಾರು ಯಾರೋ ಕಾರಣರಾಗಿದ್ದಾರೆ. ಅವರನ್ನು ನಾವು ಕಂಡಿಲ್ಲ, ಕೇಳಿಲ್ಲ. ಆದರೂ ಅವರು ನಮ್ಮೊಂದಿಗೆ ಅವಶ್ಯವಾದ, ಅತ್ಯಂತಿಕವಾದ ಗಳಿಗೆಯಲ್ಲಿ ನಿಂತು ರಕ್ಷಣೆ ನೀಡಿದ್ದಾರೆ. ನಾವು ಯಾರೂ ಸ್ವಯಂನಿರ್ಮಿತ ವ್ಯಕ್ತಿಗಳಲ್ಲ. ನಾವೆಲ್ಲ ಅದೃಶ್ಯರಾಗಿದ್ದ ಸಾವಿರಾರು ಜನರ ಹಾರೈಕೆಯಿಂದ, ಸಹಕಾರದಿಂದ, ಕೃಪೆಯಿಂದ ಬೆಳೆದು ದೊಡ್ಡವರಾದವರು. ಮುಂದೆ ನೀವು ಯಶಸ್ಸಿನ ಆಕಾಶದಲ್ಲಿ ಹಾರುವಾಗ ನಿಮ್ಮ ಜೀವನದ ಪ್ಯಾರಾಷೂಟ್‌ನ್ನು ಸರಿಯಾಗಿ ಕಟ್ಟಿ ಇಟ್ಟವರಾರೆಂದು ತಿಳಿದು ಕೃತಜ್ಞತೆ ಸಲ್ಲಿಸುವುದನ್ನು ಮರೆಯಬೇಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry