ಅಧಿಕಾರ ರಾಜಕಾರಣದ ಏಳುಬೀಳು

7

ಅಧಿಕಾರ ರಾಜಕಾರಣದ ಏಳುಬೀಳು

Published:
Updated:
ಅಧಿಕಾರ ರಾಜಕಾರಣದ ಏಳುಬೀಳು

ಶನಿವಾರ ತೀರಿಕೊಂಡ ಕ್ಯೂಬಾ ಕ್ರಾಂತಿಕಾರಿ ನಾಯಕ  ಫಿಡೆಲ್ ಕ್ಯಾಸ್ಟ್ರೊನನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲಿ ಅವರು ಭಾರತಕ್ಕೆ ನೀಡಿದ ಕಡೆಯ ಭೇಟಿಯನ್ನು ಬಹುತೇಕ ಮಾಧ್ಯಮಗಳು ಸ್ಮರಿಸಿದವು. 1983ರ ಮಾರ್ಚ್ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದ ಏಳನೇ ಅಲಿಪ್ತ ಶೃಂಗಸಭೆಯಲ್ಲಿ ಕ್ಯಾಸ್ಟ್ರೊ ಅವರು ಪಾಲ್ಗೊಂಡಿದ್ದರು. ಇದು ಅವರ ಭಾರತದ ಕಡೆಯ ಭೇಟಿ. ಈ ಹಿಂದೆ ಆರನೇ ಅಲಿಪ್ತ ಶೃಂಗಸಭೆ ಕ್ಯೂಬಾದ ಹವಾನಾದಲ್ಲಿ 1979ರಲ್ಲಿ ನಡೆದಿತ್ತು.

ಹೀಗಾಗಿ, ಆತಿಥೇಯ ರಾಷ್ಟ್ರದ ದಂಡವನ್ನು ಕ್ಯಾಸ್ಟ್ರೊ ಅವರು ಭಾರತಕ್ಕೆ ಹಸ್ತಾಂತರಿಸಿದ ಸಂದರ್ಭ ಅಚ್ಚರಿಯ ಕ್ಷಣವೊಂದಕ್ಕೆ ನಾಂದಿಯಾದದ್ದು ವಿಶೇಷ.  ಸಂತಸ ಹಾಗೂ ಹೆಮ್ಮೆಯೊಂದಿಗೆ ಸೋದರಿ ಇಂದಿರಾಗಾಂಧಿ ಅವರಿಗೆ ಆತಿಥೇಯ ರಾಷ್ಟ್ರದ ದಂಡವನ್ನು ಹಸ್ತಾಂತರಿಸುವುದಾಗಿ ಹೇಳಿದ ಕ್ಯಾಸ್ಟ್ರೊ ಇಂದಿರಾ ಅವರನ್ನು ವೇದಿಕೆಯ ಮೇಲೆ ಆತ್ಮೀಯವಾಗಿ ಆಲಿಂಗಿಸಿ ಅಚ್ಚರಿ ಮೂಡಿಸಿದರು. ತಬ್ಬಿಬ್ಬಾದ ಇಂದಿರಾಗಾಂಧಿ ಅವರು ಸಾವರಿಸಿಕೊಂಡು ಎಂದಿನ ತಮ್ಮ ದೃಢತೆಯೊಂದಿಗೆ ಕಾಣಿಸಿಕೊಂಡ ಭಾವನಾತ್ಮಕ ಕ್ಷಣವನ್ನು ಮಾಧ್ಯಮ ಕ್ಯಾಮೆರಾಗಳು ಕ್ಕಿಕ್ಲಿಸಿದ್ದು  ಇತಿಹಾಸದಲ್ಲಿ  ಚಿರಸ್ಥಾಯಿಯಾಗಿದೆ.

ಕ್ಯಾಸ್ಟ್ರೊ ನೇತೃತ್ವದ 1959ರ ಕ್ರಾಂತಿಯ ನಂತರ ಕ್ಯೂಬಾಗೆ ಮಾನ್ಯತೆ ನೀಡಿದ ಮೊದಲ ರಾಷ್ಟ್ರಗಳಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ನೇತೃತ್ವದ ಭಾರತವೂ ಸೇರಿತ್ತು . ಹೀಗಾಗಿ ನೆಹರೂ ಹಾಗೂ ಅವರ ಪುತ್ರಿ ಇಂದಿರಾಗಾಂಧಿ ಕುಟುಂಬದೊಂದಿಗೆ ಕ್ಯಾಸ್ಟ್ರೊ ನಂಟು ಸುದೀರ್ಘವಾದದ್ದು. ಇಂದಿರಾಗಾಂಧಿಯವರನ್ನು ಆಲಿಂಗಿಸಿದ ಕ್ಯಾಸ್ಟ್ರೊ ಚಿತ್ರ, ಭಾರತ – ಕ್ಯೂಬಾ ಸ್ನೇಹದ ದೊಡ್ಡ ಸಂಕೇತವಾಯಿತು.ಜೊತೆಗೆ ಆಗ ಶೀತಲ ಸಮರದಲ್ಲಿ ತೊಡಗಿದ್ದ ಅಮೆರಿಕ ಹಾಗೂ ರಷ್ಯಾ ವಿರುದ್ಧ ಅಲಿಪ್ತ ರಾಷ್ಟ್ರಗಳ ಬಾಂಧವ್ಯವನ್ನು ಧ್ವನಿಸಿದ ಈ ಚಿತ್ರ ಸಶಕ್ತ ರಾಜಕೀಯ ಸಂದೇಶವೊಂದನ್ನು ನೀಡಿತ್ತು.

ತೃತೀಯ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳ ಕಾಳಜಿಗಳಿಗೆ  ಧ್ವನಿಯಾಗಿದ್ದವರು ಇಂದಿರಾಗಾಂಧಿ. ನೂರಾರು ವರ್ಷಗಳ ವಸಾಹತೀಕರಣದಿಂದ ಆವರಿಸಿಕೊಂಡ ಬಡತನ, ಅಜ್ಞಾನ ಕೂಪದಿಂದ ಹೊರಬಂದು ಸಮಾನತೆ ಹಾಗೂ ಘನತೆಯುಕ್ತ ಬದುಕಿಗಾಗಿ ತುಡಿಯುವ ಅಲಿಪ್ತ ಚಳವಳಿಯನ್ನು ಮುಂದಕ್ಕೆ ಒಯ್ಯುವಂತಹ  ಹೊಣೆಗಾರಿಕೆಯನ್ನು ಅವರಿಗೆ ಕ್ಯಾಸ್ಟ್ರೊ ವಹಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ವಾಸ್ತವವಾಗಿ 1983ರಲ್ಲಿ ಅಲಿಪ್ತ ಚಳವಳಿಯ ಶೃಂಗಸಭೆಯನ್ನು ಆಯೋಜಿಸುವ ಪ್ರಸ್ತಾಪವನ್ನು ಭಾರತ ಮುಂದಿಟ್ಟಿರಲಿಲ್ಲ. ಆದರೆ ಈ ಹೊಣೆ ಹೊತ್ತುಕೊಳ್ಳಲು ಇಂಡೊನೇಷ್ಯಾ ಹಾಗೂ ಯುಗೊಸ್ಲಾವಿಯಾದಂತಹ ರಾಷ್ಟ್ರಗಳು ಮುಂದೆ ಬಂದಿದ್ದವು. ಹೀಗಿದ್ದೂ ಕ್ಯಾಸ್ಟ್ರೊ ಅವರು ಭಾರತವನ್ನು ಆಯ್ಕೆ ಮಾಡಿಕೊಂಡರು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಕೆ.ನಟವರ್ ಸಿಂಗ್ ಅವರು ತಮ್ಮ ‘ವಾಕಿಂಗ್ ವಿಥ್ ಲಯನ್ಸ್’ ಪುಸ್ತಕದಲ್ಲಿ ದಾಖಲಿಸಿದ್ದಾರೆ.  ಸುಮಾರು 140  ರಾಷ್ಟ್ರಗಳ ನಾಯಕರು ಪಾಲ್ಗೊಳ್ಳುವ ಈ ಸಭೆ ಆಯೋಜಿಸಲು ಭಾರತಕ್ಕೆ ಆಗ  ಆರು ತಿಂಗಳಿಗೂ ಕಡಿಮೆ ಸಮಯ ಇತ್ತು ಎಂದು ಪತ್ರಿಕೆಗಳು ವರದಿ ಮಾಡಿವೆ.  ಈ ಸವಾಲನ್ನು ಇಂದಿರಾ ಎದುರಿಸಿದರು.ಇದೇ ನವೆಂಬರ್ 19ರಂದು ಇಂದಿರಾ ಗಾಂಧಿ ಅವರ ಜನ್ಮ ಶತಾಬ್ದಿ ಆಚರಣೆಗೆ ಚಾಲನೆ ನೀಡಲಾಗಿರುವ ಸಂದರ್ಭದಲ್ಲಿ ಸಂಕೀರ್ಣ ವ್ಯಕ್ತಿತ್ವದ ಇಂದಿರಾಗಾಂಧಿಯವರ ಬದುಕು ಹಾಗೂ ಅವರ ಆಡಳಿತದ  ಅಧ್ಯಯನ, ಭಾರತೀಯ ರಾಜಕಾರಣ ಹಾಗೂ ಸಮಾಜದ ಬದಲಾವಣೆಗಳ ಬಗ್ಗೆ ಹಲವು ಒಳನೋಟಗಳನ್ನು ನೀಡುವಂತಹದ್ದು. 15 ವರ್ಷಗಳ ಕಾಲ ಭಾರತದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದ ಏಕೈಕ ಮಹಿಳಾ ಪ್ರಧಾನಿ ಇಂದಿರಾಗಾಂಧಿ.  ಆ ವರ್ಷಗಳು  ಸ್ವಾತಂತ್ರ್ಯೋತ್ತರ ಭಾರತದ ಚರಿತ್ರೆಯನ್ನು ಕಟ್ಟಿದ ಹಲವು ತುಮುಲ, ಸಂಘರ್ಷಗಳ ಕಥಾನಕದ ನಿರೂಪಣೆಯೂ ಆಗಿವೆ.ರಾಜಕೀಯ ರಂಗದಲ್ಲಿ ಮಹಿಳಾ ನಾಯಕತ್ವಕ್ಕೆ ಏಷ್ಯಾದ ಹಲವು ರಾಷ್ಟ್ರಗಳು ಮೊದಲಿನಿಂದಲೂ ಅವಕಾಶ ಮಾಡಿಕೊಟ್ಟಿವೆ. ಆದರೆ  ಈ ಮಹಿಳೆಯರು ಪತಿ ಅಥವಾ ತಂದೆಯ ರಾಜಕೀಯ ವಾರಸುದಾರರಾಗಿ ಅಧಿಕಾರ ಸೂತ್ರ ಹಿಡಿದವರು.  ಶ್ರೀಲಂಕಾದ ಸಿರಿಮಾವೊ ಬಂಡಾರನಾಯಿಕೆ, ಪಾಕಿಸ್ತಾನದ ಬೆನಜೀರ್ ಭುಟ್ಟೊ, ಫಿಲಿಪ್ಪೀನ್ಸ್ ನ ಕೊರಾಜಾನ್ ಅಕ್ವಿನೊ ಹಾಗೂ ಬರ್ಮಾದ ಆಂಗ್ ಸಾನ್ ಸೂ ಕಿ ಇವರೆಲ್ಲರೂ ಈ ರಾಜಕಾರಣದ ಮಾದರಿಗೆ ಉದಾಹರಣೆಗಳು. ಇಂದಿರಾಗಾಂಧಿಯವರೂ ಈ ಮಾದರಿಗೇ ಸೇರ್ಪಡೆಯಾಗುತ್ತಾರೆ.48 ವರ್ಷದ ಇಂದಿರಾ ಗಾಂಧಿ ಭಾರತದ ಮೂರನೇ ಪ್ರಧಾನಿಯಾಗಿ ಆಯ್ಕೆಯಾದಾಗ ಹಲವರ ಹುಬ್ಬೇರಿದ್ದವು. ‘ಆ ಹುದ್ದೆಗೆ ಅರ್ಹರಾದ ಸಮರ್ಥ ಪುರುಷ ಇಲ್ಲವೆ’ ಎಂಬ ಮಾತು ಕೇಳಿ ಬಂದಿದ್ದವು. ಪಾಕಿಸ್ತಾನದ ವಿರುದ್ಧ ಎರಡನೇ ಯುದ್ಧದ ನಂತರ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ತಾಷ್ಕೆಂಟ್ ಗೆ ಹೋಗಿದ್ದರು. ರಷ್ಯನ್ನರ ನೆರವಿನೊಂದಿಗೆ ಪಾಕಿಸ್ತಾನದೊಂದಿಗೆ ಶಾಂತಿ ಒಪ್ಪಂದ ಏರ್ಪಟ್ಟಿತ್ತು. ದುರಂತ ಎಂದರೆ ಅವರು ಭಾರತಕ್ಕೆ ಮತ್ತೆ ಹಿಂದಿರುಗಲಿಲ್ಲ. ತಾಷ್ಕೆಂಟ್‌ನಲ್ಲಿ 1966 ರ 11ನೇ ಜನವರಿಯಂದು ನಿಧನರಾದರು. ಆಗ ಪಾಕಿಸ್ತಾನದೊಂದಿಗಿನ ಯುದ್ಧದಿಂದ ರಾಷ್ಟ್ರ ತತ್ತರಿಸಿತ್ತು.ಬರ, ಕ್ಷಾಮದ ದಿನಗಳವು. ಇಂತಹ ಬಿಕ್ಕಟ್ಟಿನ ದಿನಗಳಲ್ಲಿ  ಸುಕೋಮಲ ಹೆಣ್ಣು ರಾಷ್ಟ್ರದ ದೊಡ್ಡ ಸವಾಲುಗಳನ್ನು ನಿಭಾಯಿಸಬಲ್ಲಳೆ ಎಂಬುದು ಪ್ರಶ್ನೆಯಾಗಿತ್ತು.

ಆದರೆ ಇಂದಿರಾ  ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುತ್ರಿಯಾಗಿದ್ದರು.  ನೆಹರೂ ಅವರ ರಾಜಕೀಯ ಬದುಕಿನುದ್ದಕ್ಕೂ ಅವರಿಗೆ ಜೊತೆಯಾಗಿದ್ದವರು. ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ತಂದೆ ಜೊತೆ ಜೈಲಿಗೂ ಹೋಗಿಬಂದವರು. 1959ರಲ್ಲಿ ಕಾಂಗ್ರೆಸ್ ಪಕ್ಷದ  ಅಧ್ಯಕ್ಷ ಸ್ಥಾನಕ್ಕೇರಿದ್ದ  ಇಂದಿರಾ,  ಆಗ ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ಆಳ್ವಿಕೆ ಅಂತ್ಯಗೊಳಿಸುವಲ್ಲಿ ಹಾಗೂ ಬಾಂಬೆ ರಾಜ್ಯವನ್ನು ಗುಜರಾತ್ ಹಾಗೂ ಮಹಾರಾಷ್ಟ್ರವಾಗಿ ವಿಭಜಿಸುವಲ್ಲಿ  ಮುಖ್ಯ ಪಾತ್ರ ವಹಿಸಿದ್ದರು. ನಂತರ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕೇಂದ್ರ ಸಂಪುಟದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವರೂ ಆಗಿದ್ದರು. ಪ್ರಧಾನಿ ಸ್ಥಾನದ ಸಹಜ ಅಭ್ಯರ್ಥಿ ಎಂಬಂತಿದ್ದ  ಮೊರಾರ್ಜಿ ದೇಸಾಯಿಗಿಂತ ಇಂದಿರಾಗಾಂಧಿ  ಹೆಚ್ಚು ಹೊಂದಿಕೊಳ್ಳಬಲ್ಲರು ಎಂಬ ಭಾವನೆ ಇಂದಿರಾರನ್ನು ಆಯ್ಕೆ ಮಾಡಿದ ಪಕ್ಷದ ಸಣ್ಣ ಗುಂಪಿಗೆ ಇತ್ತು.ಜೊತೆಗೆ ವಂಶಪಾರಂಪರ್ಯವಾಗಿ ಇಂದಿರಾಗೆ ದಕ್ಕಿದ ಅಧಿಕಾರವೂ ಆಗಿತ್ತು ಅದು. ಹೀಗಾಗಿಯೇ ಜನರ ಗುಂಪು  ‘ಇಂದಿರಾ ಚಿರಾಯುವಾಗಲಿ’ ಎಂದು ಕೂಗಿದ್ದಲ್ಲದೆ ‘ಜವಾಹರಲಾಲ್ ಚಿರಾಯುವಾಗಲಿ’ ಎಂಬ ಘೋಷಣೆಗಳನ್ನೂ ಕೂಗಿತ್ತು. ಆದರೆ ಕುಟುಂಬ ರಾಜಕಾರಣ ಮುಂದುವರಿಸುವ ಅನುಕೂಲ  ಮಹಿಳೆಯರಿಗೆ ಮಾತ್ರವೇ ಸೀಮಿತವಾಗೂ ಇಲ್ಲ. ನಂತರ ಇಂದಿರಾಗಾಂಧಿ ಪುತ್ರ ರಾಜೀವ್ ಗಾಂಧಿ, ಸೊಸೆ ಸೋನಿಯಾಗಾಂಧಿ, ಮೊಮ್ಮಗ ರಾಹುಲ್ ಗಾಂಧಿ ರಾಜಕಾರಣ ಪ್ರವೇಶಿಸಿದರು. 20ನೇ ಶತಮಾನದ ಅರ್ಧದಷ್ಟು  ಅವಧಿಯಲ್ಲಿ ಈ ಕುಟುಂಬವೇ ಕೇಂದ್ರ ಸರ್ಕಾರದ ಅಧಿಕಾರ ಸೂತ್ರ ಹಿಡಿದಿದೆ.

1966ರ ಜನವರಿ 24ರಂದು ಪ್ರಧಾನಿಯಾಗಿ ಇಂದಿರಾ ಅಧಿಕಾರ ವಹಿಸಿಕೊಂಡಾಗ ರಾಷ್ಟ್ರದಲ್ಲಿದ್ದ ಸನ್ನಿವೇಶ ಮಂಕಾಗಿತ್ತು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸಾವಿನ ಕರಿ ನೆರಳಿನ ಸೂತಕವಿತ್ತು. ಆರ್ಥಿಕ ಸಂಕಷ್ಟ, ಯುದ್ಧ ಹಾಗೂ ರಾಜಕೀಯ ಒಳಸಂಚುಗಳನ್ನೆಲ್ಲಾ ಅವರು ಎದುರಿಸಿದರು. ಟೀಕಾಕಾರರ ‘ಇಂದಿರಾ ಹಟಾವೊ’ ಘೋಷಣೆಗೆ ಪ್ರತಿಯಾಗಿ ಅವರು ಶುರುಮಾಡಿದ ‘ಗರೀಬಿ ಹಟಾವೊ’ ಪ್ರಚಾರಾಂದೋಲನ ಆ ಟೀಕೆಗಳಿಗೆ ನೀಡಿದ ಸರಿಯಾದ ಪ್ರತ್ಯುತ್ತರವಾಗಿತ್ತು.

1971ರ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಸೃಷ್ಟಿಯಾದ ಇಂದಿರಾ ಅಲೆ 2014ರ ನರೇಂದ್ರ ಮೋದಿ ಅಲೆಯನ್ನೂ ಮೀರಿಸಿದುದಾಗಿತ್ತು. ಬಡತನ ನಿರ್ಮೂಲನೆ, ಬಡವ – ಶ್ರೀಮಂತರ ಮಧ್ಯದ ಅಂತರ ನಿವಾರಣೆ ಹಾಗೂ ರಾಷ್ಟ್ರವನ್ನು ಜಾತ್ಯತೀತ ಸಮಾಜವಾದ ಪ್ರಜಾಫ್ರಭುತ್ವದೆಡೆಗೆ ಒಯ್ಯಲು ಅಧಿಕಾರ ಪಡೆದುಕೊಂಡಂತಹ ಪಕ್ಷದ ಪರಮ ನಾಯಕಿಯಾದರು ಅವರು.

ರಾಜವಂಶವನ್ನು ಜನರು ಆರಾಧಿಸುತ್ತಿದ್ದ ಸಂದರ್ಭದಲ್ಲೇ ಅವರು ರಾಜ ಮಹಾರಾಜರುಗಳಿಗೆ ರಾಯಧನ ರದ್ದು ಮಾಡಿದರು. ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರು. ಈ ಗಣನೀಯ ಹೆಜ್ಜೆಗಳಿಂದ ರಾಷ್ಟ್ರದ ಏಕತೆ ಬಲಗೊಂಡಿತು. ಆದರೆ ಸಾಮಾಜಿಕ ಶಕ್ತಿಗಳ ಸಮತೋಲನ ಸಾಧ್ಯವಾಗದೆ ಸಮಾಜದಲ್ಲಿ ಮೂಲಭೂತ ಪರಿವರ್ತನೆಗಳು ಆಗಲಿಲ್ಲ.ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ಧತೆಯಿಂದಾಗಿ  ಬಾಂಗ್ಲಾದೇಶ ಜನ್ಮ ತಾಳುವುದಕ್ಕೆ ಇಂದಿರಾ ಸಹಕಾರ ನೀಡಿದರು. ಇದು ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮಿಲಿಟರಿ ಕಾರ್ಯಾಚರಣೆ ಎಂದು ದಾಖಲಾಗಿದೆ. ಆ ಸಂದರ್ಭದಲ್ಲಿ ಸೃಷ್ಟಿಯಾದ ಭಾರಿ ಮಾನವೀಯ ಬಿಕ್ಕಟ್ಟನ್ನೂ ಸಮರ್ಥವಾಗಿ ಇಂದಿರಾಗಾಂಧಿ ಎದುರಿಸಿದರು. ಸುಮಾರು ಒಂದು ಕೋಟಿ ನಿರಾಶ್ರಿತರಿಗೆ ಆಶ್ರಯ ಒದಗಿಸಿದ್ದ ಭಾರತ, ಯುದ್ಧದ ನಂತರ ಬಾಂಗ್ಲಾದೇಶಕ್ಕೆ  ಅವರು ಹಿಂದಿರುಗಲು ಅನುವು ಮಾಡಿಕೊಟ್ಟಿತು.

ಬಾಂಗ್ಲಾ ಯುದ್ಧದ ಸಮಯದಲ್ಲಿ ತೋರಿದ ಸಾಹಸ ಹಾಗೂ ತಕ್ಷಣದ ನಿರ್ಧಾರಗಳು ಅನನ್ಯ. ವಿಶ್ವದ ವಿರೋಧವಿದ್ದರೂ ಪಾಕಿಸ್ತಾನವನ್ನು ಎರಡಾಗಿ ವಿಭಾಗಿಸಿದ್ದು  ಅವರ ಇಚ್ಛಾಶಕ್ತಿಗೆ ದ್ಯೋತಕ. ಯಾವುದೇ  ವಿದೇಶಿ ಶಕ್ತಿಗೆ ತಾವು ಮಣಿಯುವುದಿಲ್ಲ ಎಂದು ಪ್ರಕಟಿಸಿದರು. ‘ಮುದಿ ಮಂತ್ರವಾದಿನಿ’ ಎಂದು ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಕರೆದಾಗಲೂ ಅವರು ಎದೆ ಗುಂದಲಿಲ್ಲ. ಬದಲಿಗೆ ರಾಷ್ಟ್ರಕ್ಕಾಗಿ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಹೊಸ ವೇದಿಕೆ ಸೃಷ್ಟಿಸಲು ಸೋವಿಯತ್ ನಾಯಕ ಲಿಯೊನಿಡ್ ಬ್ರೆಜ್ನೆವ್ ಜೊತೆ  ಭಾರತದ ಬಾಂಧವ್ಯ ಬಲಗೊಳಿಸಿದರು.ಆದರೆ, 1975ರಲ್ಲಿ ತುರ್ತುಪರಿಸ್ಥಿತಿ ಘೋಷಣೆ  ಅವರ ರಾಜಕೀಯ ಜೀವನದ ಕಪ್ಪು ಅಧ್ಯಾಯ.  ಬದುಕುವ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ದಮನ ಮಾಡಿದಂತಹ ಸರ್ವಾಧಿಕಾರದ ಆಳ್ವಿಕೆಯನ್ನು ಮಹಾನ್ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದು ಹಾಗೂ ಅವರ ಪುತ್ರ ಸಂಜಯ ಗಾಂಧಿ ಬಲವಂತದ ಸಂತಾನಶಕ್ತಿ ಹರಣ ನಡೆಸಿದ ಘಟನಾವಳಿಗಳು ಕರಾಳವಾದುದು. ಹೇಬಿಯಸ್ ಕಾರ್ಪಸ್ ಅಮಾನತಿನಂತಹ ಮಟ್ಟಕ್ಕೆ ಹೋಗಿದ್ದಲ್ಲದೆ ಪತ್ರಿಕಾ ಸ್ವಾತಂತ್ರ್ಯ ಹಾಗೂ ನಾಗರಿಕ ಹಕ್ಕುಗಳನ್ನು ದಮನ ಮಾಡಿದರು.

ಈ ಮೂಲಕ, ಭಾರತದ 28 ವರ್ಷಗಳ ಪ್ರಜಾಪ್ರಭುತ್ವಕ್ಕೆ ಗಂಭೀರವಾದ ಅಪಾಯವನ್ನು ಇಂದಿರಾಗಾಂಧಿ ಒಡ್ಡಿದರು. 1977ರಲ್ಲಿ ಮತ್ತೆ ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳುತ್ತಾರೆ. ಆಗ ಅಧಿಕಾರ ಸೂತ್ರ ಹಿಡಿದ ಜನತಾ ಪಕ್ಷದ ವೈಫಲ್ಯದ ನಂತರ 1980ರಲ್ಲಿ ಪುನಃ ಭಾರಿ ಬಹುಮತದಿಂದ ಆಯ್ಕೆಯಾದದ್ದಲ್ಲದೆ 1984ರಲ್ಲಿ ಹತ್ಯೆಯಾಗುವವರೆಗೆ ಪ್ರಧಾನಿಯಾಗಿ ಇಂದಿರಾ ಮುಂದುವರಿಯುತ್ತಾರೆ.

ಅಧಿಕಾರದ ಈ ಕಡೆಯ ನಾಲ್ಕು ವರ್ಷಗಳಲ್ಲಿ ರಾಷ್ಟ್ರದ ಅನೇಕ ಕಡೆ ಸಂಘರ್ಷದ ವಾತಾವರಣವಿತ್ತು. ಬಾಂಬೆ, ಭಿವಂಡಿ, ಕೇರಳ ಹಾಗೂ ತಮಿಳುನಾಡುಗಳಲ್ಲಿ ಹಿಂಸಾಚಾರ ಹೆಚ್ಚಾಗಿತ್ತು. ಅಸ್ಸಾಂ ಹಾಗೂ ಪಂಜಾಬ್‌ಗಳಲ್ಲೂ ಹಿಂಸಾಚಾರ ವ್ಯಾಪಕವಾಗಿತ್ತು. ರಾಷ್ಟ್ರದಲ್ಲಿ ಎಲ್ಲಾ ಕುಸಿಯುವ ಸ್ಥಿತಿ. ಅದನ್ನು ಹಿಡಿದಿಡುವ ಕೇಂದ್ರವೇ ಇಲ್ಲದ ಸ್ಥಿತಿ. ಆಗ ಇಂದಿರಾ ಮತ್ತೆ ಎರಡನೇ ದೊಡ್ಡ ತಪ್ಪು ಮಾಡಿದರು. ಸ್ವರ್ಣ ದೇವಾಲಯಕ್ಕೆ ಸೇನೆ ನುಗ್ಗಿಸಿದರು. ಆದರೆ ರಾಷ್ಟ್ರದಲ್ಲಿ ಏಕತೆಗಾಗಿ ಮನವಿ ಮಾಡಿದ ಕೇವಲ ಎರಡೇ ತಿಂಗಳುಗಳಲ್ಲಿ  ಸಿಖ್ ಭದ್ರತಾ ಸಿಬ್ಬಂದಿಯಿಂದ ಹತ್ಯೆಯಾದರು.ಈಗಿನ ಪ್ರಧಾನಿ ನರೇಂದ್ರ ಮೋದಿ ಹಾಗೂ  ಇಂದಿರಾ ಇಬ್ಬರೂ ಭಾರತೀಯ ಪ್ರಜ್ಞೆಯನ್ನು ಕಲಕುವಂತಹ ಹೊಸ ಆಶೋತ್ತರಗಳ ಯುಗವನ್ನು ಪ್ರತಿನಿಧಿಸಿದವರು. ಹಾಗೆಯೇ ಹಿಂಸೆಯ ಮಸಿಯಿಂದ ಪ್ರಭಾವಳಿ ಹೆಚ್ಚಿಸಿಕೊಂಡವರು. ‘ತರ್ಕಬದ್ಧ ವಾದಗಳಿಗಿಂತ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ನೇತಾರರೇ  (demagogues) ಮರಳಿ ಮರಳಿ ಅಧಿಕಾರಕ್ಕೆ ಬರುತ್ತಾರೆ ಎಂಬುದು ಪ್ರಜಾಪ್ರಭುತ್ವದ ವಿಪರ್ಯಾಸ’ ಎಂದು ಸಮಾಜಶಾಸ್ತ್ರಜ್ಞ  ಶಿವ್  ವಿಶ್ವನಾಥನ್ ಲೇಖನವೊಂದರಲ್ಲಿ ಬರೆಯುತ್ತಾರೆ.

ಭಾರತದಲ್ಲಿ ಶೇ 60ರಷ್ಟು ಜನರು ಇಂದಿರಾ ಸಾವಿನ ನಂತರ ಜನಿಸಿದವರು. ಆದರೂ ಇಂದಿರಾ ಹತ್ಯೆಯಾಗಿ 25 ವರ್ಷಗಳ ನಂತರವೂ ಇಂದಿರಾ ಚರ್ಚೆಯ ಭಾಗವಾಗಿದ್ದಾರೆ. ಇಂದಿರಾ ಹಾಗೂ ಮೋದಿ ಮಧ್ಯೆ ಸಮಾನ ಅಂಶಗಳಿವೆ. ಆದರೆ ಮೋದಿಯವರು ಇಂದಿರಾ ಅವರ ನಿಜವಾದ ರಾಜಕೀಯ ವಾರಸುದಾರರೆ ಎಂಬುದನ್ನು ಈಗಲೇ ಹೇಳಲಾಗದು ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿರುವುದೂ ಉಲ್ಲೇಖಾರ್ಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry