ಗುರುವಾರ , ಮೇ 19, 2022
20 °C

ಅನನ್ಯ ನಂಬಿಕೆಯ ಫಲ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಇದು ಹನ್ನೊಂದನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ನಡೆದ ವಿಶೇಷ ಸಂಗತಿ. ಒಂದು ದಿನ ರಾಜ ಮತ್ತು ಮಂತ್ರಿ ಅರಮನೆಯ ಆವರಣದಲ್ಲಿ ನಡೆದಾಡುತ್ತಿದ್ದರು. ಭಗವದ್ಗೀತೆಯ ಬಗ್ಗೆ ಚರ್ಚೆ ಮಾಡುತ್ತಿದ್ದರು. ಆಗ ಮಂತ್ರಿ ಹೇಳಿದ, ‘ಪ್ರಭೂ, ಭಗವಂತನ ಕೃಪೆಯಾದರೆ ಎಂಥವನೂ ಮಹಾತ್ಮನಾಗಬಲ್ಲ.’ ಅದೇ ಹೊತ್ತಿಗೆ ಅರಮನೆಗೆ ಹಾಲು ಕೊಡುವ ಹುಡುಗ ಅಲ್ಲಿ ಹೋಗುತ್ತಿದ್ದ. ಆಗ ರಾಜ ಹುಡುಗನನ್ನು ಹತ್ತಿರಕ್ಕೆ ಕರೆದು, ‘ಬಹುಶಃ ಈ ಬಾಲಕ ಕೂಡ ಮಹಾಜ್ಞಾನಿಯಾಗಬಹುದು, ದೇವರ ಕೃಪೆಯಾದರೆ’ ಎಂದು ನಕ್ಕ. ನಂತರ ಏನೆನಿಸಿತೋ ತಿಳಿಯದು, ಆ ಹುಡುಗನನ್ನು ಕರೆದು ಅವನ ಕಿವಿಯಲ್ಲಿ ನರಸಿಂಹ ಮಂತ್ರವನ್ನು ಉಸುರಿದ. ರಾಜ ನರಸಿಂಹನ ಭಕ್ತ. ಬಾಲಕನಿಗೆ ಈ ಮಂತ್ರವನ್ನು ಭಕ್ತಿಯಿಂದ ಜಪಿಸಲು ಹೇಳಿ ನಡೆದ.ಹುಡುಗನ ಮನಸ್ಸಿನಲ್ಲಿ ರಾಜನ ಮಾತು, ಆತ ಹೇಳಿದ ಮಂತ್ರ ಚೆನ್ನಾಗಿ ನಾಟಿದವು. ಆತ ಎಡೆಬಿಡದೇ ಭಕ್ತಿಯಿಂದ ನರಸಿಂಹನ ಭಜನೆ ಮಾಡಿದ, ಆರಾಧಿಸಿದ. ಒಂದು ದಿನ ಆತನಿಗೆ ದೇವರ ಕೃಪೆಯಾಯಿತು, ಜ್ಞಾನದ ಬಾಗಿಲು ತೆರೆಯಿತು. ವೇದ, ಉಪನಿಷತ್ತುಗಳು ಅವನ ಬಾಯಿಯಲ್ಲಿ ನಲಿದಾಡಿದವು. ಜನ ಅವನನ್ನು ಮರ್ಯಾದೆಯಿಂದ ಶ್ರೀಧರಸ್ವಾಮಿ ಎಂದು ಕರೆದರು.ಮುಂದಿನ ದಿನಗಳಲ್ಲಿ ಶ್ರೀಧರಸ್ವಾಮಿಗಳ ಜ್ಞಾನದ ಪ್ರಖರತೆ ಎಲ್ಲೆಡೆ ಹರಡಿತು. ಯಾವ ರಾಜ ಇವರಿಗೆ ನರಸಿಂಹ ಸ್ತೋತ್ರವನ್ನು ನೀಡಿದ್ದನೋ ಆತನೇ ಇವರ ಬಳಿಗೆ ಬಂದು ತನ್ನ ಆಸ್ಥಾನದಲ್ಲಿ ಪ್ರಮುಖ ವಿದ್ವಾಂಸರಾಗಲು ಬೇಡಿಕೊಂಡ. ಈಗ ಶ್ರೀಧರಸ್ವಾಮಿಗಳ ಜ್ಞಾನದೊಡನೆ ಐಶ್ವರ್ಯವೂ ಸೇರಿಕೊಂಡಿತು. ಜೀವನ ತುಂಬ ಸಂಭ್ರಮದಿಂದ, ಸಂತೋಷದಿಂದ ನಡೆಯುತ್ತಿತ್ತು. ಮನದ ಮೂಲೆಯಲ್ಲೆಲ್ಲೋ ಕೇವಲ ಭಗವಂತನ ಸೇವೆ ಮಾಡಿಕೊಂಡೇ ಬದುಕಬೇಕೆನ್ನಿಸುತ್ತಿದ್ದರೂ ಬಂಧು ಬಾಂಧವರ ಒತ್ತಾಯಕ್ಕೆ ಒಪ್ಪಿ ಮದುವೆಯಾದರು. ಎರಡು ವರ್ಷ ಜೀವನ ಮಧುರವಾಗಿ ಸಾಗಿತು.ಮರುವರ್ಷ ಶ್ರೀಧರಸ್ವಾಮಿಗಳ ಹೆಂಡತಿ ಮಗುವಿಗೆ ಜನ್ಮ ನೀಡಿ ದೇವರ ಪಾದ ಸೇರಿದಳು. ಪಂಡಿತರಿಗೆ ಕಾಲಕೆಳಗಿನ ನೆಲ ಸರಿದಂತಾಯಿತು. ಜೀವನದ ಆಸರೆ ತಪ್ಪಿ ಹೋದಂತೆನಿಸಿತು. ಆಗ ವೈರಾಗ್ಯ ಮೂಡಿತು. ಎಲ್ಲವನ್ನೂ ತೊರೆದು, ಅರಮನೆಯನ್ನು ಬಿಟ್ಟು ಕಾಡಿಗೆ ಹೋಗಿಬಿಡಬೇಕೆಂಬ ನಿರ್ಧಾರ ಬಂದಿತು. ಆದರೆ ಮಗುವಿನ ಮುಖ ಕಣ್ಣ ಮುಂದೆ ಸುಳಿಯಿತು. ಈ ಪುಟ್ಟ ಮಗುವನ್ನು ಯಾರು ನೋಡಿಕೊಳ್ಳುವವರು? ಅದಕ್ಕೆ ಜವಾಬ್ದಾರ ನಾನೊಬ್ಬನೇ ಅಲ್ಲವೇ? ತನ್ನ ಹೊರತು ಮಗುವನ್ನು ಕಾಪಾಡುವುದು ಯಾರಿಂದ ಸಾಧ್ಯ? ಮಗುವಿಗಾದರೂ ತಾನು ಅರಮನೆಯಲ್ಲಿ ಇರಲೇಬೇಕು ಎಂದೊಂದು ಮನಸ್ಸು ನುಡಿಯಿತು.ಏನು ಮಾಡುವುದೆಂಬುದು ಹೊಳೆಯದೇ ಶ್ರೀಧರಸ್ವಾಮಿಗಳು ಕಿಟಕಿಯಿಂದಾಚೆ ನೋಡುತ್ತ ನಿಂತಿದ್ದರು. ಆಗ ಅವರ ಕಣ್ಣಿಗೆ ದೃಶ್ಯವೊಂದು ಕಂಡಿತು. ತಮ್ಮ ಮನೆಯ ಮುಂದಿದ್ದ ಮರದ ಮೇಲೆ ಪಕ್ಷಿಯೊಂದು ಗೂಡುಗಟ್ಟಿತ್ತು. ಅದು ಅಲ್ಲಲ್ಲಿ ಹಾರಾಡಿ ಕಸಕಡ್ಡಿಗಳನ್ನು ತಂದು ಗೂಡನ್ನು ಭದ್ರಮಾಡುತ್ತಿತ್ತು. ಹೀಗೆ ಅದು ಕಡ್ಡಿ ತರಲು ಹೊರಗೆ ಹೋಗಿದ್ದಾಗ ಗೂಡಿನಲ್ಲಿದ್ದ ಮೊಟ್ಟೆಯೊಂದು ನಿಧಾನವಾಗಿ ಸರಿದು ಕೆಳಗೆ ಉರುಳಿ ಬಿತ್ತು. ತಕ್ಷಣವೇ ಅದರ ಕವಚ ಒಡೆದು ಪುಟ್ಟ ಮರಿಯೊಂದು ಹೊರಗೆ ಇಣುಕಿತು.ಅದು ಅವಶ್ಯಕತೆಗಿಂತ ಮೊದಲೇ ಪ್ರಪಂಚ ನೋಡುವಂತಾಗಿದೆ. ಪಾಪ! ಅದಕ್ಕೆ ಗಾಬರಿಯಾಗಿರಬೇಕು. ಅದನ್ನು ನೋಡಿದ ಶ್ರೀಧರಸ್ವಾಮಿಗಳ ಮನಸ್ಸು ಕರಗಿತು. ‘ಯಾರು ಈ ಮರಿಗೆ ಆಹಾರ ನೀಡಿಯಾರು? ಅದು ಬದುಕುವುದು ಸಾಧ್ಯವೇ?’ ಎಂದು ಚಿಂತಿಸಿದರು. ಅವರು ನೋಡುತ್ತಿರುವಂತೆ ಒಂದು ಸಣ್ಣ ಹಾರುವ ಹುಳ ಬಂದು ಒಡೆದ ಮೊಟ್ಟೆಯ ಮೇಲೆ ಕುಳಿತಿತು. ಆಗ ತಾನೇ ಒಡೆದ ಮೊಟ್ಟೆಯಿಂದ ಸೋರುತ್ತಿರುವ ಲೋಳೆಯಂಥ ಜಿಗುಟಾದ ದ್ರವದಲ್ಲಿ ಸಿಕ್ಕಿಹಾಕಿಕೊಂಡಿತು. ಒಳಗಿದ್ದ ಮರಿ ತಟಕ್ಕನೇ ಬಾಯಿ ತೆರೆದು ಅದನ್ನು ನುಂಗಿ ಹಸಿವು ಪೂರೈಸಿಕೊಂಡಿತು. ಇದೊಂದು ಪವಾಡವೆನ್ನಿಸಿತು ಸ್ವಾಮಿಗಳಿಗೆ ಅವಧಿಗೆ ಮುನ್ನ ಒಡೆದ ಮೊಟ್ಟೆಯಲ್ಲಿದ್ದ ಮರಿಗೇ ಅದು ಇರುವ ಸ್ಥಳದಲ್ಲಿ ಆಹಾರ ಒದಗಿಸುವ ದೇವರು ನನ್ನ ಮಗುವನ್ನು ಕಾಪಾಡಲಾರನೇ?  ಹೀಗೆಂದುಕೊಂಡು ತಕ್ಷಣವೇ ಕಾಶಿಗೆ ತೆರಳಿ ಸಾಧನೆ ಮಾಡಿ ಮಹಾ ಜ್ಞಾನಿಯಾಗಿ  ‘ಶ್ರೀಹರೀಯ’ ಎಂಬ ಭಾಗವತದ ಮೇಲಿನ ಟೀಕೆಯನ್ನು ಬರೆದು ಜಗತ್‌ಪ್ರಸಿದ್ಧರಾದರು.ನಂಬಿಕೆ ಬಹಳ ಮುಖ್ಯ. ನಂಬಿಕೆಯೇ ದೇವರಾಗಿ ನಮ್ಮನ್ನು ಕಾಪಾಡುತ್ತದೆ. ನಂಬಿಕೆಯಿಲ್ಲದ ಮನುಷ್ಯನಿಂದ ಯಾವ ಕಾರ್ಯವೂ ಸಾಧ್ಯವಾಗಲಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.